ADVERTISEMENT

ವಿಶ್ಲೇಷಣೆ | ಸಹನೀಯತೆ ಮುಗಿಸಿದ ಸಹ್ಯಾದ್ರಿ

ವಿಪತ್ತು ಸಂಭವಿಸುವ ಪೂರ್ವದಲ್ಲೇ ಗುರುತಿಸಿ, ನಿಯಂತ್ರಿಸುವುದು ಜಾಣತನದ ನಡೆ

ಅಖಿಲೇಶ್ ಚಿಪ್ಪಳಿ
Published 18 ಆಗಸ್ಟ್ 2021, 19:45 IST
Last Updated 18 ಆಗಸ್ಟ್ 2021, 19:45 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಗೋವಾದ ದೂದ್‌ಸಾಗರ್ ಹತ್ತಿರ ಚಲಿಸುತ್ತಿರುವ ರೈಲಿನ ಮೇಲೆ ಕುಸಿದ ಗುಡ್ಡ, ತೀರ್ಥಹಳ್ಳಿಯ ಹುಲಿಬಂಡೆ ಬಳಿ ಜಾರಿದ ಗುಡ್ಡ, ಶರಾವತಿ ಕಣಿವೆ, ಉತ್ತರ ಕನ್ನಡ, ಯಲ್ಲಾಪುರ, ಚಿಕ್ಕಮಗಳೂರು ಹೀಗೆ ಪ್ರತೀ ದಿಕ್ಕಿನಲ್ಲೂ ಕುಸಿಯುತ್ತಿರುವ ಗುಡ್ಡಗಳು ಟಿ.ವಿಯಲ್ಲಿ, ದಿನಪತ್ರಿಕೆಗಳಲ್ಲಿ ಸುದ್ದಿಯಾಗಿ ಸತ್ತುಹೋಗುತ್ತವೆ. ಹೀಗೆ ಗುಡ್ಡ ಕುಸಿಯಲು ಕಾರಣವೇನು? ಕೋವಿಡ್ ಕಾರಣಕ್ಕೆ ಶಾಲೆಗೆ ಹೋಗದ ಮಕ್ಕಳು ಉತ್ತರಿಸಬಹುದಾದ ಪ್ರಶ್ನೆಯಿದು. ಅದೇ ಅಂಧಾದುಂದಿ ಅಭಿವೃದ್ಧಿ!

ಬಿದ್ದುಹೋದ ಆರ್ಥಿಕತೆ ಮೇಲೆತ್ತಲು ಪ್ರವಾಸೋದ್ಯಮವೊಂದೇ ಪರಿಹಾರವೆಂಬಂತೆ ಬಿಂಬಿಸಲಾಗುತ್ತಿದೆ. ರಕ್ಕಸಯಂತ್ರ ಬಳಸಿ ಗುಡ್ಡಗಳನ್ನು ಕತ್ತರಿಸಿ ಅಗಲಗೊಳಿಸುವ ರಸ್ತೆಗಳ ಸುರಕ್ಷತೆಯ ಬಗ್ಗೆ ಸದಾ ಅನುಮಾನವೇ ಇದೆ. ವಿಶ್ವವಿಖ್ಯಾತ ಜೋಗವನ್ನು ಅದ್ಭುತವಾದ ಪ್ರವಾಸಿ ತಾಣವನ್ನಾಗಿ ಮಾಡಲು ಸರ್ಕಾರ ಪಣ ತೊಟ್ಟಿದೆ. ಜಲಪಾತದ ಪಕ್ಕದಲ್ಲೇ ಐಷಾರಾಮಿ ಹೋಟೆಲ್, ಜಲಪಾತವನ್ನು ಹತ್ತಿರದಿಂದ ವೀಕ್ಷಿಸಲು ಕೇಬಲ್ ಕಾರು, ಬೋಟಿಂಗ್, ಸರ್ವಋತು ಜಲಪಾತ, ಪ್ರಖರ ಲೈಟುಗಳು, ಸಾಹಸ ಮನರಂಜನೆಯ ಭಾಗವಾಗಿ ಜಿಪ್ ಲೈನು, ಅಂದರೆ ಜಲಪಾತ ಕಣಿವೆಯ ಒಂದು ಭಾಗದಿಂದ ಇನ್ನೊಂದು ಭಾಗಕ್ಕೆ ತಂತಿಯಲ್ಲಿ ಜಾರುತ್ತಾ ಸಾಗುವುದು, ಹೀಗೆ ಹತ್ತಾರು ಕೆಲಸಕ್ಕೆ ನೂರಾರು ಕೋಟಿ ರೂಪಾಯಿ ಹರಿದುಬರುತ್ತಿದೆ.

ಕಳೆದ ಮಳೆಗಾಲದಲ್ಲಿ ಬ್ರಿಟಿಷ್ ಬಂಗಲೆಯ ತಳಭಾಗ ಕುಸಿದು ಬಿದ್ದದ್ದು ಆಡಳಿತಕ್ಕೆ ಮರೆತೇ ಹೋಗಿದೆ. ಅತ್ತ ಕೊಲ್ಲೂರಿನಿಂದ ಕೊಡಚಾದ್ರಿಯ ತುತ್ತತುದಿಗೆ ಕೇಬಲ್ ಕಾರು ನಿರ್ಮಿಸುವ ಮಸಲತ್ತು ನಡೆಯುತ್ತಿದೆ. ಇವೆಲ್ಲವನ್ನೂ ಪ್ರವಾಸಿಗರ ಅನುಕೂಲಕ್ಕಾಗಿ ಮಾಡುತ್ತಿದ್ದೇವೆ ಎಂಬ ಧುರೀಣರ ಮಾತು ಕೆಲವರಿಗೆ ಆಪ್ಯಾಯಮಾನವಾಗಿ ಕಾಣಿಸುತ್ತಿದೆ, ಹಲವರಿಗೆ ಕಿವಿಗೆ ಕಾದ ಸೀಸ ಎರೆದಂತಾಗಿದೆ.

ADVERTISEMENT

ಸಹ್ಯಾದ್ರಿಯ ಧಾರಣ ಸಾಮರ್ಥ್ಯ ಮುಗಿದಿದೆ. ಕುಸಿಯುತ್ತಿರುವ ಗುಡ್ಡಗಳು ಈ ಮಾತನ್ನು ಮತ್ತೆ ಮತ್ತೆ ಸಾಬೀತು ಮಾಡುತ್ತಿವೆ. ಅಂಧಾದುಂದಿ ಅಭಿವೃದ್ಧಿಯಿಂದಾಗುವ ಅನಾಹುತಗಳ ಸರಣಿಗೆ ಯಾರನ್ನು ಹೊಣೆ ಮಾಡುವುದು? ಈ ವಿಚಾರದಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಹೊಣೆ ಹೆಚ್ಚು. 2005ರಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಕಾಯ್ದೆ ಜಾರಿಗೆ ಬಂತು. ಕಾಯ್ದೆಯ ಆಶಯದಂತೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ ರಚನೆಯಾಯಿತು. ಖುದ್ದು ಪ್ರಧಾನಿ ಈ ಪ್ರಾಧಿಕಾರದ ರಾಷ್ಟ್ರೀಯ ಅಧ್ಯಕ್ಷರು, ಉಳಿದಂತೆ ಆಯಾ ರಾಜ್ಯದ ಮುಖ್ಯಮಂತ್ರಿಯು ರಾಜ್ಯ ಘಟಕದ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಬೇಕಾಗುತ್ತದೆ.

ನೈಸರ್ಗಿಕ ವಿಕೋಪಗಳು ಸಂಭವಿಸಿದಾಗ ಮಾತ್ರ ಈ ಪ್ರಾಧಿಕಾರವು ಕೆಲಸ ಮಾಡುತ್ತದೆ ಎಂಬುದು ಸಾಮಾನ್ಯ ತಿಳಿವಳಿಕೆ. ಆದರೆ ಕಾಯ್ದೆಯಲ್ಲಿ ಅದರ ಜವಾಬ್ದಾರಿಗಳನ್ನು ವಿಸ್ತೃತವಾಗಿ ವಿವರಿಸಲಾಗಿದೆ. ಅಂದರೆ, ಭಾರತದ ಯಾವ ಮೂಲೆಯಲ್ಲಾದರೂ ಯಾವ ತರಹದ ವಿಕೋಪಗಳು ಸಂಭವಿಸಿದರೂ ಅದರ ನಿರ್ವಹಣೆಯ ಜವಾಬ್ದಾರಿಯು ಇದರ ವ್ಯಾಪ್ತಿಗೆ ಬರುತ್ತದೆ. ಸಂಭವನೀಯ ವಿಪತ್ತುಗಳನ್ನು ಗುರುತಿಸುವುದೂ ಅದರ ಹೊಣೆಯಾಗಿದೆ.

2018, 2019 ಹಾಗೂ 2021ರಲ್ಲಿ ಸಹ್ಯಾದ್ರಿಯ ತಪ್ಪಲಿನ ಅನೇಕ ಭಾಗಗಳಲ್ಲಿ ಗುಡ್ಡ ಕುಸಿತ ಸಂಭವಿಸಿ, ಅಪಾರ ಪ್ರಮಾಣದ ನಷ್ಟ, ಸಾವು-ನೋವು ಆದುದಕ್ಕೆ ಕಾರಣ ಅತಿಯಾದ ಅಭಿವೃದ್ಧಿ ಎಂದು ಭಾರತೀಯ ವಿಜ್ಞಾನ ಸಂಸ್ಥೆಯ ವರದಿ ಹೇಳಿದೆ. ಪಶ್ಚಿಮಘಟ್ಟಗಳಲ್ಲಿ ಆದ ವ್ಯಾಪಕ ಅರಣ್ಯ ನಾಶವೇ ಗುಡ್ಡ ಕುಸಿಯಲು ಕಾರಣವೆಂಬುದು ಸಾಬೀತಾಗಿದೆ. ಅರಣ್ಯ ನಾಶ, ಗಣಿಸ್ಫೋಟ, ದಟ್ಟಾರಣ್ಯದಲ್ಲಿ ರಸ್ತೆ ವಿಸ್ತರಣೆ, ರೈಲು ಮಾರ್ಗ, ವಿದ್ಯುತ್ ಮಾರ್ಗಗಳನ್ನು ನಿರ್ಮಿಸುವುದು, ಗುಡ್ಡಗಳ ಮೇಲೆ ಅನಿಯಂತ್ರಿತ ಮಳಿಗೆ, ಹೋಟೆಲುಗಳನ್ನು ತೆರೆಯುವುದು, ಕೆರೆ ತೋಡುವುದು ಮುಂತಾದ ಚಟುವಟಿಕೆಗಳು ಅಪಾಯಕ್ಕೆ ಅನುವು ಮಾಡಿಕೊಟ್ಟಂತೆ ಎಂಬುದು ಒಟ್ಟೂ ಸಾರಾಂಶ.

ರಾಷ್ಟ್ರ, ರಾಜ್ಯ ಮಟ್ಟದಲ್ಲಿ ಇರುವಂತಹ ವಿಪತ್ತು ನಿರ್ವಹಣಾ ಪ್ರಾಧಿಕಾರವು ಜಿಲ್ಲಾ ಮಟ್ಟದಲ್ಲೂ ಇರುತ್ತದೆ. ಜಿಲ್ಲಾಧಿಕಾರಿಯು ಅಧ್ಯಕ್ಷರಾಗಿರುತ್ತಾರೆ. ಇದರ ಜವಾಬ್ದಾರಿ ಬಹಳ ಮುಖ್ಯ. ಉದಾಹರಣೆಗೆ, ಅತಿಸೂಕ್ಷ್ಮ ಪ್ರದೇಶವಾದ ಜೋಗದಲ್ಲಿ ಕೇಬಲ್ ಕಾರು ಯೋಜನೆ ಜಾರಿಯಾದಲ್ಲಿ, ಅಲ್ಲಿ ಗುಡ್ಡ ಕುಸಿಯುವ ಸಂಭವ ಇದೆ ಎಂಬುದನ್ನು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಗಮನಿಸಬೇಕಾಗುತ್ತದೆ. ಶರಾವತಿ ಕಣಿವೆಯಲ್ಲಿ ಜಿಪ್ ಲೈನ್ ಅಳವಡಿಸುವುದರಿಂದ, ಕಣಿವೆಗೆ ಮಾತ್ರ ಸೀಮಿತವಾಗಿರುವ ದೊಡ್ಡ ಮಂಗಟ್ಟೆ ಹಕ್ಕಿ ಮತ್ತು ಬೇಟೆಗಾರ ಪಕ್ಷಿ ಗಿಡುಗಗಳ ನೆಲೆಗೆ ತೊಂದರೆಯಾಗುತ್ತದೆ ಹಾಗೂ ಆ ಪ್ರದೇಶದಲ್ಲಿ ಮಾತ್ರ ಕಂಡುಬರುವ ಬೇಟೆ ಮತ್ತು ಬಲಿಪ್ರಾಣಿಗಳ ಸುಲಲಿತ ಜೀವನಕ್ಕೆ ತೊಂದರೆಯಾಗುತ್ತದೆ. ಪಶ್ಚಿಮಘಟ್ಟಗಳ ಇನ್ನು ಯಾವುದೇ ಭಾಗದಲ್ಲಿ ಈ ತರಹದ ರಚನೆಯಿರುವ ಕಣಿವೆ ಇಲ್ಲ ಎಂಬ ಅಂಶಗಳನ್ನು ಗಮನಿಸುವುದು ಇದರ ಪ್ರಮುಖ ಜವಾಬ್ದಾರಿಯಾಗಿರುತ್ತದೆ.

ವನ್ಯಜೀವಿಗಳ ಸುರಕ್ಷತೆಯನ್ನು ಕಾಪಾಡುವುದು ಪ್ರಾಧಿಕಾರದ ಪರಮೋಚ್ಚ ಜವಾಬ್ದಾರಿಯಾಗಿದೆ. ವನ್ಯಜೀವಿಗಳ ಆವಾಸಸ್ಥಾನಗಳನ್ನು ಅಭಿವೃದ್ಧಿಯ ಹೆಸರಿನಲ್ಲಿ ನಾಶ ಮಾಡುವ ಪ್ರಯತ್ನ ನಡೆದಲ್ಲಿ, ಪ್ರಾಧಿಕಾರವು ಮಧ್ಯಪ್ರವೇಶಿಸಿ, ಸಂಭಾವ್ಯ ವಿಪತ್ತು, ವಿಕೋಪಗಳನ್ನು ನಿಯಂತ್ರಿಸುವ ಕೆಲಸ ಮಾಡಬೇಕಾಗು
ತ್ತದೆ. ಒಂದು ಪ್ರಾಧಿಕಾರ, ಸಮಿತಿ, ಸಂಸ್ಥೆ ಅಥವಾ ಇಲಾಖೆ ತನ್ನ ಕರ್ತವ್ಯವನ್ನು ಸರಿಯಾಗಿ ನಿರ್ವಹಿಸದೇ ಇದ್ದಲ್ಲಿ, ಅದರ ಅದಕ್ಷತೆಯನ್ನು ಬೊಟ್ಟು ಮಾಡಿ ತೋರಿಸಬೇಕಾಗುತ್ತದೆ. ವಿಪತ್ತು ನಿರ್ವಹಣೆಗೆ ಸಂಬಂಧಿಸಿದ ರಾಷ್ಟ್ರ, ರಾಜ್ಯ ಮತ್ತು ಜಿಲ್ಲಾ ಮಟ್ಟದ ಪ್ರಾಧಿಕಾರಗಳಾಗಲೀ, ಸ್ಥಳೀಯ ಸಮಿತಿಗಳಾಗಲೀ ಈ ದಿಸೆಯಲ್ಲಿ ತಮ್ಮ ಕ್ಷಮತೆಯನ್ನು ತೋರದೇ ಇರುವುದು ಅತ್ಯಂತ ಸ್ಪಷ್ಟವಾಗಿ ಗೋಚರಿಸುತ್ತದೆ. ಅದರಲ್ಲೂ, ಸಹ್ಯಾದ್ರಿ ತಪ್ಪಲಿನಲ್ಲಿ ಆಗುತ್ತಿರುವ ಮಾನವನಿರ್ಮಿತ ಅನಾಹುತಗಳನ್ನು ನೋಡಿಯೂ
ನೋಡದಂತೆ ಇರುವುದು ವಿಪತ್ತು ನಿರ್ವಹಣಾ ಪ್ರಾಧಿಕಾರಕ್ಕೆ ಮಾಡುವ ಅಪಚಾರವೇ ಆಗಿದೆ.

ತಾಲ್ಲೂಕು ಮಟ್ಟದಲ್ಲಿ ಮತ್ತು ಗ್ರಾಮ ಪಂಚಾಯಿತಿ ಮಟ್ಟದಲ್ಲೂ ವಿಪತ್ತು ನಿರ್ವಹಣಾ ಸಮಿತಿಗಳು ಕೆಲಸ ಮಾಡುತ್ತವೆ. ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯೇ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ವಿಪತ್ತು ನಿರ್ವಹಣೆ ಮಾಡುವ ಅಧಿಕಾರಿಯಾಗಿರುತ್ತಾರೆ. ತಮ್ಮ ಪಂಚಾಯಿತಿ ಮಟ್ಟದಲ್ಲಿ ಮುಂದೆ ಸಂಭವಿಸಬಹುದಾದ ವಿಪತ್ತುಗಳ ಪಟ್ಟಿ ಆ ಅಧಿಕಾರಿಯ ಹತ್ತಿರ ಇರಬೇಕಾಗುತ್ತದೆ. 2018ರಲ್ಲಿ ಕೊಡಗಿನಲ್ಲಿ ಸಂಭವಿಸಿದ ಗುಡ್ಡ ಕುಸಿತಕ್ಕೆ ಕಾರಣಗಳೇನು? ಮುಂದೆ ಈ ತರಹದ ಅನಾಹುತಗಳು ಸಂಭವಿಸಬಾರದು ಎಂದರೆ ಏನು ಕ್ರಮ ತೆಗೆದುಕೊಳ್ಳಬಹುದು ಎಂಬಂತಹ ಸ್ಪಷ್ಟ ಪ್ರಜ್ಞೆ ಆಯಾ ಪಂಚಾಯಿತಿಯ ಅಧಿಕಾರಿಗಿರಬೇಕು. ಅದನ್ನು ಆಧರಿಸಿ ಸಿದ್ಧಪಡಿಸಿದ ವರದಿಯನ್ನು ಅವರು ಜಿಲ್ಲಾಡಳಿತಕ್ಕೆ ಸಲ್ಲಿಸಬೇಕು. ಈ ವರದಿಯನ್ನು ಪರಿಶೀಲಿಸಿ ಜಿಲ್ಲಾಡಳಿತವು ರಾಜ್ಯದ ಪ್ರಾಧಿಕಾರಕ್ಕೆ ತನ್ನ ಸ್ಪಷ್ಟವಾದ ವರದಿಯನ್ನು ಕಳುಹಿಸಬೇಕು.

ದೇಶವನ್ನು ಸುಲಲಿತವಾಗಿ ನಡೆಸಲು ನಮ್ಮಲ್ಲಿ ಛಪ್ಪನ್ನಾರು ಇಲಾಖೆಗಳಿವೆ. ದುರದೃಷ್ಟವೆಂದರೆ, ಒಂದೊಂದು ಇಲಾಖೆಗೂ ತಾಳಮೇಳವಿಲ್ಲ. ಹೆದ್ದಾರಿ ಪ್ರಾಧಿಕಾರದ ಕೆಲಸವೆಂದರೆ, ಆದಷ್ಟು ಹೆಚ್ಚು-ಹೆಚ್ಚು ಹೆದ್ದಾರಿಗಳನ್ನು ನಿರ್ಮಿಸುವುದು. ಪ್ರವಾಸೋದ್ಯಮ ಇಲಾಖೆಯ ಕೆಲಸವೆಂದರೆ, ಗುಡ್ಡಗಾಡುಗಳಲ್ಲಿ ಅತಿ ಹೆಚ್ಚು ಹೆಚ್ಚು ಹೋಟೆಲ್ ಮತ್ತು ರೆಸಾರ್ಟ್‌ಗಳನ್ನುನಿರ್ಮಿಸುವುದು. ರೈಲ್ವೆ ಇಲಾಖೆಯದು ಆದಷ್ಟು ಹೆಚ್ಚು ಸುರಂಗ ಮಾರ್ಗಗಳನ್ನು ನಿರ್ಮಿಸುವುದರತ್ತಲೇಚಿತ್ತವಿರುತ್ತದೆ. ನೈಸರ್ಗಿಕ ವಿಕೋಪಗಳನ್ನು ಊಹಿಸಿ, ತಡೆಯುವುದು ತುಸು ಕಷ್ಟಸಾಧ್ಯ. ಆದರೆ ಮಾನವನಿರ್ಮಿತ ವಿಕೋಪಗಳನ್ನು ಮುಂಚಿತವಾಗಿ ಊಹಿಸಬಹುದು. ವಿಪತ್ತು ನಿರ್ವಹಣಾ ಪ್ರಾಧಿಕಾರವು ಈ ದಿಸೆಯಲ್ಲಿ ದಿಟ್ಟ ಹೆಜ್ಜೆಗಳನ್ನು ಇಡಬೇಕಾಗಿದೆ.

ಭೂಮಿಯ ಬಿಸಿಯೇರಿಕೆಯಿಂದಾಗಿಯೇ ನೈಸರ್ಗಿಕ ವಿಕೋಪಗಳು ಹೆಚ್ಚುತ್ತಿವೆ. ಹಸಿರು ಕವಚ ವೇಗವಾಗಿ ಕಡಿಮೆಯಾಗುತ್ತಿರುವುದೇ ಭೂಬಿಸಿಗೆ ಕಾರಣವೆಂದು ವಿಜ್ಞಾನ ಸ್ಪಷ್ಟವಾಗಿ ಹೇಳುತ್ತಿದೆ. ರಾಷ್ಟ್ರೀಯ ಅರಣ್ಯ ನೀತಿಯಲ್ಲಿ, ಇಂತಿಷ್ಟು ಕಾಡು ಇರಬೇಕು ಎಂಬುದನ್ನೂ ಹೇಳಲಾಗಿದೆ. ಚೋದ್ಯವೆಂದರೆ, ಒಂದಕ್ಕೊಂದು ತಾಳೆಯಾಗದ ನೀತಿಗಳ ಅನುಷ್ಠಾನದ ಕೊರತೆಯಿಂದಾಗಿ ಜನಸಾಮಾನ್ಯರ ಜೀವನಸಂಕಷ್ಟದ ಕೂಗು ಅರಣ್ಯರೋದನವಾಗಿದೆ. ರಾಷ್ಟ್ರೀಯ ವಿಪತ್ತು ನಿರ್ವಹಣೆ ಕಾಯ್ದೆಯ ಅನುಷ್ಠಾನದ ಕ್ಷಮತೆ ಹೆಚ್ಚಾಗಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.