ADVERTISEMENT

ಮೈತ್ರಿಕೂಟದ ಕೇಂದ್ರದಲ್ಲಿ ಪ್ರಬಲ ರಾಷ್ಟ್ರೀಯ ಪಕ್ಷ ಬೇಕೇಬೇಕು

​ಪ್ರಜಾವಾಣಿ ವಾರ್ತೆ
Published 7 ಮೇ 2021, 20:30 IST
Last Updated 7 ಮೇ 2021, 20:30 IST
ಸೂರ್ಯಪ್ರಕಾಶ್‌
ಸೂರ್ಯಪ್ರಕಾಶ್‌   

ಸ್ವತಂತ್ರ ಭಾರತದ ಪಯಣ 1950ರ ದಶಕದಲ್ಲಿ ಆರಂಭವಾದಾಗ ಕಾಂಗ್ರೆಸ್‌ ಪಕ್ಷದ ಪಾರಮ್ಯವಿದ್ದ ಏಕ ಪಕ್ಷ ವ್ಯವಸ್ಥೆಯೇ ಇತ್ತು. ಜವಾಹರಲಾಲ್‌ ನೆಹರೂ ಅವರು ಸರ್ವೋಚ್ಚ ನಾಯಕ ಮತ್ತು ಲೋಕಸಭಾ ಚುನಾವಣೆಗಳಲ್ಲಿ ಅವರ ಪಕ್ಷವು ನಿರಾಯಾಸವಾಗಿ 350ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಗೆಲ್ಲುತ್ತಿತ್ತು; ಬಹುತೇಕ ರಾಜ್ಯಗಳಲ್ಲಿ ಆ ಪಕ್ಷಕ್ಕೇ ಬಹುಮತ ಇತ್ತು. ಇದು ಕಾಂಗ್ರೆಸ್‌ ಅನ್ನು ದೇಶದ ಏಕೈಕ ರಾಷ್ಟ್ರೀಯ ಪಕ್ಷವಾಗಿಸಿತು. ಲೋಕಸಭಾ ಚುನಾವಣೆಗಳಲ್ಲಿ ಚಲಾವಣೆಯಾದ ಮತಗಳಲ್ಲಿ ಶೇ 42–45ರಷ್ಟು ಮತ್ತು ಶೇ 60ರಷ್ಟು ಸ್ಥಾನಗಳು ಕಾಂಗ್ರೆಸ್‌ ಪಾಲಾಗುತ್ತಿದ್ದವು. 1967ರವರೆಗೆ ಅಂದರೆ, ಸಮಾಜವಾದಿಗಳು, ಜನಸಂಘ ಮತ್ತು ಹೊಸದಾಗಿ ಸ್ಥಾಪನೆಯಾದ ಪ್ರಾದೇಶಿಕ ಪ‍ಕ್ಷಗಳ ಹರಕು–ಮುರುಕು ಮೈತ್ರಿಕೂಟಗಳು ಕೆಲವು ರಾಜ್ಯಗಳಲ್ಲಿ ಕಾಂಗ್ರೆಸ್‌ ಪಕ್ಷವನ್ನು ಸೋಲಿಸುವ ವರೆಗೆ ಈ ಪ್ರವೃತ್ತಿ ಮುಂದುವರಿದಿತ್ತು.

1971ರ ಬಳಿಕ, ಕಾಂಗ್ರೆಸ್‌ ಪಕ್ಷವು ಕಳೆದುಕೊಂಡ ನೆಲೆಯನ್ನು ಇಂದಿರಾ ಗಾಂಧಿ ಅವರು ಮರಳಿ ಪಡೆದುಕೊಂಡರು. ಆದರೆ, 1980ರ ದಶಕದಲ್ಲಿ ಪ್ರಾದೇಶಿಕ ಪಕ್ಷಗಳ ಉದಯ ಆರಂಭವಾಯಿತು.

ತಮಿಳುನಾಡಿನಲ್ಲಿ ಕಾಂಗ್ರೆಸ್‌ ಆಳ್ವಿಕೆಯನ್ನು ಡಿಎಂಕೆ 1967ರಲ್ಲಿಯೇ ಕೊನೆಗೊಳಿಸಿತು. ಆದರೆ, ಪ್ರಾದೇಶಿಕ ಆಶೋತ್ತರಗಳು ಮತ್ತು ಆತ್ಮಗೌರವದ ಆಕಾಂಕ್ಷೆ ನಿಜವಾಗಿಯೂ ಮುನ್ನೆಲೆಗೆ ಬಂದದ್ದು 1983ರಲ್ಲಿ; ಈ ವರ್ಷ, ಕರ್ನಾಟಕ ಕ್ರಾಂತಿ ರಂಗ ಮತ್ತು ಜನತಾ ಪಕ್ಷದ ಮೈತ್ರಿಕೂಟವು ಕಾಂಗ್ರೆಸ್‌ ಪಕ್ಷಕ್ಕೆ ಆಘಾತಕಾರಿ ಸೋಲುಣಿಸಿತು ಮತ್ತು ರಾಮಕೃಷ್ಣ ಹೆಗಡೆ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬಂತು. ಅದೇ ವರ್ಷ ಆಂಧ್ರ ಪ್ರದೇಶದಲ್ಲಿ ಎನ್‌.ಟಿ. ರಾಮರಾವ್‌ ನೇತೃತ್ವದ ಸರ್ಕಾರವೂ ಅಧಿಕಾರಕ್ಕೆ ಬಂತು. ಅದಾದ ಬಳಿಕ, ತಮಿಳುನಾಡು, ಬಿಹಾರ, ಒಡಿಶಾ, ಪಂಜಾಬ್‌, ಆಂಧ್ರ ಪ್ರದೇಶ, ತೆಲಂಗಾಣ, ಹರಿಯಾಣ, ಮಹಾರಾಷ್ಟ್ರ, ಪಶ್ಚಿಮ ಬಂಗಾಳ, ದೆಹಲಿ ಮತ್ತು ಕೇರಳದಲ್ಲಿ ಪ್ರಾದೇಶಿಕ ಮತ್ತು ಜಾತಿ ಆಧಾರಿತ ಪಕ್ಷಗಳು ಅಸ್ತಿತ್ವಕ್ಕೆ ಬಂದವು. ಕಾಂಗ್ರೆಸ್‌ ಪಕ್ಷವನ್ನು ಸೋಲಿಸುವುದೇ ಈ ಎಲ್ಲ ಪಕ್ಷಗಳ ಉದ್ದೇಶವಾಗಿತ್ತು. ಈ ಪಕ್ಷಗಳ ಪ್ರಭಾವ ಎಷ್ಟಿತ್ತು ಎಂದರೆ, ಈ ಎಲ್ಲ ರಾಜ್ಯಗಳಲ್ಲಿ ಕಾಂಗ್ರೆಸ್‌ ಪಕ್ಷವನ್ನು ಸಂಪೂರ್ಣವಾಗಿ ದಮನ ಮಾಡಲು ಸಾಧ್ಯವಾಯಿತು.

ADVERTISEMENT

ಈ ಮಧ್ಯೆ ಉಂಟಾದ ಇನ್ನೊಂದು ಬೆಳವಣಿಗೆ ಎಂದರೆ ರಾಷ್ಟ್ರೀಯ ಪಕ್ಷವಾಗಿ ಭಾರತೀಯ ಜನತಾ ಪಕ್ಷದ (ಬಿಜೆಪಿ) ಉದಯ. ಈ ಪಕ್ಷವು ಮುಖ್ಯವಾಗಿ ಉತ್ತರದ ಹಿಂದಿ ಭಾಷಿಕ ರಾಜ್ಯಗಳು, ಗುಜರಾತ್‌, ಅಸ್ಸಾಂ, ಕರ್ನಾಟಕ ಮತ್ತು ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ಪಕ್ಷವು ಖಾಲಿ ಮಾಡಿದ ಸ್ಥಾನಕ್ಕೆಹೆಚ್ಚು ಶ್ರಮವಿಲ್ಲದೆಯೇ ಬಂದಿದೆ. ಆದರೆ, ಬಿಜೆಪಿಯ ಹಿಡಿತವು ಸರ್ವವ್ಯಾಪಿ ಅಲ್ಲ.

ಈಗ, ಭಾರತದ ರಾಜಕೀಯ ನಕ್ಷೆಯನ್ನು ಬಿಡಿಸಿದರೆ ಬಹುವರ್ಣದ ಚಿತ್ರ ಕಾಣಿಸುತ್ತದೆ– ಕೇರಳದಲ್ಲಿ ಮಾರ್ಕ್ಸ್‌ವಾದಿಗಳು, ತಮಿಳುನಾಡಿನಲ್ಲಿ ಡಿಎಂಕೆ, ಉತ್ತರ ಪ್ರದೇಶ ಮತ್ತು ಕರ್ನಾಟಕ ಸೇರಿ ಹತ್ತನ್ನೆರಡು ರಾಜ್ಯಗಳಲ್ಲಿ ಬಿಜೆಪಿ ಮತ್ತು ಅದರ ಮಿತ್ರ ಪಕ್ಷಗಳು, ಪಂಜಾಬ್‌, ಛತ್ತೀಸಗಡ, ರಾಜಸ್ಥಾನದಲ್ಲಿ ಕಾಂಗ್ರೆಸ್‌, ದೆಹಲಿಯಲ್ಲಿ ಆಮ್‌ ಆದ್ಮಿ ಪಕ್ಷ, ತೆಲಂಗಾಣದಲ್ಲಿ ತೆಲಂಗಾಣ ರಾಷ್ಟ್ರ ಸಮಿತಿ, ಆಂಧ್ರ ಪ್ರದೇಶದಲ್ಲಿ ವೈಎಸ್‌ಆರ್‌ ಕಾಂಗ್ರೆಸ್‌, ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್‌ ಮತ್ತು ಈಶಾನ್ಯ ರಾಜ್ಯಗಳಲ್ಲಿ ಹಲವು ಹತ್ತು ರಾಜಕೀಯ ಪಕ್ಷಗಳು ಮತ್ತು ಮೈತ್ರಿಕೂಟಗಳು ಆಳ್ವಿಕೆ ನಡೆಸುತ್ತಿವೆ. ಹಲವು ರಾಜ್ಯಗಳಲ್ಲಿ ಮೈತ್ರಿಕೂಟ ನೇತೃತ್ವದ ಸರ್ಕಾರಗಳಿವೆ. ಹಾಗಾಗಿ, ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟವಲ್ಲದೆ, 44 ರಾಜಕೀಯ ಪಕ್ಷಗಳು ರಾಜ್ಯಗಳನ್ನು ಆಳುತ್ತಿವೆ.

ಯಾವುದೇ ದೇಶದಲ್ಲಿ ಇಂತಹ ವೈವಿಧ್ಯವನ್ನು ಕಂಡರೆ ಪಶ್ಚಿಮದ ಜನರ ಮನಸ್ಸು ದಿಗಿಲುಗೊಳ್ಳಬಹುದು. ಆದರೆ, ಎಲ್ಲ ಭಿನ್ನತೆಗಳು ಮತ್ತು ಸಮಸ್ಯೆಗಳ ಜತೆಗೂ ಈ ವೈವಿಧ್ಯವನ್ನು ನಮ್ಮ ಪಯಣದ ಭಾಗವಾಗಿಸಿಕೊಂಡ ಜನ ನಾವು. ಭಾರತದ ಪ್ರಜಾಪ್ರಭುತ್ವಕ್ಕೆ ಭಾರಿ ಹಿನ್ನಡೆಯಾಗಲಿದೆ ಎಂದು ವರ್ಷದ ಆರಂಭದಲ್ಲಿ ಅಂದಾಜಿಸಿದ್ದ ಪಶ್ಚಿಮದ ಹಲವು ವಿದ್ವಾಂಸರು, ಮೇ 2ರಂದು ಪ್ರಕಟವಾದ ಫಲಿತಾಂಶದ ಬಳಿಕ ಬೆಪ್ಪುತಕ್ಕಡಿಗಳಾಗಿದ್ದಾರೆ. ಈ ಫಲಿತಾಂಶವು ಪರಂಪರೆ ಮತ್ತು ಪ್ರಜಾಪ್ರಭುತ್ವಕ್ಕೆ ನಮ್ಮ ಬದ್ಧತೆಯನ್ನು ಮತ್ತಷ್ಟು ಬಲಪಡಿಸಿದೆ.

ಒಂದು ಪಕ್ಷದ ಆಳ್ವಿಕೆಯು ಒಳ್ಳೆಯದೇ ಎಂಬ ಪ್ರಶ್ನೆಯನ್ನು ಇದು ನಮ್ಮ ಮುಂದೆ ಇರಿಸುತ್ತದೆ. ಉತ್ತರ ಅಲ್ಲ ಎಂಬುದೇ ಆಗಿದೆ. ಭಾರತದ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಬಹುತ್ವದ ಹಿನ್ನೆಲೆಯಲ್ಲಿ, ಆದರ್ಶ ರಾಜಕೀಯ ವ್ಯವಸ್ಥೆಯು ದೇಶದ ವೈವಿಧ್ಯವನ್ನು ಪ್ರತಿಬಿಂಬಿಸಬೇಕು ಎಂದೇ ನಾನು ಹೇಳುತ್ತೇನೆ. ಒಂದೇ ಪಕ್ಷದ ಆಳ್ವಿಕೆಯ ಬದಲಿಗೆ, ದೇಶದ ವಿವಿಧ ಭಾಗಗಳ ಪಕ್ಷಗಳನ್ನು ಒಳಗೊಂಡ ಅತ್ಯುತ್ತಮ ಹೊಂದಾಣಿಕೆಯ ಚುನಾವಣಾ‍ಪೂರ್ವ ಮೈತ್ರಿಕೂಟ ವ್ಯವಸ್ಥೆಯು ಬೇಕು. ಒಕ್ಕೂಟ ಮಟ್ಟದಲ್ಲಿ ಆಳ್ವಿಕೆ ನಡೆಸಲು ಈ ಮೈತ್ರಿಕೂಟದ ಕೇಂದ್ರದಲ್ಲಿ ಬಲವಾದ ರಾಷ್ಟ್ರೀಯ ಪಕ್ಷವೊಂದು ಬೇಕೇಬೇಕು. ರಾಜ್ಯಗಳಲ್ಲಿ‍ಪ್ರಾದೇಶಿಕವಾದ ಹಲವು ಪಕ್ಷಗಳಿರಬೇಕು.

ಮೈತ್ರಿಕೂಟವನ್ನು ಗಟ್ಟಿಯಾಗಿ ಇರಿಸುವುದಕ್ಕೆ ಮತ್ತು ಅಗತ್ಯ ಸಂದರ್ಭದಲ್ಲಿ ಕಠಿಣ ನಿರ್ಧಾರ ಕೈಗೊಳ್ಳುವುದಕ್ಕೆ ಪ್ರಬಲವಾದ ಪಕ್ಷವೊಂದು ಬೇಕು; ಹಾಗೆಯೇ ಪ್ರಾದೇಶಿಕವಾಗಿ ಜನರ ಆಶೋತ್ತರಗಳ ಈಡೇರಿಸುವಿಕೆಯೂ ಆಗಬೇಕು. ಈ ಎರಡರ ನಡುವಣ ಸಮತೋಲನವನ್ನು ಇಂತಹದೊಂದು ವ್ಯವಸ್ಥೆಯು ಖಾತರಿಪಡಿಸುತ್ತದೆ.

1980ರ ದಶಕದ ಬಳಿಕದ ಚುನಾವಣಾ ರಾಜಕಾರಣವನ್ನು ಗಮನಿಸಿದರೆ, ಭಾರತದ ರಾಜಕಾರಣ ಮತ್ತು ಡಾ. ಬಿ.ಆರ್. ಅಂಬೇಡ್ಕರ್‌ ಅವರು ಭಾವಿಸಿದ್ದ ಒಕ್ಕೂಟ ವ್ಯವಸ್ಥೆಯ ನಡುವೆ ನಂಟು ಇರುವುದನ್ನು ಗುರುತಿಸಬಹುದು.

ಭಾರತದ ಸಂವಿಧಾನವು ಒಕ್ಕೂಟ ವ್ಯವಸ್ಥೆ ಯದ್ದಾದರೂ ಕೇಂದ್ರದೆಡೆಗೆ ಬಾಗಿರುವಂತಹುದು ಎಂದು ಅಂಬೇಡ್ಕರ್‌ ಹೇಳಿದ್ದರು. ತುರ್ತುಸ್ಥಿತಿಯಲ್ಲಿ ಕೇಂದ್ರಕ್ಕೆ ವ್ಯಾಪಕವಾದ ಅಧಿಕಾರವನ್ನು ಸಂವಿಧಾನವು ನೀಡಿದೆ. ‘ಬಹುಸಂಖ್ಯೆಯ ಜನರ ಅಭಿಪ್ರಾಯ ಪ್ರಕಾರ, ತುರ್ತುಸ್ಥಿತಿಯಲ್ಲಿ ಜನರ ನಿಷ್ಠೆಯು ಕೇಂದ್ರದ ಕಡೆಗಿರಬೇಕೇ ಹೊರತು ರಾಜ್ಯದ ಕಡೆಗಲ್ಲ. ಎಲ್ಲರ ಒಳಿತಿಗಾಗಿ, ಇಡೀ ದೇಶದ ಹಿತಾಸಕ್ತಿಗಾಗಿ ಕೇಂದ್ರ ಮಾತ್ರ ಕೆಲಸ ಮಾಡಲು ಸಾಧ್ಯ’ ಎಂದು ಅಂಬೇಡ್ಕರ್‌ ಹೇಳಿದ್ದರು.

ಅಂಬೇಡ್ಕರ್‌ ಅವರು ನಿರೂಪಿಸಿದ ಸಾಂವಿಧಾನಿಕ ತತ್ವವನ್ನು ಚುನಾವಣಾ ರಾಜಕೀಯಕ್ಕೆ ಅನ್ವಯಿಸಿದರೆ, ಭಿನ್ನ ರಾಜಕೀಯ ಗುಂಪುಗಳನ್ನು ಒಟ್ಟಾಗಿರಿಸಿ, ಉತ್ತಮ ಆಳ್ವಿಕೆಯನ್ನು ಖಾತರಿಪಡಿಸಲು ಕೇಂದ್ರದಲ್ಲಿನ ಮೈತ್ರಿಕೂಟಕ್ಕೆ ಆಸರೆಯಾಗಿ ಪ್ರಬಲವಾದ ರಾಷ್ಟ್ರೀಯ ಪಕ್ಷದ ಅಗತ್ಯ ಇದೆ ಎಂಬುದು ಅರಿವಾಗುತ್ತದೆ. ಮೈತ್ರಿಕೂಟದಲ್ಲಿ ಸಣ್ಣ ಸಣ್ಣ, ಪ‍್ರಾದೇಶಿಕ ಪಕ್ಷಗಳೇ ಇದ್ದರೆ, ಎಲ್ಲರನ್ನೂ ಜತೆಗೆ ಒಯ್ಯುವ ಶಕ್ತ ಪಕ್ಷವು ಇಲ್ಲದಿದ್ದರೆ, ಒಂದೊಂದು ಪಕ್ಷವು ಒಂದೊಂದು ದಿಕ್ಕಿಗೆ ಎಳೆದು ಮೈತ್ರಿಕೂಟವೇ ಪತನವಾಗಬಹುದು. ಇದರಿಂದಾಗಿ ಆಡಳಿತವು ಗಂಡಾಂತರಕ್ಕೆ ಒಳಗಾಗುವುದಲ್ಲದೆ ದೇಶದ ಏಕತೆ ಮತ್ತು ಸಮಗ್ರತೆಗೇ ಕುತ್ತು ಬರಬಹುದು.

ಹೀಗೆ ಆಗಲು ನಾವು ಆಸ್ಪದವನ್ನೇ ಕೊಡಬಾರದು.

(ಲೇಖಕ: ಪ್ರಸಾರ ಭಾರತಿ ಮಾಜಿ ಅಧ್ಯಕ್ಷ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.