ADVERTISEMENT

ನುಡಿ ನಮನ: ಗಿಡಮರಗಳ ಬಹುಗುಣಗಳ ಹರಿಕಾರ ಸುಂದರ್ ಲಾಲ್ ಬಹುಗುಣ

ನಾಗೇಶ ಹೆಗಡೆ
Published 21 ಮೇ 2021, 19:31 IST
Last Updated 21 ಮೇ 2021, 19:31 IST
ಅಪ್ಪಿಕೋ ಚಳವಳಿಗೆ 25 ವರ್ಷ ತುಂಬಿದ ವರ್ಷವಾದ 2008ರ ಸೆ.8ಅನ್ನು ಸಹ್ಯಾದ್ರಿ ದಿನವನ್ನಾಗಿ ಆಚರಿಸಿದ ಸಂದರ್ಭದಲ್ಲಿ ಶಿರಸಿ ತಾಲ್ಲೂಕಿನ ಸಾಲ್ಕಣಿ ಶಾಲೆಯಲ್ಲಿ ನಡೆದ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಚಿಪ್ಕೊ ಚಳವಳಿ ನೇತಾರ ಸುಂದರಲಾಲ ಬಹುಗುಣ ಅವರು ಮಕ್ಕಳಿಗೆ ಪರಿಸರ ಪಾಠ ಮಾಡಿದ್ದರು – ಪ್ರಜಾವಾಣಿ ಸಂಗ್ರಹ ಚಿತ್ರ/ ಕೃಷ್ಣಿ ಶಿರೂರ
ಅಪ್ಪಿಕೋ ಚಳವಳಿಗೆ 25 ವರ್ಷ ತುಂಬಿದ ವರ್ಷವಾದ 2008ರ ಸೆ.8ಅನ್ನು ಸಹ್ಯಾದ್ರಿ ದಿನವನ್ನಾಗಿ ಆಚರಿಸಿದ ಸಂದರ್ಭದಲ್ಲಿ ಶಿರಸಿ ತಾಲ್ಲೂಕಿನ ಸಾಲ್ಕಣಿ ಶಾಲೆಯಲ್ಲಿ ನಡೆದ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಚಿಪ್ಕೊ ಚಳವಳಿ ನೇತಾರ ಸುಂದರಲಾಲ ಬಹುಗುಣ ಅವರು ಮಕ್ಕಳಿಗೆ ಪರಿಸರ ಪಾಠ ಮಾಡಿದ್ದರು – ಪ್ರಜಾವಾಣಿ ಸಂಗ್ರಹ ಚಿತ್ರ/ ಕೃಷ್ಣಿ ಶಿರೂರ   

ಸುಂದರಲಾಲ ಬಹುಗುಣ ಎಂದರೆ ಕರ್ನಾಟಕದ ಮಟ್ಟಿಗೆ ಹಿಮಾಲಯದಿಂದ ಬಂದ ಬೆಳಕು. ಅಲ್ಲಿ ಆರಂಭವಾದ ‘ಚಿಪ್ಕೊ’ ಚಳವಳಿಯ ಕುಡಿಯನ್ನು ಮಲೆನಾಡಿನಲ್ಲಿ ‘ಅಪ್ಪಿಕೊ’ ಚಳವಳಿಯನ್ನಾಗಿ ಚಿಗುರಿಸಿದ ಸಂತ ಅವರು. ಉತ್ತರಾಖಂಡದ ದಟ್ಟಡವಿಯಲ್ಲಿ ಮಹಿಳೆಯರಿಂದ ಚಾಲನೆ ಪಡೆದ ಪರಿಸರ ರಕ್ಷಣಾ ಹೋರಾಟದ ಸಂದೇಶವನ್ನು ಬೇರೆ ರಾಜ್ಯಗಳಿಗಷ್ಟೇ ಅಲ್ಲ ವಿಶ್ವದ ಅನೇಕ ದೇಶಗಳಲ್ಲಿ ಬಿತ್ತರಿಸುತ್ತ ಸುತ್ತಿದವರು.

1980ರಲ್ಲಿ ನೈರೋಬಿಯಲ್ಲಿ ವಿಶ್ವಸಂಸ್ಥೆ ಏರ್ಪಡಿಸಿದ್ದ ಶಕ್ತಿ ಸಮ್ಮೇಳನಕ್ಕೆ ಇವರು ಹಾಜರಾದ ವೈಖರಿ ಸದಾ ನೆನಪಿಡುವಂಥದ್ದು. ಹಿಮಾಲಯದ ಹಳ್ಳಿಗಾಡಿನ ಶ್ರಮಿಕ ಹೈದನಂತೆ ತಮ್ಮ ಬೆನ್ನಿಗೆ ಕಟ್ಟಿಗೆಯ ಹೊರೆಯನ್ನು ಬಿಗಿದುಕೊಂಡು ಏದುಸಿರು ಬಿಡುತ್ತ ಮೆಲ್ಲಗೆ ಮೆಟ್ಟಿಲು ಏರಿ ಅವರು ಸಭಾಂಗಣವನ್ನು ಪ್ರವೇಶಿಸಿ ಎಲ್ಲರ ಗಮನ ಸೆಳೆದು ಮಾಧ್ಯಮಗಳ ಮನ ಗೆದ್ದರು. ಅರಣ್ಯದ ಮಧ್ಯೆಯೇ ವಾಸಿಸುವವರೂ ಹೇಗೆ ಕಾರ್ಪೊರೇಟ್‌ ಗುತ್ತಿಗೆದಾರರ ಮುಷ್ಟಿಗೆ ಸಿಕ್ಕು ತುಂಡು ಸೌದೆಗಾಗಿ ಹೋರಾಡಬೇಕಾಗಿ ಬಂದಿದೆ ಎಂಬುದನ್ನು ಈ ವಿಶಿಷ್ಟ ದೃಶ್ಯಮಾಧ್ಯಮದ ಮೂಲಕ ಜಗತ್ತಿಗೆ ಬಿತ್ತರಿಸಿದರು.

ಹೋರಾಟ ಇವರಿಗೆ ಬೆನ್ನಿಗೆ ಸದಾ ಅಂಟಿಕೊಂಡ ವ್ಯಸನ. ತಮ್ಮ 17ನೇ ವಯಸ್ಸಿನಲ್ಲೇ ಸ್ವಾತಂತ್ರ್ಯ ಹೋರಾಟಕ್ಕೆ ಕೈಜೋಡಿಸಿ ಸೆರೆಮನೆ ಸೇರಿದ್ದ ಅವರು ಸರ್ವೋದಯ ಕಾರ್ಯಕರ್ತರಾಗಿ ಊರೂರು ಸುತ್ತುತ್ತಿದ್ದಾಗ ಅವರ ನೆರೆಯ ಚಾಮೋಲಿ ಜಿಲ್ಲೆಯಲ್ಲೇ ಮಹಿಳೆಯರು ಮರಗಳನ್ನು ಅಪ್ಪಿಕೊಂಡು ಅರಣ್ಯ ಗುತ್ತಿಗೆದಾರರನ್ನು ಹಿಮ್ಮೆಟ್ಟಿಸಿದರು. ಇವರಿಗೆ ಹೋರಾಟದ ಹೊಸ ಹಾದಿ ಸಿಕ್ಕಂತಾಯಿತು. ಪತ್ರಿಕೆಗಳಿಗೆ ಆಗಾಗ ಲೇಖನಗಳನ್ನು ಬರೆಯುತ್ತಿದ್ದ ಬಹುಗುಣ ಈಗ ಚಿಪ್ಕೊ ಚಳವಳಿಯ ಮೂಲಕ ಪರಿಸರ ಸಂರಕ್ಷಣೆಯ ವಕ್ತಾರರಾದರು.

ಹಿಮಾಲಯದ ಸೂಕ್ಷ್ಮ ಪರಿಸರ ಅಭಿವೃದ್ಧಿಯ ದಾಳಿಗೆ ನಲುಗುತ್ತಿರುವುದನ್ನು ಊರೂರಿಗೂ ತಿಳಿಸಲೆಂದು 1980ರ ಆರಂಭದಲ್ಲಿ ಕಾಶ್ಮೀರದಿಂದ ನಾಗಲ್ಯಾಂಡ್‌ನ ಕೊಹಿಮಾವರೆಗೆ ಎರಡು ವರ್ಷಗಳ ಪಾದಯಾತ್ರೆ ನಡೆಸಿದ ಇವರು ಪರಿಸರ ಸಂತನೆಂದೇ ಪ್ರಸಿದ್ಧಿ ಪಡೆದರು. ಅದೇ ತಾನೇ ಇಡೀ ಜಗತ್ತಿಗೇ ಪರಿಸರ ಸಂರಕ್ಷಣೆಯ ಮಹತ್ವದ ಅರಿವು ಮೆಲ್ಲಗೆ ಮೂಡತೊಡಗಿತ್ತು. ಅದೇ ಸಂದರ್ಭದಲ್ಲಿ ಇಲ್ಲಿ ಕರ್ನಾಟಕದಲ್ಲಿ ಅರಣ್ಯನಾಶದ ಮಹಾಯಜ್ಞ ಆರಂಭವಾಗಿತ್ತು. ದಟ್ಟ ಅರಣ್ಯವನ್ನು ಸವರಿ ಹಾಕಿ ಹೊಸದಾಗಿ ನೀಲಗಿರಿ ನೆಡುವುದೇನು, ಅರಣ್ಯ ಮಧ್ಯೆ ಕಬ್ಬಿಣ- ಮ್ಯಾಂಗನೀಸ್‌ ಗಣಿಗಾರಿಕೆ ನಡೆದಿದ್ದೇನು, ಕಾಳಿನದಿಯನ್ನು ಮುಗಿಸಿ ಬೇಡ್ತಿ ನದಿಗೂ ಅಪಾಯ ಎದುರಾದಾಗ ಜನರು ಎದ್ದರು.

ಕೊಹಿಮಾ ಪಾದಯಾತ್ರೆಯಲ್ಲಿ ಜೊತೆಯಾಗಿದ್ದ ಶಿರಸಿಯ ಪಾಂಡುರಂಗ ಹೆಗಡೆಯ ಆಹ್ವಾನದ ಮೇರೆಗೆ ಸುಂದರಲಾಲ್‌ ಬಹುಗುಣ ಇಲ್ಲಿಗೂ ಬಂದು ಬೇಡ್ತಿ ಚಳವಳಿಗೆ ಕೈಜೋಡಿಸಿದರು. ಚಿಪ್ಕೊ ಮಹಿಳೆಯರ ಸಾಹಸಗಳನ್ನು ಹಳ್ಳಿಯ ಯುವಜನರಿಗೆ ಬಣ್ಣಿಸಿದರು. ಇಲ್ಲೂ ಅಪ್ಪಿಕೋ ಆರಂಭವಾಯಿತು. ಈ ಚಳವಳಿಗೆ ದೇಶವ್ಯಾಪಿ ಕೀರ್ತಿ ಬಂದಿದ್ದೇ ತಡ, ಬಹುಗುಣರಿಗೆ ಅನೇಕ ದೇಶ ವಿದೇಶಗಳಿಂದಲೂ ಆಹ್ವಾನ ಬರತೊಡಗಿತ್ತು.

ಮೊದಲೇ ಸಂತನ ವೇಷಭೂಷಣ, ಮೆಲು ಮಾತು, ಅಹಿಂಸಾ ಮೂರ್ತಿಯ ಪ್ರತಿರೂಪ. “ಅರಣ್ಯ ಎಂದರೆ ಬರೀ ಫರ್ನಿಚರ್‌ ಮಾಡುವ ದಿಮ್ಮಿಗಳಲ್ಲ; ಅರಣ್ಯಗಳೆಂದರೆ ಪೃಥ್ವಿಯ ಶ್ವಾಸಕೋಶ; ನದಿಗಳ ಜನ್ಮದಾಯಿನಿ, ಮಣ್ಣಿನ ರಕ್ಷಣೆಯ ಖಜಾನೆ” ಎಂದು ಪುರಾತನ ಋಷಿಮುನಿಯಂತೆ ನಿರುದ್ವೇಗದ ಪ್ರವಚನ ನೀಡುವ ಈ ಸಂತನ ಮಾತುಗಳಿಗೆ ಜನರನ್ನು ಮೋಡಿ ಮಾಡುವ ಶಕ್ತಿಯಿತ್ತು. ಎಲ್ಲೆಲ್ಲಿ ಸುಂದರ ನಿಸರ್ಗಕ್ಕೆ ಅಭಿವೃದ್ಧಿಯ ಕೊಡಲಿ ಏಟು ಬೀಳುತ್ತಿದ್ದಲ್ಲೆಲ್ಲ ಸುಂದರಲಾಲ್‌ ಅಲ್ಲಿಗೆ ಹಾಜರಾಗತೊಡಗಿದರು. ಸೇಬು ಹಣ್ಣುಗಳನ್ನು ರವಾನೆಗೆಂದು ಕಟ್ಟಿಗೆಯ ಪ್ಯಾಕಿಂಗ್‌ ನೋಡಿ ಇವರು ಸೇಬು ಬಿಟ್ಟರು; ಭತ್ತ ಬೆಳೆಯಲು ಅಪಾರ ನೀರು ಬೇಕಾಗುತ್ತದೆಂದು ಇವರು ಅನ್ನ ಬಿಟ್ಟರು. ಉರುವಲ ಸೌದೆಗೆಂದು ಗಿಡಮರಗಳ ನಾಶ ನೋಡಿ ಇವರು ಬೇಯಿಸಿದ ಆಹಾರವನ್ನೂ ತ್ಯಜಿಸಿದರು.

‘ಪರಿಸರ ರಕ್ಷಣೆಯ ಹರಿಕಾರ’ ಎಂದೆಲ್ಲ ಪ್ರಸಿದ್ಧಿ ಪಡೆದ ಇವರಿಗೆ ಅಂತರರಾಷ್ಟ್ರೀಯ ಸ್ತರದಲ್ಲಿ ನಾನಾ ಪ್ರಶಸ್ತಿಗಳು, ಗೌರವ ಡಾಕ್ಟರೇಟ್‌ ಕೂಡ ಬಂತು. ಇವರ ತಾಯ್ನಾಡಿನಲ್ಲೇ ತೆಹ್ರಿ ಅಣೆಕಟ್ಟಿಗೆ ಸಿದ್ಧತೆ ನಡೆದಾಗ ಅಲ್ಲಿ ಒಮ್ಮೆ 45 ದಿನಗಳ, ಮತ್ತೊಮ್ಮೆ 75 ದಿನಗಳ ಉಪವಾಸ ಸತ್ಯಾಗ್ರಹ ನಡೆಸಿದರು. ಅವರ ಹೋರಾಟಕ್ಕೆ ಬೆಲೆ ಸಿಗಲಿಲ್ಲ. ಆದರೆ ಪದ್ಮವಿಭೂಷಣ ಪ್ರಶಸ್ತಿ ಬಂತು. ಕೊನೆಗೆ ಅವರದೇ ಆಶ್ರಮದ ಪ್ರದೇಶ ಜಲಸಮಾಧಿಯಾಗಿ ಈ ವೃದ್ಧ ದಂಪತಿಯನ್ನು ಡೆಹ್ರಾಡೂನ್‌ಗೆ ಸ್ಥಳಾಂತರಿಸಲಾಯಿತು. ‘ನೀನು ವಿಶ್ರಾಂತಿ ಪಡೆ, ನಾನೇ ಪ್ರಭುತ್ವಕ್ಕೆ ಪಾಠ ಹೇಳುತ್ತೇನೆ’ ಎಂದು ಪ್ರಕೃತಿಯೇ ಇವರಿಗೆ ಹೇಳಿತೇನೊ. ಚಿಪ್ಕೊ ಚಳವಳಿ ನಡೆದ ಅದೇ ಚಾಮೋಲಿಯಲ್ಲಿ ಹಿಮಕುಸಿತದಿಂದಾಗಿ ಕಳೆದ ಫೆಬ್ರುವರಿಯಲ್ಲಿ ಧವಳಿ ಗಂಗಾ ಅಣೆಕಟ್ಟು ಭಗ್ನವಾಗಿ 72 ಜನರ ಜಲಸಮಾಧಿಯಾಯಿತು.

ವಿಧಿ ನೋಡಿ. ಆಮ್ಲಜನಕ ನೀಡುವ ಗಿಡಮರಗಳ ಉಳಿವಿಗಾಗಿ ಅರ್ಧ ಶತಮಾನವನ್ನೇ ಸವೆಸಿದ ಈ ಯೋಗಿ ಸ್ವತಃ ಆಮ್ಲಜನಕ ಅಭಾವದಿಂದಾಗಿ ಅಸುನೀಗಬೇಕಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.