ADVERTISEMENT

ವಿಶ್ಲೇಷಣೆ: ಅಂತಃಸಾಕ್ಷಿ ಮತ್ತು ಮರ್ಯಾದೆಗೇಡು ಕೃತ್ಯ

‘ಮರ್ಯಾದೆ’ ಎಂಬ ವಿಶೇಷಣ ಕಳೆದುಕೊಂಡರೆ ಮರ್ಯಾದೆಗೇಡು ಹತ್ಯೆಯ ನಿಗ್ರಹ ಸುಲಭ

ಟಿ.ಎನ್‌.ವಾಸುದೇವಮೂರ್ತಿ
Published 30 ಜೂನ್ 2021, 21:28 IST
Last Updated 30 ಜೂನ್ 2021, 21:28 IST
   

ಇಂಗ್ಲಿಷಿನಲ್ಲಿ ‘ಅವನ ಕುತ್ತಿಗೆಗೆ ನಾಯಿ ಎಂಬ ನಾಮಫಲಕವನ್ನು ಹಾಕಿ, ಬಳಿಕ ನೇಣುಹಾಕಿಬಿಡಿ’ ಎಂಬ ಗಾದೆ ಮಾತಿದೆ. ಸಮಾಜ ತನ್ನ ಹಿತಾಸಕ್ತಿಗಾಗಿ ಯಾರಿಗೆ ಬೇಕಾದರೂ ಬೇಕಾದ ಸಿದ್ಧಫಲಕಗಳನ್ನು ತೊಡಿಸಬಲ್ಲದು. ಈ ನರಬಲಿ ನಿಲ್ಲಬೇಕೆಂದರೆ, ಬಲಿಪೀಠದ ಮುಂದೆ ನಿಂತವರು ತಮ್ಮ ಕುತ್ತಿಗೆಯ ಫಲಕಗಳನ್ನು ಮೊದಲು ಕಿತ್ತೆಸೆಯಬೇಕಾಗುತ್ತದೆ.

ಇಂದು ಭಾರತದಲ್ಲಿ ಪ್ರತಿವರ್ಷ ಹತ್ತು ಸಾವಿರಕ್ಕೂ ಹೆಚ್ಚು ಮರ್ಯಾದೆಗೇಡು ಹತ್ಯೆಗಳಾಗುತ್ತಿವೆ. ವಿಜಯಪುರ ಜಿಲ್ಲೆಯ ದೇವರಹಿಪ್ಪರಗಿ ತಾಲ್ಲೂಕು ಹಾಗೂ ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲ್ಲೂಕಿನ ಗ್ರಾಮಗಳಲ್ಲಿ ಇತ್ತೀಚೆಗೆ ಮರ್ಯಾದೆಗೇಡು ಹತ್ಯೆಯ ಎರಡು ಪ್ರಕರಣಗಳು ವರದಿಯಾಗಿದ್ದವು. ಈ ಹತ್ಯೆಗಳಿಗೆ ಬಹುತೇಕ ಹೆಣ್ಣುಮಕ್ಕಳೇ ಹೆಚ್ಚಾಗಿ ಗುರಿಯಾದರೂ ಅಪರೂಪಕ್ಕೆ ಪುರುಷರು ಹಾಗೂ ಸಲಿಂಗಿಗಳೂ ಬಲಿಯಾಗುವುದುಂಟು. ಆದರೆ ಹತ್ಯೆಯ ಹಿಂದಿನ ಧೋರಣೆ ಮಾತ್ರ ಒಂದೇ.

ಭೀಕರವಾದ ಇಂತಹ ಹತ್ಯೆಗಳಿಗೆ ‘ಮರ್ಯಾದೆ’ ಎಂಬ ವಿಶೇಷಣದ ಸೇರ್ಪಡೆ ನಮ್ಮ ಸಾಂಸ್ಕೃತಿಕ ರಚನೆಯನ್ನು ಪರಿಚಯಿಸಿಕೊಡುತ್ತದೆ. ಎಲ್ಲ ಸಂಸ್ಕೃತಿಗಳೂ ಹೆಣ್ಣನ್ನು ಸ್ವತ್ತಿನಂತೆ ಕಾಣುತ್ತವೆ ಮತ್ತು ಅದನ್ನು ಪ್ರಮಾಣೀಕರಿಸಲು ಅವಳಿಗೆ ಕೆಲವು ಲಾಂಛನಗಳನ್ನು ನಿಗದಿಪಡಿಸುತ್ತವೆ. ಅದು ತಾಳಿ, ಕಾಲುಂಗುರದಂತಹ ಮುತ್ತೈದೆತನದ ಸಂಕೇತಗಳಾಗಿರಬಹುದು ಅಥವಾ ಬುರ್ಖಾ, ಪರ್ದಾ, ಹಿಜಾಬ್‌ಗಳಿರಬಹುದು. ಜಗತ್ತಿನ ಒಂದೊಂದು ಧರ್ಮ, ಸಂಸ್ಕೃತಿ, ಸಮಾಜವೂ ಹೆಣ್ಣಿಗೆ ಒಂದೊಂದು ಬಗೆಯ ವಸ್ತ್ರಸಂಹಿತೆಯನ್ನು ಕಡ್ಡಾಯ ಮಾಡಿರುತ್ತದೆ. ವಸ್ತ್ರಸಂಹಿತೆಯಷ್ಟೇ ಅಲ್ಲ ಅವಳಿಗೆಂದೇ ಪ್ರತ್ಯೇಕ ವರ್ತನೆ, ನಡಾವಳಿಗಳನ್ನು ಸಿದ್ಧಪಡಿಸಿರುತ್ತದೆ.

ADVERTISEMENT

ಮೊನ್ನೆ ಲಾಕ್‌ಡೌನ್‌ ಸಮಯದಲ್ಲಿ ಮದ್ಯದಂಗಡಿಗಳ ಮುಂದೆ ಸಾಲುಗಟ್ಟಿ ನಿಂತಿದ್ದ ಜನರ ಮಧ್ಯೆ ಇಬ್ಬರು ಮಾಸ್ಕ್‌ಧಾರಿ ಹುಡುಗಿಯರು ನಿಂತಿದ್ದ ದೃಶ್ಯವನ್ನು ಟಿ.ವಿ ಮಾಧ್ಯಮದವರು, ಯಾವುದೋ ಅನ್ಯಗ್ರಹ ಜೀವಿಗಳು ನಿಂತಿವೆ ಎಂಬಂತೆ ಪ್ರಸಾರ ಮಾಡುತ್ತಿದ್ದರು. ಹೆಣ್ಣು ಒಂದು ಅಪೇಕ್ಷಿತ ಮಾದರಿಯಲ್ಲೇ ಕಾಣಿಸಬೇಕೆಂಬ ನಮ್ಮ ಸಂಸ್ಕಾರರೂಪದ ಪೂರ್ವಗ್ರಹವೇ ಇಂತಹ ಸುದ್ದಿಗಳು ವೈರಲ್‌ ಆಗಲು ಕಾರಣ.

ಇಂದು ಭಾರತದಲ್ಲಿ ಬಹುತೇಕ ಮರ್ಯಾದೆಗೇಡು ಹತ್ಯೆಗಳು ನಡೆಯುತ್ತಿರುವುದು ಗ್ರಾಮೀಣ ಪ್ರದೇಶ ಗಳಲ್ಲಿ. ಉತ್ತರ ಭಾರತದ ಎಷ್ಟೋ ಕಡೆಗಳಲ್ಲಿ ಖಾಪ್‌ ಪಂಚಾಯಿತಿಗಳೇ ಮರ್ಯಾದೆಗೇಡು ಹತ್ಯೆಗೆ ತೀರ್ಪು ನೀಡಿರುವ ಉದಾಹರಣೆಗಳಿವೆ. ಹೆಣ್ಣು ತನಗೆ ನಿಗದಿ ಪಡಿಸಿದ ಪುರುಷಪ್ರಣೀತವಾದವಸ್ತ್ರಸಂಹಿತೆ,ಶಿಷ್ಟಾಚಾರಗಳನ್ನು ಪಾಲಿಸುವ ಮೂಲಕ, ಹೆಣ್ಣನ್ನು ಸ್ವತ್ತಿನಂತೆ ಕಾಣುವ ಪುರುಷರ ಧೋರಣೆಯನ್ನು ಪರೋಕ್ಷವಾಗಿ ಅನುಮೋದಿಸುತ್ತಿರುತ್ತಾಳೆ. ಈ ಮನಃಸ್ಥಿತಿ ಬದಲಾಗುವವರೆಗೂ ಹೆಣ್ಣಿನ ಶೋಷಣೆ ನಿಲ್ಲುವುದಿಲ್ಲ.

ಹೀಗೆ ಅನುಮೋದಿಸುವುದನ್ನು ನಿಲ್ಲಿಸಿದ ಮಾತ್ರಕ್ಕೆ ಮರ್ಯಾದೆಗೇಡು ಹತ್ಯೆಗಳು ನಿಂತುಬಿಡುತ್ತವೆ ಎಂದಲ್ಲ. ಆದರೆ ಆಗ ಅಂತಹ ಹತ್ಯೆಗಳು ತಮ್ಮ ಮರ್ಯಾದೆಯನ್ನು ಅಥವಾ ಮರ್ಯಾದೆ ಎಂಬ ವಿಶೇಷಣವನ್ನು ಕಳೆದು ಕೊಂಡು ಕೇವಲ ಹತ್ಯೆ ಎನಿಸಿಕೊಳ್ಳುತ್ತವೆ. ಆಗ ಇದನ್ನು ನಿಗ್ರಹಿಸುವುದು ಸುಲಭವಾಗುತ್ತದೆ. ಆದ್ದರಿಂದ ಮರ್ಯಾದೆಗೇಡು ಹತ್ಯೆಗಳನ್ನು ನಿಲ್ಲಿಸುವ ಉಪಕ್ರಮವನ್ನು ಮೊದಲು ಹೆಣ್ಣೇ ಸಂಘಟಿತ ನೆಲೆಯಲ್ಲಿ ಕೈಗೆತ್ತಿಕೊಳ್ಳಬೇಕಾಗುತ್ತದೆ. ಶೈಕ್ಷಣಿಕ ಜಾಗೃತಿಯಿಂದ ಇದು ಸಾಧ್ಯವಾಗಬಲ್ಲದು.

ಇದರರ್ಥ ಪ್ರತಿಷ್ಠಿತ ಶಕ್ತಿಗಳು ಸಂಪ್ರದಾಯದ ಹೆಸರಿ ನಲ್ಲಿ ಹೆಣ್ಣಿನ ಮೇಲೆ ಹೇರುವ ವಸ್ತ್ರಸಂಹಿತೆ, ಸಾಮಾಜಿಕ ಶಿಷ್ಟಾಚಾರಗಳನ್ನು ಅವಳು ಬಿಡಲೇಬೇಕು ಎಂದೇನೂ ಅಲ್ಲ. ವಸ್ತ್ರಸಿಂಗಾರಗಳು ಅವಳ ಆಯ್ಕೆಯಾಗಬೇಕೇ ವಿನಾ ಹೇರಿಕೆಯಾಗಬಾರದು, ಕುತ್ತಿಗೆಗೆ ತೂಗುಹಾಕಿದ ಫಲಕವಾಗಬಾರದು. ಆಯ್ಕೆ ಎಂದರೆ, ಬೇಡವೆನಿಸಿದಾಗ ಅವಳಿಗೆ ಅದನ್ನು ಕಳಚಿಡುವ ಅಧಿಕಾರವಿದೆ ಎಂದರ್ಥ. ಹಾಗೆ ಕಳಚಲು ನಿರ್ಧರಿಸಿದಾಗ ಅಥವಾ ತನಗೆ ಬೇಕಾದದ್ದನ್ನು ಧರಿಸಲು ಬಯಸಿದಾಗ ಅದನ್ನು ಸಮಸ್ಯೆಯಂತೆ ಅಥವಾ ಸುದ್ದಿಯಂತೆ ಕಾಣಬಾರದೆಂಬ ವಿವೇಕವನ್ನು ಸಮಾಜ ಬೆಳೆಸಿಕೊಳ್ಳಬೇಕಾಗುತ್ತದೆ.

ದೇವರು ಹೆಣ್ಣನ್ನು ಗರ್ಭಸಹಿತವಾಗಿ ಭೂಮಿಗೆ ಕಳುಹಿಸಿದ್ದಾನೆ. ಗರ್ಭವು ಸಂಕೇತಕ್ಕಿಂತಲೂ ಮಿಗಿಲಾದ ಜೀವಧಾರಣಾ ಅಂಗವಾಗಿದೆ. ಮಕ್ಕಳನ್ನು ಹೆತ್ತು ಸಲಹುವ ಹೆಣ್ಣಿಗೆ ಸಹಜವಾಗಿ ಪುರುಷನ ಸಹಕಾರ, ಸಹಾಯ ಬೇಕಾಗುತ್ತದೆ. ಅದೇ ರೀತಿ ಪುರುಷನಿಗೂ ಹೆಣ್ಣಿನ ಸಹಕಾರ, ಸಹಾಯ ಬೇಕು. ಆದರೆ, ಪುರುಷನೆನಿಸಿದವನು ಇದನ್ನೇ ಬಂಡವಾಳ ಮಾಡಿಕೊಂಡು, ‘ಹಾಗಿದ್ದರೆ ನಾನು ನಿನ್ನನ್ನು ಸ್ವತ್ತಿನಂತೆ, ಸಂಪತ್ತಿನಂತೆ ನಡೆಸಿಕೊಳ್ಳುತ್ತೇನೆ, ಇದಕ್ಕೆ ನೀನು ಸಮ್ಮತಿಸಬೇಕು...’ ಎಂದು ಷರತ್ತು ವಿಧಿಸುವುದು ಪುರುಷತನವಲ್ಲ, ಅದು ಕಾಪುರುಷತನವಾಗುತ್ತದೆ.

ಪಾಕಿಸ್ತಾನಿ ಕವಯಿತ್ರಿ ಇಮ್ತಿಯಾಜ್‌ ಧಾರ್ಕರ್‌ ತನ್ನ ಚರ್ಮವನ್ನು, ಮಾಂಸವನ್ನು, ಮುಖವನ್ನು ಕೊನೆಗೆ ಗರ್ಭವನ್ನೂ ಸದ್ಯಕ್ಕೆ ಕಳಚಿಡುವ, ಭವಿಷ್ಯದಲ್ಲಿ ತಾನೇ ಸೃಷ್ಟಿಸಿಕೊಳ್ಳುವ ಜಗತ್ತಿನೊಳಗೆ ಹೊಸ ಸೃಷ್ಟಿಕ್ರಿಯೆಯಲ್ಲಿ ತೊಡಗುವ ಕನಸು ಕಾಣುತ್ತಾಳೆ. ಹೆಣ್ಣು ಅಂತಹುದೊಂದು ಜಗತ್ತನ್ನು ಸೃಷ್ಟಿಸಿಕೊಳ್ಳಲು ಸುದೀರ್ಘಕಾಲ ಬೇಕಾಗುತ್ತದೆ. ಆದರೆ ಅದು ಅಸಾಧ್ಯವಾದ ಕನಸೇನಲ್ಲ.

ಮರ್ಯಾದೆಗೇಡು ಹತ್ಯೆಯ ಸಂಬಂಧವಾಗಿ ಯೇಸುವಿನ ಬದುಕಿನಲ್ಲೊಂದು ಕತೆಯಿದೆ. ಒಂದು ಸಂಜೆ ಕೆಲವು ಯಹೂದಿ ರಬಾಯ್‌ಗಳು ನ್ಯಾಯತೀರ್ಮಾನಕ್ಕಾಗಿ ಒಬ್ಬ ವ್ಯಭಿಚಾರಿಣಿಯನ್ನು ತಂದು ಯೇಸುವಿನ ಮುಂದೆ ನಿಲ್ಲಿಸುತ್ತಾರೆ. ‘ಈಕೆ ಪರಪುರುಷನ ಸಂಗದಲ್ಲಿದ್ದಾಗಲೇ ಹಿಡಿದು ಇಲ್ಲಿಗೆ ಕರೆತಂದಿದ್ದೇವೆ. ಇಂತಹವಳ ಮೇಲೆ ಕಲ್ಲು ತೂರಾಟ ನಡೆಸಿ ಕೊಲ್ಲಬೇಕು ಎಂದು ಮೋಸೆಸ್‌ ಆದೇಶಿಸಿದ್ದಾನೆ. ಇದಕ್ಕೆ ನೀನೇನೆನ್ನುವೆ?’ ಎಂದು ಕೇಳುತ್ತಾರೆ.

ಅವರ ಉದ್ದೇಶ ಬರೀ ಅವಳನ್ನು ಶಿಕ್ಷಿಸುವುದಾಗಿರ ಲಿಲ್ಲ. ಅದೊಂದೇ ಆಗಿದ್ದಿದ್ದರೆ ಆ ಕೆಲಸವನ್ನು ಅವರು ಅಲ್ಲೇ ಮಾಡಿ ಮುಗಿಸಿರುತ್ತಿದ್ದರು. ಯೇಸುವನ್ನು ಇಕ್ಕಟ್ಟಿಗೆ ಸಿಲುಕಿಸುವುದು ಅವರ ಉದ್ದೇಶವಾಗಿತ್ತು. ಅವನಿಗೆ ಆ ರಬಾಯ್‌ಗಳ ಹುನ್ನಾರ ಗೊತ್ತಾಗದಿರಲಿಲ್ಲ. ಒಂದು ವೇಳೆ ಯೇಸು ಕೊಲ್ಲಬಾರದು ಎಂದು ಹೇಳಿದರೆ ‘ಈತ ಪ್ರಾಚೀನ ಪ್ರವಾದಿಗಳನ್ನು ಅವಹೇಳನ ಮಾಡುತ್ತಿದ್ದಾನೆ’ ಎಂದು ಪುಕಾರೆಬ್ಬಿಸುತ್ತಿದ್ದರು. ಒಂದು ವೇಳೆ ಕೊಲ್ಲಿರಿ ಎಂದು ಹೇಳಿದರೆ ಆಗ ಇವನ ಪ್ರೇಮ, ಕರುಣೆಯ ಉಪದೇಶಗಳು ಬರೀ ಟೊಳ್ಳೆಂದು ಪ್ರಚಾರ ಮಾಡಿರುತ್ತಿ ದ್ದರು. ಯೇಸುವಿಗೆ ಅವಳು ತಪ್ಪಿತಸ್ಥಳೇ ಅಲ್ಲ ಎಂದು ವಾದಿಸಲೂ ಅವಕಾಶವಿರಲಿಲ್ಲ. ಏಕೆಂದರೆ ಆ ಕೃತ್ಯದ ಪ್ರತ್ಯಕ್ಷ ಸಾಕ್ಷಿಗಳೇ ಅವಳನ್ನು ಅಲ್ಲಿಗೆ ಎಳೆದು ತಂದಿದ್ದರು.

ಆಗ ಯೇಸು ಒಂದು ಉಪಾಯ ಮಾಡಿದ. ಕೆಳಗೆ ಬಾಗಿ ಮರಳಿನ ಮೇಲೆ ಏನನ್ನೋ ಬರೆಯಲಾರಂಭಿಸಿದ. ಅಲ್ಲಿ ನೆರೆದಿದ್ದ ಪ್ರತಿಯೊಬ್ಬ ರಬಾಯ್‌ಯ ಚರಿತ್ರೆ, ವ್ಯಭಿಚಾರ, ಭ್ರಷ್ಟಾಚಾರ, ಸೋಗಲಾಡಿತನಗಳು ಮರಳ ಮೇಲೆ ಯೇಸುವಿನ ಬೆರಳಿನಿಂದ ಅಕ್ಷರ ರೂಪದಲ್ಲಿ ಮೂಡಲಾರಂಭಿಸಿದವು. ನಿಧಾನವಾಗಿ ಕತ್ತಲೆ ಆವರಿಸು ತ್ತಿತ್ತು. ಇನ್ನೆಲ್ಲಿ ತನ್ನ ಬಂಡವಾಳ ಬಯಲಾಗುತ್ತದೋ ಎಂದು ಹೆದರಿ ಅಲ್ಲಿದ್ದ ಒಬ್ಬೊಬ್ಬ ರಬಾಯ್‌ಯೂ ಸದ್ದಿಲ್ಲದೇ ಅಲ್ಲಿಂದ ಪರಾರಿಯಾದ. ಯೇಸು ತನ್ನ ಬರವಣಿಗೆಯನ್ನು ಪೂರ್ತಿಯಾಗಿ ಮುಗಿಸಿ ತಲೆಯೆತ್ತಿ ನೋಡಿದರೆ ಅಲ್ಲಿ ಒಬ್ಬನೂ ಕಾಣಿಸಲಿಲ್ಲ. ಆ ಹೆಂಗಸು ಮಾತ್ರ ತಲೆತಗ್ಗಿಸಿ ನಿಂತೇ ಇದ್ದಳು. ಯೇಸು ಅವಳನ್ನು ಕುರಿತು ‘ಅವರೆಲ್ಲರೂ ಹೊರಟು ಹೋದರೇ? ನಿನ್ನನ್ನು ಶಿಕ್ಷಿಸಲಿಲ್ಲವೇ? ಹಾಗಿದ್ದರೆ ಇನ್ನೂ ಏಕೆ ಇಲ್ಲೇ ನಿಂತಿರುವೆ? ಮನೆಗೆ ಹೋಗು. ಮತ್ತೆ ಅವರ ಕೈಗೆ ಸಿಕ್ಕಿಹಾಕಿಕೊಳ್ಳಬೇಡ’ ಎಂದು ಹೇಳಿ ಕಳಿಸುತ್ತಾನೆ. ಮುಂದೆ ಅವಳು ಅವನ ಅಂತರಂಗದ ಶಿಷ್ಯೆಯಾಗುತ್ತಾಳೆ.

ಬೈಬಲ್‌ ಆಧರಿಸಿ ಖಲೀಲ್‌ ಗಿಬ್ರಾನ್‌ನ ಕಲ್ಪನೆಯಲ್ಲಿ ಮೂಡಿದ ಈ ಕತೆಯ ಸತ್ಯಾಸತ್ಯತೆ ತಿಳಿಯದು. ಆದರೆ ಯೇಸು ಅಲ್ಲಿದ್ದ ರಬಾಯ್‌ಗಳ ಅಂತಃಸಾಕ್ಷಿಯೇ ಮೂರ್ತಿ ವೆತ್ತಂತೆ ಅಲ್ಲೊಂದು ಪವಾಡ ನಡೆಸಿದ್ದ. ಈ ಅಂತಃಸಾಕ್ಷಿ ಜಾಗೃತವಾದರೂ ಸಾಕು, ಅದೆಷ್ಟೋ ಮರ್ಯಾದೆಗೇಡು ಹತ್ಯೆಗಳು ಪವಾಡಸದೃಶವಾಗಿ ನಿಲ್ಲಬಹುದು. ಆದರೆ ಸದ್ಯಕ್ಕೆ ಅಂತಹ ಪವಾಡಕ್ಕಾಗಿ ಕಾಯುತ್ತ ಕೂರುವಷ್ಟು ವ್ಯವಧಾನವಿಲ್ಲ.

ಕೊಪ್ಪಳದ ಸಾಮಾಜಿಕ ಕಾರ್ಯಕರ್ತ ವಿಜಯ್‌ ಅಮೃತರಾಜ್‌ ‘ಹೊಸ ತಲೆಮಾರಿನವರು ಕ್ಯಾಂಡಲ್‌ ಶ್ರದ್ಧಾಂಜಲಿ ಸಭೆ, ಪ್ರತಿಭಟನೆ, ರ‍್ಯಾಲಿಗಳ ಸಂಘಟನೆ, ಸಹಿ ಅಭಿಯಾನ ಮುಂತಾದವುಗಳ ಮೂಲಕ ಮರ್ಯಾದೆಗೇಡು ಹತ್ಯೆಗಳನ್ನು ಸಾರ್ವಜನಿಕರ ಮತ್ತು ನ್ಯಾಯಾಲಯದ ಗಮನಕ್ಕೆ ತರಬೇಕು’ ಎಂದು ಹೇಳುತ್ತಾರೆ.

ಲೇಖಕ: ಸಹಾಯಕ ಪ್ರಾಧ್ಯಾಪಕ, ಜ್ಯೋತಿನಿವಾಸ್ ಕಾಲೇಜ್‌, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.