ADVERTISEMENT

ವಿಶ್ಲೇಷಣೆ: ಸುಣ್ಣ ನುಂಗುತ್ತಿರುವ ಗೋಡೆಗಳು

ಉನ್ನತ ಶಿಕ್ಷಣವು ಅವನತ ಸಮಾಜದ ಬಾಲಂಗೋಚಿಯಾಗುವ ಪ್ರಪಾತದೆಡೆಗೆ ಸಾಗುತ್ತಿದೆ

ಸಬಿತಾ ಬನ್ನಾಡಿ
Published 29 ಜುಲೈ 2021, 19:31 IST
Last Updated 29 ಜುಲೈ 2021, 19:31 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಆತ ಕೊಠಡಿಯಿಂದ ಹೊರಬಂದು ‘ಹೀ ಈಸ್ ಅಮೇಜಿಂಗ್. ಎಷ್ಟು ವಿಷಯ ತಿಳ್ಕೊಂಡಿದಾನೆ ಗೊತ್ತಾ? ಐ ವಾಸ್ ವೆರೀ ಹ್ಯಾಪಿ ವಿತ್ ಹಿಮ್’ ಅಂತೆಲ್ಲ ಬಡಬಡಿಸುತ್ತಿದ್ದ. ವಾಸ್ತವದಲ್ಲಿ ಆಗಿದ್ದೇನೆಂದರೆ, ಮುಚ್ಚಿದ ಕೊಠಡಿಯೊಳಗೆ, ಬಂದವನು ಇವನಿಗೆ ಚೆನ್ನಾಗಿ ತದುಕಿದ್ದ. ಈತನೊಬ್ಬ ಯೂನಿವರ್ಸಿಟಿ ಪ್ರೊಫೆಸರ್ ಆಗಿದ್ದು ಆತ ಈತನ ಪಿಎಚ್.ಡಿ ವಿದ್ಯಾರ್ಥಿನಿಯ ಗಂಡನಾಗಿದ್ದ. ತಿಂದಿದ್ದು ಒದೆಯಾದರೂ ಹೊರಗೆ ತಾನು ಬಹಳ ಗಹನವಾದ ಚರ್ಚೆಯಲ್ಲಿದ್ದೆ ಅಂತ ಪೋಸ್ ಕೊಡುವ ಇವನದ್ದು ಒಂಥರಾ ದುಃಸ್ಥಿತಿಯಾದರೆ, ಇವನ ಮಾರ್ಗದರ್ಶನದಲ್ಲಿ ಓದುವ ಅವಳದ್ದು ಇನ್ನೊಂಥರ ದುಃಸ್ಥಿತಿ.

ಇವನ ಅಸಭ್ಯ ವರ್ತನೆ, ಹಣ ಮತ್ತು ಮಾನ ಎರಡಕ್ಕೂ ಕುತ್ತು ತರುವಂತಹ ಇವನ ಬೇಡಿಕೆ ಇತ್ಯಾದಿಗಳಿಂದ ರೋಸಿಹೋದ ಅವಳು ಹೀಗೆ ‘ಗುರು’ವಿಗೆ ಬುದ್ಧಿ ಕಲಿಸಲು ಹೊರಟಿದ್ದಳು. ಅವಳ ಹಾಗೆ ಗಂಡನ ಬೆಂಬಲವೂ ಇಲ್ಲದ, ಬಡತನದಿಂದ ಬಂದ, ಸಾಮಾಜಿಕ ಭದ್ರತೆಯಿಲ್ಲದ ಹುಡುಗ, ಹುಡುಗಿಯರದು ಬೇರೆಯದೇ ಗೋಳು.

ಇಲ್ಲಿ ಎರಡು ಅಂಶಗಳಿವೆ. ಒಂದು, ತನ್ನ ಮಾನಹಾನಿಯನ್ನು ಮುಚ್ಚಿಟ್ಟು ಅಲ್ಲೂ ತಾನು ಬಹಳ ದೊಡ್ಡವನು ಎಂದು ತೋರಿಸಿಕೊಳ್ಳುವ ನಿರ್ಲಜ್ಜ ನಡೆ. ಇನ್ನೊಂದು, ಇಂತಹ ಮಹಾನುಭಾವರು ಬಹಳ ದೊಡ್ಡವರು ಅಂತ ತಿಳಿದು ಅವರ ಮಾರ್ಗದರ್ಶನ ದಲ್ಲಿ ಓದಲು ಬಂದು, ಅವರ ಒಳ ವ್ಯವಹಾರಗಳಿಂದ ರೋಸಿಹೋದವರೂ ಪ್ರಕಟವಾಗಿ ಏನನ್ನೂ ಮಾಡಲಾಗದೆ ವ್ಯಕ್ತಿ ಮಟ್ಟದಲ್ಲೇ ಎಲ್ಲವನ್ನೂ ಮುಚ್ಚಿಟ್ಟು ‘ಸರಿ’ಪಡಿಸಿಕೊಳ್ಳಬೇಕಾದ ಅಸಹಾಯ ಅವ್ಯವಸ್ಥೆ. ಮೀಟೂ ಚಳವಳಿಯಲ್ಲಿ ಬೇರೆ ಬೇರೆ ರಂಗದವರ ಮುಚ್ಚಿಟ್ಟ ಈ ‘ಸರ್ಪದ ಬುಟ್ಟಿ’ಯಿಂದ ಹೊರಬಂದ ‘ದೊಡ್ಡವರ’ ಸುದ್ದಿ ಕೆಲವರನ್ನು ಬೆಚ್ಚಿಬೀಳಿಸಿತು. ಆದರೆ ಆಗಲೂ ಶೈಕ್ಷಣಿಕ ರಂಗದ ಇಂತಹ ಅಸಂಖ್ಯ ಪ್ರಕರಣಗಳು ಹೊರಬರಲೇ ಇಲ್ಲ. ಇದು ವಿಶ್ವವಿದ್ಯಾಲಯಗಳ ಜಗುಲಿಯಲ್ಲಿ ಗುಸಗುಸ ಪಿಸಪಿಸಕ್ಕೆ ಮಾತ್ರ ಇಂದಿಗೂ ಸೀಮಿತವಾಗಿದೆ.

ADVERTISEMENT

ಅದು ಯಾಕೆ ಹಾಗೆ ಎಂದು ಈಗಲೂ ಕೆಲವರು ಮುಗ್ಧ ಪ್ರಶ್ನೆ ಹಾಕಬಹುದು. ತಕ್ಷಣ ಕಂಪ್ಲೇಂಟ್ ಕೊಡಬೇಕೆಂಬ ಬಿಟ್ಟಿ ಸಲಹೆಯನ್ನೋ ಅಥವಾಪಿಎಚ್.ಡಿ ಬಿಸಾಕಿ ಬರಬಹುದಲ್ಲಾ ಅಂತ ಸಿಟ್ಟಿನಿಂದಲೋ ಹೇಳಬಹುದು. ಆದರೆ ಪ್ರಶ್ನೆ ಇರುವುದು, ದೂರು ನೀಡಿ ಸಾಕ್ಷ್ಯ ಹೇಗೆ ಒದಗಿಸಬೇಕು? ಎಲ್ಲಾ ಮಾಡಿಯೂ ನ್ಯಾಯ ಸಿಗುವ ಖಾತರಿ ಇದೆಯೇ? ಯಾರ ಜೊತೆ ಯಾರು ನಿಲ್ಲುತ್ತಾರೆ? ಇವೆಲ್ಲದರ ಜೊತೆಗೆ ಪಿಎಚ್.ಡಿಯನ್ನು ಯಾಕೆ ಬಿಸಾಕಬೇಕು? ಅದು ಅವರ ಹಕ್ಕಲ್ಲವೇ ಎಂದು ನಾವೇಕೆ ಯೋಚಿಸುತ್ತಿಲ್ಲ? ಇದೆಲ್ಲ ಹೀಗೇ ಒಳಗೊಳಗೇ ನಡೆಯುವುದಕ್ಕೆ ನಿದರ್ಶನವಾಗಿ ಮೀಟೂ ಪ್ರಕರಣವನ್ನೇ ನೆನಪಿಸಿಕೊಳ್ಳಬಹುದು. ಅವಕಾಶಕ್ಕಾಗಿ ಪ್ರತ್ಯಕ್ಷವಾಗಿಯೋ ಪರೋಕ್ಷವಾಗಿಯೋ ಹಾಸಿಗೆಗೆ ಕರೆಯುವ ತನಕವೂ ಮುಂದುವರಿಯುವ ನಿರ್ದೇಶಕರು, ನಿರ್ಮಾಪಕರು, ನಟರು ಇದ್ದಾರೆ ಎಂದು ಬಾಯಿಬಿಟ್ಟ ಹಲವು ಪ್ರತಿಭಾವಂತ ಹೆಣ್ಣುಮಕ್ಕಳ ವೃತ್ತಿಜೀವನಕ್ಕೆ ಕಲ್ಲು ಬಿತ್ತು ಮಾತ್ರವಲ್ಲ ಕೆಟ್ಟ ಟ್ರೋಲ್ ಎದುರಿಸಬೇಕಾಯಿತು.

ಯಾಕೆ ಹೆಣ್ಣುಮಕ್ಕಳು ಹೀಗೆ ವ್ಯಕ್ತಿ ಮಟ್ಟದ ಪರಿಹಾರಕ್ಕೆ ಮುಂದಡಿಯಿಡಬೇಕಾದ ಅನಿವಾರ್ಯ ಅಥವಾ ಸಹಿಸಿಕೊಳ್ಳಬೇಕಾದ ಮೂಗುಬ್ಬಸದ ದಾರಿಯನ್ನೇ ಆಯ್ಕೆ ಮಾಡಿಕೊಳ್ಳುತ್ತಾರೆ ಎಂಬುದು ಇದರಿಂದ ದೃಢ ಪಡುತ್ತದೆ. ಕನ್ನಡದ ನಟಿ ಶ್ರುತಿ ಹರಿಹರನ್‍ ಅವರಿಗೆ ಸಿನಿಮಾ ಇಂಡಸ್ಟ್ರಿಯು ಸದ್ದಿಲ್ಲದೇ ಬಹುಮಟ್ಟಿಗೆ ಅವಕಾಶ ನಿರಾಕರಿಸಿರುವ ಜೀವಂತ ಉದಾಹರಣೆ ನಮ್ಮ ಮುಂದಿದೆ. ಅಂದರೆ, ಸಾಮಾಜಿಕ ಸ್ಥಿತಿ ಹೇಗಿದೆಯೆಂದರೆ, ಸಂತ್ರಸ್ತ ರನ್ನೇ ಅಪರಾಧಿಗಳನ್ನಾಗಿಸಿ, ಅಪರಾಧಿಗಳನ್ನು ನಾಯಕರನ್ನಾಗಿಸುವ ವ್ಯವಹಾರವಿಲ್ಲಿ ಸಲೀಸು. ಇದು ರಾಜಕಾರಣದಿಂದ ಹಿಡಿದು ಕಾವಿಧಾರಿಗಳ ತನಕ ‘ತೆರೆದ ಗುಟ್ಟು’.

ಗುರುಪೂರ್ಣಿಮೆ ನಮ್ಮ ಸಂಸ್ಕೃತಿ ಎಂದು ಹುಸಿ ಮಾತು ಆಡುವ ನಮ್ಮಲ್ಲಿಂದು ಶಿಕ್ಷಣದ ಗುಣಮಟ್ಟ ಯಾವ ಪಾತಾಳಕ್ಕೆ ತಲುಪಿದೆ ಎಂಬ ಬಗೆಗೆ ಯಾರಿಗೂ ಚಿಂತೆ ಇಲ್ಲ. ಗುಣಮಟ್ಟ ಉಳಿಸಿಕೊಂಡ ಕೆಲವು ವಿಶ್ವವಿದ್ಯಾಲಯಗಳನ್ನು ಬೆಂಬತ್ತಿ ಹಳ್ಳಹಿಡಿಸುವ ಕಾಯಕವೇ ಶೌರ್ಯವಾಗಿರುವಾಗ ಭರವಸೆ ಎಲ್ಲಿದೆ?

ಹೀಗೆಲ್ಲ ಇರುವಾಗ ಮಹಿಳಾ ಪ್ರೊಫೆಸರ್ ಒಬ್ಬರು ತನ್ನ ಪಿಎಚ್.ಡಿ ವಿದ್ಯಾರ್ಥಿಯಿಂದ, ಬಾಹ್ಯ ಮೌಲ್ಯಮಾಪಕರಿಗೆ ಕೊಡುವುದಕ್ಕಾಗಿ ಹದಿನಾರು ಸಾವಿರದ ಎಂಟುನೂರು ರೂಪಾಯಿಗೆ ಬೇಡಿಕೆ ಇಟ್ಟು, ಅದರಲ್ಲಿ ಐದು ಸಾವಿರವನ್ನು ಸ್ವೀಕರಿಸುವಾಗ ಲೋಕಾಯುಕ್ತ ಪೊಲೀಸರಿಗೆ ಸಿಕ್ಕಿಬಿದ್ದು ಮೂರು ವರ್ಷ ಜೈಲುಶಿಕ್ಷೆಗೆ ಗುರಿಯಾಗಿದ್ದಾರೆ ಎಂಬ ಸುದ್ದಿ ಬಂತು. ಈ ಸುದ್ದಿಗಿಂತ ಇದಕ್ಕೆ ಬಂದ ಪ್ರತಿಕ್ರಿಯೆ ಈ ಸಮಾಜದ ಕನ್ನಡಿಯಂತೆ ಪ್ರತಿಫಲಿಸಿತು.

ಇದಕ್ಕಾಗಿ ಕೆಲವರು ಸಮಾಧಾನ ಪಟ್ಟುಕೊಂಡರೆ, ಇನ್ನು ಕೆಲವರು, ಹಣ್ಣು ತಿಂದವರಿಗೆ ಶಿಕ್ಷೆ ಆಗಲಿಲ್ಲ ಸಿಪ್ಪೆ ತಿಂದವರಿಗೆ ಶಿಕ್ಷೆಯೇ? ಎಂದರು. ಇನ್ನೂ ಕೆಲವರಿಗಿದು, ಎಂತೆಂಥಾ ಪ್ರಕರಣ ಬಿಟ್ಟು ಜುಜುಬಿ ಐದು ಸಾವಿರ ರೂಪಾಯಿ ಪ್ರಕರಣದಲ್ಲಿ ಶಿಕ್ಷೆ ಆಗಿದೆಯಲ್ಲಾ ಎನಿಸಿತು. ಇದೆಲ್ಲದರಾಚೆಗೆ ಬಂದ ಪ್ರತಿಕ್ರಿಯೆ ಎಂದರೆ, ಲಂಚ ತಿನ್ನುವುದೂ ಗೊತ್ತಿಲ್ಲದ ಪೆದ್ದು ಎನ್ನುವುದು. ಈ ಎಲ್ಲಾ ಪ್ರತಿಕ್ರಿಯೆಗಳನ್ನು ಗಂಭೀರವಾಗಿ ಪರಿಗಣಿಸಬೇಕಿದೆ.

ಕಾಲುವೆಗಳು, ಕಟ್ಟಡಗಳು, ರಸ್ತೆಗಳು, ಅರಣ್ಯಗಳು, ನೂರಾರು ಎಕರೆ ಜಮೀನುಗಳು, ಸಾವಿರ, ಲಕ್ಷ ಕೋಟಿಗಳನ್ನೇ ನುಂಗಿ ಜೀರ್ಣಿಸಿಕೊಳ್ಳುತ್ತಿರುವುದು ಕಣ್ಣೆದುರೇ ನಡೆಯುವಾಗ ‘ಪಾಪ! ಐದು ಸಾವಿರಕ್ಕೆ ಮೂರು ವರ್ಷ ಜೈಲೇ?’ ಎಂದು ಕರುಣೆ ಉಕ್ಕಿಸುವಂತೆ ಈ ತೀರ್ಪು ಹಲವರಿಗೆ ಕಂಡರೆ ಅದು ನಿಂದ ನೆಲದ ದೋಷವೇ ಇರಬೇಕು. ಕದಿಯುವುದು, ಕದ್ದು ಸಿಕ್ಕಿ ಹಾಕಿಕೊಳ್ಳದೇ ಇರುವುದು ಮಾತ್ರವಲ್ಲ, ಅವರೇ ಕೆಲವೊಮ್ಮೆ ಆಳುವವರೂ ಆಗುವುದಕ್ಕೆ ದೊಡ್ಡ ಇತಿಹಾಸವೇ ಇದೆ.

ಮೆಡೋಸ್ ಟೇಲರ್ ಎಂಬ ಬ್ರಿಟಿಷ್ ಅಧಿಕಾರಿ ಬರೆದ ಕೃತಿಯ ಕನ್ನಡ ಅನುವಾದ ‘ಠಕ್ಕನೊಬ್ಬನ ಆತ್ಮಚರಿತ್ರೆ’ಯಲ್ಲಿ, 18-19ನೇ ಶತಮಾನದಲ್ಲಿ ಭಾರತದಲ್ಲಿ ವ್ಯಾಪಾರಿಗಳನ್ನು ದೋಚಿ ಕೊಲೆ ಮಾಡುತ್ತಿದ್ದ ಠಕ್ಕರು ಇದನ್ನು ಮನೆಮಂದಿಗೂ ಗೊತ್ತಾಗದಂತೆ ನಿಭಾಯಿ ಸುತ್ತಿದ್ದುದೂ ಅಲ್ಲದೆ, ಕೆಲವರು ಆ ಹಣದಲ್ಲೇ ಸೈನ್ಯ ಕಟ್ಟಿ ಸಣ್ಣಪುಟ್ಟ ರಾಜರೆನಿಸಿಕೊಂಡ ವಿವರವಿದೆ.ಕ್ರಿ.ಶ.ಸು.920ರ ‘ವಡ್ಡಾರಾಧನೆ’ಯಲ್ಲಿ ಕಳ್ಳತನದಲ್ಲಿನ ಹಲವು ತಂತ್ರಗಳಲ್ಲಿ ಪರಿಣತಿ ಪಡೆಯುವ ತಸ್ಕರಶಾಸ್ತ್ರದ ಉಲ್ಲೇಖ ಬರುತ್ತದೆ. ಈ ಶಾಸ್ತ್ರ ಕಲಿತವನನ್ನು ತಳವಾರಿಕೆಯಲ್ಲಿ ತರಬೇತಿ ಪಡೆದವನು ಹಿಡಿದರೂ ಸಾಬೀತು ಪಡಿಸಲಾಗದ ವ್ಯಂಗ್ಯ ‘ವಿದ್ಯುತ್‍ಚೋರನೆಂಬ ರಿಸಿಯ ಕತೆ’ಯಲ್ಲಿ ಬರುತ್ತದೆ. ಋಷಿಗಳು ಚೋರರೇ, ಚೋರರು ಋಷಿಗಳೇ ಎಂಬ ಕಲಸುಮೇಲೋಗರದ ಸಾಮಾಜಿಕ ಸನ್ನಿವೇಶಕ್ಕೆ ಪ್ರತಿಮೆಯಂತೆ ಇವುಗಳನ್ನು ನೋಡಬಹುದು ಎಂಬುದಕ್ಕೆ ನಮ್ಮ ಸುತ್ತಲಿನ ಜಗತ್ತೇ ಸಾಕ್ಷಿ.

ಮುಖವಾಡಗಳಲ್ಲಿರುವ ನಾನಾ ಚೋರರಿಗೆ ಸಿಗುತ್ತಿರುವ ಮನ್ನಣೆಯು ಹುಟ್ಟಿಸುವ ಮೋಹದಿಂದ ಗಂಡು, ಹೆಣ್ಣು, ಆ ಜಾತಿ ಈ ಜಾತಿ ಎಂಬ ಭೇದವಿಲ್ಲದೆ ಎಲ್ಲರೂ ಪ್ರಭಾವಿತರೇ. ಇಂದಿನ ಮಾರುಕಟ್ಟೆ ಪ್ರಣೀತ ಆರ್ಥಿಕತೆ ಮತ್ತು ಅದನ್ನು ಬೆಂಬಲಿಸುವ ಹಲವಾರು ರೀತಿಯ ಮಾಧ್ಯಮಗಳು ಹೇಗಾದರೂ ಸರಿಯೇ,ಕುಬೇರರೆನಿಸಿಕೊಂಡರೆ ಸಾಕು ಬೀಸಣಿಗೆ ಹಿಡಿದು, ನಡುಬಗ್ಗಿಸಿ ಹಾಜರಾಗುತ್ತಿರುವಾಗ ಮತ್ತು ಅಂತಹವರೇ ಕಾಣದಂತೆ ಅಧಿಕಾರ ಸೂತ್ರ ಹಿಡಿಯುವಾಗ, ಇದೇ ಬದುಕಿನ ಯಶಸ್ಸು ಎನಿಸಿಕೊಂಡಿರುವಾಗ ಇದಕ್ಕೆ ಉಘೇ ಉಘೇ ಎನ್ನದಿರಲಾದೀತೇ?

ಈ ಸುಳ್ಳಿನ ದಾರಿಯಿಂದ ಬಿಡುಗಡೆಗಾಗಿ ಎಲ್ಲ ಅಧಿಕಾರ ಕೇಂದ್ರಗಳನ್ನು ವರ್ಜಿಸಿ ಸ್ವಯಂ ಬುದ್ಧರಾಗುವ ತಿಳಿವನ್ನು ತೋರಿದ ಬುದ್ಧನಾಗಲೀ, ಶ್ರೀಮಂತಿಕೆಯ ಸಾಂಸ್ಥಿಕತೆಯನ್ನು ನಿರಾಕರಿಸಿದ ಶರಣರಾಗಲೀ ಇಂತಹ ವರ ಕೈಯಲ್ಲಿ ಉರುಳಿಸುವ ದಾಳಗಳಾಗಿದ್ದಾರೆ. ಹೀಗಿರು ವಲ್ಲಿ ಸಾಮಾಜಿಕ ಉನ್ನತಿಯ ಪ್ರತೀಕಗಳಾಗಬೇಕಾದ ವಿಶ್ವವಿದ್ಯಾಲಯಗಳಲ್ಲಿ ಪ್ರಾಜ್ಞರನ್ನು ಬೆಪ್ಪರಂತೆಯೂ ಬೆಪ್ಪರನ್ನು ಪ್ರಾಜ್ಞರಂತೆಯೂ ನಡೆಸಿಕೊಳ್ಳುವ ಸನ್ನಿವೇಶ ಎದುರಾಗಿರುವುದು ಮತ್ತದರ ಪರಿಣಾಮ ವಿದ್ಯಾರ್ಥಿಗಳ ಮೇಲಾಗುವುದು ಸಾಮಾಜಿಕ ರೋಗದ ಉಲ್ಬಣಾವಸ್ಥೆಯ ದ್ಯೋತಕ ಅಷ್ಟೇ.

ಲೇಖಕಿ: ಪ್ರಾಧ್ಯಾಪಕಿ, ಸರ್ಕಾರಿ ಪ್ರಥಮ ದರ್ಜೆಕಾಲೇಜು, ತರೀಕೆರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.