ADVERTISEMENT

ವಸಂತ ಶೆಟ್ಟಿ ಲೇಖನ | ದೇಶ ಕಟ್ಟುವಿಕೆ: ಎಡವಿದ್ದೆಲ್ಲಿ?

‘ನಾವೆಲ್ಲ ಒಂದು’ ಎಂಬ ಕಲ್ಪನೆ ಅಫ್ಗನ್ನರಲ್ಲಿ ಗರಿಗಟ್ಟಲು ಬಿಡಲೇ ಇಲ್ಲ ಶಕ್ತಿಕೂಟಗಳ ಮೇಲಾಟ

ವಸಂತ ಶೆಟ್ಟಿ
Published 3 ಸೆಪ್ಟೆಂಬರ್ 2021, 19:31 IST
Last Updated 3 ಸೆಪ್ಟೆಂಬರ್ 2021, 19:31 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಅಫ್ಗಾನಿಸ್ತಾನ ಮತ್ತೆ ತಾಲಿಬಾನೀಯರ ಕೈವಶವಾಗಿದೆ. ಇತಿಹಾಸದ ಬಹುಪಾಲು ಅವಧಿಯನ್ನು ಯುದ್ಧ, ರಕ್ತಪಾತದಲ್ಲೇ ಕಳೆದಿರುವ ಈ ದೇಶದಲ್ಲಿ ಕಳೆದ ಇಪ್ಪತ್ತು ವರ್ಷಗಳಲ್ಲಿ ಹಾಗೂ ಹೀಗೂ ಒಂದು ಮಟ್ಟಿಗೆ ಶಾಂತಿ ನೆಲೆಸಿ, ಈ ಕಾಲದಲ್ಲಿ ಕಲ್ಪಿಸಿಕೊಳ್ಳುವಂತಹ ಒಂದು ದೇಶ ಹುಟ್ಟುತ್ತಿದೆ ಅನ್ನುವ ನಂಬಿಕೆಯನ್ನು ಅಮೆರಿಕ ಮತ್ತು ಅದರ ಗೆಳೆಯರು ಸೇರಿ ಪ್ರಪಂಚಕ್ಕೆ ಕೊಟ್ಟಿದ್ದರು. ಆದರೆ ಆಳವಾಗಿ ಒಡೆದುಕೊಂಡಿರುವ ಆ ನೆಲದಲ್ಲಿ ಹೊರಗಿನವರು ಹೊರಗಿನಿಂದ ಹಣ ಸುರಿದು, ವ್ಯವಸ್ಥೆಯನ್ನು ಹೇರಿ, ಅದರಿಂದ ತಾನೇ ತಾನಾಗಿ ದೇಶವೊಂದು ತಲೆ ಎತ್ತಿ ನಿಲ್ಲುತ್ತದೆ ಎಂದು ಭಾವಿಸಿದ್ದು ಎಷ್ಟು ದೊಡ್ಡ ಭ್ರಮೆ ಎಂಬುದೀಗ ಜಗತ್ತಿಗೆ ಅರಿವಾಗುತ್ತಿದೆ.

ಅಫ್ಗಾನಿಸ್ತಾನ ಅನ್ನುವುದು ಇತಿಹಾಸದ ಉದ್ದಕ್ಕೂ ಒಂದು ಕದನ ಕಣದಂತೆಯೇ ಇತ್ತು. ಅಲೆಕ್ಸಾಂಡರ್, ಘಜ್ನಿ, ಚೆಂಗೀಸ್ ಖಾನ್ ಹೀಗೆ ಹಲವರು ಈ ಪ್ರದೇಶ ವನ್ನು ಆಕ್ರಮಿಸಿಕೊಂಡರೂ 17ನೇ ಶತಮಾನದವರೆಗೂ ಅದೊಂದು ದೇಶ ಅನ್ನುವ ರೂಪವನ್ನಂತೂ ತಳೆದಿರಲಿಲ್ಲ. ಹಾಗೆ ನೋಡಿದರೆ ದೇಶ ಎಂಬ ಪರಿಕಲ್ಪನೆಯೇ 18ನೇ ಶತಮಾನದ್ದು. ಬ್ರಿಟಿಷರು ಭಾರತದ ಭೂಪ್ರದೇಶ
ವನ್ನು ಆಳುವಾಗ ರಷ್ಯಾದಿಂದ ಆಗಬಹುದಾದ ದಾಳಿ ತಡೆಯಲು ಅಫ್ಗಾನಿಸ್ತಾನದಲ್ಲಿ ಎಂಬತ್ತು ವರ್ಷಗಳಲ್ಲಿ ಮೂರು ಬಾರಿ ಯುದ್ಧಕ್ಕೆ ಹೋಗಿ, ಕೊನೆಯಲ್ಲಿ ಮೊದಲ ವಿಶ್ವಯುದ್ಧದ ಆಸುಪಾಸಿನಲ್ಲಿ ಸೋಲುವುದರೊಂದಿಗೆ ಅಫ್ಗಾನಿಸ್ತಾನ ಒಂದು ಸ್ವತಂತ್ರ ದೇಶವಾಯಿತು. ಅಲ್ಲಿಂದೀಚೆಗೆ ಹಲವು ನಾಯಕರು ಆ ದೇಶದಲ್ಲಿ ಶಾಂತಿ, ಸ್ಥಿರತೆ ತರಲು, ವ್ಯವಸ್ಥೆಗಳನ್ನು ರೂಪಿಸಲು, ಹೆಣ್ಣುಮಕ್ಕಳಿಗೆ ಹಕ್ಕುಗಳನ್ನು ಕೊಡಲು ಪ್ರಯತ್ನವನ್ನೇನೋ ಮಾಡಿದರು. ಆದರೆ ಹೊರಗಿನ ಶಕ್ತಿಗಳಿಗೆ ಸದಾ ತಮ್ಮ ರಾಜಕೀಯ ಹಿತಾಸಕ್ತಿಗಳ ಆಟದ ಬಯಲಂತಿದ್ದ ಅಫ್ಗನ್‌ನಲ್ಲಿ ದೇಶ ಕಟ್ಟುವಿಕೆ ಅನ್ನುವುದು ನಿಜವಾದ ಅರ್ಥದಲ್ಲಿ ಎಂದಿಗೂ ಸಾಧ್ಯವಾಗಲಿಲ್ಲ.

ಐವತ್ತರಿಂದ ತೊಂಬತ್ತರ ದಶಕದವರೆಗೆ ಕಮ್ಯುನಿಸ್ಟ್ ರಷ್ಯಾದ ಪ್ರಭಾವದಲ್ಲಿ ಆಳಿದವರೆಲ್ಲ, ಅಫ್ಗನ್‌ ಸಮಾಜ ಒಪ್ಪುತ್ತದೋ ಬಿಡುತ್ತದೋ ಎಂದು ಗಮನಿಸದೆ ಕಮ್ಯುನಿಸ್ಟ್ ಚಿಂತನೆಯಂತೆ ದೇಶ ಮತ್ತು ವ್ಯವಸ್ಥೆಯನ್ನುಮೇಲಿನಿಂದ ಕಟ್ಟಲು ಹೋಗಿದ್ದು ವಿಫಲವಾಯಿತು.

ADVERTISEMENT

ತನ್ನ ಕೈಗೊಂಬೆ ಸರ್ಕಾರಗಳು ಜನರ ಬೆಂಬಲ ಕಳೆದುಕೊಳ್ಳುತ್ತಿರುವುದನ್ನು ಕಂಡು ರಷ್ಯಾ ಖುದ್ದಾಗಿ 1979ರಲ್ಲಿ ದಾಳಿ ಮಾಡಿ ಅಫ್ಗಾನಿಸ್ತಾನವನ್ನು ವಶಕ್ಕೆ ಪಡೆದು ಹತ್ತು ವರ್ಷಗಳ ಕಾಲ ಅದನ್ನು ನಿಯಂತ್ರಿಸಲು ಪ್ರಯತ್ನಿಸಿ ಸೋತಿತು. ಈಗ ಅಮೆರಿಕ ನಡುನೀರಿನಲ್ಲಿ ಕೈಬಿಟ್ಟು ಕೈತೊಳೆದುಕೊಂಡು ಹೋದಂತೆ ಆಗ ರಷ್ಯಾ ಎದ್ದು ಹೋಗಿತ್ತು. ಹಾಗೆ ರಷ್ಯಾವನ್ನು ಅಫ್ಗಾನಿಸ್ತಾನದಲ್ಲಿ ಕಟ್ಟಿ ಹಾಕಲು ಅಫ್ಗನ್‌ ಮುಜಾಹಿದ್ದೀನ್ ಬಂಡುಕೋರರನ್ನು ಎತ್ತಿ ಆಡಿಸಿ ಮದ್ದುಗುಂಡು ಕೊಟ್ಟು ಪೊರೆದದ್ದು ಅಮೆರಿಕ ಮತ್ತು ಚೀನಾ ಆಗಿದ್ದವು. ಎಂದಿನಂತೆ ಈ ಕೆಲಸಗಳಿಗೆ ಮಧ್ಯಸ್ಥಿಕೆ ಪಾಕಿಸ್ತಾನದ್ದಾಗಿತ್ತು. ಅಫ್ಗಾನಿಸ್ತಾನ ಅನ್ನುವುದು ತಮ್ಮ ಗುಂಪುಗಳಿಗೆ ಮಾತ್ರ ನಿಯತ್ತು ಹೊಂದಿದ್ದ ಹಲವು ಪಂಗಡಗಳ ಒಂದು ಬಿಡಿಯಾದ ಸಂತೆಯಂತೆಯೇ ಯಾವತ್ತಿಗೂ ಇತ್ತು. ಹೀಗಾಗಿ ಅಲ್ಲಿ ರಷ್ಯನ್ನರ ಕಮ್ಯುನಿಸಂ ಜೊತೆಗಾಗಲಿ, ಅಮೆರಿಕನ್ನರ ಕ್ಯಾಪಿಟಲಿಸಂ ಜೊತೆಗಾಗಲಿ ಒಂದು ನಿಜ ಅರ್ಥದ ಹೊಂದಿಕೊಳ್ಳುವಿಕೆ ಅನ್ನುವುದು ಸಾಧ್ಯವಾಗಲೇ ಇಲ್ಲ. ಹೀಗಾಗಿ ಅಮೆರಿಕ ಅಲ್ಲಿಂದ ತೆರಳು ತ್ತಿದ್ದಂತೆಯೇ ಅಲ್ಲಿ ಮತ್ತೆ ಅರಾಜಕತೆ ಉಂಟಾಗಿರುವುದರಲ್ಲಿ ಅಚ್ಚರಿಯೇನೂ ಇಲ್ಲ.

ದೇಶ ಅನ್ನುವುದು ಒಂದು ಕಲ್ಪಿತ ಸಮುದಾಯ ಎಂಬುದು ಬೆನೆಡಿಕ್ಟ್ ಆ್ಯಂಡರ್ಸನ್ ಅನ್ನುವ ಸಮಾಜಶಾಸ್ತ್ರಜ್ಞನ ವಾದ. ದೇಶದ ಪ್ರತಿಯೊಬ್ಬರಿಗೂ ತನ್ನ ದೇಶದ ಇನ್ನೊಬ್ಬರ ವೈಯಕ್ತಿಕ ಪರಿಚಯವಿರಲು ಸಾಧ್ಯವಿಲ್ಲ. ಹೀಗಿದ್ದಾಗಲೂ ತಾವೆಲ್ಲ ಒಂದು ದೇಶದ ಭಾಗ ಅನ್ನಿಸುವ ಹಾಗೆ ಆಗಬೇಕು ಅಂದರೆ, ಅದು ಅಂತಹದ್ದೊಂದು ಕಲ್ಪನೆಯನ್ನು ಜನಮಾನಸದಲ್ಲಿ ನೆಲೆಗೊಳಿಸಿದಾಗಲಷ್ಟೇ ಸಾಧ್ಯ ಅನ್ನುವುದು ಅವರ ವಾದದ ತಿರುಳು. ತಮ್ಮ ಪಂಗಡಗಳಾಚೆ ಅಫ್ಗನ್ನರೆಲ್ಲರಲ್ಲಿ ‘ನಾವೆಲ್ಲ ಒಂದು’ ಎಂದು ಜೋಡಿಸುವ ಕಲ್ಪನೆಯೊಂದನ್ನು ಕಟ್ಟಲು ಸಾಧ್ಯವಾಗದೆ ಇದ್ದದ್ದೇ ಅಲ್ಲಿ ದೇಶ ಕಟ್ಟುವುದು ವಿಫಲವಾಗಲು ಇರುವ ಮುಖ್ಯ ಕಾರಣ. ರಷ್ಯಾ, ಅಮೆರಿಕ, ಚೀನಾ ಮತ್ತು ಪಾಕಿಸ್ತಾನದ ರಾಜಕೀಯ ಮೇಲಾಟ ಅಂತಹದ್ದೊಂದು ಕಲ್ಪನೆ ಎಂದಿಗೂ ಗಟ್ಟಿಗೊಳ್ಳದಂತೆ ನೋಡಿಕೊಂಡಿದೆ ಕೂಡ. ಅಂತಹ ಕಲ್ಪನೆಯನ್ನು ಭಾವನಾತ್ಮಕ ನೆಲೆಯಲ್ಲಿ ಹಾಗೂ ಹೀಗೂ ಕಟ್ಟಬಹುದೇನೊ. ಆದರೆ ಅದು ಗಟ್ಟಿ ಗೊಳ್ಳಲು ಈ ಕಲ್ಪನೆಯಲ್ಲಿ ತನಗೂ ಪಾಲಿದೆ, ಅದು ತನ್ನ ಹಿತಾಸಕ್ತಿಗಳಿಗೂ ಪೂರಕ ಎಂದು ಬಹುತೇಕ ಪ್ರಜೆಗಳಲ್ಲಿ ನಂಬಿಕೆ ಬರಬೇಕು.

ಭಾರತದಲ್ಲಿ ಬ್ರಿಟಿಷರ ವಿರುದ್ಧ ಒಂದು ಭಾವನಾತ್ಮಕ ನೆಲೆಯಲ್ಲಿ ಸ್ವಾತಂತ್ರ್ಯ ಹೋರಾಟ ನಡೆದಿದ್ದು, ಭಾರತ ದಲ್ಲಿನ ವೈವಿಧ್ಯವನ್ನು ಪೊರೆಯಲು ಒಕ್ಕೂಟ ವ್ಯವಸ್ಥೆ ಯನ್ನು ರೂಪಿಸಿಕೊಂಡಿದ್ದು ಮತ್ತು ಆ ಮೂಲಕ ಇದರಲ್ಲಿ ಎಲ್ಲರ ಪಾಲುದಾರಿಕೆ ಇದೆ ಅನ್ನುವಂತೆ ನಡೆದು ಕೊಂಡಿದ್ದು ಹೀಗೆ ಹಲವು ಕಾರಣಗಳಿಂದಾಗಿ, ಹಲವು ಕೊರತೆಗಳ ನಡುವೆಯೂ ದೇಶ ಅನ್ನುವ ಪರಿಕಲ್ಪನೆ ಭಾರತದಲ್ಲಿ ಗಟ್ಟಿಯಾಗಿ ನೆಲೆಯೂರಿತು.

2001ರಲ್ಲಿ ನ್ಯೂಯಾರ್ಕಿನ ಅವಳಿ ಗೋಪುರಗಳಿಗೆ ವಿಮಾನ ಗುದ್ದಿಸಿದ ಒಸಾಮಾ ಬಿನ್ ಲಾಡೆನ್ ಅಫ್ಗಾನಿ ಸ್ತಾನದಲ್ಲಿ ಬಚ್ಚಿಟ್ಟುಕೊಂಡಿದ್ದಾನೆ ಅನ್ನುವ ಕಾರಣ ಕೊಟ್ಟು ಅಮೆರಿಕ ತನ್ನ ಗೆಳೆಯರೊಡನೆ ಅಲ್ಲಿ ದಾಳಿಗೆ ಮುಂದಾಯಿತು. ತಾತ್ಕಾಲಿಕವಾಗಿ ತಾಲಿಬಾನ್ ಅನ್ನು ಹಿಮ್ಮೆಟ್ಟಿಸಿ ತನ್ನ ಕೈಗೊಂಬೆಯಂತಹ ಸರ್ಕಾರವೊಂದನ್ನು ಸ್ಥಾಪಿಸಿ, ಸರ್ಕಾರ, ಸಂಸ್ಥೆಗಳು, ಮಿಲಿಟರಿ ಇತ್ಯಾದಿಗಳನ್ನು ಮೇಲಿನಿಂದ ಕೆಳಗೆ ಕಟ್ಟುವ ಕೆಲಸ ಮಾಡಿದರೆ ಅಲ್ಲಿ ಶಾಂತಿ, ಸ್ಥಿರತೆ ಬರುತ್ತದೆ ಅನ್ನುವ ಲೆಕ್ಕಾಚಾರ ಹೊಂದಿತ್ತು. ಆದರೆ ಮೂರು ಲಕ್ಷ ಸೈನಿಕರ ಅಫ್ಗನ್‌ ಪಡೆಯು 75,000 ತಾಲಿಬಾನ್ ಉಗ್ರರನ್ನು ಎದುರಿಸದೆ ಶರಣಾದದ್ದು ಏನನ್ನು ತೋರಿಸುತ್ತದೆ? ಮಿಲಿಟರಿಯೂ ಸೇರಿದಂತೆ ಬಹುತೇಕ ಪ್ರಜೆಗಳ ಬೆಂಬಲ ಅಮೆರಿಕ ಸ್ಥಾಪಿಸಿದ್ದ ಸರ್ಕಾರಕ್ಕಿರಲಿಲ್ಲ ಎಂದು ತೋರುತ್ತದೆ. ಸರ್ಕಾರ ದಲ್ಲಿದ್ದವರ ಭ್ರಷ್ಟಾಚಾರವೂ ಜನರ ಸಿಟ್ಟಿಗೆ ಕಾರಣವಾಗಿತ್ತು.

–ವಸಂತ ಶೆಟ್ಟಿ

ಎರಡು ದಶಕಗಳಲ್ಲಿ ಅಲ್ಲಿನ ಸ್ಥಳೀಯ ಗುಂಪುಗಳನ್ನು ತೆಕ್ಕೆಗೆ ತೆಗೆದುಕೊಂಡು ದೇಶ ಕಟ್ಟುವಿಕೆಯಲ್ಲಿ ಅವರಿಗೂ ಪಾಲಿದೆ ಅನ್ನುವಂತಹ ಒಳಗೊಳ್ಳುವ ನಡೆಯ ಮಹತ್ವ ವನ್ನು ಅಮೆರಿಕ ಅರಿಯದೇ ಹೋಯಿತು. ಅಮೆರಿಕನ್ನರು ಹೊರಗಿನ ದಾಳಿಕೋರರು ಅನ್ನುವ ಅನಿಸಿಕೆ ಅಲ್ಲಿನ ಪ್ರಜೆಗಳಲ್ಲಿದ್ದಾಗ ಅಲ್ಲಿ ಅದು ಎಣಿಸಿದಂತೆ ದೇಶ ಕಟ್ಟುವ ಯೋಜನೆ ಯಶಸ್ವಿಯಾಗಲು ಹೇಗೆ ಸಾಧ್ಯ ಅನ್ನುವ ಪ್ರಶ್ನೆಯನ್ನು ಈಗ ಹಲವು ವಿಶ್ಲೇಷಕರು ಎತ್ತುತ್ತಾರೆ. ಏನೇ ಆದರೂ ಕೊನೆಯಲ್ಲಿ ಈ ಶಕ್ತಿಕೂಟಗಳ ಮೇಲಾಟದಲ್ಲಿ ಸಾಮಾನ್ಯ ಅಫ್ಗನ್ನರು ಮನೆ, ಮಠ, ಬಂಧು, ಬಳಗ ಎಲ್ಲವನ್ನೂ ಕಳೆದುಕೊಂಡು ದೇಶಾಂತರ ಹೋಗುವ ದುರಂತವೊಂದು ನಮ್ಮೆದುರು ತೆರೆದುಕೊಳ್ಳುತ್ತಿರುವು ದಂತೂ ಸತ್ಯ.

ಅನಿಶ್ಚಿತತೆ ಎದುರಾದಾಗ ಮನುಷ್ಯನ ನಡವಳಿಕೆ ಹೇಗಿರುತ್ತದೆ ಅನ್ನುವುದನ್ನು ಅಧ್ಯಯನ ಮಾಡಿ ‘ದಿ ಪವರ್ ಆಫ್ ನಥಿಂಗ್ ಟು ಲೂಸ್’ ಅನ್ನುವ ಪುಸ್ತಕ ಬರೆದಿರುವ ನ್ಯೂಯಾರ್ಕ್ ವಿಶ್ವವಿದ್ಯಾಲಯದ ಅಧ್ಯಾಪಕ ವಿಲಿಯಂ ಸಿಲ್ಬರ್ ಅವರ ಪ್ರಕಾರ, ‘ಕಳೆದುಕೊಳ್ಳಲು ಏನೂ ಇಲ್ಲ’ ಅನ್ನುವ ಮನಃಸ್ಥಿತಿಗೆ ಯಾರಾದರೂ ತಲಪಿದಾಗ ಅವರು ರಿಸ್ಕ್ ತೆಗೆದುಕೊಳ್ಳುವ ಇಲ್ಲವೇ ಯುದ್ಧದಂತಹ ನಡೆಯತ್ತ ಹೋಗುವುದು ಹೆಚ್ಚು ಸಹಜ. ಮಧ್ಯಪ್ರಾಚ್ಯದಲ್ಲಿ ಸತತವಾಗಿ ಬಡಿದಾಡಿಕೊಳ್ಳುವ ಸ್ಥಿತಿ ಇರುವುದಕ್ಕೆ ಇಂತಹ ಮನಃಸ್ಥಿತಿಯೇ ಕಾರಣ. ಇದನ್ನು ಅಫ್ಗನ್‌ ಸ್ಥಿತಿಯ ಜೊತೆ ಇಟ್ಟು ನೋಡುವುದಾದರೆ, ಎಲ್ಲಿಯವರೆಗೆ ಅಲ್ಲಿನ ಪಂಗಡಗಳು ದೇಶದ ಕಟ್ಟುವಿಕೆಯಲ್ಲಿ ತಮಗೂ ಪಾಲಿದೆ, ದೇಶದ ಅರಾಜಕತೆಯಿಂದ ತಮಗೇ ನಷ್ಟ ಅನ್ನುವ ಸ್ಥಿತಿಗೆ ತಲುಪುವುದಿಲ್ಲವೋ ಅಲ್ಲಿಯವರೆಗೂ ಅಲ್ಲಿ ಶಾಂತಿ ನೆಲೆಸುವುದು ಕಷ್ಟ.

ಜಾಗತೀಕರಣದ ಮಿತಿಗಳು ಈಗ ಹೆಚ್ಚು ಪ್ರಶ್ನೆಗೊಳ ಗಾಗುತ್ತಿವೆ, ಪರಿಸರದ ವಿನಾಶ ತರುತ್ತಿರುವ ನಿಸರ್ಗದ ಆಪತ್ತುಗಳನ್ನು ಈಗ ಯಾರೂ ಅಲ್ಲಗಳೆಯಲಾಗದು. ಇವುಗಳ ನಡುವೆಯೇ ದೇಶ ದೇಶಗಳ ನಡುವೆ, ದೇಶದ ಒಳಗಡೆಯೂ ಸಹಕಾರ ಸಾಧ್ಯವಾಗಬೇಕು ಅಂದರೆ ಅದರಲ್ಲಿ ಎಲ್ಲರಿಗೂ ಪಾಲಿದೆ, ಸಹಕರಿಸದೇ ಇದ್ದರೆ ಕಳೆದುಕೊಳ್ಳುವುದು ಬಹಳ ಇದೆ ಅನ್ನುವುದನ್ನು ಮನವರಿಕೆ ಮಾಡಿಕೊಡುವಂತಹ ತಳಹದಿಯ ಮೇಲೆ ದೇಶ ಕಟ್ಟುವಿಕೆಯನ್ನು ನೋಡಬೇಕಿದೆ. ಇದು ಎಲ್ಲ ದೇಶಗಳಿಗೂ ಅನ್ವಯಿಸುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.