ADVERTISEMENT

ವಿಶ್ಲೇಷಣೆ: ವೈರಾಣು ಮತ್ತು ಹಿಂಸಾಚಾರ

ರೋಗಿಗಳನ್ನು ರಕ್ಷಿಸಬೇಕಾದ ವೈದ್ಯ, ಹಲ್ಲೆಯಿಂದ ತನ್ನನ್ನೇ ರಕ್ಷಿಸಿಕೊಳ್ಳಬೇಕಾದಂಥ ಸ್ಥಿತಿ ಬಂದರೆ...

ಡಾ.ಕೆ.ಎಸ್.ಪವಿತ್ರ
Published 18 ಜೂನ್ 2021, 19:30 IST
Last Updated 18 ಜೂನ್ 2021, 19:30 IST
   

‘ವೈರಸ್ ವಿತ್ ವಯೊಲೆನ್ಸ್’ ಎಂಬ ಪರಿಸ್ಥಿತಿಯನ್ನು ವೈದ್ಯಕೀಯ ಜಗತ್ತು ಎದುರಿಸುತ್ತಿರುವುದು ಪ್ರತಿದಿನ ಮಾಧ್ಯಮಗಳಲ್ಲಿ ವರದಿಯಾಗುತ್ತಿದೆ. ವೈದ್ಯರ ಮೇಲಿನ ಹಲ್ಲೆಯ ಪ್ರಕರಣಗಳು ಭಾರತದ ಎಲ್ಲ ರಾಜ್ಯಗಳಿಂದಲೂ ವರದಿಯಾಗುತ್ತಿವೆ. ಈ ಪ್ರಕರಣಗಳಲ್ಲಿ ಒಂದೆಡೆ ವೈದ್ಯ ವೈದ್ಯಕೀಯ ಸಿಬ್ಬಂದಿ ಗಂಭೀರವಾಗಿ ದೈಹಿಕವಾಗಿ, ಮಾನಸಿಕವಾಗಿ ಸಮಸ್ಯೆಗೀಡಾಗುತ್ತಾರೆ. ಇನ್ನೊಂದೆಡೆ, ಘಟನೆಯ ನಂತರದ ತನಿಖೆಯಲ್ಲಿ ಸಿಕ್ಕಿಬಿದ್ದ ಕೆಲವರು (ಇವರು ಸಾಮಾನ್ಯವಾಗಿ ಯುವಕರು ಎಂಬುದು ಗಮನಾರ್ಹ) ದಂಡಕ್ಕೆ, ಬಂಧನಕ್ಕೆ ಒಳಗಾಗುತ್ತಾರೆ. ಇಂಥ ಘಟನೆಗಳು ವೈದ್ಯಕೀಯ ಸೇವೆ ಉತ್ತಮಗೊಳಿಸುವುದು ಬಿಡಿ, ವೈದ್ಯರು ಮತ್ತಷ್ಟು ಎಚ್ಚರದಿಂದ ಇರುವಂತೆ, ಸೇವೆ ನೀಡಿಕೆ ತಡೆಹಿಡಿಯುವಂತೆ ಮಾಡಿಬಿಡುತ್ತವೆ.

ವೈದ್ಯರ ಮೇಲಿನ ಹಿಂಸೆಯನ್ನು ಭಾರತಕ್ಕಷ್ಟೇ ಸೀಮಿತವಾದದ್ದೆಂದು ತಿಳಿದರೆ ಅದು ತಪ್ಪು. ಇತಿಹಾಸವನ್ನು ಅವಲೋಕಿಸಿದರೆ, 135 ವರ್ಷಗಳ ಹಿಂದೆಯೇ, ಅಂದರೆ ಜನಸಂಖ್ಯೆ ಕಡಿಮೆಯಿದ್ದು, ವೈದ್ಯರಿಗೂ ಬಹಳಷ್ಟು ಸಮಯವಿದ್ದು, ‘ವೈದ್ಯೋ ನಾರಾಯಣೋ ಹರಿಃ’ ಎಂದು ಜನರೂ ಒಪ್ಪುತ್ತಿದ್ದ ಕಾಲದಲ್ಲಿ ಪ್ರತಿಷ್ಠಿತ ಜರ್ನಲ್‌ ಒಂದರಲ್ಲಿ ಪ್ರಕಟವಾಗಿದ್ದ ಲೇಖನದ ಕೆಲವು ಸಾಲುಗಳ ಅರ್ಥ ಹೀಗಿತ್ತು: ‘ಯಾವ ವೈದ್ಯನೂ ತಾನು ಎಷ್ಟೇ ಎಚ್ಚರಿಕೆಯಿಂದ, ಆತ್ಮಸಾಕ್ಷಿಯಿಂದ ಇದ್ದರೂ, ತಾನು ಮಾಡದ ತಪ್ಪಿಗಾಗಿ ಹಲವು ರೀತಿಯ ಹಿಂಸೆಗಳನ್ನು ಎದುರಿಸುವ ಸಾಧ್ಯತೆ ಇದ್ದೇ ಇದೆ ಎಂಬುದನ್ನು ಗಮನಿಸಲೇಬೇಕು’.

ಭಾರತದಲ್ಲಿ ವೈದ್ಯರ ಮೇಲಿನ ಕ್ರೌರ್ಯದ ಪ್ರಕರಣಗಳು ಹೆಚ್ಚಾಗಿವೆ ಎಂಬುದನ್ನು ಅರಿಯಲು ನಾವು ಯಾವ ಅಧ್ಯಯನಗಳನ್ನೂ ಪರಿಶೀಲಿಸಬೇಕಾಗಿಲ್ಲ. ಅವು ಸುತ್ತಮುತ್ತ ನಿಚ್ಚಳವಾಗಿ ಗೋಚರಿಸುತ್ತವೆ. ಕೋವಿಡ್ ಸಮಯದಲ್ಲಂತೂ ಇಂಥ ಪ್ರಕರಣಗಳು ಮತ್ತಷ್ಟು ಹೆಚ್ಚಾಗಿವೆ. ತಂತ್ರಜ್ಞಾನದ ಬಲದಿಂದ ಇಂಥ ಪ್ರಕರಣಗಳನ್ನು ಮತ್ತಷ್ಟು ‘ವೈರಲ್’ ಆಗಿ ಹರಿಯಬಿಡುವುದು, ವೈರಸ್‍ಗಿಂತ ಅವು ವೇಗವಾಗಿಯೂ ತೀವ್ರವಾಗಿಯೂ ಮನಸ್ಸಿನ ಮೇಲೆ ಪರಿಣಾಮ ಬೀರುತ್ತವೆ. ಅವುಗಳ ಸತ್ಯಾಸತ್ಯತೆಯನ್ನು ಪರೀಕ್ಷಿಸದೆ, ತತ್‍ಕ್ಷಣದ ಪ್ರತಿಕ್ರಿಯೆ ನೀಡುವಂತೆ ಸಾವಿರಾರು ಮನಸ್ಸುಗಳನ್ನು ಪ್ರಚೋದಿಸುತ್ತವೆ. ಇಂತಹ ಸಂದೇಶಗಳು, ವಿಡಿಯೊಗಳನ್ನು ‘ವೈರಲ್’ ಎನ್ನುವುದಕ್ಕಿಂತ ‘ಅಲ್ಟ್ರಾವೈರಲ್’ ಎನ್ನುವುದೇ ಸರಿ!

ADVERTISEMENT

ರೋಗಿಗಳ ಕುಟುಂಬದವರು ಏಕೆ ಹಿಂಸೆಗೆ ತೊಡಗುತ್ತಾರೆ ಎನ್ನುವುದರ ಹಿಂದಿನ ಮನಃಸ್ಥಿತಿಯನ್ನು ಗಮನಿಸೋಣ. ಈ ಮನಃಸ್ಥಿತಿಯ ಕೇಂದ್ರವೆಂದರೆ ಆತಂಕ. ಆತಂಕವು ಜನರನ್ನು ಬೆಂಬಲಕ್ಕಾಗಿ ಕರೆಯುವುದನ್ನು
ಪ್ರಚೋದಿಸುತ್ತದೆ. ಬೆಂಬಲಕ್ಕೆ ಬಂದ ಹಲವರಿಗೆ ಕಾಯಿಲೆ-ರೋಗಿಯ ಪರಿಸ್ಥಿತಿಯ ತಲೆ-ಬುಡಗಳು ಗೊತ್ತಿರುವುದಿಲ್ಲ. ಸಾವು ಉಂಟಾಗಿದೆ ಅಥವಾ ರೋಗಿಯ ಪರಿಸ್ಥಿತಿ ಗಂಭೀರವಾಗಿದೆ ಎಂದಾಗ, ಮಾಹಿತಿ ಗೊತ್ತಿರುವ ರೋಗಿಯ ಪತಿ, ಪತ್ನಿ, ಹತ್ತಿರದ ಸಂಬಂಧಿ ಆತಂಕ-ದುಃಖದಲ್ಲಿ ಮುಳುಗಿರುತ್ತಾರೆ. ಬೆಂಬಲಕ್ಕಾಗಿ ಬಂದಿರುವ ಪರಿಚಿತರು, ಇತರ ಸಂಬಂಧಿಕರು ಅವರಿಗೆ ಹೇಗಾದರೂ ಸಹಾಯ ಮಾಡಬೇಕೆನ್ನುವ ಉದ್ದೇಶ ಹೊಂದಿರುತ್ತಾರೆ. ಕೆಲವೊಮ್ಮೆ ‘ಗಲಾಟೆ ಮಾಡಿದರೆ ಸರಿ’ಯಾಗುತ್ತದೆ ಎನ್ನುವ ನಂಬಿಕೆ ಅವರಿಗಿರುತ್ತದೆ. ಇನ್ನು ಕೆಲವೊಮ್ಮೆ ತಮ್ಮ ಮುಖ್ಯ ಉದ್ದೇಶವಾದ ‘ರೋಗಿ ಆರಾಮಾಗಬೇಕು’ ಎಂಬುದನ್ನು ಬದಿಗಿರಿಸಿ ವೈದ್ಯರನ್ನು ಬೆದರಿಸಿ ‘ಸರಿ’ ಮಾಡುವುದನ್ನೇ ತಮ್ಮ ಮುಖ್ಯ ಗುರಿಯಾಗಿಸಿಕೊಂಡು ಬಿಡುತ್ತಾರೆ, ಗಲಾಟೆಯೆಬ್ಬಿಸುವುದು, ಹಿಂಸೆ ಮಾಡುವು ದನ್ನೇ ಕೇಂದ್ರವಾಗಿಸಿ ಬಿಡುತ್ತಾರೆ. ಇದು ಚಿಕಿತ್ಸೆಗಾಗಿ ಕಾದಿರುವ ಇತರ ರೋಗಿಗಳಿಗೂ ಚಿಕಿತ್ಸೆ ನೀಡಲಾಗದ, ತನ್ನ ರಕ್ಷಣೆಯನ್ನು ಹೇಗಾದರೂ ಮಾಡಿಕೊಳ್ಳಬೇಕಾದ ತುರ್ತಿಗೆ ವೈದ್ಯನನ್ನು ತಳ್ಳುತ್ತದೆ.

ರೋಗಿಗಳು ಮತ್ತು ಆತನ ಮನೆಯವರಿಗೆ ವೈದ್ಯಕೀಯ ಸೇವೆಗಳನ್ನು ಪಡೆಯುವಲ್ಲಿ ಮುಖ್ಯ ಸವಾಲುಗಳೆಂದರೆ, ದೀರ್ಘ ಕಾಯುವ ಅವಧಿ, ತತ್‍ಕ್ಷಣ ಬೇಕಾದ ಪರೀಕ್ಷೆಗಳು ಸಕಾಲಕ್ಕೆ ದೊರೆಯದಿರುವುದು, ಮತ್ತೊಂದೆಡೆ ಕಳಿಸುವಷ್ಟರಲ್ಲಿ ತಡವಾಗುವುದು ಮತ್ತು ಜನಜಂಗುಳಿ. ಕೋವಿಡ್‍ನಂತಹ ಸಂದರ್ಭದಲ್ಲಿ ಮತ್ತಷ್ಟು ಸವಾಲುಗಳು- ಸಂಚಾರದ ತಡೆ, ಮಾಹಿತಿ ಪಡೆಯಲು ಒಬ್ಬರಿಗಿಂತ ಹೆಚ್ಚು ಜನರಿಗೆ ಸಾಧ್ಯವಾಗಿರುವುದು, ಐ.ಸಿ.ಯು ರೋಗಿಗಳು ಹೆಚ್ಚಿರುವುದು, ಈ ರೋಗಿಗಳ ಜೊತೆಗೆ ಯಾರನ್ನೂ ಇರಲು ಬಿಡದಿರುವುದು ಇತ್ಯಾದಿ.

ಸವಾಲುಗಳು ಕೇವಲ ರೋಗಿಗಷ್ಟೇ ಅಲ್ಲ, ವೈದ್ಯರಿಗೂ ಸವಾಲುಗಳೇ! ಇಂಥ ಸಮಯದಲ್ಲಿ ‘ಸಿಕ್ಸ್ ಮಿನಿಟ್ಸ್ ಫಾರ್ ಎ ಪೇಷಂಟ್’- ‘ಒಬ್ಬ ರೋಗಿಗೆ ಆರು ನಿಮಿಷಗಳು’ ಎಂಬ ಸೂತ್ರದಂತೆ, ‘ಟ್ರಯೇಜ್’ ಅನ್ನು (Triage– ಅಂದರೆ ಚಿಕಿತ್ಸೆ ನೀಡಬೇಕಾದ ಕ್ರಮವನ್ನು ನಿರ್ಧರಿಸುವ ಒಂದು ವ್ಯವಸ್ಥೆ. ಯಾರು ಬೇಗ ಬಂದಿದ್ದಾರೆ ಎಂಬುದಕ್ಕಿಂತ, ಯಾರ ಸ್ಥಿತಿ ಗಂಭೀರವಾಗಿದೆ ಎಂದು ಗಮನಿಸಿ ಚಿಕಿತ್ಸೆ ನೀಡುವುದು) ವೈದ್ಯರು ಕರಗತ ಮಾಡಿ ಕೊಂಡರೂ ರೋಗಿಗೆ, ಆತನ ಆತ್ಮೀಯರಿಗೆ ಇವು ಅರ್ಥವಾಗುವುದು ಕಷ್ಟಸಾಧ್ಯ.

ಇವುಗಳ ಮಧ್ಯೆ ಮತ್ತೊಂದು ವಿಷಯ ಸಾಮಾನ್ಯ ವಾಗಿ ಎಲ್ಲ ವೈದ್ಯರನ್ನು ಕಾಡುತ್ತದೆ. ರೋಗಿಗಳಿಗೆ, ಅವರ ಮನೆಯವರಿಗೆ ಸರಿಯಾಗಿ ಮಾಹಿತಿ ತಿಳಿಸಿಕೊಡುವುದು ಈ ರೀತಿಯ ಹಿಂಸೆಗಳನ್ನು ತಡೆಯುತ್ತದೆ ಎಂದು ಬಹು ಜನ ಹಿರಿಯ ವೈದ್ಯರು ಸಾಮಾನ್ಯವಾಗಿ ಕಿರಿಯ ವೈದ್ಯರಿಗೆ ಕಿವಿಮಾತು ಹೇಳುತ್ತಾರಷ್ಟೆ. ಆದರೆ ಮಾಹಿತಿಯನ್ನು ರೋಗಿ, ಅವರ ಮನೆಯವರಿಗೆ ಕೊಡಬಹುದು. ಆದರೆ, ಬರುತ್ತಲೇ ಇರಬಹುದಾದ ರೋಗಿಯ ಹಲವು ಸಂಬಂಧಿಕರಿಗೆ ಅದನ್ನು ಮತ್ತೆ ಮತ್ತೆ ಹೇಳುವುದು, ದಿನಕ್ಕೆ 50-70 ರೋಗಿಗಳನ್ನು ನೋಡಬೇಕಾದ
ಅವಶ್ಯಕತೆಯಿರುವ ಗ್ರಾಮೀಣ- ಚಿಕ್ಕ ನಗರ ಪ್ರದೇಶಗಳ ವೈದ್ಯರಿಗೆ ಹೇಗೆ ಸಾಧ್ಯ? ಅದರ ಮೇಲೆ ಬಹು ಬಾರಿ ರೋಗಿಗಳ ಮನೆಯವರು ಸಾಮಾನ್ಯವಾಗಿ ರೋಗದ ಎಲ್ಲ ಲಕ್ಷಣ, ಅಪಾಯಗಳನ್ನು ವಿವರಿಸಿದ ಮೇಲೆ ಕೇಳುವ ಒಂದು ಪ್ರಶ್ನೆ ‘ಮತ್ತೆ ಏನೂ ಅಪಾಯ ಇಲ್ಲ ಅಲ್ವ ಡಾಕ್ಟ್ರೇ?!’ ಈ ಪ್ರಶ್ನೆಗೆ ವೈದ್ಯರು ನೀಡುವ ಉತ್ತರ ‘ಇಲ್ಲ’ ಎಂದಾದರೆ, ವೈದ್ಯರು ಆವರೆಗೆ ವಿವರಿಸಿದ ಎಲ್ಲ ಅಪಾಯಗಳನ್ನೂ ಬದಿಗಿರಿಸಿಬಿಡುವ ಸಾಧ್ಯತೆ ಎರಗಿಬಿಡುತ್ತದೆ. ಹಾಗಾಗಿಯೇ ಮತ್ತೆ ಈ ಪ್ರಶ್ನೆಗೆ ಇನ್ನೊಂದು ಬಾರಿ ರೋಗದ ಬಗ್ಗೆ ವಿವರಿಸಬೇಕಾಗುತ್ತದೆ.

ಇವುಗಳಿಗೆಲ್ಲ ಪರಿಹಾರ ಎರಡು ಹಂತಗಳಲ್ಲಿದೆ. ಮೊದಲನೆಯದು, ದೀರ್ಘಕಾಲ ಸಮಾಜವು ವೈದ್ಯಕೀಯ ಸೇವೆ ಉತ್ತಮಪಡಿಸಲು ಶ್ರಮಿಸಬೇಕಾದ ಹಾದಿ. ವೈದ್ಯ ಕೊನೆಯಲ್ಲಿ ‘ಸಾವಿನ ಸುದ್ದಿ’ಯನ್ನು ತಲುಪಿಸುವ, ‘ಹದಗೆಟ್ಟ ಒಂದು ವ್ಯವಸ್ಥೆ’ಯ ಪ್ರತಿನಿಧಿಯಾಗಿರಬಹುದು ಅಥವಾ ಕೆಲವೊಮ್ಮೆ ಕಾಯಿಲೆಯ ಆರಂಭಿಕ ಹಂತದಲ್ಲಿ ಚಿಕಿತ್ಸೆಗೆ ಒಳಪಡದ, ತಡವಾಗಿ ಬಂದು ಉಲ್ಬಣಗೊಂಡ ಕಾಯಿಲೆಯ ಸ್ಥಿತಿಯಿಂದ ಸಾವಿಗೀಡಾದ, ಅಪಾಯಕ್ಕೀಡಾದ ವ್ಯಕ್ತಿಯ ಕುಟುಂಬದವರ ಆರೋಪಕ್ಕೆ ಬಲಿಪಶುವಾಗುವ ಸಾಧ್ಯತೆಯೂ ಇರ ಬಹುದು. ಒಂದೊಮ್ಮೆ ವೈದ್ಯನ ತಪ್ಪು ಗ್ರಹಿಕೆಯಿಂದ, ನಿರ್ಲಕ್ಷ್ಯದ ನಡವಳಿಕೆಯಿಂದ ಸಾವು ಅಥವಾ ಅಪಾಯ ಒದಗಿದ್ದರೂ ಆತನನ್ನು ಸರಿ ಪಡಿಸುವ, ವೈದ್ಯಕೀಯ ಜಗತ್ತನ್ನು ಉತ್ತಮಪಡಿಸುವ ಸರಿದಾರಿಯೆಂದರೆ ಕಾನೂನುಬದ್ಧ ಹೋರಾಟ.

ವೈದ್ಯಕೀಯ ತರಬೇತಿಯಲ್ಲಿಯೂ ಹಲವು ಬದಲಾವಣೆಗಳು ಆರಂಭವಾಗಿವೆ. ಕಡಿಮೆ ಸಮಯದಲ್ಲಿ ಸರಿಯಾದ ಪದಗಳನ್ನು ಉಪಯೋಗಿಸುವ ಸಂವಹನದ ಸಾಮರ್ಥ್ಯ, ರೋಗಿಗಳು, ಅವರ ಮನೆಯವರಿಂದ ಹಿಂಸೆ ಎದುರಾಗುವ ಮುನ್ನವೇ ಅದನ್ನು ಗ್ರಹಿಸುವುದು, ರೋಗಿಗಳು, ಅವರ ಮನೆಯವರಿಗೆ ಅರಿವು ಮೂಡಿಸುವುದು, ಸಾವಿನಂತಹ ಕಷ್ಟದ ಸಂದರ್ಭಗಳಲ್ಲಿ ರೋಗಿಯನ್ನು ಕಳೆದುಕೊಂಡು ಪ್ರಕ್ಷುಬ್ಧವಾಗಿರುವ ಮನಃಸ್ಥಿತಿಯಲ್ಲಿ ಸ್ಥಿರತೆಯಿಂದ ಸಾಂತ್ವನ ಹೇಳುವ ಕಲೆಯನ್ನು ಅನುಭವದಿಂದ ರೂಢಿಸಿಕೊಳ್ಳುವುದು ಇವುಗಳನ್ನು ಇಂದಿನ ವೈದ್ಯಕೀಯ ಪದವಿ- ಸ್ನಾತಕೋತ್ತರ ಪದವಿಗಳಲ್ಲಿ ಕಲಿಸುವುದು ಅಗತ್ಯ.

ವೈದ್ಯರು- ಆಸ್ಪತ್ರೆ ವಿರುದ್ಧದ ಹಿಂಸೆಯು ಕ್ರಿಮಿನಲ್ ಅಪರಾಧ ಎಂಬುದು ವೈದ್ಯಕೀಯ ಜಗತ್ತಿಗೆ ಕಾನೂನು ನೀಡಿರುವ ರಕ್ಷಣೆ. ಆದರೆ ಇದರ ಅರಿವು ಜನರಲ್ಲಿ ವ್ಯಾಪಕವಾಗಿಲ್ಲ. ಆಡಳಿತ ವ್ಯವಸ್ಥೆ, ಮಾಧ್ಯಮಗಳು ವೈದ್ಯರ ಮೇಲಿನ ಹಲ್ಲೆ ಪ್ರಕರಣಗಳನ್ನು ಗಮನಿಸುವಂತೆ, ಆ ಕ್ಷಣದ ಪರ, ವಿರೋಧಗಳನ್ನು ವೈಭವೀಕರಿಸುವಂತೆ ಹಲ್ಲೆಯ ನಂತರದ ಘಟನಾವಳಿಗಳನ್ನು ಗಮನಿಸಲಾರವು. ಹೀಗೆ ಗಮನಿಸುವುದು ವೈದ್ಯಕೀಯ ಜಗತ್ತಿಗೆ- ಸಮಾಜಕ್ಕೆ ಪ್ರಬಲ ಸಂದೇಶ ನೀಡುವ ಎಲ್ಲ ಸಾಧ್ಯತೆ ಗಳೂ ಇವೆ. ವೈರಾಣು- ರೋಗಾಣುವಿನ ಜೊತೆಗೆ ಹೊಡೆದಾಡುತ್ತ ರೋಗಿಗಳನ್ನು ರಕ್ಷಿಸಬೇಕಾದ ವೈದ್ಯ, ರೋಗಿಗಳೊಡನೆಯೇ ಹೋರಾಡಬೇಕಾದ ವ್ಯವಸ್ಥೆಯನ್ನು ಸೃಷ್ಟಿಸದಿರೋಣ.

ಲೇಖಕಿ: ಮನೋವೈದ್ಯೆ, ಶಿವಮೊಗ್ಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.