ADVERTISEMENT

ಪ್ರೊ. ರಾಜೇಂದ್ರ ಚೆನ್ನಿ ವಿಶ್ಲೇಷಣೆ: ಸುಪ್ರೀಂಗೆ ಕಡಿವಾಣ ಕೇಂದ್ರದ ಹುನ್ನಾರವೇ?

ಕೋವಿಡ್‌ ನಿರ್ವಹಣೆಯಲ್ಲಿ ಮಧ್ಯಪ್ರವೇಶ ಬೇಡ ಎಂಬ ‍ಪ್ರಮಾಣಪತ್ರ

ಪ್ರೊ.ರಾಜೇಂದ್ರ ಚೆನ್ನಿ
Published 11 ಮೇ 2021, 19:31 IST
Last Updated 11 ಮೇ 2021, 19:31 IST
ಸು‍ಪ್ರೀಂ ಕೋರ್ಟ್‌
ಸು‍ಪ್ರೀಂ ಕೋರ್ಟ್‌   

ಕೇಂದ್ರದ ಉದ್ದೇಶವು ನ್ಯಾಯಾಂಗದ ಅಧಿಕಾರವನ್ನು ತಾತ್ವಿಕವಾಗಿ ಪ್ರಶ್ನಿಸುವುದಲ್ಲ. ಆದರೆ ತನ್ನ ವಾದ ಹಾಗೂ ಸಾರ್ವಜನಿಕ ವಿವಾದಗಳ ಮೂಲಕ ಸುಪ್ರೀಂ ಕೋರ್ಟ್‌ ಹೆಜ್ಜೆ ಹಿಂದಿಡುವಂತೆ ಮಾಡುವುದಾಗಿದೆ. ಆದ್ದರಿಂದ ನಾವೆಲ್ಲ ಮಾಡಬೇಕಾದ ಮುಖ್ಯ ಕರ್ತವ್ಯವೆಂದರೆ ನ್ಯಾಯಾಂಗದ ಪರವಾಗಿ ಗಟ್ಟಿಯಾಗಿ ನಮ್ಮ ಅಭಿಪ್ರಾಯವನ್ನು ಹೇಳುವುದು.

ನಾನು ಈ ಲೇಖನ ಬರೆಯುತ್ತಿರುವ ಹೊತ್ತಿಗೆ ಕೇಂದ್ರ ಸರ್ಕಾರವು ಸುಪ‍್ರೀಂ ಕೋರ್ಟ್‌ಗೆ ತನ್ನ ಹೇಳಿಕೆಯನ್ನು ಸಲ್ಲಿಸಿ ಕೋವಿಡ್‌ ತಡೆ ಲಸಿಕೆ ಸರಬರಾಜು, ಮಾರಾಟದ ಬಗ್ಗೆ ತನ್ನ ನೀತಿಯನ್ನು ಸಮರ್ಥಿಸಿಕೊಂಡಿದೆ. ಅದಕ್ಕಿಂತ ಮುಖ್ಯವಾಗಿ ಸು‍ಪ್ರೀಂ ಕೋರ್ಟ್‌ನ ‘ಅತಿ ಉತ್ಸಾಹದ ಆದರೆ ಸದುದ್ದೇಶದ’ ನ್ಯಾಯಾಂಗ ಕ್ರಿಯಾಶೀಲತೆಯಿಂದಾಗಿ ಸಂಕಷ್ಟಗಳು ಉಂಟಾಗುತ್ತವೆ ಎಂದು ವಾದಿಸುತ್ತಿದೆ.

ಹಿಂದಿನ ಕೆಲವು ಮುಖ್ಯ ನ್ಯಾಯಮೂರ್ತಿಗಳು ಸುಪ‍್ರೀಂ ಕೋರ್ಟ್‌ ಅನ್ನು ಪ್ರಧಾನಮಂತ್ರಿ ಕಚೇರಿಯ ಗುಮಾಸ್ತ ಶಾಖೆಯೆನ್ನಿಸುವಂತೆ ಮಾಡಲು ಪ್ರಯತ್ನಿಸಿದಾಗ ಕೇಂದ್ರ ಸರ್ಕಾರವು ಪ್ರತಿಯೊಂದು ವಿಷಯವನ್ನೂ ನ್ಯಾಯಾಲಯದ ಮುಂದೆ ತರುತ್ತಿತ್ತು. ಭಾರತದ ಅತ್ಯುನ್ನತ ನ್ಯಾಯ ಸಂಸ್ಥೆಯು ತನ್ನದೇ ಆದ ಶ್ರೇಷ್ಠ ಸಂಪ್ರದಾಯಗಳಿಗೆ ವ್ಯತಿರಿಕ್ತವಾಗಿ ನಡೆದುಕೊಂಡಿತೆ ಎನ್ನುವ ಆತಂಕವು ಹುಟ್ಟಿಕೊಂಡಿತ್ತು. ಈಗ ಕಳೆದ ಕೆಲವು ದಿನಗಳಲ್ಲಿ ಸುಪ್ರೀಂ ಕೋರ್ಟ್‌, ಕೇಂದ್ರದ ನೀತಿಗಳನ್ನು ವಿಶೇಷವಾಗಿ ಕೋವಿಡ್‌–19ರ ಎರಡನೇ ಅಲೆ ನಿರ್ವಹಣೆಗೆ ಸಂಬಂಧಿಸಿದ ನೀತಿಗಳನ್ನು ಪ್ರಶ್ನಿಸಿದ್ದರಿಂದ ಕೇಂದ್ರಕ್ಕೆ ನ್ಯಾಯಾಲಯದ ನಡವಳಿಕೆಯು ‘ಹಸ್ತಕ್ಷೇಪ’ (interference) ಆಗಿ ಕಾಣುತ್ತಿದೆ. ಇಂಗ್ಲಿಷ್ ಪತ್ರಿಕೆಯೊಂದರಲ್ಲಿ ಪ್ರಕಟವಾದ ಇಂದಿನ ವರದಿಯಲ್ಲಿ ಈ ಪದವನ್ನು ಕೇಂದ್ರದ ಹೇಳಿಕೆಯಲ್ಲಿ ಬಳಸಲಾಗಿದೆಯೆಂದು ಹೇಳಲಾಗಿದೆ. ಇದು ನಿಜವಾಗಿದ್ದರೆ ಇದನ್ನೇ ನ್ಯಾಯಾಲಯ ನಿಂದನೆಯೆಂದು ಪರಿಗಣಿಸಬಹುದಾಗಿದೆ. ಏಕೆಂದರೆ ಭಾರತೀಯ ಪ್ರಜಾಪ್ರಭುತ್ವದ ಒಂದು ಮುಖ್ಯವಾದ ಆಧಾರ ಸ್ತಂಭವಾಗಿರುವ ನ್ಯಾಯಾಂಗದ ಪ್ರವೇಶವನ್ನು ಬಹಳವೆಂದರೆ ಮಧ್ಯಸ್ಥಿಕೆ (intervention) ಅನ್ನಬಹುದೇ ಹೊರತು ಹಸ್ತಕ್ಷೇಪ (interference) (ಅಂದರೆ ಅನಾವಶ್ಯಕ ಹಸ್ತಕ್ಷೇಪ, ಸರ್ಕಾರದ ಕ್ರಿಯೆಗಳಲ್ಲಿ ಅಡ್ಡವಾಗುವುದು ಈ ಅರ್ಥಗಳು ಈ ಪದಗಳಿಗಿವೆ) ಎನ್ನಲಾಗದು. ಕೇವಲ ಪದದ ವಿಶ್ಲೇಷಣೆಯನ್ನು ನಾನು ಆಧರಿಸಿಲ್ಲ.

ADVERTISEMENT

ಕರ್ನಾಟಕ ಹೈಕೋರ್ಟ್‌ನ ತೀರ್ಪನ್ನು ಕೇಂದ್ರವು ಪ್ರಶ್ನಿಸಿ ಸೋತದ್ದು, ದೆಹಲಿಗೆ ನಿಗದಿತ ಆಕ್ಸಿಜನ್ ಕೊಡಲು ವಿಳಂಬ ಮಾಡುತ್ತಿರುವುದು, ಬಿಜೆಪಿಯ ಮಹಾನಾಯಕನಾದ ಯೋಗಿ ಆದಿತ್ಯನಾಥ ಎನ್ನುವ ಉತ್ತರ ಪ್ರದೇಶದ ಮುಖ್ಯಮಂತ್ರಿ ಸುಪ್ರೀಂ ಕೋರ್ಟ್‌ ಆದೇಶವನ್ನು ಮೀರಿ ಕೇರಳ ಮೂಲದ ಪತ್ರಕರ್ತರೊಬ್ಬರನ್ನು ಏಮ್ಸ್‌ನಿಂದ ಮಥುರಾ ಜೈಲಿಗೆ ಗುಟ್ಟಾಗಿ ಕರೆದೊಯ್ದದ್ದು ಇವೇ ಮುಂತಾದ ಘಟನೆಗಳನ್ನು ನೋಡಿದರೆ ಕೇಂದ್ರದ ಮುಂದಿನ ನಡವಳಿಕೆ ಸ್ಪಷ್ಟವಾಗಿದೆ. ಅದೇನೆಂದರೆ ನ್ಯಾಯಾಂಗದ ನಿರ್ದೇಶನಗಳನ್ನು ಅಮಾನ್ಯ ಮಾಡುವುದು, ಪಾಲಿಸದೇ ಇರುವುದು. ಇನ್ನೊಂದು ವಿಧಾನವೆಂದರೆ ನ್ಯಾಯಾಂಗದ ಹಸ್ತಕ್ಷೇಪದಿಂದ ಚುನಾಯಿತ ಸಂಸದರ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ ಎಂದು ಹುಯಿಲೆಬ್ಬಿಸುವುದು. ಅದರ ಮುನ್ನುಡಿಯಾಗಿ ಕೇಂದ್ರದ ಪ್ರಮಾಣಪತ್ರದ ಅನೇಕ ಪದಗಳನ್ನು ಗಮನಿಸಬಹುದು. ಇನ್ನೆರಡು ದಿನಗಳಲ್ಲಿ ಬಲಪಂಥೀಯ ನ್ಯಾಯಶಾಸ್ತ್ರ ವಿದ್ವಾಂಸರು, ಸಂವಿಧಾನ ವಿದ್ವಾಂಸರು ನ್ಯಾಯಾಂಗ ಮತ್ತು ಸಂಸತ್ತಿನ ನಡುವಣ ತಿಕ್ಕಾಟ (judiciary vs parliament) ಎನ್ನುವ ಚರ್ಚೆಯನ್ನು ಹುಟ್ಟುಹಾಕಿ ಅನಾವಶ್ಯಕವಾದ ವಿವಾದಗಳನ್ನು ಸೃಷ್ಟಿಸುತ್ತಾರೆಂದು ನಿರೀಕ್ಷಿಸಬಹುದು.

ಕೇಂದ್ರದ ಉದ್ದೇಶವು ನ್ಯಾಯಾಂಗದ ಅಧಿಕಾರವನ್ನು ತಾತ್ವಿಕವಾಗಿ ಪ್ರಶ್ನಿಸುವುದಲ್ಲ. ಆದರೆ ತನ್ನ ವಾದ ಹಾಗೂ ಸಾರ್ವಜನಿಕ ವಿವಾದಗಳ ಮೂಲಕ ಸುಪ್ರೀಂ ಕೋರ್ಟ್‌ ಹೆಜ್ಜೆ ಹಿಂದಿಡುವಂತೆ ಮಾಡುವುದಾಗಿದೆ. ಆದ್ದರಿಂದ ನಾವೆಲ್ಲ ಮಾಡಬೇಕಾದ ಮುಖ್ಯ ಕರ್ತವ್ಯವೆಂದರೆ ನ್ಯಾಯಾಂಗದ ಪರವಾಗಿ ಗಟ್ಟಿಯಾಗಿ ನಮ್ಮ ಅಭಿಪ್ರಾಯವನ್ನು ಹೇಳುವುದು. ಸಂವಿಧಾನದ ಅನೇಕ ಪರಿಕಲ್ಪನೆಗಳನ್ನು (ಕೆಲವು ಮೂಲಭೂತ ಪರಿಕಲ್ಪನೆಗಳನ್ನು ಬಿಟ್ಟರೆ) ನಿರಪೇಕ್ಷವಾಗಿ ನೋಡಲಾಗದು. ಶಾಸಕಾಂಗವು ಕುಖ್ಯಾತ ಕ್ರಿಮಿನಲ್‍ನಂತೆ ವರ್ತಿಸಬಹುದು, ಜನವಿರೋಧಿಯಾಗಬಹುದು ಎಂದು ಸಂವಿಧಾನ ಬರೆದವರು ಖಂಡಿತವಾಗಿಯೂ ಕಲ್ಪಿಸಿರಲಿಲ್ಲ,
ಅವರ ದೃಷ್ಟಿಯಲ್ಲಿ ಚುನಾಯಿತ ಸರ್ಕಾರವೆಂದರೆ ಪ್ರಜೆಗಳ ಒಪ್ಪಿಗೆ ಪಡೆದ, ಪ್ರಜೆಗಳ ಹಿತಚಿಂತಕ ಸರ್ಕಾರವಾಗಿತ್ತು. ಈಗ ಅನುಷ್ಠಾನಕ್ಕೆ ಬಂದಿರುವ ಸರ್ಕಾರವು ಚುನಾವಣಾ ಆಧಾರಿತ ಪ್ರಜಾಪ್ರಭುತ್ವವನ್ನು ಬಳಸಿಕೊಂಡು ಅಧಿಕಾರಕ್ಕೆ ಬಂದಿರುವ ಸರ್ವಾಧಿಕಾರಿ ಸರ್ಕಾರವಾಗಿದೆ. ಸಂವಿಧಾನದ ಮೂಲರಚನೆಯಾಗಿರುವ ಒಕ್ಕೂಟ ವ್ಯವಸ್ಥೆಯನ್ನೇ ಒಪ್ಪದ ಈ ಸರ್ಕಾರಕ್ಕೆ ಸಂವಿಧಾನಾತ್ಮಕ ಚರ್ಚೆಗಳನ್ನು ಮಾಡುವ ನೈತಿಕ ಅಧಿಕಾರವೇ ಇಲ್ಲ. ಹೀಗಾಗಿ ಈ ವಿಶಿಷ್ಟ ಸಂದರ್ಭದಲ್ಲಿ ಮಾತ್ರ ನಾವು ನ್ಯಾಯಾಂಗದ ಪರವಾಗಿ ಜನಾಂದೋಲನ ಮಾದರಿಯ ಚರ್ಚೆ, ಚಿಂತನೆ, ಪ್ರತಿಭಟನೆ ಕೈಕೊಳ್ಳಲೇಬೇಕಾಗಿದೆ.

ಸಂಸತ್‌

ಕೇಂದ್ರದ ಪ್ರಮಾಣಪತ್ರದ ಇನ್ನೊಂದು ಮುಖ್ಯ ವಾದವೆಂದರೆ ಲಸಿಕೆ ಮಾರಾಟ, ಸರಬರಾಜು ‘ಖಾಸಗಿ ಹಿತಾಸಕ್ತಿಗಳ’ ಪರವಾಗಿಯೂ ಇರಬೇಕು ಮತ್ತು ಬೇಡಿಕೆ ಹಾಗೂ ಪೂರೈಕೆಯ ನೀತಿಯು ಮುಕ್ತ ಮಾರುಕಟ್ಟೆಯ ಮಾದರಿಯಲ್ಲಿರಬೇಕು ಎಂಬುದಾಗಿದೆ. ನನ್ನ ಕೋರಿಕೆಯೆಂದರೆ ನಮ್ಮ ಎಲ್ಲಾ ಶಿಕ್ಷಿತ ವ್ಯಕ್ತಿಗಳು ಈ ಹೇಳಿಕೆಯನ್ನು ಕೂಲಂಕಷವಾಗಿ ಓದಬೇಕು. ಇಂಥ ಘೋರ ಸನ್ನಿವೇಶದಲ್ಲಿಯೂ ಕೇಂದ್ರ ಸರ್ಕಾರವು ಮಾರುಕಟ್ಟೆ ನೀತಿಗಳನ್ನು ಸಮರ್ಥಿಸುತ್ತದೆಯೆ ಹೊರತು ಕೋಟಿಗಟ್ಟಲೆ ಮನುಷ್ಯ ಜೀವಗಳ ದುರಂತದ ಬಗ್ಗೆ ಮಾತನಾಡುವುದಿಲ್ಲ.

ನಮ್ಮ ಶಿಕ್ಷಿತ ಮಧ್ಯಮ ವರ್ಗದವರು ಕುರುಡು ನಂಬಿಕೆ ಇಟ್ಟಿರುವ ಈ ಹಳಸಲು ಮಾರುಕಟ್ಟೆ ನೀತಿಯು ಕೊನೇಪಕ್ಷ 18ನೇ ಶತಮಾನದ್ದು. ಇದನ್ನು ಚರಿತ್ರೆಯ ಅತಿ ದೊಡ್ಡ ದುರಂತವಾದ ಕೊರೊನಾ ವಿಪತ್ತಿನ ಕಾಲದಲ್ಲಿ ಈ ದೇಶದ ಬ್ರಾಹ್ಮಣ-ಬನಿಯಾ ದುಷ್ಟಕೂಟವು ಬಳಸುತ್ತಿದೆ. ಜೋತಿಬಾ ಫುಲೆಯವರ ಭಟ್‍ಜಿ-ಶೇಟ್‍ಜಿ ಪರಿಕಲ್ಪನೆಯನ್ನು ಸಂಪೂರ್ಣ ವಿಶ್ವಾಸ ಹಾಗೂ ಎಚ್ಚರದಿಂದ ನಾನು ಬಳಸುತ್ತಿದ್ದೇನೆ. ಏಕೆಂದರೆ ಕೇಂದ್ರ ಸರ್ಕಾರದ ಪ್ರಮಾಣಪತ್ರವು ಥೇಟು ಈ ದುಷ್ಟಕೂಟದ ಸಾಂಪ್ರದಾಯಿಕ ನುಡಿಗಟ್ಟಿನಲ್ಲಿದೆ. ಭಾರತದ ಜಾಗತೀಕರಣವು ಈ ಸಾಂಪ್ರದಾಯಿಕ ಮಾದರಿ ಯಲ್ಲಿರುವುದು ಚರಿತ್ರೆಯ ಸತ್ಯವಾಗಿದೆ. ಹೇಳಿಕೆಯ ಈ ಭಾಗವನ್ನು ಗಮನಿಸಿ: ‘Over all, the pricing policy would lead to a competitive market, resulting in a higher production of vaccines with affordable prices’‌ (‘ಒಟ್ಟಾರೆಯಾಗಿ ಈ ದರ ನಿಗದಿ ನೀತಿಯು ಸ್ಪರ್ಧಾತ್ಮಕ ಮಾರುಕಟ್ಟೆಗೆ ಅವಕಾಶ ಮಾಡಿಕೊಡುತ್ತದೆ ಹಾಗೂ ಇದರ ಪರಿಣಾಮ ದಿಂದಾಗಿ ಲಸಿಕೆಯ ಉತ್ಪಾದನೆಯಲ್ಲಿ ಏರಿಕೆಯಾಗಿ ಕೈಗೆಟಕುವ ದರದಲ್ಲಿ ಅವು ಲಭ್ಯವಾಗುತ್ತವೆ’). ‘The centre said its vaccination policy aimed at creating incentivised demand for private players and attract offshore manufacturers to ensure increased availability’ (‘ತನ್ನ ಲಸಿಕೆ ನೀತಿಯ ಗುರಿಯು ಖಾಸಗಿ ಭಾಗಿದಾರರಿಗೆ ಉತ್ತೇಜನ ಕೊಡುವ ಬೇಡಿಕೆಯನ್ನು ಸೃಷ್ಟಿಸುವುದು ಹಾಗೂ ಲಭ್ಯತೆ ಹೆಚ್ಚಿಸುವುದನ್ನು ಖಾತರಿಪಡಿಸಲು ವಿದೇಶೀ ಉತ್ಪಾದಕರನ್ನು (ಲಸಿಕೆಯ) ಆಕರ್ಷಿಸುವುದಾಗಿದೆ).

ಅಂದರೆ ಇದರಲ್ಲಿ ರಸ್ತೆ, ಬೀದಿಗಳಲ್ಲಿ ಈಗ ಗಂಗಾನದಿಯಲ್ಲಿ ಕಾಣುತ್ತಿರುವ ಮನುಷ್ಯರ ಹೆಣಗಳು, ಕೋಟಿಗಟ್ಟಲೆ ಪ್ರಜೆಗಳ ನೋವು, ಸಂಕಟ ಯಾವುದೂ ಕೇಂದ್ರದ ನೀತಿಗೆ ಆಧಾರವೇ ಅಲ್ಲ. ವಿಶ್ವದ ಇತಿಹಾಸದಲ್ಲಿ ಕೆಲವರಿಗೆ ಅಗಾಧ ಸಂಪತ್ತು, ಬಹುಸಂಖ್ಯಾತರಿಗೆ ಕೇವಲ ಬವಣೆ ಬಡತನ ತಂದಿರುವ ಮಾರುಕಟ್ಟೆ ನೀತಿಯು ಈ ಮಹಾನ್ ದುರಂತದ ಕಾಲದಲ್ಲಿ ಕೇಂದ್ರ ಸರ್ಕಾರದ ನೀತಿಯಾಗಿದೆ. ಈ ವ್ಯಾಪಾರಿ ನೀತಿಯನ್ನು ಮರೆಮಾಚುವುದಕ್ಕಾಗಿ ಇದೇ ಹೇಳಿಕೆಯಲ್ಲಿ ಸರಕಾರವು ‘The wisdom of the executive should be trusted’ (ಕಾರ್ಯಾಂಗದ ವಿವೇಕದ ಮೇಲೆ ನಂಬಿಕೆ ಇರಿಸಬೇಕು) ಎಂದು ಹೈಕೋರ್ಟ್‌ಗೆ ಬುದ್ಧಿವಾದ ಹೇಳುತ್ತದೆ! ಅದನ್ನು ನಂಬಿದವರಲ್ಲಿ ಬಹುಪಾಲು ಇಂದು ಶವಗಳಾಗಿದ್ದಾರೆ. ಉಳಿದ ನಾವುಗಳು ಸರದಿ ಸಾಲಿನಲ್ಲಿ ನಿಂತಿದ್ದೇವೆ.

(ಡೆಕ್ಕನ್‌ ಹೆರಾಲ್ಡ್‌ ಪತ್ರಿಕೆಯಲ್ಲಿ ಮಂಗಳವಾರ (ಮೇ 11) ಪ್ರಕಟವಾದ ವರದಿಯ ಆಧಾರದಲ್ಲಿ ಈ ಲೇಖನ ಸಿದ್ಧಪಡಿಸಿದ್ದೇನೆ)

–ರಾಜೇಂದ್ರ ಚೆನ್ನಿ, ನಿವೃತ್ತ ಪ್ರಾಧ್ಯಾಪಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.