ADVERTISEMENT

ಸುಧೀಂದ್ರ ಬುಧ್ಯ ಬರಹ: ತಾಲಿಬಾನ್ 2.0- ಭಾರತದ ನಿಲುವೇನು?

ಅಫ್ಗಾನಿಸ್ತಾನದಲ್ಲಿ ತನ್ನ ಪ್ರಭಾವ ಉಳಿಸಿಕೊಳ್ಳುವುದು ಭಾರತಕ್ಕೆ ಬಹುಮುಖ್ಯ

ಸುಧೀಂದ್ರ ಬುಧ್ಯ
Published 3 ಆಗಸ್ಟ್ 2021, 19:30 IST
Last Updated 3 ಆಗಸ್ಟ್ 2021, 19:30 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ಅಫ್ಗಾನಿಸ್ತಾನದ ವಿಷಯದಲ್ಲಿ ಎಲ್ಲವೂ ನಿರೀಕ್ಷೆ ಯಂತೆಯೇ ಆಗುತ್ತಿವೆ. ತಾಲಿಬಾನ್ ಅಟ್ಟಹಾಸ ಮೆರೆಯುತ್ತಿದೆ. ಅಲ್ಲಿನ ಜನ ದಿಕ್ಕು ತೋಚದೆ ಕುಳಿತಿದ್ದಾರೆ. ಅಪಾಯಕಾರಿಯಲ್ಲದ ಭ್ರಷ್ಟ ಸರ್ಕಾರ ಒಂದೆಡೆಯಾದರೆ, ಹಿಂಸೆ, ದೌರ್ಜನ್ಯ, ಮತೀಯ ಜಡತ್ವಕ್ಕೆ ಅನ್ವರ್ಥವಾಗಿರುವ ಮೃಗೀಯ ತಾಲಿಬಾನ್ ಮತ್ತೊಂದೆಡೆ.

ಅಮೆರಿಕದ ಅನುಪಸ್ಥಿತಿಯಲ್ಲಿ ಚೀನಾ, ಪಾಕಿಸ್ತಾನ ಮತ್ತು ರಷ್ಯಾವು ಅಫ್ಗಾನಿಸ್ತಾನದಲ್ಲಿ ತಮ್ಮ ಪ್ರಾಬಲ್ಯ ಹೆಚ್ಚಿಸಿಕೊಳ್ಳಲು ತಂತ್ರ ರೂಪಿಸುತ್ತಿವೆ. ತಾಲಿಬಾನ್ ಪ್ರತಿನಿಧಿಯನ್ನು ಕರೆಸಿಕೊಂಡು ಚೀನಾ ಮಾತುಕತೆ ನಡೆಸಿದೆ. ಅಂತಹುದೇ ಮಾತುಕತೆಗೆ ರಷ್ಯಾ ಮತ್ತು ಇರಾನ್ ಚಾಲನೆ ಕೊಟ್ಟಿವೆ. ಪಾಕಿಸ್ತಾನ ಮತ್ತು ತಾಲಿಬಾನ್ ಸಖ್ಯ ಬಿಡಿಸಿ ಹೇಳಬೇಕಿಲ್ಲ. ಈ ಎಲ್ಲ ಮಾತುಕತೆಗಳ ಹಿಂದೆ, ಅಫ್ಗಾನಿಸ್ತಾನದ ಆಡಳಿತವು ತಾಲಿಬಾನ್ ತೆಕ್ಕೆಗೆ ಬೀಳಲಿದೆ ಎಂಬ ಲೆಕ್ಕಾಚಾರವಿದೆ ಮತ್ತು ತಮ್ಮ ಹಿತಾಸಕ್ತಿ ಕಾಯ್ದುಕೊಳ್ಳುವ ಜಾಣ್ಮೆಯಿದೆ.

ಆದರೆ ತಾಲಿಬಾನ್ ಜೊತೆ ಬಹಿರಂಗವಾಗಿ ಮಾತುಕತೆಯಲ್ಲಿ ತೊಡಗಲು ಭಾರತ ಹಿಂದೇಟು ಹಾಕುತ್ತಿರುವಂತಿದೆ. ಅದಕ್ಕೆ ಪ್ರಮುಖ ಕಾರಣಗಳು ಮೂರು. ಮೊದಲನೆಯದು, ಈ ಹಿಂದಿನ ತಾಲಿಬಾನ್ ವರ್ತನೆ ಮತ್ತು ಅದು ಪ್ರತಿನಿಧಿಸುವ ಮೌಲ್ಯಗಳು ನಮ್ಮ ಆದರ್ಶಗಳಿಗೆ ವಿರುದ್ಧವಾಗಿವೆ. ಎರಡನೆಯದು, ಕಳೆದ ಎರಡು ದಶಕಗಳ ಅವಧಿಯಲ್ಲಿ ಅಫ್ಗಾನಿಸ್ತಾನ ಮರುನಿರ್ಮಾಣ ಕಾರ್ಯದಲ್ಲಿ ಭಾರತ ತೊಡಗಿದೆ ಮತ್ತು ಅಶ್ರಫ್ ಘನಿ ನೇತೃತ್ವದ ಸರ್ಕಾರ ಎಲ್ಲ ರೀತಿಯಿಂದಲೂ ಭಾರತದ ಹಿತಾಸಕ್ತಿಗಳಿಗೆ ಪೂರಕವಾಗಿದೆ. ಮೂರನೆಯದು, ಅಫ್ಗಾನಿಸ್ತಾನ
ದಲ್ಲಿ ಅನಿಶ್ಚಿತತೆ ಮುಂದುವರಿದಿರುವಾಗ, ನೇರವಾಗಿ ಯಾರೊಂದಿಗೂ ಗುರುತಿಸಿಕೊಳ್ಳಬಾರದು ಎಂಬ ರಾಜತಾಂತ್ರಿಕ ಲೆಕ್ಕಾಚಾರ. ಆದರೆ, ತಾಲಿಬಾನ್ ತನ್ನ ಎರಡನೆಯ ಆವೃತ್ತಿಯಲ್ಲಿ ಭಾರತವನ್ನು ದೂರ ಇಡುವ ಮನಃಸ್ಥಿತಿ ಪ್ರದರ್ಶಿಸಿಲ್ಲ. ತಾನು ಬದಲಾಗಿದ್ದೇನೆ ಎಂದು ಜಗತ್ತಿಗೆ ಸಾರುತ್ತಿದೆ. ಆದರೆ ಆ ಮಾತನ್ನು ನಂಬಬಹುದೇ ಎಂಬುದು ಸದ್ಯದ ಪ್ರಶ್ನೆ.

ADVERTISEMENT

ಏಕೆಂದರೆ, ಮೊದಲಿಗೆ ತಾಲಿಬಾನ್ ಹುಟ್ಟಿಕೊಂಡಾಗ ಅದರ ವಕ್ತಾರರು ಒಂದಿಷ್ಟು ಒಳ್ಳೆಯ ಮಾತು ಆಡಿದ್ದರು. 90ರ ದಶಕದಲ್ಲಿ ಸೋವಿಯತ್ ಸೇನೆ ಅಫ್ಗಾನಿಸ್ತಾನದಿಂದ ಕಾಲ್ತೆಗೆದಾಗ ಆರಂಭವಾದ ಪಶ್ತೂನ್ ಆಂದೋಲನ, ಸೌದಿ ಅರೇಬಿಯಾದ ಆರ್ಥಿಕ ನೆರವಿ ನೊಂದಿಗೆ ಚಿಗುರಿತ್ತು. ಈ ಆಂದೋಲನದಲ್ಲಿ, ಮತೀಯ ಶಿಕ್ಷಣ ಪಡೆದ ಯುವಕರು ಹೆಚ್ಚಿದ್ದರು. ಹಾಗಾಗಿ ತಾಲಿಬಾನ್ ಎಂಬ ಹೆಸರು ಬಂತು. ಶಾಂತಿ ಮತ್ತು ಭದ್ರತೆಯನ್ನು ಸ್ಥಾಪಿಸುವುದು ತನ್ನ ಉದ್ದೇಶ ಮತ್ತು ಅದು ಸಾಧ್ಯವಾಗಬೇಕಾದರೆ ಷರಿಯಾ ನಿಯಮಗಳನ್ನು ಅನುಸರಿಸಬೇಕು ಎಂಬ ವಾದವನ್ನು ತಾಲಿಬಾನ್ ಮುಂದೆ ಮಾಡಿತು.

ತಾಲಿಬಾನೀಯರು ತಮ್ಮನ್ನು ‘ಇಸ್ಲಾಮಿಕ್ ಎಮಿರೇಟ್ಸ್ ಆಫ್ ಅಫ್ಗಾನಿಸ್ತಾನ್’ ಎಂದು ಕರೆದು ಕೊಂಡರು. ನಾಗರಿಕ ಯುದ್ಧ ಆರಂಭವಾಯಿತು. ಪೈಶಾಚಿಕ ಕೃತ್ಯಗಳು ನಡೆದವು. ತಾಲಿಬಾನ್ ಪಡೆ ಆಡಳಿತದ ಚುಕ್ಕಾಣಿ ಹಿಡಿಯಿತು.

ಅರಾಜಕತೆಯಿಂದ ಬಸವಳಿದಿದ್ದ ಆಫ್ಗನ್ನರು ಮೊದಲಿಗೆ ತಾಲಿಬಾನ್ ಒಂದು ಆಡಳಿತ ವ್ಯವಸ್ಥೆಯನ್ನು ಸೃಷ್ಟಿಸಿದಾಗ ಅದನ್ನು ಸ್ವಾಗತಿಸಿದ್ದರು. ಆದರೆ ತಾಲಿಬಾನ್ ಜಾರಿಗೆ ತಂದ ತನ್ನದೇ ಆದ ಕಠಿಣ ನಿಯಮಗಳು ಜನರಲ್ಲಿ ಭೀತಿ ಹುಟ್ಟಿಸಿದವು. ಶಿಕ್ಷೆಯ ರೂಪದಲ್ಲಿ ಸಾರ್ವಜನಿಕವಾಗಿ ಹತ್ಯೆಗಳು ನಡೆದವು. ವ್ಯಕ್ತಿ ಸ್ವಾತಂತ್ರ್ಯವನ್ನು ಅಪಹರಿಸಲಾಯಿತು. ಪುರುಷರು ಇಂತಿಷ್ಟು ಉದ್ದ ಗಡ್ಡ ಬಿಡಲೇಬೇಕು, ಹೆಣ್ಣುಮಕ್ಕಳು ಮೈತುಂಬಾ ಬುರ್ಖಾ ತೊಡಬೇಕು, ಒಬ್ಬಂಟಿಯಾಗಿ ಮನೆಯಿಂದ ಹೊರಹೋಗುವಂತಿಲ್ಲ, ಸಂಗೀತ, ಚಲನಚಿತ್ರ, ಮನ ರಂಜನಾ ಕಾರ್ಯಕ್ರಮಗಳಿಗೆ ಆಸ್ಪದವಿಲ್ಲ, ಹೆಣ್ಣುಮಕ್ಕಳಿಗೆ ಶಾಲೆ ನಿಷೇಧ, ಹೀಗೆ ಹಲವು ನಿರ್ಬಂಧಗಳನ್ನು ತಾಲಿಬಾನ್ ಹೇರಿತು. ಅನ್ಯ ಧರ್ಮೀಯರನ್ನು ಹಿಂಸಿಸಲಾಯಿತು. ಬುದ್ಧ ಮೂರ್ತಿಗಳು ಪುಡಿಯಾದವು. ಅಫ್ಗಾನಿಸ್ತಾನವು ಭಯೋತ್ಪಾದಕರ ಗೂಡಾಯಿತು. ಈ ಅವಧಿಯಲ್ಲಿ ಯುಎಇ, ಸೌದಿ ಅರೇಬಿಯಾ ಮತ್ತು ಪಾಕಿಸ್ತಾನ ಬಿಟ್ಟು ಉಳಿದ ದೇಶಗಳು ಅಫ್ಗಾನಿ ಸ್ತಾನದ ಜೊತೆ ಸಂಬಂಧ ಕಡಿದುಕೊಂಡವು. ಬಿಡಿ, 2001ರ ಸೆಪ್ಟೆಂಬರ್ 11ರ ಘಟನೆಯ ಬಳಿಕ ನಡೆದದ್ದು ಈಗ ಇತಿಹಾಸ. ಅಮೆರಿಕ ಮತ್ತು ನ್ಯಾಟೊ ಪಡೆಗಳ ರಕ್ಷಣೆಯಲ್ಲಿ ಶಾಲೆ, ಆಸ್ಪತ್ರೆ, ರಸ್ತೆ, ಸೇತುವೆ, ಅಣೆಕಟ್ಟು, ವಿದ್ಯುತ್ ಸರಬರಾಜು ಘಟಕಗಳು ಹೀಗೆ ಮೂಲಸೌಕರ್ಯ ಅಭಿವೃದ್ಧಿ ಯೋಜನೆಗಳಲ್ಲಿ ಭಾರತ ತೊಡಗಿಸಿಕೊಂಡಿತು. 2016ರಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ‘ಸಲ್ಮಾ ಅಣೆಕಟ್ಟು’ ಉದ್ಘಾಟಿಸಲು ಹೋದಾಗ, ಮೋದಿಯವರನ್ನು ಅಶ್ರಫ್ ಘನಿ ‘Welcome to your second home’ ಎಂದು ಸ್ವಾಗತಿಸಿದ್ದರು. ಅಷ್ಟರಮಟ್ಟಿಗೆ ಭಾರತ- ಅಫ್ಗಾನಿಸ್ತಾನದ ಬಾಂಧವ್ಯ ವೃದ್ಧಿಸಿತು. ಹಾಗಾಗಿ ಬದಲಾದ ಪರಿಸ್ಥಿತಿಯಲ್ಲಿ ತಕ್ಷಣಕ್ಕೆ ಆಫ್ಗನ್ ಸರ್ಕಾರದಿಂದ ಭಾರತ ದೂರಸರಿದು ನಿಲ್ಲಲು ಸಾಧ್ಯವಿಲ್ಲ. ಹಾಗಂತ ತಾಲಿಬಾನ್ ಪಡೆಯಿಂದ ಅಂತರ ಕಾಯ್ದುಕೊಳ್ಳುವುದು ಅವಾಸ್ತವಿಕ ಮತ್ತು ಮುಂದಿನ ದಿನಗಳಲ್ಲಿ ದುಬಾರಿಯಾಗಬಹುದಾದ ನಡೆ.

ತಾಲಿಬಾನ್ ಕುರಿತು ವಿವೇಚಿಸಿದರೆ, ಈ ಇಪ್ಪತ್ತು ವರ್ಷಗಳ ಅಜ್ಞಾತವಾಸದಲ್ಲಿ ಅದು ಕೊಂಚ ಮೆತ್ತಗಾಗಿ ರಬಹುದು. ಇತರ ದೇಶಗಳು ತಮ್ಮನ್ನು ಆಫ್ಗನ್ ಸರ್ಕಾರವೆಂದು ಮಾನ್ಯ ಮಾಡಬೇಕಾದರೆ ಕನಿಷ್ಠ ಬಾಹ್ಯ ಚಹರೆಯನ್ನಾದರೂ ಬದಲಿಸಿಕೊಳ್ಳಬೇಕು ಎಂದು ತಾಲಿಬಾನ್ ಮನಗಂಡಿರಬಹುದು. ಹಾಗಾಗಿ ಭಾರತದತ್ತಲೂ ಅದು ನೋಡುತ್ತಿದೆ. ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿದಾಗ, ‘ಅದು ಭಾರತದ ಆಂತರಿಕ ವಿಚಾರ’ ಎಂದು ತಾಲಿಬಾನ್ ಪ್ರತಿಕ್ರಿಯಿಸಿತ್ತು.

ತಾಲಿಬಾನ್ 1.0ಯಲ್ಲಿ ಬಂಡುಕೋರರ ಪಡೆ ಎನಿಸಿ ಕೊಂಡಿದ್ದ ಸಂಘಟನೆ ಇದೀಗ ಒಂದು ರಾಜಕೀಯ ಶಕ್ತಿಯಾಗಿ ಹೊರಹೊಮ್ಮುವ ಪ್ರಯತ್ನದಲ್ಲಿದೆ. ಹಾಗಾ‌ಗಿಯೇ ‘ನಮ್ಮ ಅವಧಿಯಲ್ಲಿ ಶಾಲೆ, ಕಚೇರಿ, ಮಾರುಕಟ್ಟೆ, ಮಾಧ್ಯಮ ಸಂಸ್ಥೆ ಎಲ್ಲವೂ ಮುಕ್ತವಾಗಿ ರುತ್ತವೆ, ನಾಗರಿಕ ಸ್ವಾತಂತ್ರ್ಯ, ಮಹಿಳಾ ಶಿಕ್ಷಣ, ಉದ್ಯೋಗಕ್ಕೆ ನೂತನ ತಾಲಿಬಾನ್ ಸರ್ಕಾರವು ‘ಷರಿಯಾ ನಿಯಮಗಳಿಗೆ ಅನುಗುಣವಾಗಿ ಅವಕಾಶ ಮಾಡಿ ಕೊಡಲಿದೆ’ ಎಂದು ಪದೇ ಪದೇ ಹೇಳುತ್ತಿದೆ. ಆದರೆ ಹತ್ಯೆಗಳು ನಿಂತಿಲ್ಲ!

ಭಾರತದ ಮುಂದೆ ಮೂರು ಆಯ್ಕೆಗಳಿವೆ. ಒಂದು, ತಾಲಿಬಾನ್ ಆಡಳಿತಕ್ಕಿಂತ ಅಫ್ಗಾನಿಸ್ತಾನದಲ್ಲಿ ದೀರ್ಘಾವಧಿಯ ಅರಾಜಕತೆ ಇದ್ದರೆ ಒಳಿತು ಎಂದು ಭಾವಿಸಿ, ಘನಿ ಸರ್ಕಾರವನ್ನು ಪೂರ್ಣ ಪ್ರಮಾಣದಲ್ಲಿ ಬೆಂಬಲಿಸುವುದು. ತಾಲಿಬಾನ್ ವೇಗವಾಗಿ ಅಫ್ಗಾನಿಸ್ತಾನದ ಮೇಲೆ ಹಿಡಿತ ಸಾಧಿಸುವುದನ್ನು ತಡೆಯುವ ತಂತ್ರ ರೂಪಿಸುವುದು. ಎರಡು, ತಾಲಿಬಾನ್ ಜೊತೆ ಒಂದು ಹಂತದ ಮಾತುಕತೆಗೆ ಚಾಲನೆ ಕೊಟ್ಟು ಪ್ರಸ್ತುತ ಘನಿ ನೇತೃತ್ವದ ಸರ್ಕಾರಕ್ಕೆ ನೀಡುತ್ತಿರುವ ಸಹಕಾರವನ್ನು ಕರಾರಿನ ಮೇಲೆ ಮುಂದುವರಿಸುವ ಪ್ರಸ್ತಾಪ ಇಡ ಬಹುದು. ಅಷ್ಟರಮಟ್ಟಿಗೆ ಭಾರತ ಕೈಗೆತ್ತಿಕೊಂಡಿರುವ ಯೋಜನೆಗಳನ್ನು ತಾಲಿಬಾನ್ ಹಾಳುಗೆಡವದಂತೆ ನೋಡಿಕೊಳ್ಳಬಹುದು.

ಮೂರನೆಯದು, ಅನಿಶ್ಚಿತತೆ ಅಂತ್ಯವಾಗುವವರೆಗೆ ಕಾದು, ನಂತರ ಜಾಗತಿಕ ಸಮುದಾಯ ತೆಗೆದುಕೊಳ್ಳುವ ನಿರ್ಣಯ ಬೆಂಬಲಿಸುವುದು. ಮೂರನೆಯ ಆಯ್ಕೆ ಸುರಕ್ಷಿತ ಎನಿಸಿದರೂ, ಅದು ದಕ್ಷಿಣ ಏಷ್ಯಾದಲ್ಲಿ ಭಾರತದ ಪ್ರಭಾವವನ್ನು ಕುಗ್ಗಿಸುತ್ತದೆ. ಆ ಕಾರಣದಿಂದಲೇ ಭಾರತ ಹಿಂಬಾಗಿಲಿನಿಂದ ತಾಲಿಬಾನ್ ಜೊತೆ ಮಾತುಕತೆ ನಡೆಸುತ್ತಿದೆ ಎಂಬ ಸುದ್ದಿಯಿದೆ. ಅಫ್ಗಾನಿಸ್ತಾನದ ವಿಷಯದಲ್ಲಿ ಭಾರತ ಸಂಪೂರ್ಣವಾಗಿ ವಿಮುಖವಾಗದೆ, ಮಾತುಕತೆಯ ಮೇಜಿನಲ್ಲಿ ಇರುವುದು, ಅಫ್ಗಾನಿಸ್ತಾನದಲ್ಲಿ ತನ್ನ ಪ್ರಭಾವವನ್ನು ಉಳಿಸಿಕೊಳ್ಳುವುದು ಚೀನಾ ಮತ್ತು ಪಾಕಿಸ್ತಾನವನ್ನು ಎದುರಿಸುವ ದೃಷ್ಟಿಯಿಂದಲೂ ಬಹುಮುಖ್ಯ.

ಒಟ್ಟಿನಲ್ಲಿ, ಅಡಕತ್ತರಿಯಲ್ಲಿ ಸಿಲುಕಿರುವ ಅಫ್ಗಾನಿಸ್ತಾನ ಒಂದು ನಾಗರಿಕ ದೇಶವಾಗಿ ಉಳಿಯಬೇಕಾದರೆ, ಷರಿಯಾ ನಿಯಮಗಳಿಗೆ ಅನುಗುಣವಾಗಿ ಎಂಬ ತನ್ನ ಚೌಕಟ್ಟನ್ನು ತೊರೆದು ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವವನ್ನು ಎತ್ತಿ ಹಿಡಿಯುವ ಸಂವಿಧಾನಕ್ಕೆ ಬದ್ಧವಾದ ದೇಶವಾಗಬೇಕು. ಮುಂದಿನ ದಿನಗಳಲ್ಲಿ ತಾಲಿಬಾನ್ ತನ್ನ ಮೂಲಗುಣ ತ್ಯಜಿಸಿ, ಮುಖ್ಯವಾಹಿನಿಗೆ ತೆರೆದುಕೊಳ್ಳುತ್ತದೆಯೇ ಅಥವಾ ಮಧ್ಯಕಾಲೀನ ಮನಃಸ್ಥಿತಿಯನ್ನೇ ಉಳಿಸಿಕೊಂಡು ಆಫ್ಗನ್ ಜನರ ಕನಸು ಮತ್ತು ಭವಿಷ್ಯ ಕಮರುವಂತೆ ಮಾಡುತ್ತದೆಯೇ, ಅಲ್ಲಿನ ಜನರೇ ಬಂಡೆದ್ದು ಅದನ್ನು ತಿರಸ್ಕರಿಸುತ್ತಾರೋ ಕಾದು ನೋಡಬೇಕು. ಸದ್ಯದ ಮಟ್ಟಿಗಂತೂ ಅಫ್ಗಾನಿಸ್ತಾನದ ವಿಷಯ ಭಾರತಕ್ಕೆ ತಂತಿಯ ಮೇಲಿನ ನಡಿಗೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.