ADVERTISEMENT

ವಿಶ್ಲೇಷಣೆ | ಸಾಂಪ್ರದಾಯಿಕ ಜ್ಞಾನ: ಮಹತ್ವದ ದೀವಿಗೆ

ನಮ್ಮ ಪರಂಪರಾಗತ ಅರಿವನ್ನು ಕಾಪಿಡುತ್ತಿದೆ ‘ಸಾಂಪ್ರದಾಯಿಕ ಜ್ಞಾನದ ಡಿಜಿಟಲ್ ಲೈಬ್ರರಿ’

ಡಾ.ಎಚ್.ಆರ್.ಕೃಷ್ಣಮೂರ್ತಿ
Published 4 ಜುಲೈ 2021, 19:31 IST
Last Updated 4 ಜುಲೈ 2021, 19:31 IST
   

ಇಡೀ ದೇಶ ಕೋವಿಡ್ ಹಿಡಿತದಲ್ಲಿ ಸಿಲುಕಿ, ಅದನ್ನು ಸಮರ್ಥವಾಗಿ ಎದುರಿಸುವ ಪ್ರಯತ್ನದಲ್ಲಿ ನಿರತವಾಗಿರುವಾಗ, ಈ ವರ್ಷದ ಜನವರಿಯಲ್ಲಿ ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಮಂಡಳಿಯ (ಕೌನ್ಸಿಲ್ ಆಫ್ ಸೈಂಟಿಫಿಕ್ ಆ್ಯಂಡ್ ಇಂಡಸ್ಟ್ರಿಯಲ್ ರಿಸರ್ಚ್- ಸಿಎಸ್‍ಐಆರ್) ನೇತೃತ್ವದ ‘ಸಾಂಪ್ರದಾಯಿಕ ಜ್ಞಾನದ ಡಿಜಿಟಲ್ ಲೈಬ್ರರಿ’ (ಟ್ರೆಡಿಶನಲ್ ನಾಲೆಜ್ ಡಿಜಿಟಲ್ ಲೈಬ್ರರಿ- ಟಿಕೆಡಿಎಲ್) ಸದ್ದುಗದ್ದಲವಿಲ್ಲದೇ ತನ್ನ ಉತ್ಕೃಷ್ಟ ಕೆಲಸದ ಎರಡು ದಶಕಗಳನ್ನು ಪೂರೈಸಿದೆ.

ಈ ಅವಧಿಯಲ್ಲಿ, ನಮ್ಮ ದೇಶದ ಜೈವಿಕ ಸಂಪನ್ಮೂಲವನ್ನು ಆಧರಿಸಿ, ನಮಗೆ ತಿಳಿಯದಂತೆಯೇ ಬೇರೆ ಬೇರೆ ದೇಶಗಳಲ್ಲಿ ವಿದೇಶಿ ಕಂಪನಿಗಳು ಪಡೆದಿದ್ದ 239 ಪೇಟೆಂಟ್‍ಗಳನ್ನು ರದ್ದುಪಡಿಸುವ ಉತ್ತಮ ಕೆಲಸವನ್ನು ಸಿಎಸ್‍ಐಆರ್ ಮತ್ತು ಟಿಕೆಡಿಎಲ್‌ ಮಾಡಿವೆ.

ಸ್ಥಳೀಯ ಜನಸಮುದಾಯದ ಮಧ್ಯದಿಂದ, ಅಲ್ಲಿನ ಸಂಸ್ಕೃತಿಯ ಭಾಗವಾಗಿ ರೂಪುಗೊಂಡು, ಅಭಿವೃದ್ಧಿಯಾಗಿ, ಪರಂಪರಾಗತವಾಗಿ ಸಾಗಿಬಂದ ಅರಿವು, ಅನುಭವ, ಜಾಣ್ಮೆ, ಆಚರಣೆಗಳು, ಕೌಶಲ ಮುಂತಾದವುಗಳ ಒಟ್ಟು ಸಾರವೇ ಸಾಂಪ್ರದಾಯಿಕ ಜ್ಞಾನ. ಪ್ರಕೃತಿಯನ್ನು ಗೌರವಿಸುವ, ಸಂಪನ್ಮೂಲಗಳನ್ನು ಹಿತಮಿತವಾಗಿ ಬಳಸುವ, ವ್ಯಾಪಾರೀ ಮನೋಭಾವ ದಿಂದ ಮುಕ್ತವಾದ ಸಾಂಪ್ರದಾಯಿಕ ಜ್ಞಾನಕ್ಕೆ ಹೆಚ್ಚಿನ ಮಹತ್ವವಿದೆ.

ADVERTISEMENT

ಯಾವುದೇ ಸಂಶೋಧನೆಗೆ ಪೇಟೆಂಟ್ ದೊರೆಯ ಬೇಕಾದರೆ ಅದು ಮೂರು ಷರತ್ತುಗಳನ್ನು ಪೂರೈಸಬೇಕು. ಸಂಶೋಧನೆ ಹೊಸದಾಗಿರಬೇಕು, ಹೊಸ ಸೃಷ್ಟಿಯಲ್ಲಿ ಆವಿಷ್ಕಾರದ ಹೊಸ ಹೆಜ್ಜೆಯಿರಬೇಕು (ಇನ್ವೆಂಟಿವ್ ಸ್ಟೆಪ್) ಮತ್ತು ಆ ಸಂಶೋಧನೆಯು ಕೃಷಿ, ಕೈಗಾರಿಕೆ, ವೈದ್ಯಕೀಯ ಮುಂತಾದ ಕ್ಷೇತ್ರಗಳಲ್ಲಿ ಬಳಕೆಯಾಗುವಂತೆ ಇರಬೇಕು. ಇವುಗಳನ್ನು ನಾವೆಲ್ಟಿ, ನಾನ್ ಆಬ್‍ವಿಯಸ್‍ನೆಸ್ ಮತ್ತು ಯುಟಿಲಿಟಿಗಳೆಂದು ಕರೆಯುವುದು ವಾಡಿಕೆ. ಯಾವುದೇ ಸಂಶೋಧನೆಯ ಫಲಿತಾಂಶ ಈ ಮುಂಚೆಯೇ ಸಾರ್ವಜನಿಕವಾಗಿ ತಿಳಿದಿತ್ತು, ಸಾರ್ವಜನಿಕವಾಗಿ ಜನಬಳಕೆಯಲ್ಲಿ ಇತ್ತು ಎಂದಾದರೆ ಅದಕ್ಕೆ ಪೇಟೆಂಟ್ ದೊರೆಯುವುದಿಲ್ಲ. ಇದಕ್ಕೆ ‘ಪ್ರಿಯರ್ ಆರ್ಟ್’ ಎಂಬ ಹೆಸರಿದೆ.

1994ರಲ್ಲಿ ಯುರೋಪಿಯನ್ ಪೇಟೆಂಟ್ ಕಚೇರಿಯು ಅಮೆರಿಕದ ಕಂಪನಿಯೊಂದಕ್ಕೆ ಬೇವಿನ ಗಿಡದ ಶಿಲೀಂಧ್ರನಾಶಕ ಗುಣಕ್ಕೆ ಸಂಬಂಧಿಸಿದ ಸಂಶೋಧನೆಗೆ ಪೇಟೆಂಟ್ ನೀಡಿತು. 1995ರಲ್ಲಿ ಅಮೆರಿಕದ ಪೇಟೆಂಟ್ ಕಚೇರಿ ಅರಿಸಿನದ, ಗಾಯ ವಾಸಿ ಮಾಡುವ ಗುಣಕ್ಕೆ ಸಂಬಂಧಿಸಿದ ಸಂಶೋಧನೆಗೆ ಮಿಸಿಸಿಪಿ ವಿಶ್ವವಿದ್ಯಾಲಯದ ವೈದ್ಯಕೀಯ ಕೇಂದ್ರಕ್ಕೆ ಪೇಟೆಂಟನ್ನು ನೀಡಿತು. ಆದರೆ ಬೇವು ಮತ್ತು ಅರಿಸಿನದ ಈ ಗುಣಗಳು ನಮ್ಮ ಪರಂಪರಾಗತವಾದ ಸಾಂಪ್ರ ದಾಯಿಕ ಜ್ಞಾನದ ಅಂಗವಾಗಿ, ಸಾರ್ವಜನಿಕ ಸ್ವತ್ತಾಗಿ ಸಾವಿರಾರು ವರ್ಷಗಳಿಂದ ಬಳಕೆಯಲ್ಲಿ ಇದ್ದಂಥವು. ಅರ್ಥಾತ್ ಅವು ನಮ್ಮ ದೇಶದಲ್ಲಿ ಪ್ರಿಯರ್ ಆರ್ಟ್! ಹಾಗಿದ್ದರೆ ಅವುಗಳಿಗೆ ವಿದೇಶದಲ್ಲಿ ಪೇಟೆಂಟ್ ದೊರೆತದ್ದು ಹೇಗೆ? ಕಾರಣ ಬಹು ಸರಳ. ಯುರೋಪ್ ಮತ್ತು ಅಮೆರಿಕ ಸೇರಿದಂತೆ ಪ್ರಪಂಚದ ಯಾವುದೇ ಪೇಟೆಂಟ್ ಕಚೇರಿಯಲ್ಲೂ ಅರಿಸಿನ ಮತ್ತು ಬೇವಿನ ವಿಶಿಷ್ಟ ಗುಣಗಳು ಭಾರತದಲ್ಲಿ ಸಾರ್ವಜನಿಕ ಸ್ವತ್ತಾಗಿರುವ ಜ್ಞಾನ ಎಂಬ ಮಾಹಿತಿ ಇರಲಿಲ್ಲ. ಅಷ್ಟೇಕೆ, ನಮ್ಮ ದೇಶದಲ್ಲಿಯೇ ಅದಕ್ಕೆ ಸಾಕ್ಷ್ಯಾಧಾರವಾಗಬಲ್ಲ, ಸಿದ್ಧಪಡಿಸಿದ ದಾಖಲೆ ಗಳಿರಲಿಲ್ಲ. ಸಿಎಸ್‍ಐಆರ್‌ನ ಸತತ ಪ್ರಯತ್ನಗಳ ನಂತರ ಅರಿಸಿನ ಮತ್ತು ಬೇವಿನ ಉತ್ಪನ್ನಗಳಿಗೆ ನೀಡಿದ್ದ ಪೇಟೆಂಟ್‍ಗಳನ್ನು ಆನಂತರ ರದ್ದುಗೊಳಿಸಲಾಯಿತು.

ಅರಿಸಿನ, ಬೇವು, ಬಾಸ್ಮತಿ ಮುಂತಾದವುಗಳಿಗೆ ವಿದೇಶಗಳಲ್ಲಿ ದೊರೆತ ಪೇಟೆಂಟ್‍ಗಳು ಎಚ್ಚರಿಕೆಯ ಗಂಟೆಯನ್ನು ಬಾರಿಸಿದವು. ನಮ್ಮ ಸಾಂಪ್ರದಾಯಿಕ ಜ್ಞಾನ ಆಧುನಿಕವಾದ ಡಿಜಿಟಲ್ ರೂಪದಲ್ಲಿ, ಜಾಗತಿಕ ಮಟ್ಟದ ಎಲ್ಲ ಪೇಟೆಂಟ್ ಕಚೇರಿಗಳಲ್ಲಿ, ಆಯಾ ದೇಶದ ಭಾಷೆಗಳಲ್ಲಿ ಲಭ್ಯವಾದ ಹೊರತು ನಮ್ಮ ಜೈವಿಕ ಸಂಪನ್ಮೂಲಗಳ ದುರ್ಬಳಕೆ ತಪ್ಪುವುದಿಲ್ಲ ಎಂಬುದನ್ನು ಅದು ಸ್ಪಷ್ಟಪಡಿಸಿತು. ಈ ಅರಿವೇ ‘ಸಾಂಪ್ರದಾಯಿಕ ಜ್ಞಾನದ ಡಿಜಿಟಲ್ ಲೈಬ್ರರಿ’ಯ ಸ್ಥಾಪನೆಗೆ ಪ್ರೇರಣೆ ಯಾಯಿತು.

ಸಿಎಸ್‍ಐಆರ್, ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ, ಆಯುಷ್ ಸಚಿವಾಲಯ, ಪೇಟೆಂಟ್, ಡಿಸೈನ್ ಮತ್ತು ಟ್ರೇಡ್‍ಮಾರ್ಕ್ ನಿಯಂತ್ರಣ ನಿರ್ದೇಶನಾಲಯಗಳ ಸತತ ಪ್ರಯತ್ನಗಳಿಗೆ ವಿಶ್ವ ಬೌದ್ಧಿಕ ಆಸ್ತಿ ಸಂಸ್ಥೆ, ಯುರೋಪ್ ಮತ್ತು ಅಮೆರಿಕದ ಪೇಟೆಂಟ್ ಕಚೇರಿಗಳ ಸಲಹೆ, ಸೂಚನೆಗಳೂ ದೊರೆತು, 2001ರ ಜನವರಿಯಲ್ಲಿ ನಮ್ಮ ದೇಶದ ಮತ್ತು ಪ್ರಪಂಚದ ಮೊತ್ತ ಮೊದಲ ‘ಸಾಂಪ್ರದಾಯಿಕ ಜ್ಞಾನದ ಡಿಜಿಟಲ್ ಲೈಬ್ರರಿ’ ಅಸ್ತಿತ್ವಕ್ಕೆ ಬಂದಿತು.

ನಮ್ಮ ದೇಶದ ಸಾಂಪ್ರದಾಯಿಕ ಜ್ಞಾನ ಲಭ್ಯವಿರು ವುದು ಭಾರತೀಯ ವೈದ್ಯ ಪದ್ಧತಿಗಳಾದ ಆಯುರ್ವೇದ, ಸಿದ್ಧ, ಯುನಾನಿ ಮತ್ತು ಯೋಗಾಸನಗಳಿಗೆ ಸಂಬಂಧಿಸಿದ ಪ್ರಾಚೀನ ಗ್ರಂಥಗಳಲ್ಲಿ. ಈ ಗ್ರಂಥಗಳ ಭಾಷೆ ಸಂಸ್ಕೃತ, ಅರೇಬಿಕ್, ಪರ್ಶಿಯನ್, ಉರ್ದು ಮತ್ತು ಕೆಲವು ಭಾರತೀಯ ಭಾಷೆಗಳು. ಆದರೆ ಅಂತರರಾಷ್ಟ್ರೀಯ ವ್ಯಾಪಾರೋದ್ಯಮದ ಮುಖ್ಯಭಾಷೆಗಳೆಂದರೆ ಇಂಗ್ಲಿಷ್, ಫ್ರೆಂಚ್, ಜರ್ಮನ್, ಜಪಾನೀಸ್ ಮತ್ತು ಸ್ಪ್ಯಾನಿಶ್. ಹೀಗಾಗಿ ನಮ್ಮ ಸಾಂಪ್ರದಾಯಿಕ ಜ್ಞಾನವನ್ನು ಈ ಭಾಷೆಗಳಲ್ಲಿ ಪ್ರಪಂಚದ ವಿವಿಧ ಪೇಟೆಂಟ್ ಕಚೇರಿಗಳಿಗೆ ಒದಗಿಸಬೇಕು. ಹೀಗೆ ಒದಗಿಸಿದ ಮಾಹಿತಿ ನಿರ್ದಿಷ್ಟ ರೂಪದಲ್ಲಿದ್ದು, ಪೇಟೆಂಟ್ ಅರ್ಜಿಗಳ ಪರಾಮರ್ಶೆಗೆ ಅನುಕೂಲವಾಗುವ ವಿನ್ಯಾಸದಲ್ಲಿರಬೇಕು. ಈ ಉದ್ದೇಶಕ್ಕಾಗಿಯೇ ‘ಟ್ರೆಡಿಶನಲ್ ನಾಲೆಜ್ ರಿಸೋರ್ಸ್ ಕ್ಲಾಸಿಫಿಕೇಶನ್’ ಎಂಬ ನವೀನ ವರ್ಗೀಕರಣ ವಿಧಾನವನ್ನು ಟಿಕೆಡಿಎಲ್ ಅಭಿವೃದ್ಧಿಪಡಿಸಿದೆ.

ಪ್ರಾಚೀನ ಪದ್ಧತಿಗಳ ವಿವಿಧ ಆಕರ ಗ್ರಂಥಗಳಿಂದ ಸುಮಾರು ನಾಲ್ಕು ಲಕ್ಷ ಸಸ್ಯಮೂಲ ಉತ್ಪನ್ನಗಳು, ಅವುಗಳನ್ನು ಪಡೆಯುವ ವಿಧಾನ, ಸಂಸ್ಕರಿಸುವ ರೀತಿ, ಬಳಸುವ ವಿಧಾನ ಮುಂತಾದ ಮಾಹಿತಿಗಳನ್ನು ಲಿಪ್ಯಂತರ ಮಾಡಿ, ವ್ಯಾಪಾರೋದ್ಯಮದ ಐದು ಮುಖ್ಯ ಭಾಷೆಗಳಲ್ಲಿ, ಎ-4 ಅಳತೆಯ 3.4 ಕೋಟಿ ಪುಟಗಳಲ್ಲಿ ಒದಗಿಸಲಾಗಿದೆ. ಈ ಮಾಹಿತಿಗಳನ್ನು ವಿಶೇಷ ಒಪ್ಪಂದವೊಂದರ ಮೂಲಕ ಯುರೋಪ್, ಅಮೆರಿಕ, ಕೆನಡಾ, ಚಿಲಿ, ಪೆರು, ಆಸ್ಟ್ರೇಲಿಯಾ, ಮಲೇಷ್ಯಾ, ರಷ್ಯಾ, ಜಪಾನ್, ಇಂಗ್ಲೆಂಡ್ ಮತ್ತು ಸ್ಪೇನ್ ದೇಶಗಳ ಪೇಟೆಂಟ್ ಕಚೇರಿಗಳಿಗೆ ಒದಗಿಸಲಾಗಿದೆ.

ಟಿಕೆಡಿಎಲ್‌ನ ಈ ವಿಶಿಷ್ಟ ಮಾಹಿತಿಯ ಭಂಡಾರ, ನಮ್ಮ ದೇಶದ ಸಾಂಪ್ರದಾಯಿಕ ಜ್ಞಾನದ ‘ಪ್ರಿಯರ್ ಆರ್ಟ್’ ಆಕರವಾಗಿ ವರ್ತಿಸುತ್ತದೆ. ವಿವಿಧ ದೇಶಗಳ ಪೇಟೆಂಟ್ ಪರಿಶೀಲಕರು ತಮಗೆ ಬಂದ ಅರ್ಜಿಗಳಲ್ಲಿ ಇರಬಹುದಾದ ಭಾರತ ಮೂಲದ ಸಾಂಪ್ರದಾಯಿಕ ಜ್ಞಾನವನ್ನು ಗುರುತಿಸಲು ಈ ವ್ಯವಸ್ಥೆ ನೆರವಾಗುತ್ತದೆ. ಅಂತಹ ಅರ್ಜಿಗಳನ್ನು ತಿರಸ್ಕರಿಸಲಾಗುತ್ತದೆ.

2001ರಲ್ಲಿ ಟಿಕೆಡಿಎಲ್ ಅಸ್ತಿತ್ವಕ್ಕೆ ಬಂದ ಸಮಯದಲ್ಲಿ, ಪ್ರಪಂಚದ ವಿವಿಧ ಪೇಟೆಂಟ್ ಕಚೇರಿ ಗಳಲ್ಲಿ ಪ್ರತಿವರ್ಷ, ನಮ್ಮ ದೇಶದ ಪರಂಪರಾಗತವಾದ ಬೌದ್ಧಿಕ ಆಸ್ತಿಯ ಭಾಗವಾಗಿದ್ದ ಉತ್ಪನ್ನ, ಪ್ರಕ್ರಿಯೆಗಳಿಗೆ ಸಂಬಂಧಿಸಿದ ಸುಮಾರು 2,000 ಸಂಶೋಧನೆಗಳಿಗೆ ಪೇಟೆಂಟ್ ಕೋರಿ ಅರ್ಜಿಗಳು ಬರುತ್ತಿದ್ದವು. ಟಿಕೆಡಿಎಲ್ ವ್ಯವಸ್ಥೆ ಜಾರಿಗೆ ಬಂದ ನಂತರ ಅರ್ಜಿಗಳ ಸಂಖ್ಯೆ ಶೇ 44ರಷ್ಟು ಕಡಿಮೆಯಾಗಿದೆ. ಸಾಂಪ್ರದಾಯಿಕ ಜ್ಞಾನದ ಆಧಾರ ದತ್ತಾಂಶ ಇರದಿದ್ದ ಹಿಂದಿನ ಪರಿಸ್ಥಿತಿಯಲ್ಲಿ, ತಪ್ಪಾಗಿ ನೀಡಿದ ಯಾವುದೇ ಪೇಟೆಂಟನ್ನು ಪ್ರಶ್ನಿಸಿ, ವಿರೋಧಿಸಿ, ರದ್ದುಗೊಳಿಸಲು ಸರಾಸರಿ 5ರಿಂದ 7 ವರ್ಷಗಳು ಬೇಕಾಗಿದ್ದು, ಪ್ರತಿಯೊಂದು ಪ್ರಕರಣಕ್ಕೂ ಎರಡರಿಂದ ನಾಲ್ಕು ಕೋಟಿ ರೂಪಾಯಿ ವೆಚ್ಚವಾಗುತ್ತಿತ್ತು. ಆದರೆ ಈ ವ್ಯವಸ್ಥೆ ಬಂದ ನಂತರ ಅತ್ಯಲ್ಪ ಖರ್ಚಿನಲ್ಲಿ ಅತಿ ಶೀಘ್ರವಾಗಿ ಪ್ರಕರಣಗಳನ್ನು ನಿರ್ಧರಿಸಬಹುದಾಗಿದೆ.

ಟಿಕೆಡಿಎಲ್ ಬಹಳಷ್ಟು ಟೀಕೆಗಳಿಗೂ ಒಳಗಾಗಿದೆ. ಆಧಾರ ದತ್ತಾಂಶದಲ್ಲಿರುವ ಸಸ್ಯ ಪ್ರಭೇದಗಳನ್ನು ನಿಖರವಾಗಿ ಗುರುತಿಸುವಲ್ಲಿ ತಪ್ಪುಗಳಾದ ನಿದರ್ಶನಗಳಿವೆ. ಪೇಟೆಂಟ್ ಪರೀಕ್ಷಕರನ್ನು ಬಿಟ್ಟರೆ ವಿಜ್ಞಾನಿಗಳೂ ಸೇರಿದಂತೆ ಉಳಿದ ಯಾರಿಗೂ ಈ ವ್ಯವಸ್ಥೆ ಲಭ್ಯವಿಲ್ಲ. ಸಾರ್ವಜನಿಕರಿಗಂತೂ ಅದು ದೊರೆಯುವುದೇ ಇಲ್ಲ. ಆ ದತ್ತಾಂಶವನ್ನು ಆಧರಿಸಿ ಯಾವ ಹೊಸ ಸಂಶೋಧನೆಯೂ ಸಾಧ್ಯವಿಲ್ಲ. ಈ ಡಿಜಿಟಲ್ ಲೈಬ್ರರಿಯನ್ನು ಆಧರಿಸಿ, ವಿದೇಶದಲ್ಲಿ ತಿರಸ್ಕೃತವಾದ ಪೇಟೆಂಟ್ ಅರ್ಜಿಗೆ ನಮ್ಮ ದೇಶದಲ್ಲಿ ಪೇಟೆಂಟ್ ದೊರೆತಿದೆ! ನಮ್ಮ ದೇಶದ ಪೇಟೆಂಟ್ ಪರೀಕ್ಷಕರ ದಕ್ಷತೆ ಹೆಚ್ಚಬೇಕೆಂಬ ನಿರೀಕ್ಷೆಯಿದೆ.‌

ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬರುವ ಮುಂಚೆಯೇ, 1942ರಲ್ಲಿ ಅಸ್ತಿತ್ವಕ್ಕೆ ಬಂದ ಸಿಎಸ್‍ಐಆರ್ ಸಂಸ್ಥೆ, 2022 ರಲ್ಲಿ ತನ್ನ 80ನೆಯ ಸ್ಥಾಪನಾ ದಿನವನ್ನು ಆಚರಿಸುವ ಮುನ್ನ ಈ ಅರೆಕೊರೆಗಳನ್ನು ಸರಿಪಡಿಸಬೇಕಾದ ಅಗತ್ಯವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.