ADVERTISEMENT

ವಿಶ್ಲೇಷಣೆ: ಮಲೆನಾಡಿನಲ್ಲಿ ಶ್ವಾನ ಸುನಾಮಿ

ನಾಯಿಗಳಿಂದ ಕಂಟಕ ಎದುರಿಸುತ್ತಿರುವ ಕೆಲವು ವನ್ಯಜೀವಿಗಳು ಅವನತಿಯತ್ತ ಸಾಗುತ್ತಿವೆ

ಅಖಿಲೇಶ್ ಚಿಪ್ಪಳಿ
Published 20 ಸೆಪ್ಟೆಂಬರ್ 2021, 19:03 IST
Last Updated 20 ಸೆಪ್ಟೆಂಬರ್ 2021, 19:03 IST
   

ಮಲೆನಾಡಿನ ವನ್ಯಜೀವಿಗಳಿಗೆ ಆಪತ್ತು ತಪ್ಪಿದ್ದಲ್ಲ. ಮಾಂಸಕ್ಕಾಗಿ ಮತ್ತು ಚರ್ಮಕ್ಕಾಗಿ ಜಿಂಕೆ, ಕಡವೆ, ಕಾನುಕುರಿಯಂತಹ ಪ್ರಾಣಿಗಳನ್ನು ಕೊಲ್ಲಲಾಗುತ್ತಿದೆ. ಸಿಗುವ ಮುಷ್ಟಿ ಮಾಂಸಕ್ಕಾಗಿ ಹಾರುಬೆಕ್ಕು, ಕಬ್ಬೆಕ್ಕುಗಳು, ಪಕ್ಷಿಗಳು ಅಳಿಯುತ್ತಿವೆ. ಮರದ ಪೊಟರೆ ಹೊಕ್ಕ ಉಡವನ್ನು ಕೊಲ್ಲಲು ಇಡೀ ಮರಕ್ಕೆ ಬೆಂಕಿ ಹಚ್ಚಲಾಗುತ್ತದೆ. ರಾತ್ರಿ ವೇಳೆ ಸಂಚರಿಸುವ ಜಿಂಕೆಗಳನ್ನು ಬೇಟೆಯಾಡಲು ಹಲವು ತಂತ್ರಗಳನ್ನು ಬಳಸಲಾಗುತ್ತದೆ. ಅದರಲ್ಲಿ ಉರುಳು ಹಾಕುವುದು, ಹೊಂಚು ಕುಳಿತು ಬೇಟೆಯಾಡುವುದು, ನೆಲಕ್ಕೆ ಬಿದ್ದ ಹಣ್ಣುಗಳನ್ನು ತಿನ್ನಲು ಬರುವ ಕಾನುಕುರಿಗಳನ್ನು ಹೊಡೆದು ತಿನ್ನುವುದು... ಹೀಗೆ ಮನುಷ್ಯ ತನ್ನ ಬಾಯಿ ಚಪಲಕ್ಕಾಗಿ ಏನೆಲ್ಲಾ ಮಾಡುತ್ತಾನೆ.

ಮಲೆನಾಡಿನ ಕೆಲ ಭಾಗಗಳಲ್ಲಿ, ಸಾಕಿದ ಜಾನುವಾರುಗಳ ಕೊರಳಿಗೆ ಗಂಟೆ ಕಟ್ಟಿ ರಾತ್ರಿ ಕಾಡಿಗೆ ಬಿಡುತ್ತಾರೆ. ಅಪಾಯಕಾರಿಯಲ್ಲದ ದನ ಮೇಯಲು ಬಂದಿದೆ ಎಂದಷ್ಟೇ ವನ್ಯಜೀವಿಗಳಿಗೆ ತಿಳಿಯುತ್ತದೆ. ದನದ ಪಕ್ಕದಲ್ಲೇ ಕೋವಿ ಹಿಡಿದ ಬೇಟೆಗಾರನಿದ್ದಾನೆ ಎಂಬ ಅರಿವಿಲ್ಲದ ಜಿಂಕೆ ಗುಂಡಿಗೆ ಬಲಿಯಾಗುತ್ತದೆ. ನಾಯಿಗಳನ್ನು ಸಾಕಿ ಅವುಗಳಿಗೆ ಬೇಟೆಯಾಡುವ ತರಬೇತಿ ಕೊಡುವುದು ಮತ್ತೊಂದು ವಿಧ.

ಮನೆಯಲ್ಲಿ ಸಾಕಿದ ನಾಯಿಗಳಿಗೆ ಹೊತ್ತಿಗೆ ಸರಿಯಾಗಿ ಆಹಾರ ಸಿಗುತ್ತದೆ. ಆದರೆ ಬೀಡಾಡಿ ನಾಯಿಗಳು ತಮ್ಮ ಆಹಾರವನ್ನು ತಾವೇ ಹುಡುಕಿಕೊಳ್ಳಬೇಕು. ಮಹಾನಗರ, ನಗರ, ಪೇಟೆ ಪಟ್ಟಣಗಳಲ್ಲಿ ಮನುಷ್ಯ ಬಿಸಾಡಿದ ಆಹಾರವಾದರೂ ಸಿಕ್ಕೀತು, ಮಾಂಸದ ಅಂಗಡಿಗಳ ಉಳಿಕೆ ತಿಂದು ಬದುಕುವ ಗಡವ ನಾಯಿಗಳು ಚಿಕ್ಕ ಮಕ್ಕಳನ್ನು ಹಿಡಿದು ತಿಂದ ಉದಾಹರಣೆಗಳು ಬೆಂಗಳೂರಿನಲ್ಲಿ ಸಿಗುತ್ತವೆ. ಹಳ್ಳಿ ಪ್ರದೇಶಗಳಲ್ಲಿ ಮಾತ್ರ ಪರಿಸ್ಥಿತಿ ಕೊಂಚ ಗಂಭೀರವಾಗಿದೆ. ಮೂರು– ನಾಲ್ಕು ನಾಯಿಗಳು ಕಾಡಿಗೆ ನುಗ್ಗಿ ಆಹಾರ ಹುಡುಕುತ್ತವೆ. ಆಕಸ್ಮಿಕವಾಗಿ ಜಿಂಕೆಯೋ ಕಾನುಕುರಿಯೋ ಎದುರಾದರೆ, ಅದರ ಕಥೆ ಮುಗಿದಂತೆ.

ADVERTISEMENT

ಗುಂಡಿನೇಟಿಗೆ ಬಲಿ ನೆಲಕ್ಕೆ ಬೀಳುತ್ತಿದ್ದಂತೆ, ಸಾಕಿದ ಬೇಟೆನಾಯಿಗಳು ಹೋಗಿ ಕತ್ತಿಗೆ ಬಾಯಿ ಹಾಕಿ ಕೊಲ್ಲುತ್ತವೆ. ಮಂಗಗಳ ಹಾವಳಿಯನ್ನು ತಡೆಯಲು ರೈತರು ಅವುಗಳನ್ನು ಬೆದರಿಸಲು ಮತ್ತು ಕೊಲ್ಲಲು ತಳವಾರ ಎಂಬುವನನ್ನು ನೇಮಿಸಿಕೊಳ್ಳುತ್ತಾರೆ. ದಿನವಿಡೀ ತೋಟ ಮತ್ತು ತೋಟದ ಮೇಲ್ಭಾಗದಲ್ಲಿ ತಿರುಗಾಡುವ ಈ ತಳವಾರನೆಂಬ ಬೇಟೆಗಾರ ಮಂಗನನ್ನು ಮಾತ್ರ ಕೊಲ್ಲುವುದಿಲ್ಲ. ಅವನ ಕೋವಿಯ ನೇರಕ್ಕೆ ಸಿಕ್ಕ ಇತರ ವನ್ಯಪ್ರಾಣಿಗಳ ಹತ್ಯೆಯೂ ಆಗುತ್ತದೆ. ತನ್ನ ಅನುಕೂಲಕ್ಕಾಗಿ ತಳವಾರನೂ ಒಂದು ಅಥವಾ ಎರಡು ಬೇಟೆನಾಯಿಗಳನ್ನು ಸಾಕಿಕೊಂಡಿರುತ್ತಾನೆ.

ನಾಯಿಗಳಿಂದ ತಪ್ಪಿಸಿಕೊಳ್ಳುವ ಪ್ರಯತ್ನದಲ್ಲಿ ಕೆಲವೊಮ್ಮೆ ಜಿಂಕೆ, ಕಾಡುಕುರಿಗಳು ಊರಿಗೆ ಬರುವುದಿದೆ. ಆಗ ಯಾರಾದರೂ ಆ ಪ್ರಾಣಿಯನ್ನು ರಕ್ಷಣೆ ಮಾಡಬಹುದು ಅಥವಾ ಅನಾಯಾಸವಾಗಿ ಲಭಿಸಿದ ಪ್ರಾಣಿಯು ಅವರ ಒಲೆಯ ಮೇಲಿನ ಎಸರೂ ಆಗಬಹುದು. ಹೆಗ್ಗೋಡಿನ ಸಮೀಪದ ಆಶ್ರಮವೊಂದರಲ್ಲಿ ತೋಳಗಳು ಬಂದು ಜಿಂಕೆಯನ್ನು ಹಿಡಿದಿವೆ, ಜಿಂಕೆ ಸತ್ತುಹೋಗಿದೆ, ದಯವಿಟ್ಟು ಅರಣ್ಯ ಇಲಾಖೆಗೆ ಮಾಹಿತಿ ಕೊಡಿ ಎಂದೊಬ್ಬರು ಇತ್ತೀಚೆಗೆ ಕರೆ ಮಾಡಿದರು. ನಮ್ಮಲ್ಲಿ ತೋಳಗಳು ಇಲ್ಲವೇ ಇಲ್ಲ. ತೋಳದಂತಹ ಬೀಡಾಡಿ ನಾಯಿಯೋ ಅಥವಾ ಸಾಕಿದ ಬೇಟೆನಾಯಿಯೋ ಜಿಂಕೆಯನ್ನು ಕೊಂದಿರಬೇಕು ಎಂದು ಊಹಿಸಿ, ಇಲಾಖೆಗೆ ಕರೆ ಮಾಡಿ ವಿಷಯ ತಿಳಿಸಿದೆ. ನಿಯಮದ ಪ್ರಕಾರ, ಜಿಂಕೆಯ ಮರಣೋತ್ತರ ಪರೀಕ್ಷೆ ನಡೆಸಿ, ಅದನ್ನು ಸುಟ್ಟು ಹಾಕಿದರು ಅನ್ನಿ.

ವನ್ಯಜೀವಿ ಬೇಟೆ ಪ್ರಕರಣಗಳಲ್ಲಿ ಪತ್ತೆಯಾಗಿ ವರದಿಯಾಗುವುದು ಶೇ 1ರಷ್ಟು ಮಾತ್ರ. ಇನ್ನುಳಿದಶೇ 99ರಷ್ಟು ಪ್ರಕರಣಗಳು ಪತ್ತೆಯಾಗುವುದೇ ಇಲ್ಲ ಅಥವಾ ಸೀಮಿತವಾಗಿ ಪತ್ತೆಯಾದರೂ ಅವು ವರದಿಯಾಗುವುದಿಲ್ಲ. ವನ್ಯಜೀವಿಗಳನ್ನು ಕೊಲ್ಲುವುದು ಅಪರಾಧವಾದ್ದರಿಂದ, ಹಳ್ಳಿಯಲ್ಲಿ ಅದರ ಕುರಿತು ಯಾರೂ ವಿಷಯ ಬಹಿರಂಗ ಮಾಡುವುದಿಲ್ಲ. ಶಿವಮೊಗ್ಗದ ಮಂಡಗದ್ದೆ ಮೀಸಲು ಅರಣ್ಯದ ಸುತ್ತಮುತ್ತಲ ಪುರದಾಳು, ಕವಲಪುರ, ಉಂಬ್ಳೇಬೈಲ್ ಗಣೇದಾಳು, ಮಾರಿದಿಬ್ಬ, ಲಕ್ಕಿನಕೊಪ್ಪ, ಕಡೇಕಲ್ ಊರುಗಳಲ್ಲಿ ಬೇಟೆಯಾಡಲು ಹೊಸದೊಂದು ವಿಧಾನವನ್ನೇ ಕಂಡುಕೊಂಡಿದ್ದಾರೆ. ಪಳಗಿಸಿದ ಬೇಟೆ ನಾಯಿಗಳನ್ನು ಕಾಡಿನೊಳಕ್ಕೆ ಕರೆದೊಯ್ಯುತ್ತಾರೆ. ಗೊರಸುಳ್ಳ ಪ್ರಾಣಿಗಳಾದ ಜಿಂಕೆ, ಕಾನುಕುರಿ, ಹಂದಿ ಇವುಗಳ ಇರುವನ್ನು ಪತ್ತೆ ಹಚ್ಚುವ ನಾಯಿಗಳ ದಂಡು, ಬಲಿಪ್ರಾಣಿಯ ಮೇಲೆ ಮುಗಿಬಿದ್ದು ಕತ್ತಿಗೇ ಬಾಯಿಹಾಕುತ್ತದೆ. ಅದು ಜೀವ ಬಿಡುವುದರೊಳಗಾಗಿ ಬೇಟೆಗಾರರು ಬಲಿಪ್ರಾಣಿಯನ್ನು ಕತ್ತರಿಸುತ್ತಾರೆ. ಗುಂಡಿನ ಶಬ್ದವಿಲ್ಲ, ಅರಣ್ಯಾಧಿಕಾರಿಗಳ ಭಯವಿಲ್ಲ. ಆಕಸ್ಮಿಕವಾಗಿ ಸಿಕ್ಕಿಬಿದ್ದರೂ ಸಾಕಿದ ನಾಯಿಗಳು ಹಿಡಿದಿವೆ ಎಂದು ತಪ್ಪಿಸಿಕೊಳ್ಳುವ ಹುನ್ನಾರ. ಹಲವು ಬಾರಿ ಇಲಾಖೆಯ ತಳಮಟ್ಟದ ನೌಕರರು ಅದರಲ್ಲಿ ಪಾಲು ಪಡೆದುಕೊಂಡು ಅವರನ್ನು ಬಿಡುವುದೂ ಇದೆ.

ಸಾಕಿದ ಬೇಟೆನಾಯಿಗಳಾಗಲೀ ಬೀದಿ ನಾಯಿಗಳಾಗಲೀ ಕೆನೈನ್ ವೈರಲ್ ಡಿಸೀಸ್ (ಸಿ.ವಿ.ಡಿ.) ರೋಗವನ್ನು ಕಾಡುಪ್ರಾಣಿಗಳಿಗೆ ಹಬ್ಬಿಸುವ ಬಹುದೊಡ್ಡ ಅಪಾಯವಿದೆ. ಇತ್ತೀಚೆಗೆ, ಇದೇ ರೋಗದಿಂದ ಗುಜರಾತಿನಲ್ಲಿ 12 ಸಿಂಹಗಳು ಸತ್ತಿದ್ದನ್ನು ಸ್ಮರಿಸಬಹುದು. ಬಲುಬೇಗ ಸಾಂಕ್ರಾಮಿಕಗೊಳ್ಳುವ ಈ ರೋಗ ಒಂದು ಪ್ರದೇಶದ ವನ್ಯಸಂತತಿಯನ್ನೇ ನಿರ್ನಾಮ ಮಾಡುವಷ್ಟು ಅಪಾಯಕಾರಿಯಾಗಿದೆ.

ಮಹಾನಗರಗಳಲ್ಲಿ ನಾಯಿಗಳನ್ನು ಸಾಕುವವರು ಕೆಲವು ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕಾಗುತ್ತದೆ. ನಾಯಿಯನ್ನು ವಾಯುವಿಹಾರಕ್ಕೆ ಚೈನ್ ಹಾಕಿಯೇ ಕರೆದೊಯ್ಯಬೇಕು. ಕಾಲಕಾಲಕ್ಕೆ ರೇಬಿಸ್ ಚುಚ್ಚುಮದ್ದು ಕೊಡಿಸುವುದು, ಅದನ್ನು ಮನೆಯ ಸದಸ್ಯನೆಂದೇ ಪರಿಗಣಿಸುವುದು ಇವೆಲ್ಲಾ ನಿಯಮಗಳಲ್ಲಿ ಇವೆ. ಬಿಡಿ, ಇವೆಲ್ಲಾ ಮಹಾನಗರಗಳಲ್ಲಿ ಸಾಕಿದ ಗಣ್ಯ ನಾಯಿಗಳ ಕಥೆಯಾಯಿತು. ಬೀದಿನಾಯಿಗಳ ಪಾಡೇನು? ಭಾರತದಲ್ಲಿ ಹತ್ತಿರ ನಾಲ್ಕು ಕೋಟಿ ಬೀಡಾಡಿ ನಾಯಿಗಳಿವೆ ಎಂದು ವರದಿ ಹೇಳುತ್ತದೆ. ಹಾಗೆಯೇ ರೇಬಿಸ್ ಕಾಯಿಲೆಯಿಂದ ವಿಶ್ವದಲ್ಲೇ ಅತಿ ಹೆಚ್ಚು ಬಲಿಯಾಗುವವರ ಸಂಖ್ಯೆ ಭಾರತದ್ದೇ ಆಗಿದೆ. ವರ್ಷಕ್ಕೆ 20 ಸಾವಿರ ಸಾವುಗಳು ರೇಬಿಸ್‍ನಿಂದ ಸಂಭವಿಸುತ್ತವೆ. ಇದರಲ್ಲಿ, ಅರ್ಧಭಾಗ ಹದಿನೈದು ವರ್ಷಕ್ಕಿಂತ ಕಡಿಮೆ ವಯಸ್ಸಿನವರದು.

ಅಖಿಲೇಶ್ ಚಿಪ್ಪಳಿ

ಹಿಂದೆಲ್ಲಾ ಬೀಡಾಡಿ ನಾಯಿಗಳ ಸಂಖ್ಯೆ ಮಿತಿಮೀರಿದಾಗ, ಸ್ಥಳೀಯ ಆಡಳಿತದವರು ಅವುಗಳನ್ನು ಬಹಳ ಕ್ರೂರತನದಿಂದ ಕೊಲ್ಲಿಸುತ್ತಿದ್ದರು. ಬೀಡಾಡಿ ನಾಯಿಗೆ ಆಹಾರದ ಆಮಿಷ ತೋರಿಸಿ, ಹತ್ತಿರ ಬರುತ್ತಿದ್ದಂತೆ, ದೊಣ್ಣೆಯಿಂದ ಅದರ ತಲೆಗೆ ಬಲವಾಗಿ ಹೊಡೆಯುತ್ತಿದ್ದರು, ಬಳಿಕ ಶವವನ್ನು ಗಾಡಿಗೆ ಎಸೆಯುತ್ತಿದ್ದರು. ಹತ್ತಾರು ಶವಗಳನ್ನು ಊರಿನ ಹೊರಭಾಗದಲ್ಲಿ ಹುಗಿಯಲಾಗುತ್ತಿತ್ತು. ಪ್ರಾಣಿಪ್ರಿಯರ ಆಕ್ರೋಶದ ನಂತರದಲ್ಲಿ ನೋವಿಲ್ಲದೇ ಸಾಯಿಸುವ ವಿಧಾನ ಬಂತು. ಬಹಳ ಚಾಕಚಕ್ಯತೆಯಿಂದ ನಾಯಿಯ ಕೊರಳಿಗೆ ಹಗ್ಗ ಹಾಕಿ ಹಿಡಿದುಕೊಳ್ಳುವುದು, ಮತ್ತೊಬ್ಬ ಅದರ ಹಿಂಭಾಗಕ್ಕೆ ಸಾವಿನ ಚುಚ್ಚುಮದ್ದು ಕೊಡುವುದು. ಇದೂ ತಪ್ಪು ಎಂಬ ಆಕ್ರೋಶ ವ್ಯಕ್ತವಾದ ನಂತರ ಸಂತಾನಶಕ್ತಿಹರಣ ಚಿಕಿತ್ಸಾ ಪದ್ಧತಿ ಜಾರಿಗೆ ಬಂತು. ಶಸ್ತ್ರಚಿಕಿತ್ಸೆ ನಂತರ ಅದರ ಗಾಯ ಮಾಯುವ ತನಕ ಸಾಕುವ ಜವಾಬ್ದಾರಿ ಸ್ಥಳೀಯ ಸಂಸ್ಥೆಗಳ ಸಿಬ್ಬಂದಿಯ ಮೇಲೆ ಬಿತ್ತು. ಎಚ್ಚರವಾದ ನಂತರದಲ್ಲಿ ಬೀಡಾಡಿ ನಾಯಿಗಳು ಬಹಳ ಆಕ್ರಮಣಕಾರಿ ವರ್ತನೆ ತೋರುತ್ತವೆ. ಆಹಾರ ನೀಡಲು ಹೋದವರನ್ನೇ ಕಚ್ಚಿದ ಉದಾಹರಣೆಗಳೂ ಇವೆ. ಈ ಪದ್ಧತಿಯೂ ಹೆಚ್ಚಿನ ಫಲ ನೀಡಲಿಲ್ಲ.

ಸಾಕುನಾಯಿಗಳ ನಿಯಂತ್ರಣ ಮತ್ತು ನಿರ್ವಹಣೆ ಹಳ್ಳಿಗಾಡಿನ ಮಟ್ಟಕ್ಕೂ ವಿಸ್ತರಣೆಯಾಗಬೇಕು. ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಸಾಕು ಮತ್ತು ಬೀಡಾಡಿ ನಾಯಿ ನಿರ್ವಹಣಾ ಸಮಿತಿ ರಚನೆಯಾಗಬೇಕು. ಮೀಸಲು ಅರಣ್ಯ, ರಕ್ಷಿತಾರಣ್ಯ, ಅಭಯಾರಣ್ಯಗಳಲ್ಲಿ ವನ್ಯಜೀವಿ ನಿರ್ವಹಣೆ ಕಾರ್ಯಸೂಚಿಯಲ್ಲಿ ನಾಯಿ ದಾಳಿ ಮತ್ತು ಅದರಿಂದಾಗುವ ವನ್ಯಸಂಪತ್ತಿನ ನಾಶದ ಕುರಿತಾಗಿ, ಬೇಟೆ ಮತ್ತು ಬೀಡಾಡಿ ನಾಯಿಗಳ ನಿಯಂತ್ರಣಕ್ಕಾಗಿ ಪ್ರತ್ಯೇಕ ಶಾಸನ ರೂಪಿಸಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಶ್ವಾನ ಸುನಾಮಿಯಿಂದಾಗಿ ವನ್ಯಜೀವಿಗಳ ಅದರಲ್ಲೂ ಗೊರಸುಳ್ಳ ಪ್ರಾಣಿಗಳ ಸಂಖ್ಯೆ ವಿಪರೀತ ಕಡಿಮೆಯಾಗಲಿದೆ.

ಕಾಡಿನ ಸ್ವಾಭಾವಿಕ ಬೇಟೆಪ್ರಾಣಿಗಳಾದ ಹುಲಿ, ಚಿರತೆ, ಹೈನಾ, ತೋಳಗಳಿಗೆ ಬಲಿಪ್ರಾಣಿಗಳ ಕೊರತೆಯಾಗಿ ಮತ್ತಷ್ಟು ಮಾನವ-ವನ್ಯಜೀವಿ ಸಂಘರ್ಷಕ್ಕೆ ಕಾರಣವಾಗುವ ಅಪಾಯವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.