ADVERTISEMENT

ವಿಶ್ಲೇಷಣೆ: ಎಥನಾಲ್ ಇಂಧನ; ಏಕೆ ಮಣೆ?

ಉಷ್ಣವರ್ಧಕ ಅನಿಲ ನಿಯಂತ್ರಣ ಕುರಿತು ಭಾರತ ಸ್ಪಷ್ಟ ನಿರ್ಧಾರ ತಳೆಯಬೇಕಾಗಿದೆ

ಟಿ.ಆರ್.ಅನಂತರಾಮು
Published 2 ಜುಲೈ 2021, 18:52 IST
Last Updated 2 ಜುಲೈ 2021, 18:52 IST
   

ಪರಿಸರಕ್ಕೆ ಹಾನಿಯಾಗದ, ಸುಸ್ಥಿರ ಅಭಿವೃದ್ಧಿಗೆ ನೆಚ್ಚಬಹುದಾದ ಶಕ್ತಿಮೂಲಗಳಿಗಾಗಿ ಎಲ್ಲ ದೇಶಗಳೂ ಹುಡುಕಾಟ ನಡೆಸಿವೆ. ಹಸಿರು ಶಕ್ತಿ ಎನ್ನುವುದು ಈ ಪರಿಕಲ್ಪನೆಯ ಒಂದು ಭಾಗವೇ. ಈ ಹುಡುಕಾಟದಲ್ಲಿ ಬಹುತೇಕ ದೇಶಗಳಿಗೆ, ಹೆಚ್ಚು ಶ್ರಮವಿಲ್ಲದೆ ಸಿಕ್ಕಿದ್ದು ಎಥನಾಲ್.

ಎಥನಾಲ್ ಉತ್ಪನ್ನ ಹೊಸತೇನಲ್ಲ. ಶಕ್ತಿಯ ಆಕರವಾಗಿ ಬಳಸಬಹುದೆಂದು ಕಂಡುಕೊಂಡದ್ದು ಇತ್ತೀಚೆಗೆ ಅಷ್ಟೇ. ಕಬ್ಬಿನಹಾಲಿನಲ್ಲಿ ಸಕ್ಕರೆ ಮಾಡುವಾಗ ಕಾಕಂಬಿಯೂ ಬರುತ್ತದೆ. ಅದು ಕಂದು ಬಣ್ಣದ ಸಿಹಿ ಪಾಕ. ಇದನ್ನು ಬಟ್ಟಿ ಇಳಿಸಿ ಪಡೆಯುವುದೇ ಎಥನಾಲ್. ಕಾಕಂಬಿಯಿಂದ ಬೆಲ್ಲ ತೆಗೆಯುವುದು ರೈತರಿಗೆ ಗೊತ್ತು. ಆದರೆ ಎಥನಾಲ್ ಎಂಬ ಇಂಧನವನ್ನೂ ಇದರಿಂದ ಪಡೆಯಬಹುದೆಂದು, ವಾಣಿಜ್ಯಿಕವಾಗಿ ಅದರ ಉತ್ಪಾದನೆ ಲಾಭದಾಯಕವೆಂದು ಕಂಡುಕೊಂಡದ್ದು ಕಳೆದ ಹತ್ತು– ಹದಿನೈದು ವರ್ಷಗಳ ಬೆಳವಣಿಗೆ.

ವಾಸ್ತವವಾಗಿ ಎಥನಾಲ್ ಅನ್ನು ಈಥೈಲ್ ಆಲ್ಕೊಹಾಲ್ ಎಂಬ ಹೆಸರಿನಲ್ಲಿ ಮದ್ಯಪಾನವಾಗಿ ಸೇವಿಸುವುದೂ ಉಂಟು. ಸ್ಯಾನಿಟೈಸರ್‌ನಲ್ಲೂ ಇದರ ಬಳಕೆಯುಂಟು. ಅದರಲ್ಲೂ ಕೋವಿಡ್ ವ್ಯಾಪಕವಾಗಿ ಹರಡಿರುವ ಈ ಸಂದರ್ಭದಲ್ಲಿ ಹಿಂದೆಂದಿಗಿಂತಲೂ ಇದಕ್ಕೆ ಹೆಚ್ಚು ಬೇಡಿಕೆ ಇದೆ. ಆದರೆ ಇಂಧನವಾಗಿ ಅದಕ್ಕಿರುವ ಕಿಮ್ಮತ್ತೇ ಬೇರೆ. ಅದು ಬೇಗ ಹೊತ್ತಿ ಉರಿಯುತ್ತದೆ, ಅಷ್ಟೇ ತ್ವರಿತವಾಗಿ ಬಾಷ್ಪವಾಗುತ್ತದೆ. ಬಣ್ಣರಹಿತ ದ್ರವ, ಸುಲಭವಾಗಿ ಪೆಟ್ರೋಲ್‍ನಲ್ಲಿ ವಿಲೀನವಾಗುತ್ತದೆ. ಎಥನಾಲ್ ಬೆರೆತ ಪೆಟ್ರೋಲ್, ಎಂಜಿನನ್ನು ಡಬ್ ಡಬ್ ಎಂದು ಒದೆಯುವುದಿಲ್ಲ. ಪೆಟ್ರೋಲ್, ಡೀಸೆಲ್ ಎಲ್ಲವೂ ಮಾಲಿನ್ಯಕಾರಕ ಎಂಬುದು ಈಗ ಸಾಬೀತಾಗಿರುವ ವಿಚಾರ. ವಿಶೇಷವಾಗಿ, ಅವುಗಳನ್ನು ಉರಿಸುವುದರಿಂದ ಕಾರ್ಬನ್ ಡೈ ಆಕ್ಸೈಡ್, ನೈಟ್ರಸ್ ಆಕ್ಸೈಡ್, ಹೈಡ್ರೊ ಕಾರ್ಬನ್‍ಗಳು ಅಧಿಕ ಉತ್ಪಾದನೆಯಾಗಿ ವಾಯುಗೋಳವನ್ನು ಹದಗೆಡಿಸಿವೆ, ಭೂತಾಪವನ್ನು ಹೆಚ್ಚಿಸಿವೆ ಎಂಬುದನ್ನು ಜಗತ್ತೇ ಬಲ್ಲದು. ಎಥನಾಲ್‍ಗೆ ಇಂಥ ದುರ್ಗುಣಗಳಿಲ್ಲ.

ADVERTISEMENT

ಬ್ರೆಜಿಲ್ ಈಗ ತಯಾರಿಸುತ್ತಿರುವ ಬಹುಪಾಲು ಗ್ಯಾಸೋಲಿನ್ ಕಾರುಗಳಿಗೆ ಶೇ 25ರಷ್ಟು ಭಾಗ ಎಥನಾಲ್ ಬಳಸಿ ಭರ್ಜರಿ ವಹಿವಾಟು ನಡೆಸುತ್ತಿದೆ. ಅಷ್ಟರಮಟ್ಟಿಗೆ ಪೆಟ್ರೋಲ್‍ನ ಉಳಿತಾಯವಾಗುತ್ತಿದೆ ಎಂದು ಹೇಳುತ್ತಿದೆ. ಆದರೆ ಎಥನಾಲ್ ಮೂಲವಾಗಿ ಸಂಪೂರ್ಣವಾಗಿ ಕಬ್ಬನ್ನೇ ಅದು ಆಶ್ರಯಿಸು ತ್ತಿದೆ. ಇದು ಇತರ ದೇಶಗಳಿಗೂ ಪೈಪೋಟಿಗಿಳಿಯಲು ಅವಕಾಶ ಒದಗಿಸಿದೆ.

ಇದೇ ಜೂನ್ 5ರ ವಿಶ್ವ ಪರಿಸರ ದಿನದಂದು ನಮ್ಮ ಕೇಂದ್ರ ಸರ್ಕಾರ ಬಹು ದೊಡ್ಡ ಸುದ್ದಿಯೊಂದನ್ನು ಬಿಡುಗಡೆ ಮಾಡಿತು. 2030ರ ಹೊತ್ತಿಗೆ ಭಾರತವು ಪೆಟ್ರೋಲ್‍ಗೆ ಶೇ 20ರಷ್ಟು ಭಾಗ ಎಥನಾಲನ್ನು ಕಡ್ಡಾಯವಾಗಿ ಬೆರೆಸಬೇಕೆಂಬ ತನ್ನ ನಿರ್ಧಾರವನ್ನು ಐದು ವರ್ಷ ಹಿಂದಕ್ಕೆ ಹಾಕಿ ಆದೇಶವೊಂದನ್ನು ಹೊರಡಿಸಿತು. ಇದರಲ್ಲಿ ಎರಡು ಅಂಶಗಳು ಮುನ್ನೆಲೆಗೆ ಬರುತ್ತವೆ. ಒಂದು, ಎಥನಾಲ್ ಉತ್ಪಾದನೆಯಿಂದ ಕಬ್ಬು ಬೆಳೆಯುವ ರೈತರಿಗೂ ಆದಾಯ ತರುವುದು, ಇನ್ನೊಂದು, ಪರಿಶುದ್ಧ ಶಕ್ತಿಯ ಮೂಲವಾಗಿ ಇದನ್ನು ಬಳಸುವುದರಿಂದ ಪೆಟ್ರೋಲ್ ಆಮದಿನಲ್ಲಿ ವಾರ್ಷಿಕ ₹ 30,000 ಕೋಟಿ ಉಳಿತಾಯ ಮಾಡುವುದು. 2020- 21ರ ಸಾಲಿನಲ್ಲಿ ಭಾರತವು ಪೆಟ್ರೋಲಿಯಂ ಉತ್ಪನ್ನದ ಆಮದಿಗಾಗಿ ₹1,81,681 ಕೋಟಿ ವ್ಯಯಿಸಿರುವುದನ್ನು ಪೆಟ್ರೋಲಿಯಂ ಸಚಿವಾಲಯವೇ ಬಹಿರಂಗಪಡಿಸಿದೆ.

ಭಾರತದಲ್ಲಿ ಪೆಟ್ರೋಲಿಯಂಗೆ ಶೇ 5 ಎಥನಾಲ್ ಬೆರೆಸುವುದನ್ನು ಕೇಂದ್ರ ಸರ್ಕಾರ 2003ರಲ್ಲೇ ಅನುಮೋದಿಸಿತ್ತು. ಕರ್ನಾಟಕವೂ ಸೇರಿದಂತೆ ಎಂಟು ರಾಜ್ಯಗಳಲ್ಲಿ ಮೊದಲ ಹಂತದಲ್ಲಿ ಅನುಷ್ಠಾನವೂ ಆಯಿತು. ಇದಕ್ಕೆ ಮುನ್ನ ಮಹಾರಾಷ್ಟ್ರ ಮತ್ತು ಉತ್ತರಪ್ರದೇಶದ ಮೂರು ಆಯ್ದ ಕೇಂದ್ರಗಳಲ್ಲಿ ಪ್ರಾಯೋಗಿಕ ಪರೀಕ್ಷೆಯೂ ನಡೆದು ಅದಕ್ಕೆ ಹಸಿರು ನಿಶಾನೆ ಸಿಕ್ಕಿತು. ಈಗ ಶೇ 20ರಷ್ಟು ಬೆರೆಸಬೇಕೆಂಬ ನಿರ್ಧಾರ ಅದರ ಮುಂದುವರಿದ ಭಾಗ ಅಷ್ಟೇ.

ಹಸಿರು ಇಂಧನ ಬಳಕೆ ಕುರಿತು ಜಾಗತಿಕವಾಗಿ ಭಾರತವೂ ಸೇರಿದಂತೆ ಬಹುತೇಕ ದೇಶಗಳು ಒತ್ತಡದಲ್ಲಿವೆ. ಹವಾಗುಣ ಬದಲಾವಣೆಗೆ ಕಾರಣವಾಗುವ ಉಷ್ಣವರ್ಧಕ ಅನಿಲಗಳ ನಿಯಂತ್ರಣ ಮಾಡಬೇಕಾಗಿರುವುದು ಈ ಒತ್ತಡದ ಹಿನ್ನೆಲೆಯಲ್ಲಿರುವ ನಿಜವಾದ ಕಾರಣ. ಭಾರತ ಕೂಡ ತನ್ನ ಸ್ಪಷ್ಟ ನಿರ್ಧಾರಗಳನ್ನು ಜಗತ್ತಿನ ಮುಂದೆ ಇಡಬೇಕಾದ ಅನಿವಾರ್ಯವೂ ಇದೆ.

ಕೇಂದ್ರ ಸರ್ಕಾರವು ನೀತಿ ಆಯೋಗಕ್ಕೆ ಈ ಹೊಣೆಯನ್ನು ಕೊಟ್ಟು ಸಮಿತಿಯನ್ನು ತ್ವರಿತವಾಗಿ ನೇಮಿಸುವ ಸೂಚನೆಯನ್ನು ಕೊಟ್ಟಿತ್ತು. ನೀತಿ ಆಯೋಗ ಕೇವಲ 75 ದಿನಗಳಲ್ಲಿ ವರದಿ ತಯಾರಿಸಿದೆ. ತೈಲ ಕಂಪನಿಗಳೇ ಅಲ್ಲದೆ ಸಾರಿಗೆ ಸಂಪರ್ಕ, ಭಾರಿ ವಾಹನ ತಯಾರಿಕಾ ಸಂಸ್ಥೆಗಳ ತಜ್ಞರು ಸೇರಿ ಚರ್ಚಿಸಿದ್ದಾರೆ. ಇದರ ಸಾಧಕ ಬಾಧಕಗಳನ್ನು ಗಣನೆಗೆ ತೆಗೆದುಕೊಳ್ಳಲಾಗಿದೆ. ಶೇ 20ರಷ್ಟು ಭಾಗ ಎಥನಾಲ್ ಬಳಸುವುದನ್ನು ಸಮಿತಿ ಸಮರ್ಥಿಸಿಕೊಂಡಿದೆ. ಆದರೆ ನೀತಿ ಆಯೋಗಕ್ಕೆ ಅನೇಕ ಸಮಸ್ಯೆಗಳು ಎದುರಾಗಿವೆ. ಕಬ್ಬಿನ ಮೂಲದಿಂದ ಎಥನಾಲ್ ಪಡೆಯುವುದು ತಾಂತ್ರಿಕವಾಗಿ ಸಮಸ್ಯೆಯೇ ಅಲ್ಲ, ಆದರೆ ಕಬ್ಬು ಮತ್ತು ಭತ್ತ ಇಡೀ ನೀರಾವರಿಯ ಶೇ 70ರಷ್ಟು ಭಾಗ ನೀರನ್ನು ಬೇಡುತ್ತವೆ. ಒಂದು ಟನ್ನು ಕಬ್ಬಿನಿಂದ 100 ಕೆ.ಜಿ. ಸಕ್ಕರೆ, 70 ಲೀಟರ್ ಎಥನಾಲನ್ನು ಉತ್ಪಾದಿಸಬಹುದು. ಆದರೆ ನೀರಿನ ಬಳಕೆಯ ಪ್ರಶ್ನೆ ಬಂದಾಗ, ಒಂದು ಲೀಟರ್ ಎಥನಾಲ್ ಪಡೆಯಲು 2,860 ಲೀಟರ್ ನೀರು ಬೇಕು. ಎಲ್ಲ ಕಡೆಯೂ ಅಣೆಕಟ್ಟು ಮತ್ತು ನದಿ ನೀರಿನ ಸೌಲಭ್ಯವಿಲ್ಲ. ಹಾಗಿದ್ದಲ್ಲಿ, ಅಂತರ್ಜಲ ಭಂಡಾರ ಬರಿದಾಗುವುದಿಲ್ಲವೇ?

ಇನ್ನೊಂದು ಪ್ರಶ್ನೆ ಎಥನಾಲ್ ಮೂಲಕ್ಕೇ ಸಂಬಂಧಿಸಿದ್ದು. ಎಥನಾಲ್ ಪಡೆಯಲು ಬರೀ ಕಬ್ಬನ್ನೇ ಮೂಲವಾಗಿ ಬಳಸಬೇಕಾಗಿಲ್ಲ. ಮೆಕ್ಕೆಜೋಳ, ಮುಗ್ಗಿದ ಗೋಧಿ, ಅಕ್ಕಿ ಮತ್ತು ಇತರ ಧಾನ್ಯಗಳಿಂದಲೂ ಎಥನಾಲನ್ನು ಪಡೆಯಬಹುದು. ಮುಗ್ಗಿದ ಅಕ್ಕಿ ಎಂದರೆ ಅದನ್ನು ಭಾರತ ಆಹಾರ ನಿಗಮದಿಂದ ಪಡೆಯಬೇಕು. ಅದು ಕೂಡ ಸರ್ಕಾರ ನಿಗದಿಪಡಿಸಿದ ಬೆಲೆಯಲ್ಲೇ ಕೊಳ್ಳಬೇಕು. ಇದರಲ್ಲಿ ಇನ್ನೂ ಒಂದು ಸಮಸ್ಯೆ ಸೇರಿಕೊಂಡಿದೆ. ಭಾರತ ತನ್ನ ಗೋದಾಮಿನಲ್ಲಿ ಇಷ್ಟೊಂದು ದವಸ, ಧಾನ್ಯವನ್ನು ಮುಗ್ಗಾಗಲು ಬಿಡುವಷ್ಟು ಶ್ರೀಮಂತ ರಾಷ್ಟ್ರವೇ?

ಸದ್ಯ ಸರ್ಕಾರ 70 ಸಕ್ಕರೆ ಕಾರ್ಖಾನೆಗಳಿಗೆ ಎಥನಾಲ್ ಬಟ್ಟಿ ಇಳಿಸುವ ಘಟಕಗಳ ಸ್ಥಾಪನೆಗಾಗಿ ಈ ವರ್ಷ ₹ 3,600 ಕೋಟಿ ಬಿಡುಗಡೆ ಮಾಡಿದೆ. ತಜ್ಞರ ಲೆಕ್ಕಾಚಾರದಂತೆ, ಪ್ರತೀ ಲೀಟರು ಎಥನಾಲನ್ನು ಉತ್ಪಾದನೆ ಮಾಡಲು ₹ 62 ಖರ್ಚು ಬರುತ್ತದೆ. ಅಮೆರಿಕ, ಬ್ರೆಜಿಲ್ ಮುಂತಾದ ದೇಶಗಳಲ್ಲಿ ಇದಕ್ಕಿಂತ ಅರ್ಧ ಖರ್ಚಿನಲ್ಲಿ ಉತ್ಪಾದನೆ ಮಾಡಬಹುದು. ಕಬ್ಬಿಗೆ ಹೆಚ್ಚಿಗೆ ಬೆಲೆ ತೆರಬೇಕೆಂದರೆ ಎಥನಾಲ್ ಬೆಲೆಯನ್ನೂ ಹೆಚ್ಚಿಸಲೇಬೇಕು. ಜೈವಿಕ ಇಂಧನಗಳ ಅಭಿವೃದ್ಧಿಗೆ ಇದೊಂದು ದೊಡ್ಡ ಸವಾಲು. ಇದರ ಜೊತೆಗೆ ಪೆಟ್ರೋಲ್‍ಗೆ ಅಬಕಾರಿ ಸುಂಕ ಅನ್ವಯಿಸುತ್ತದೆಯಾದರೆ, ಎಥನಾಲ್‍ಗೆ ಸದ್ಯ ಸರಕು ಸೇವಾ ತೆರಿಗೆ ಅನ್ವಯವಾಗುತ್ತಿದೆ. ಇದು ಕೂಡ ಧಾರಾಳ ಬಳಕೆಗೆ ಅಡ್ಡಿಯೇ.

ಹಾಗಿದ್ದರೆ 2025ರ ಹೊತ್ತಿಗೆ ಎಥನಾಲ್ ಉತ್ಪಾದನೆ ಯನ್ನು 684 ಕೋಟಿ ಲೀಟರಿಗೆ ಹೆಚ್ಚಿಸುವ ಬಗೆ ಹೇಗೆ? ಸದ್ಯದಲ್ಲಿ ಆಹಾರ ನಿಗಮದಲ್ಲಿ 40 ಲಕ್ಷ ಟನ್ನು ಮುಗ್ಗಿದ ಧಾನ್ಯವಿದೆ ಎಂದು ಸರ್ಕಾರವೇ ಲೆಕ್ಕ ಕೊಟ್ಟಿದೆ. ಉಳಿದೆಲ್ಲ ಎಥನಾಲ್ ಮೂಲಗಳನ್ನು ಸೇರಿಸಿದರೂ ಅದು ಕಬ್ಬಿನಿಂದ ಪಡೆಯುವ ಎಥನಾಲ್‍ಗೆ ಸಮವಾಗುವುದಿಲ್ಲ. ಇದೆಲ್ಲದರ ನಡುವೆಯೂ ಅದೇ ಪ್ರಶ್ನೆ ಏಳುತ್ತದೆ. ಶೇ 20ರಷ್ಟು ಭಾಗ ಎಥನಾಲನ್ನು ಗ್ಯಾಸೋಲಿನ್‍ಗೋ ಪೆಟ್ರೋಲ್‍ಗೋ ಬೆರೆಸಿ ವಾಹನಗಳಲ್ಲಿ ಬಳಸಿದರೆ ವಾಯುಮಾಲಿನ್ಯಕ್ಕೆ ಇದು ನಿಜಕ್ಕೂ ಪರಿಹಾರವೇ? ಪ್ರತೀ ದೇಶವೂ ಈಗ ಸಾಂಪ್ರದಾಯಿಕ ಇಂಧನ ಮೂಲಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು ಯೋಚಿಸುತ್ತಿದೆ. ಭಾರತದ ನಡೆ ಆ ದಿಸೆಯಲ್ಲಿರಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.