ADVERTISEMENT

ವಿಶ್ಲೇಷಣೆ: ಬಂದೀತು ಅನೂಹ್ಯ ಆಪತ್ತು

ಭೂಮಿಯತ್ತ ಧಾವಿಸಿ ಬರುವ ಕಾಯಗಳ ಮೇಲಿನ ಕಣ್ಗಾವಲಿನ ಕೆಲಸ ಚುರುಕಾಗಿ ಸಾಗುತ್ತಿದೆ

ಬಿ.ಎಸ್.ಶೈಲಜಾ
Published 29 ಜೂನ್ 2021, 19:20 IST
Last Updated 29 ಜೂನ್ 2021, 19:20 IST
   

ಕಂಡು ಕೇಳರಿಯದ ಆಪತ್ತು ಯಾವಾಗಲಾದರೂ ಎದುರಾಗಬಹುದು. ಅದಕ್ಕೆ ನಾವು ಸಜ್ಜಾಗಬೇಕು ಎಂದು ಮನವರಿಕೆ ಮಾಡಿಕೊಡುವುದೇ ಜೂನ್ 30ರ ‘ಕ್ಷುದ್ರಗ್ರಹದ ದಿನ’ದ ಉದ್ದೇಶ.

ಕ್ಷುದ್ರಗ್ರಹ ಎಂಬ ಹೆಸರು ಸೌರಮಂಡಲದ ಪಠ್ಯದಲ್ಲಿ ಕೇಳಿಬರುತ್ತದೆ. ಸೂರ್ಯ, ಚಂದ್ರ, ಎಂಟು ಗ್ರಹಗಳಲ್ಲದೆ ನಮ್ಮ ನೆರೆಯಲ್ಲಿರುವ ಲಕ್ಷಗಟ್ಟಲೆ ಸಣ್ಣ ಕಾಯಗಳಲ್ಲಿ ಇವುಗಳದ್ದು ಒಂದು ವರ್ಗ. 220 ವರ್ಷಗಳ ಹಿಂದೆ ಪಿಯಝಿ ಎಂಬಾತ ಈ ಚುಕ್ಕೆಯನ್ನು ಗುರುತಿಸಿ ಸೆರೆಸ್ ಎಂದು ಹೆಸರಿಸಿದಾಗ, ಇದನ್ನು ಗ್ರಹ ಎಂದೇ ಭಾವಿಸಿದ್ದುಂಟು. ಆದರೆ ಕೆಲವೇ ವರ್ಷಗಳಲ್ಲಿ ಇಂತಹ ಇನ್ನೂ ಹಲವಾರು ಕಾಯಗಳನ್ನು ಮೈನರ್ ಪ್ಲಾನೆಟ್, ಅಂದರೆ ಕ್ಷುದ್ರಗ್ರಹ ಎಂದು ವರ್ಗೀಕರಿಸಲಾಯಿತು. 15 ವರ್ಷಗಳ ಹಿಂದೆ ಇದು ಕುಬ್ಜ ಗ್ರಹ (ಡ್ವಾರ್ಫ್ ಪ್ಲಾನೆಟ್) ವರ್ಗಕ್ಕೆ ಸೇರಿತು.

ಕ್ಷುದ್ರಗ್ರಹಗಳ ಗಾತ್ರ ಕೆಲವು ಮೀಟರ್‌ನಿಂದ ಸಾವಿರ ಕಿ.ಮೀ.ವರೆಗೂ ಇದೆ. ಇನ್ನು ಸಣ್ಣ ಪುಟ್ಟ ಬಂಡೆಗಳೂ ಇವೆ. ಅವುಗಳಿಗೆ ಮೀಟಿಯೊರಾಯ್ಡ್ಸ್ ಎಂಬ ಹೆಸರಿದೆ. ಈ ಸಣ್ಣ ತುಣುಕುಗಳು ಭೂವಾತಾವರಣದಲ್ಲಿ ಉರಿದು ಹೋಗುವಾಗ ನಕ್ಷತ್ರವೊಂದು ಬಿದ್ದಂತೆಯೇ ಚಿಕ್ಕ ಚುಕ್ಕೆಯಾಗಿ ಕಾಣಿಸುತ್ತವೆ. ಈ ವಿದ್ಯಮಾನಕ್ಕೆ ಮೀಟಿಯರ್ ಅಂದರೆ ಉಲ್ಕೆ, ಉಲ್ಕಾಪಾತ ಎಂಬ ಹೆಸರಿದೆ. ಆ ಬಂಡೆ ದೊಡ್ಡದಾಗಿದ್ದು ನೆಲವನ್ನು ತಲುಪಿದರೆ ಅದಕ್ಕೆ ಮೀಟಿಯೊರೈಟ್ ಅಂದರೆ ಉಲ್ಕಾಶಿಲೆ ಎಂಬ ಹೆಸರಿದೆ. ಇವುಗಳು ಭಾರಿ ವೇಗದಿಂದ ಅಪ್ಪಳಿಸುವ ಕಾರಣ ಕುಳಿಗಳನ್ನು ಉಂಟುಮಾಡುತ್ತವೆ. ಔರಂಗಾಬಾದ್ ಸಮೀಪ ಇರುವ ಲೋನಾರ್ ಎಂಬ ಸರೋವರ ಹೀಗೆ ಉಲ್ಕಾಘಾತದಿಂದ ಉಂಟಾದದ್ದು.

ADVERTISEMENT

ಸೌರಮಂಡಲದ ರಚನೆಯಾದಾಗಲೇ ಸೃಷ್ಟಿಯಾದ ಬಂಡೆಗಳು ಒಗ್ಗೂಡಿ ಗ್ರಹಗಳಾದವು; ವಿಭಿನ್ನ ಕಾರಣಗಳಿಂದ ಒಟ್ಟಾಗದೇ ಉಳಿದುಹೋದ ತುಣುಕುಗಳು ಈ ಕ್ಷುದ್ರಗ್ರಹಗಳು. ಆದ್ದರಿಂದ ಸೌರಮಂಡಲದ ಮೂಲ ಅನಿಲ ಮೇಘ ಹೇಗಿತ್ತು ಎಂಬ ರಹಸ್ಯವನ್ನು ಇವು ಅಡಗಿಸಿ ಇಟ್ಟುಕೊಂಡಿವೆ. ಕಳೆದ ದಶಕದಲ್ಲಿ ಜಪಾನಿನ ಹಯಾಬುಸಾ 1 ಮತ್ತು 2 ನೌಕೆಗಳು ಕ್ಷುದ್ರಗ್ರಹಗಳ ಮಣ್ಣನ್ನು ಹೊತ್ತು ತಂದು ಈ ಸಿದ್ಧಾಂತಕ್ಕೆ ಪುಷ್ಟಿ ನೀಡಿವೆ. ಆದರೆ ಇವುಗಳ ವೈವಿಧ್ಯವನ್ನು ಅರಿಯಲು ಪದೇ ಪದೇ ಇಂತಹ ಯಾತ್ರೆಗಳನ್ನು ಮಾಡುವುದು ಅಷ್ಟೇನೂ ಸುಲಭವಲ್ಲ. ಆದರೆ ಅವುಗಳೇ ನಮ್ಮ ಪ್ರಯೋಗಶಾಲೆಗೆ ಬರುವುವು ಎಂದರೆ ಆಶ್ಚರ್ಯವಾಗುವುದಲ್ಲವೇ?

ಸಾಮಾನ್ಯವಾಗಿ ಗುರು ಮತ್ತು ಮಂಗಳ ಗ್ರಹಗಳ ಕಕ್ಷೆಗಳ ನಡುವೆ ಇರುವ ಈ ಕ್ಷುದ್ರಗ್ರಹಗಳಲ್ಲಿ ಕೆಲವು ಭೂಮಿಯತ್ತ ಬರುವುದುಂಟು. ಇನಿಸ್‍ಫ್ರೀ, ಪ್ರಿಬ್ರಾಂ, ಪೀಕ್ ಸ್ಕಿಲ್- ಇವೆಲ್ಲ ಭೂಮಿಯ ಮೇಲೆ ಅಪ್ಪಳಿಸಿದವು. ಆದರೆ ಹೇಳದೆ ಕೇಳದೆ ಬಂದು ಅಪ್ಪಳಿಸುವ ಕಾಯಗಳ ಸಂಖ್ಯೆ ಇದೀಗ ಹೆಚ್ಚುತ್ತಿದೆ. ಆಕಾಶದಿಂದ ಕಲ್ಲು ಬಂದು ಬೀಳುವುದು ಹೊಸ ವಿಷಯವೇನಲ್ಲ. ವಿಜಯಪುರದ ಗೋಲಗುಂಬಜ್‌ನಲ್ಲಿ ತೂಗಾಡುತ್ತಿರುವ ಕಲ್ಲು,ದೇವಾಲಯವೊಂದರಲ್ಲಿ ತ್ರಿಶೂಲವಾಗಿ ನಿಂತಿರುವ ಕಲ್ಲು ಅಲ್ಲದೆ ಮ್ಯೂಸಿಯಂಗಳಲ್ಲಿ ಪ್ರದರ್ಶನವಾಗುತ್ತಿರುವುವೆಲ್ಲ ಕೆಲವು ಉದಾಹರಣೆಗಳು. ಎರಡು ವರ್ಷದ ಕೆಳಗೆ ರಾಜಸ್ಥಾನದ ಮುಕುಂದಪುರ ಎಂಬ ಹಳ್ಳಿಯಲ್ಲಿ ಉರಿಯುತ್ತಾ ಬಂದುಬಿದ್ದ ಕಲ್ಲನ್ನು ರೈತರು ನೋಡಿ ವರದಿ ಮಾಡಿದರು. ವಿಜ್ಞಾನಿಗಳು ಕಲ್ಲನ್ನು ಆಯ್ದು ಪರಿಶೀಲಿಸಿದರು. ಬಿದ್ದ ಆಘಾತಕ್ಕೆ ಅದು ತುಂಡಾಗಿತ್ತು. ಫಳಗುಟ್ಟುತ್ತಿದ್ದ ಒಳಪದರಗಳು ಸೌರಮಂಡಲದ ಇತಿಹಾಸವನ್ನೇ ಹೇಳಿದವು.

ಕಳೆದ ವರ್ಷ 2020ರ ಜುಲೈನಲ್ಲಿ ಬಿಹಾರದ ಮಹಾದೇವ ಎಂಬ ಹಳ್ಳಿಯ ಗದ್ದೆಯೊಂದರಲ್ಲಿ ಎರಡು ಕಿಲೊ ತೂಕದ ಕಲ್ಲು ಬಿತ್ತು. ಅದನ್ನು ಬಗೆದು ತೆಗೆದ ರೈತರು ಅದಕ್ಕೊಂದು ಗುಡಿ ಕಟ್ಟುವುದರಲ್ಲಿದ್ದರು. ಹಾಗಾಗಿದ್ದಲ್ಲಿ ಅದನ್ನು ಅಭ್ಯಸಿಸಿದ ವಿಜ್ಞಾನಿಗಳಿಗೆ ಅದರ ಅಪೂರ್ವ ಗುಣಲಕ್ಷಣವನ್ನು ತಿಳಿದುಕೊಳ್ಳುವ ಸಂದರ್ಭ ತಪ್ಪಿಹೋಗುತ್ತಿತ್ತು. ಹೀಗೆ ಕಲ್ಲುಗಳೇ ಬಂದು ಬೀಳುತ್ತಿರುವಾಗ ಅವುಗಳ ವೈಜ್ಞಾನಿಕ ಮಹತ್ವವನ್ನು ತಿಳಿಯಲು ನಾವು ಬಾಹ್ಯಾಕಾಶಕ್ಕೆ ಹೋಗಿ ಅದನ್ನು ಪ್ರಯೋಗಶಾಲೆಗೆ ತಂದು ಹೈರಾಣಾಗುವ ಪ್ರಮೇಯವೇ ಇಲ್ಲ ಎನ್ನಬಹುದಲ್ಲವೇ? ಆದರೆ ಎರಡು ಕಿಲೊ ತಲೆಯಮೇಲೆ ಬಿದ್ದರೇನು ಎಂಬುದು ಒಂದು ಚಿಂತೆ. ಅದಕ್ಕಿಂತ ದೊಡ್ಡದೂ (ಚಂದ್ರನಷ್ಟು ದೊಡ್ಡದೂ ಇರಬಹುದು) ಬೀಳಬಹುದಲ್ಲವೇ? ಹಾಗೆ ಬಿದ್ದದ್ದೇ ಆದರೆ ಏನೆಲ್ಲಾ ಆಗಬಹುದು? ಇದನ್ನು ಕೂಲಂಕಷವಾಗಿ ಲೆಕ್ಕ ಮಾಡಲಾಗಿದೆ. ಹಿರೋಷಿಮಾ ಅಣುಬಾಂಬಿಗಿಂತ ಕೋಟಿಗಟ್ಟಲೆ ಹೆಚ್ಚು ಪ್ರಮಾಣದ ಚೈತನ್ಯ ಬಿಡುಗಡೆಯಾಗುವ ಸಾಧ್ಯತೆ ಇರುವುದಕ್ಕೆ ಸಿಗುವ ಪ್ರತ್ಯಕ್ಷ ಮತ್ತು ಪರೋಕ್ಷ ಪುರಾವೆಗಳು ಅನೇಕ.

ಚಂದ್ರನ ಮೈಮೇಲಿನ ಕುಳಿಗಳು, ಭೂಮಿಯ ಮೇಲೂ ಇರುವ ಕುಳಿಗಳು, ಡೈನೊಸಾರುಗಳ ನಿರ್ನಾಮ- ಹೀಗೆ. ನೂರಿನ್ನೂರು ಕಿ.ಮೀ. ಗಾತ್ರದ ಕಾಯಗಳು ಅಪಾಯಕಾರಿಯೇ. ಭೂಮಿಗೆ ಅಪ್ಪಳಿಸಬಹುದಾದಷ್ಟು ಸಮೀಪವಾಗಿ ಹಾದು ಹೋಗುವ ಕಾಯಗಳಿಗೆ ನಿಯರ್ ಅರ್ತ್ ಆಸ್ಟರಾಯ್ಡ್ ಎಂಬ ಹೆಸರಿದೆ. ಇಂತಹದ್ದೊಂದು ಘಟನೆ ಅಪರೂಪವೇನಲ್ಲ ಎಂದಾದರೆ ಅದರಿಂದ ಮನುಕುಲದ ವಿನಾಶವನ್ನು ತಪ್ಪಿಸುವುದೂ ಒಂದು ಹೊಣೆಯಾಗುವುದಲ್ಲವೇ? 1908ರ ಜೂನ್ 30ರಂದು ರಷ್ಯಾದ ತುಂಗುಷ್ಕಾ ಎಂಬಲ್ಲಿ ಉಂಟಾದ ಆಘಾತ ಎಚ್ಚರಿಕೆಯ ಗಂಟೆಯಾಯಿತು. ಆದ್ದರಿಂದಲೇ ಪ್ರತಿವರ್ಷ ಜೂನ್ 30ಕ್ಕೆ ‘ಎಚ್ಚರ’ ಎಂಬ ಕೂಗು ಕೇಳುವುದು.

ಹೀಗೊಂದು ಕಾಯ ಭೂಮಿಯತ್ತ ಧಾವಿಸಿ ಬರುತ್ತಿರುವುದನ್ನು ಪತ್ತೆ ಮಾಡುವುದು ಮೊದಲನೆಯ ಕೆಲಸ. ಎಷ್ಟು ದೂರದಲ್ಲಿರುವಾಗ ಅವು ನಮಗೆ ಗೋಚರವಾಗುತ್ತವೆ ಎಂಬುದರ ಆಧಾರದ ಮೇಲೆ ತಕ್ಷಣವೇ ಮುಂದಿನ ಕಾರ್ಯವನ್ನು ನಿರ್ಧರಿಸಬೇಕಾಗುತ್ತದೆ. ಲೀನಿಯರ್, ಸ್ಪೇಸ್ ವಾಚ್ ಮುಂತಾಗಿ ಕೆಲವೊಂದು ದೂರದರ್ಶಕಗಳನ್ನು ಕಣ್ಗಾವಲಿನ ಕೆಲಸಕ್ಕೆ ಮೀಸಲಿಡಲಾಗಿದೆ. ಆಕಾಶದಲ್ಲಿ ಕ್ಷೀಣವಾದ ಚುಕ್ಕೆಯೊಂದು ಚಲಿಸುತ್ತಿದೆ ಎಂದ ಕೂಡಲೆ ಅದನ್ನೇ ಹಿಂಬಾಲಿಸುತ್ತಾ ತಿರುಗುವ ಇವು ಕಕ್ಷೆಗಳ ಅಂದಾಜನ್ನು ಒದಗಿಸುತ್ತವೆ. ಇತರ ದೂರದರ್ಶಕಗಳು ಅದರ ಜಾಡು ಹಿಡಿದು ಅದರ ಮುಂದಿನ ಚಲನೆಯ ಅಂದಾಜು ಮಾಡಲು ಮಾಹಿತಿ ಒದಗಿಸುತ್ತವೆ.

ಕಳೆದ ದಶಕದಲ್ಲಿ ಇವು ಪತ್ತೆ ಮಾಡಿರುವ ಇಂತಹ ಭೂಸಾಮೀಪ್ಯದ ಪುಟ್ಟ ಕಾಯಗಳ ಸಂಖ್ಯೆ ಲಕ್ಷಗಟ್ಟಲೆ ಇದೆ. ಇವುಗಳಲ್ಲಿ ಒಂದು ಕ್ಷುದ್ರಗ್ರಹದ ಕಕ್ಷೆಯಂತೂ ಭೂಮಿಯ ಕಕ್ಷೆಗೆ ಅಂಟಿಕೊಂಡಂತೆಯೇ ಇದೆ. ಕೆಲವು ವರ್ಷಗಳ ಹಿಂದೆ ಆತಂಕ ಸೃಷ್ಟಿಸಿದ್ದ ಅಪೋಪಿಸ್ ಎಂಬ ಕುದ್ರಗ್ರಹ ಈಗ ಅಪಾಯದ ಪಟ್ಟಿಯಲ್ಲಿಲ್ಲ. ಹೊಸ ಹೊಸ ಪುಟ್ಟ ಕಾಯಗಳು ಪಟ್ಟಿಗೆ ಸೇರುತ್ತಲೇ ಇವೆ. ಸಾಮಾನ್ಯವಾಗಿ ಇವು ಭೂಮಿಯನ್ನು ಸಮೀಪಿಸುವ ಅಂತರವನ್ನು ಭೂಮಿ- ಚಂದ್ರರ ಸರಾಸರಿ ದೂರದ (3,84,000 ಕಿ.ಮೀ) ಎಲ್‌ಡಿ ಮಾನದಲ್ಲಿ (ಲೂನರ್ ಡಿಸ್ಟೆನ್ಸ್) ಗುರುತಿಸುತ್ತಾರೆ. ಸಾವಿರಾರು ಕಿ.ಮೀ. ಎತ್ತರದಲ್ಲಿ ಅದು ಹಾದು ಹೋಗುವಾಗ ಉರಿದು ಬೀಳಬಹುದು ಇಲ್ಲವೇ ಪಥ ಬದಲಿಸಿಕೊಂಡು ಮುನ್ನಡೆಯಬಹುದು. ಇಂತಹ ಘಟನೆಗಳನ್ನು ರಡಾರ್ ತಂತ್ರಗಳಿಂದಲೂ ಗುರುತಿಸಿ ಕಾಯದ ಗಾತ್ರ ಅಂದಾಜಿಸಬಹುದು.

ಪಟ್ಟಿ ಬೆಳೆಯತೊಡಗಿದೊಡನೆ ಕಾರ್ಯಾಚರಣೆಯ ಯೋಜನೆಗಳಂತೂ ಭರದಿಂದ ಸಾಗಿವೆ. ಡಾನ್ ಎಂಬ ಗಗನನೌಕೆ ಸುಮಾರು 10 ವರ್ಷಗಳ ದೀರ್ಘ ಪ್ರಯಾಣ ಬೆಳೆಸಿ ಸೆರೆಸ್ ಮತ್ತು ವೆಸ್ತಾಗಳಿಗೆ ಭೇಟಿ ಕೊಟ್ಟಿತು. ಸುಮಾರು 19 ಗಿಗಾಜೂಲ್ (ಹಿರೋಷಿಮಾ ಸ್ಫೋಟದ 10 ಲಕ್ಷ ಪಟ್ಟು) ಚೈತನ್ಯದ ಸ್ಫೋಟದಿಂದ ಕ್ಷುದ್ರಗ್ರಹ ಕೇವಲ 10 ಸೆಂಟಿ ಮೀಟರ್‌ಗಳಷ್ಟು ಹಿಂದೆ ಸರಿಯಿತು. ಅದರ ಮೇಲೆ ಪರಮಾಣು ಬಾಂಬ್ ಸಿಡಿಸಿ ಹಿಂದಕ್ಕೆ ತಳ್ಳುವುದು; ಅಯಾಣುಗಳ ಪ್ರವಾಹವನ್ನು ಸೃಷ್ಟಿಸಿ ಹಿಮ್ಮೆಟ್ಟಿಸುವುದು ಅಲ್ಲದೆ ಕಪ್ಪುಬಣ್ಣ ಬಳಿದು ಸೂರ್ಯ ಕಿರಣಗಳಿಂದಲೇ ಹಿಮ್ಮೆಟ್ಟಿಸುವ ಯೋಜನೆಯೂ ಇದೆ. ಕ್ಷುದ್ರಗ್ರಹಕ್ಕೆ ಅತಿ ಸಮೀಪವಾಗಿ ಕೃತಕ ಉಪಗ್ರಹವನ್ನು ಸುತ್ತಿಸುವುದರಿಂದಲೂ ಚೈತನ್ಯ ವರ್ಗಾವಣೆ ಮಾಡಿ ದೂರ ತಳ್ಳುವ ಉಪಾಯವಿದೆ. ದೊಡ್ಡ ಗ್ರಾಹಕವನ್ನು ಕಳಿಸಿ ಅದರಿಂದ ಸೂರ್ಯಕಿರಣಗಳನ್ನು ಕ್ಷುದ್ರಗ್ರಹದ ಮೇಲೆ ಕೇಂದ್ರೀಕರಿಸಿ, ಹೊರಲೇಪಿತ ವಸ್ತುಗಳೆಲ್ಲಾ ಆವಿಯಾಗುವಂತೆ ಮಾಡಿ ತನ್ಮೂಲಕ ಗತಿಯನ್ನು ಬದಲಿಸುವ ಯೋಜನೆಯೂ ಇದೆ.

ಎಷ್ಟು ಮುಂಚಿತವಾಗಿ ನಮಗೆ ಆಘಾತದ ಸುಳಿವು ಸಿಗುತ್ತದೆ ಎಂಬುದೇ ಈ ಎಲ್ಲ ಯೋಜನೆಗಳ ಸಫಲತೆಯನ್ನು ಮಾತ್ರವಲ್ಲದೆ ಯಾವ ಬಗೆಯ ಕಾರ್ಯಾಚರಣೆ ನಡೆಸಬಹುದು ಎಂಬುದನ್ನು ಕೂಡ ನಿರ್ಧರಿಸುತ್ತದೆ. ಆದ್ದರಿಂದ ಕಣ್ಗಾವಲಿನ ಕೆಲಸ ಬಹಳ ಚುರುಕಾಗಿ ಸಾಗುತ್ತಿದೆ. ಎಲ್ಲ ವಿಜ್ಞಾನಿಗಳೂ ಒಟ್ಟಾಗಿ ನಡೆಸುತ್ತಿರುವ ಈ ಯೋಜನೆಗಳು ಮನುಕುಲದ ಉಳಿವಿಗೆ ಅತಿ ಅವಶ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.