ADVERTISEMENT

ದೇಹ ರಾಜಕಾರಣದ ದಾಳವಾಗಿ ಮಹಿಳೆ; ಚಾರಿತ್ರಿಕ ವಾಸ್ತವ ಮತ್ತು ಪುರಾಣಗಳ ರೂಪಕ

ದೇಹ ರಾಜಕಾರಣದ ದಾಳವಾಗಿ ಮಹಿಳೆ

ಪ್ರೊ.ಬರಗೂರು ರಾಮಚಂದ್ರಪ್ಪ
Published 13 ಮಾರ್ಚ್ 2021, 19:30 IST
Last Updated 13 ಮಾರ್ಚ್ 2021, 19:30 IST
ಕಲೆ: ಭಾವು ಪತ್ತಾರ್‌
ಕಲೆ: ಭಾವು ಪತ್ತಾರ್‌   

ಲೈಂಗಿಕ ಹಗರಣದ ಆರೋಪ ಎದುರಿಸಿದ ರಾಜ್ಯದ ರಾಜಕಾರಣಿಗಳಲ್ಲಿ ರಮೇಶ್‌ ಜಾರಕಿಹೊಳಿ ಅವರೇನೂ ಮೊದಲಿಗರಲ್ಲ. ಪ್ರಾಯಶಃ ಕೊನೆಯವರೂ ಆಗಲಾರರು. ಅಧಿಕಾರದ ಗದ್ದುಗೆಗೆ ಏರಿ ಕುಳಿತವರನ್ನೇ ಇಂತಹ ಹಗರಣಗಳು ಸುತ್ತಿಕೊಳ್ಳುವುದೇಕೆ? ವಿಷಕನ್ಯೆ, ಮೋಹಿನಿ, ಮಾಯೆ, ಅನಾಮಿಕೆ… ಹೀಗೆ ವಿವಿಧ ಪಾತ್ರ ರೂಪಕಗಳು ಹೇಳುವ ಕಥೆಯಾದರೂ ಯಾವುದನ್ನು?

ರಾಣಿ ಸ್ಥಾನದಲ್ಲಿದ್ದರೂ ಮಹಿಳೆಯು ಶೋಷಿತಳೇ ಆಗಿರುತ್ತಾಳೆ ಎಂಬ ಮಾತೊಂದಿದೆ. ಹೀಗೆ ಪ್ರಚಲಿತವಿರುವ ಈ ಮಾತು ಮಹಿಳೆಯರನ್ನು ಎರಡನೇ ದರ್ಜೆಯ ಪ್ರಜೆಯಂತೆ ಕಾಣುತ್ತ ಬಂದ ವ್ಯವಸ್ಥೆಯ ಒಂದು ವ್ಯಾಖ್ಯಾನವೂ ಆಗಿದೆ. ಉತ್ಪಾದನಾ ಪದ್ಧತಿಯನ್ನು ತನ್ನ ಯಜಮಾನಿಕೆಯ ನಿಯಂತ್ರಣದಲ್ಲಿಟ್ಟುಕೊಂಡ ಪುರುಷ, ಆರ್ಥಿಕವಾಗಿ ಅಷ್ಟೇ ಅಲ್ಲ. ಸಾಮಾಜಿಕ ಮತ್ತು ಸಾಂಸ್ಕೃತಿಕ ನೆಲೆಯಲ್ಲೂ ‘ಯಜಮಾನ ಸಿಂಹಾಸನ’ದ ಆನುವಂಶಿಕ ಹಕ್ಕುದಾರನಾಗಿಬಿಟ್ಟ.

ಜಾತಿ, ವರ್ಣ, ವರ್ಗ ಮತ್ತು ಧರ್ಮಗಳ ನೆಲೆಯಲ್ಲೂ ಈ ಯಜಮಾನಿಕೆಯೇ ಮಾನ್ಯವಾಗಿತ್ತು. ಮುಂದೆ ಕೆಲವು ಸುಧಾರಣೆಗಳಿಂದ ಪುರುಷ ಪ್ರಧಾನ ಯಜಮಾನಿಕೆಯಲ್ಲಿ ‘ಅನಿವಾರ್ಯ ಔದಾರ್ಯ’ ಕಾಣಿಸಿಕೊಳ್ಳತೊಡಗಿತು. ಆದರೆ, ಮಹಿಳೆಯರ ಸ್ಥಿತಿಗತಿಗಳು ಸಂಪೂರ್ಣ ಸ್ಥಿತ್ಯಂತರ ಹೊಂದಿಲ್ಲ. ಅಷ್ಟೇಕೆ, ಎಲ್ಲಾ ಮಹಿಳೆಯರ ಸ್ಥಿತಿಗತಿಗಳ ಸ್ವರೂಪ ಒಂದೇ ರೀತಿಯದಾಗಿಲ್ಲ. ರಾಣಿಸ್ಥಾನದಲ್ಲಿರುವ ಮಹಿಳೆ ಪುರುಷ ಪ್ರಧಾನತೆಯ ಅಡಿಯಲ್ಲಿದ್ದರೂ ಆಕೆ ಇತರೆ ವರ್ಗದ ಮಹಿಳೆಯರಂತೆ ವರ್ಗ ಶೋಷಣೆಯ ಮೊದಲ ಉದಾಹರಣೆ ಆಗುವುದಿಲ್ಲ. ರೈತ, ಕೂಲಿ, ಅಸ್ಪೃಶ್ಯ ಎನ್ನಲಾಗುವ ಸಾಮಾಜಿಕ ಅವಮಾನವನ್ನು ರಾಣಿಯೇ ಮುಂತಾದ ಮೇಲ್ವರ್ಗದ ಮಹಿಳೆ ಅನುಭವಿಸುವುದಿಲ್ಲ. ಸಾಮಾನ್ಯೀಕೃತ ನೆಲೆಯಲ್ಲಿ ಎಲ್ಲಾ ಮಹಿಳೆಯರೂ ಶೋಷಿತರಾದರೂ ಶೋಷಣೆಯ ಆಳ, ಅಗಲಗಳ ಆಯಾಮದಲ್ಲಿ ಅಂತರವಿದ್ದೇ ಇರುತ್ತದೆ. ಇದು ಶ್ರೇಣೀಕೃತ ಸಾಮಾಜಿಕ ವ್ಯವಸ್ಥೆಯ ವಾಸ್ತವ. ಆದರೂ ಪುರುಷ ಪ್ರಧಾನ ವ್ಯವಸ್ಥೆಯು ಒಟ್ಟಾರೆಯಾಗಿ ಮಹಿಳೆಯರನ್ನು ಬಳಸಿಕೊಂಡ ರೀತಿ ಭೀಕರವೆಂದೇ ಹೇಳಬೇಕಾಗುತ್ತದೆ.

ADVERTISEMENT

ಹೀಗೆ ಮಹಿಳೆಯನ್ನು ಸ್ವಾರ್ಥ ಕೇಂದ್ರಿತ ದಾಳವಾಗಿ ಬಳಸಿದ ದಮನಕಾರಿ ಮಾದರಿಗಳನ್ನು ಚರಿತ್ರೆಯ ವಾಸ್ತವದಲ್ಲೂ ಪುರಾಣಗಳ ಪ್ರತೀಕಾತ್ಮಕತೆಯಲ್ಲೂ ಕಾಣಬಹುದು. ವಿಷಕನ್ಯೆಯ ಕಲ್ಪನೆಯಿಂದಲೇ (?) ದಾಳದಮನಕಾರಿ ಕೃತ್ಯಗಳ ನಿದರ್ಶನವನ್ನು ಆರಂಭಿಸಬಹುದು. ವಿಷಕನ್ಯೆಯರನ್ನು ಶತ್ರುನಾಶಕ್ಕಾಗಿ ಬಳಸಿಕೊಳ್ಳಲಾಗುತ್ತಿತ್ತು ಎಂದು ಹೇಳಲಾಗುತ್ತದೆ. ಚಾಣಕ್ಯನ (ಕೌಟಿಲ್ಯ) ಅರ್ಥಶಾಸ್ತ್ರದಲ್ಲಿ ವಿಷಕನ್ಯೆಯರ ಬಳಕೆ ಕುರಿತ ಪ್ರಸ್ತಾಪವಿದೆ. ‘ಕಲ್ಕಿ ಪುರಾಣ’ವು ವಿಷಕನ್ಯೆಯರ ನೋಟದಿಂದಲೇ ಎದುರಿದ್ದವರನ್ನು ಕೊಲ್ಲಬಹುದಿತ್ತೆಂಬ ಮಾಹಿತಿ ನೀಡುತ್ತದೆ. ಚಿತ್ರಗ್ರೀವ ಎಂಬ ಗಂಧರ್ವನ ಪತ್ನಿ ಸುಲೋಚನಳು ಇಂಥ ವಿಷಕನ್ಯೆಯಾಗಿದ್ದಳೆಂದು ನಿರೂಪಿಸಲಾಗಿದೆ. ಅನೇಕ ಜನಪದ ಕಥನಗಳಲ್ಲಿ ವಿಷಕನ್ಯೆಯ ಪ್ರತೀಕ ಪಾತ್ರಗಳ ಬಳಕೆಯಾಗಿದೆ.

ಮಹಿಳೆಯರನ್ನು ವಿಷಕನ್ಯೆಯಾಗಿಸುವ ಪ್ರಕ್ರಿಯೆಯನ್ನು ಬಾಲ್ಯದಿಂದಲೇ ಆರಂಭಿಸಲಾಗುತ್ತಿತ್ತಂತೆ! ಆಹಾರದಲ್ಲಿ ವಿಷವನ್ನು ಉಣಿಸುತ್ತ ಹೆಣ್ಣುಮಕ್ಕಳ ದೇಹವನ್ನು ಅದಕ್ಕೆ ಒಗ್ಗಿಸಲಾಗುತ್ತಿತ್ತು. ಕೆಲವರು ಸತ್ತೇ ಹೋಗುತ್ತಿದ್ದರು. ಬದುಕಿದವರು ವಿಷಕನ್ಯೆಯರಾಗಿ ಬೆಳೆಯುತ್ತಿದ್ದರು. ಇವರನ್ನು ಅಧಿಕಾರಸ್ಥ ರಾಜರು ತಮ್ಮ ಶತ್ರುರಾಜರ ನಾಶಕ್ಕೆ (ಸಾವಿಗೆ) ಬಳಸುತ್ತಿದ್ದರು. ವಿಷಕನ್ಯೆಯರನ್ನು ಲೈಂಗಿಕವಾಗಿ ಬಳಸುವುದು, ವಿಷಪ್ರಾಶನದ ಸಾಧನವಾಗಿಸುವುದು-ಇವೇ ಮುಂತಾದ ಕ್ರಿಯೆಗಳಿಂದ ಸಾಮ್ರಾಜ್ಯ ವಿಸ್ತರಣೆಗೆ ವೇದಿಕೆಯಾಗಿಸಿಕೊಂಡ ಪ್ರಸಂಗಗಳನ್ನು ಕೆಲವು ಮಾಹಿತಿಗಳು ನೀಡುತ್ತವೆ. ನಂದರ ಅಮರ್ತ್ಯ ರಾಕ್ಷಸನು ಚಂದ್ರಗುಪ್ತಮೌರ್ಯನನ್ನು ಕೊಲ್ಲಲು ವಿಷಕನ್ಯೆಯನ್ನು ಕಳುಹಿಸಿದ್ದನೆಂದೂ ಚಾಣಕ್ಯನು ಅದನ್ನು ತಪ್ಪಿಸಿದನೆಂದೂ ತಿಳಿಸುವ ಉಲ್ಲೇಖಗಳಿವೆ. ಅಷ್ಟೇಕೆ ನಂದವಂಶದ ಪ್ರವರ್ತಕ ಮಹಾಪದ್ಮನಂದನು ಶಿಶುನಾಗ ವಂಶದ ರಾಜನನ್ನು ಕೊಲ್ಲಲು ವಿಷಕನ್ಯೆಯನ್ನು ಬಳಸಿದ್ದಾಗಿ ಮಾಹಿತಿಯಿದೆ. ವಿಶಾಖದತ್ತ ವಿರಚಿತ ‘ಮುದ್ರಾರಾಕ್ಷಸ’ ಕೃತಿಯಲ್ಲಿ ವಿಷಕನ್ಯೆ ಬಳಕೆಯ ಪ್ರಸ್ತಾಪವಿದೆ.

ಹೀಗೆ ಪುರಾಣ ಮತ್ತು ಚರಿತ್ರೆಯ ಪ್ರಸಂಗಗಳಲ್ಲಿ ಪ್ರಸ್ತಾಪಿಸಲಾದ ‘ವಿಷಕನ್ಯೆಯರು’ ನಿಜವಾಗಿಯೂ ವಿಷವುಂಡು ಬೆಳೆದು ಕನ್ಯೆಯರಾಗಿದ್ದರೋ ಇಲ್ಲವೋ ಎಂಬ ಪ್ರಶ್ನೆಯನ್ನು ಹೊರತುಪಡಿಸಿ ನೋಡಿದರೂ ಮಹಿಳೆಯರನ್ನು ತಮ್ಮ ರಾಜಪ್ರಭುತ್ವ ಸ್ಥಾಪನೆ ಮತ್ತು ವಿಸ್ತರಣೆಗೆ ದಾಳವಾಗಿ ಬಳಸಿಕೊಳ್ಳುತ್ತಿದ್ದ ‘ಸತ್ಯವನ್ನು’ ಈ ಪ್ರಸಂಗಗಳು ಪ್ರತಿನಿಧಿಸುತ್ತವೆ. ‘ವಿಷಕನ್ಯೆ’ಯನ್ನು ಕಲ್ಪಿತ ರೂಪಕವೆಂದು ಭಾವಿಸಿದರೂ ಮಹಿಳಾ ದಾಳದ ಈ ರೂಪಕ ನಿರ್ಮಾಣಕ್ಕೆ ಪೂರಕವಾದ ಪ್ರಸಂಗಗಳು ರಾಜಪ್ರಭುತ್ವದ ಸಂದರ್ಭದಲ್ಲಿ ನಡೆದಿರುವುದು ನಿಜವೇ ಆಗಿರುತ್ತದೆ. ಇಂತಹ ನಿಜಗಳನ್ನು ನಿರೂಪಿಸಲು ಪೂರಕ ರೂಪಕಗಳ ನಿರ್ಮಾಣವಾಗಿರುತ್ತದೆ. ಅಧಿಕಾರ ಲಾಲಸೆಗಾಗಿ ಮಹಿಳೆಯರನ್ನು ಬಳಸಿ ಬಿಸಾಕುವ ಭೀಕರ ಮನೋವೃತ್ತಿಯು ಪ್ರಭುತ್ವ ಪದ್ಧತಿಯ ಕ್ರೌರ್ಯವನ್ನು ಸಂಕೇತಿಸುತ್ತದೆ.

ಮಹಿಳೆಯನ್ನು ಅಧಿಕಾರದ ಲಾಲಸೆಗೆ ದಾಳವಾಗಿ ಬಳಸಿದ್ದಕ್ಕೆ ಚರಿತ್ರೆಯಲ್ಲೂ ನಿದರ್ಶನಗಳಿವೆ. ಸಾಂಕೇತಿಕವಾಗಿ ಅಶೋಕಚಕ್ರವರ್ತಿ ಕಾಲದ ಒಂದು ನಿದರ್ಶನವನ್ನು ನೀಡಬಹುದು. ಬೃಹದ್ರಥ ಮೌರ್ಯನನ್ನು ಆತನ ಸೈನ್ಯದ ಮಹಾದಂಡನಾಯಕನಾಗಿದ್ದ ಪುಷ್ಯಮಿತ್ರಶುಂಗನು ಕೊಲ್ಲುವುದಕ್ಕಾಗಿ ತನ್ನ ಮಗಳನ್ನೇ ಮದುವೆ ಮಾಡಿಕೊಟ್ಟು ‘ಕ್ರೌರ್ಯಸಾಧನೆ’ ಮಾಡಿಸಿದನಂತೆ. ಮಗಳನ್ನು ಮದುವೆ ಮಾಡಿಸಿ, ಆಪ್ತನಾಗಿ, ಆಕೆಯನ್ನೇ ಬಳಸಿ, ಪಿತೂರಿ ಮಾಡಿ, ಹತ್ಯೆ ಮಾಡಿಸಿದನಂತೆ (ಉಲ್ಲೇಖ: ಡಾ.ಸಿ. ಚಂದ್ರಪ್ಪನವರ ಬರಹ).

ಮಹಿಳೆಯನ್ನು ಸಂಚಿನ ಸಾಧನವಾಗಿ ಬಳಸಿದ ಘಟನೆಗಳನ್ನು ಪುರಾಣ ಪ್ರಸಂಗ ಮತ್ತು ಕಾವ್ಯಗಳಲ್ಲಿ ಹೇರಳವಾಗಿ ಕಾಣಬಹುದು. ‘ಮೋಹಿನಿ ಭಸ್ಮಾಸುರ’ ಪುರಾಣ ಪ್ರಸಂಗವನ್ನು ಗಮನಿಸಿ: ಭಸ್ಮಾಸುರನ ಸಾವಿಗೆ ‘ದೇವರೇ’ ಮೋಹಿನಿಯ ರೂಪಧಾರಣೆ ಮಾಡಿದ ಈ ರೂಪಕವು ಮಹಿಳೆಯರನ್ನು ಸಾಧನವಾಗಿ ಬಳಸುತ್ತಿದ್ದ ಮನೋವೃತ್ತಿಯ ಸಾಂಕೇತಿಕ ಉದಾಹರಣೆಯೂ ಆಗಿದೆ. ‘ಪ್ರಭುಲಿಂಗ ಲೀಲೆ’ಯಲ್ಲಿ ಅಲ್ಲಮಪ್ರಭುಗಳನ್ನು ಕಾಮ ಕೆಣಕುವಿನ ಗಾಳಕ್ಕೆ ಸೆಳೆಯಲು ‘ಮಾಯೆ’ ಪಾತ್ರದ ಬಳಕೆಯನ್ನು ಇಲ್ಲಿ ಉದಾಹರಿಸಬಹುದು. ಆದರೆ ಇಲ್ಲಿ ಅಲ್ಲಮ ಸೋಲುವುದಿಲ್ಲ. ಆದರೆ, ಆಧ್ಯಾತ್ಮಿಕ ಹಾಗೂ ನೈತಿಕ ಪರೀಕ್ಷೆಯ ಸಾಧನವಾಗಿ ಮಹಿಳೆಯ ರೂಪಕವೇ ಬಳಕೆಯಾಗುವುದನ್ನು ಗಮನಿಸಬೇಕು.

‘ಹರಿಶ್ಚಂದ್ರ ಕಾವ್ಯ’ದ ಅನಾಮಿಕೆಯರ ಪ್ರಸಂಗವು ಉಲ್ಲೇಖಿಸಬೇಕಾದ ಇನ್ನೊಂದು ಉದಾಹರಣೆ. ರಾಜಹರಿಶ್ಚಂದ್ರನ ನೈತಿಕ ಪರೀಕ್ಷೆಗೆಂದು ವಿಶ್ವಾಮಿತ್ರನು ಅನಾಮಿಕೆಯರನ್ನು (ಅಸ್ಪೃಶ್ಯ ಕನ್ಯೆಯರನ್ನು) ಸೃಷ್ಟಿಸಿ ಕಳುಹಿಸುತ್ತಾನೆ. ಈ ಅನಾಮಿಕೆಯರು ಹರಿಶ್ಚಂದ್ರನ ಎದುರು ನೃತ್ಯ ಮಾಡಿ ರಂಜಿಸುತ್ತಾರೆ. ಪ್ರಸನ್ನನಾದ ರಾಜ ಹರಿಶ್ಚಂದ್ರನಲ್ಲಿ ಒಂದು ವರವನ್ನು ಕೇಳುತ್ತಾರೆ. ತಮ್ಮನ್ನು ಮದುವೆ ಆಗಬೇಕೆಂಬುದು ಅವರ ಕೇಳಿಕೆಯಾಗಿತ್ತು. ಹರಿಶ್ಚಂದ್ರ ಒಪ್ಪದೆ ಅಟ್ಟಿಸಿ ಓಡಿಸಿದ ಪ್ರಸಂಗ ಈ ಕಾವ್ಯದಲ್ಲಿದೆ. ಈ ಪ್ರಸಂಗವು ಅಸ್ಪೃಶ್ಯತೆ ಕುರಿತ ಚರ್ಚೆಗೂ ಕಾರಣವಾಗುತ್ತದೆ.

ಅಸ್ಪೃಶ್ಯ ಕನ್ಯೆಯರನ್ನು ನಿರಾಕರಿಸಿ ಓಡಿಸಿದ ರಾಜನು ಕಡೆಗೆ ಸ್ಮಶಾನವಾಸಿ ಅಸ್ಪೃಶ್ಯ ವೀರಬಾಹುವಿನ ಸೇವೆ ಮಾಡಿದಾಗ ಶಿವ ಸಾಕ್ಷಾತ್ಕಾರವಾಗುತ್ತದೆ. ಇದು ಕುಲಮದ ನಿರಸನದ ಒಂದು ಅರ್ಥಪೂರ್ಣ ಸಂಕೇತವಾಗಿದೆ. ಅದು ಬೇರೆಯದೇ ವ್ಯಾಖ್ಯಾನ. ಈ ಲೇಖನದ ಮಿತಿಯಲ್ಲಿ ಮಹಿಳೆಯರನ್ನು ದುರ್ಬಳಕೆ ಮಾಡಿಕೊಳ್ಳುವ ವಿಷಯದ ಉಲ್ಲೇಖ ಮುಖ್ಯ. ಈ ಸಾಮಾಜಿಕ ವ್ಯವಸ್ಥೆಯಲ್ಲಿ ಮಹಿಳೆಯನ್ನು ಸ್ವಾರ್ಥ ಸಂಚಿನ ಲೈಂಗಿಕ ಸಾಧನವಾಗಿ ಬಳಸಿಕೊಂಡಿರುವುದನ್ನೂ ಕಾಣಬಹುದು.

ಈ ಪ್ರವೃತ್ತಿಯ ಸಾಮಾಜಿಕ ಕಟುವಾಸ್ತವಕ್ಕೆ ದೇವದಾಸಿ ಪದ್ಧತಿ ಒಂದು ವಿಷಾದಕರ ಉದಾಹರಣೆಯಾಗಿದೆ. ದೇವಾಲಯಗಳ ನೃತ್ಯಗಾರ್ತಿಯರಾಗಿದ್ದ ದೇವದಾಸಿಯರು ರಾಜರ ಹಾಗೂ ಶ್ರೀಮಂತರ ಲೈಂಗಿಕ ತೃಷೆಗೆ ಆಹಾರವಾಗುತ್ತ ಕಡೆಗೆ ಅದೊಂದು ಆಚರಣಾ ಪದ್ಧತಿಯೇ ಆದದ್ದು ಒಂದು ವಾಸ್ತವಿಕ ವಿಕೃತಿಯಾಗಿದೆ.

ಮಹಿಳೆಯರು ಅನಿವಾರ್ಯ ಸಂದರ್ಭಗಳಲ್ಲಿ ಉನ್ನತ ಸ್ಥಾನ ಪಡೆದ ಕೆಲವು ಚಾರಿತ್ರಿಕ ಸಂದರ್ಭಗಳಿದ್ದರೂ ಪುರುಷ ಪ್ರಭುತ್ವ ಸಮಾಜದ ಕಣ್ಣಿಗೆ ಬಹುಪಾಲು ಮಹಿಳೆಯ ‘ಮನಸ್ಸು’ ಕಾಣಲಿಲ್ಲ. ‘ದೇಹ’ ಕಾಣಿಸಿತು. ಹೀಗಾಗಿ ಪ್ರಭುತ್ವ ಪಲ್ಲಟದ ಸಂಚು ಹಾಗೂ ಲೈಂಗಿಕದಾಹಗಳ ‘ದೇಹರಾಜಕಾರಣ’ಕ್ಕೆ ಮಹಿಳೆ ಬಲಿಪಶುವಾದದ್ದೇ ಅಧಿಕ. ಇದು ಮಹಿಳೆಯನ್ನು ಕುರಿತಂತೆ ಮೇಲುಗೈ ಪಡೆದಿದ್ದ ಸಂಕುಚಿತ ಸಾಮಾಜಿಕ ದೃಷ್ಟಿಕೋನವಾಗಿದೆ.

ವಿಷಕನ್ಯೆ, ಮೋಹಿನಿ, ಮಾಯೆ, ಅನಾಮಿಕೆ, ಹೀಗೆ ವಿವಿಧ ಪಾತ್ರ ರೂಪಕಗಳು ಮಹಿಳೆಯನ್ನು ದೇಹರಾಜಕಾರಣದ ಸಾಧನ ಮಾತ್ರವಾಗಿ ಕಾಣುವ ಚಾರಿತ್ರಿಕ ವಾಸ್ತವಕ್ಕೆ ಕನ್ನಡಿಯಾಗಿವೆ. ಆಧುನಿಕ ಸಂದರ್ಭದ ದೇಹರಾಜಕಾರಣಕ್ಕೆ ಮುನ್ನುಡಿಯೂ ಆಗಿವೆ.

ದೇಹರಾಜಕಾರಣದ ಭಾಗವಾಗಿಯೇ ಮಹಿಳೆಯರ ಮಾರಾಟ ಪದ್ಧತಿಯನ್ನು ಕೂಡ ಕಾಣಬಹುದು. ‘ಹರಿಶ್ಚಂದ್ರ ಕಾವ್ಯ’ದಲ್ಲೇ ಹರಿಶ್ಚಂದ್ರನು ತನ್ನ ಪತ್ನಿ ಚಂದ್ರಮತಿಯನ್ನು ಮಾರಾಟ ಮಾಡಿದ ಪ್ರಸಂಗ ಬರುತ್ತದೆ. ರಾಜ್ಯ ಕೋಶಾದಿಗಳನ್ನು ಕಳೆದುಕೊಂಡ ರಾಜ ಹರಿಶ್ಚಂದ್ರನು ಕೊಟ್ಟ ಮಾತಿಗೆ ತಪ್ಪದೆ ಪತ್ನಿ ಮತ್ತು ಮಗನ ಜೊತೆ ಪದತ್ಯಾಗ ಮತ್ತು ಪುರತ್ಯಾಗ ಮಾಡುತ್ತಾನೆ. ಕೊಟ್ಟ ಮಾತಿನಂತೆ ತನಗೆ ಕೊಡಬೇಕಾಗಿದ್ದ ಬಾಕಿ ಹಣದ ವಸೂಲಿಗೆ ವಿಶ್ವಾಮಿತ್ರನು ತನ್ನ ಶಿಷ್ಯ ನಕ್ಷತ್ರಿಕನನ್ನು ಕಳುಹಿಸಿರುತ್ತಾನೆ. ಆತನ ಕಾಟಕ್ಕೆ ಕಟ್ಟುಬಿದ್ದು ಹರಿಶ್ಚಂದ್ರನು ಪತ್ನಿಯನ್ನೇ ಮಾರಾಟ ಮಾಡುತ್ತಾನೆ. ಇದು ಕಾವ್ಯದ ಪ್ರಸಂಗ, ಇಲ್ಲಿ ನಾವು ಟೀಕಿಸಬೇಕಾದ್ದು ಹರಿಶ್ಚಂದ್ರನನ್ನಲ್ಲ. ಮಹಿಳೆಯನ್ನು ಮಾರಾಟ ಮಾಡುವ ಅಮಾನವೀಯ ಪದ್ಧತಿಯನ್ನು ಟೀಕಿಸಬೇಕು. ಕಾವ್ಯ ಪ್ರಸಂಗಕ್ಕೆ ಒದಗಿದ ಅನಿಷ್ಟ ಸಾಮಾಜಿಕ ವಾಸ್ತವವು ಅಂದು ಅಸ್ತಿತ್ವದಲ್ಲಿದ್ದ ಫಲವಾಗಿ ಈ ಪ್ರಸಂಗ ಮೂಡಿಬಂದಿದೆ. ಆದ್ದರಿಂದ ಯಾವುದೇ ಕೃತಿಯಲ್ಲಿ ಒಂದು ಪಾತ್ರದ ನಡವಳಿಕೆಯನ್ನು ವಿರೋಧಿಸುವುದು ಸಾಹಿತ್ಯ ವಿಮರ್ಶೆಯಾಗುವುದಿಲ್ಲ. ಇಂತಹ ಅನಿಷ್ಟಗಳಿಗೆ ಹಿನ್ನೆಲೆ ಒದಗಿಸಿದ ಸಾಮಾಜಿಕ ಆಕರಗಳ ಮೂಲಕವೇ ಕೃತಿಯನ್ನು ವಿಮರ್ಶಿಸಬೇಕು. ಪಾತ್ರದ ಬದಲು ಪದ್ಧತಿಯನ್ನು ವಿರೋಧಿಸಬೇಕು.

ನಮ್ಮ ಸಮಾಜದಲ್ಲಿ ಮಹಿಳೆಯರನ್ನು ಮಾರಾಟ ಮಾಡಿ ಗುಲಾಮಿತನಕ್ಕೆ ತಳ್ಳುವ ಪದ್ಧತಿಯಿದ್ದದ್ದು ನಿಜ. ಹಿಂದಿನಿಂದ ಇದ್ದ ಈ ಪದ್ಧತಿಯು ವಿವಿಧ ವಿಧಾನಗಳಲ್ಲಿ ಜಾರಿಯಲ್ಲಿತ್ತು. ಹನ್ನೆರಡನೇ ಶತಮಾನದ ವೇಳೆಗೆ ‘ಲೇಖ ಪದ್ಧತಿ’ಯು ಚಾಲ್ತಿಗೆ ಬಂತು. ಲೇಖ ಪದ್ಧತಿಯಲ್ಲಿ ‘ಯಜಮಾನ’ನಿಗೆ ಮಹಿಳೆಯನ್ನು ವಹಿಸಿಕೊಡುವ ಒಪ್ಪಂದವಾಗುತ್ತಿತ್ತು. ಆನಂತರ ಮಹಿಳೆಯ ತಂದೆ, ಗಂಡ-ಯಾರೂ ಮಧ್ಯೆ ಪ್ರವೇಶ ಮಾಡುವಂತಿರಲಿಲ್ಲ. ಹೀಗೆ ಮಾರಾಟಗೊಂಡ ಮಹಿಳೆಯು ಮನೆಗೆಲಸಗಳನ್ನೆಲ್ಲ ಮಾಡಬೇಕಿತ್ತು. ಕೆಲವರು ಲೈಂಗಿಕವಾಗಿಯೂ ಬಳಸಿಕೊಳ್ಳುತ್ತಿದ್ದರು, (Women Slaves in Medieval India by Shadab Bano) ಹೀಗೆ ಚಾಲ್ತಿಯಲ್ಲಿದ್ದ ಪದ್ಧತಿಯೇ ಪ್ರಸಂಗರೂಪದಲ್ಲಿ ನಮ್ಮ ಪುರಾಣ ಹಾಗೂ ಕಾವ್ಯಗಳಲ್ಲಿ ಬಂದಿದೆ. ಇದು ವ್ಯಕ್ತಿ ದೋಷವಲ್ಲ, ವ್ಯವಸ್ಥೆಯ ದೋಷ; ದೌರ್ಜನ್ಯ.

ಜಡ ಪದ್ಧತಿಗಳ ವಿರುದ್ಧ ಸಿಡಿದೆದ್ದ ಮಹಿಳೆಯರು ನಮ್ಮ ಸಾಹಿತ್ಯದ ಪಾತ್ರಗಳಾಗಿರುವುದುಂಟು. ಜೀವಂತವಿದ್ದ ಚಾರಿತ್ರಿಕ ವ್ಯಕ್ತಿಗಳಲ್ಲೂ ಪ್ರತಿರೋಧ ಪ್ರಕಟವಾಗಿರುವುದುಂಟು. ಈ ಎರಡು ಅಂಶಗಳಿಗೆ ಪ್ರಾತಿನಿಧಿಕವಾಗಿ ಹದಿನೈದನೇ ಶತಮಾನದ ಕುಮಾರವ್ಯಾಸ ಭಾರತದಲ್ಲಿ ಬರುವ ದ್ರೌಪದಿ ಪಾತ್ರ ಮತ್ತು ವಚನ ಚಳವಳಿಯ ಅಕ್ಕಮಹಾದೇವಿಯ ನಿಲುವನ್ನು ಪ್ರಸ್ತಾಪಿಸಬೇಕು. ಕುಮಾರವ್ಯಾಸ ಭಾರತದ ದ್ರೌಪದಿಯು ಹಿಂದಿನ ಮಹಾಭಾರತದ ಕಥನದಲ್ಲಿರುವ ಪಾತ್ರಕ್ಕಿಂತ ವಿಭಿನ್ನವಾಗಿದ್ದಾಳೆ. ಸಭಾಪರ್ವದ ವಸ್ತ್ರಾಪಹರಣ ಪ್ರಸಂಗದಲ್ಲಿ ಮಹಿಳಾ ಲೋಕದ ಪ್ರಾತಿನಿಧಿಕ ಪ್ರಶ್ನಾರೂಪಕವಾಗುತ್ತಾಳೆ. ತನ್ನ ವಸ್ತ್ರಾಪಹರಣವಾಗುತ್ತಿದ್ದರೂ ಮೌನವಾಗಿ ಕೂತ ತನ್ನ ಗಂಡಂದಿರು ‘ಸತಿಯನೆನ್ನನು ಮಾರಿ ಧರ್ಮಸ್ಥಿತಿಯ ಕೊಂಡರು’ ಎಂದು ಸಿಡಿಯುತ್ತಾಳೆ. ಗಂಡರೋ ಷಂಡರೋ ಎಂದು ಸ್ಫೋಟಗೊಳ್ಳುತ್ತಾಳೆ. ಕುಮಾರವ್ಯಾಸ ಕವಿಯ ದ್ರೌಪದಿಯ ಪ್ರತಿರೋಧಾತ್ಮಕ ರೂಪಕ ರಚನೆಗೆ ನಮ್ಮ ಸಮಾಜದಲ್ಲಿ 10ನೇ ಶತಮಾನದ ಪಂಪ ಮಹಾಕವಿಯ ಕಾಲದಿಂದಲೂ ಸಂಭವಿಸಿದ ಜನಪರ ಚಾರಿತ್ರಿಕ ಘಟನೆಗಳ ಒತ್ತಾಸೆಯೂ ಇರಬಹುದು. ಮನುಷ್ಯರೆಲ್ಲರೂ ಒಂದೇ ಜಾತಿಯೆಂಬ ಪಂಪನ ಆಶಯದ ಜೊತೆಗೆ 12ನೇ ಶತಮಾನದಲ್ಲಿ ಚಾರಿತ್ರಿಕ ಮಹತ್ವದ ವಚನ ಚಳವಳಿಯು ಸಂಭವಿಸಿತ್ತು. ಜಡ ಮೌಲ್ಯಗಳನ್ನು ಪ್ರಶ್ನಿಸುವ ಮಹಿಳೆಯರನ್ನು ಈ ವಚನ ಚಳವಳಿ ಮತ್ತು ಸಾಹಿತ್ಯವು ತೊಡಗಿಸಿಕೊಂಡಿತ್ತು, ಬೆಳೆಸಿತ್ತು. ಒಟ್ಟು ಸಮಾಜದಲ್ಲಿ ಕಾಣಿಸಿಕೊಳ್ಳುತ್ತಿದ್ದ ಇಂತಹ ಸಾಮಾಜಿಕ ಚಲನಶೀಲತೆಯ ಪ್ರೇರಣೆಯು ದ್ರೌಪದಿಯೆಂಬ ಪಾತ್ರಪ್ರತೀಕದ ಹಿಂದೆ ಇದ್ದಿರಬಹುದು.

ದ್ರೌಪದಿಯದು ಪಾತ್ರದ ವಿಷಯವಾದರೆ, ಅಕ್ಕಮಹಾದೇವಿಯದು ಚಾರಿತ್ರಿಕ ವ್ಯಕ್ತಿತ್ವದ ವಿಷಯ. ಅಕ್ಕಮಹಾದೇವಿಯ ವಚನಗಳಲ್ಲಿರುವ ತಳಸ್ಪರ್ಶಿ ತಳಮಳಗಳ ಸಂವೇದನೆಯು ಯಾವ ಆಧುನಿಕ ಕವಿಗೂ ಕಡಿಮೆಯಿಲ್ಲ. ತನ್ನ ಜೀವನದಲ್ಲಿ ರಾಜಕೌಶಿಕನ ಒತ್ತಡದಿಂದ ಆತನನ್ನು ವರಿಸಿ ಅರಮನೆ ಸೇರಿದ ಅಕ್ಕಮಹಾದೇವಿಯು ಕನ್ನಡ ಸಾಹಿತ್ಯದ ಮೊತ್ತಮೊದಲ ಮಹಿಳಾ ಪ್ರತಿರೋಧದ ಪ್ರತೀಕ. ರಾಜನನ್ನು ಧಿಕ್ಕರಿಸಿ ಹೊರನಡೆದ ಅಕ್ಕಮಹಾದೇವಿ ಏಕಕಾಲಕ್ಕೆ ರಾಜ ಪ್ರಭುತ್ವ, ಪುರುಷ ಪ್ರಧಾನ ಸಮಾಜ, ವಿವಾಹವೆಂಬ ಸಂಸ್ಥೆಗೆ ಎದುರಾಗಿ ನಿಂತ ಅಸಾಧಾರಣ ವ್ಯಕ್ತಿತ್ವವಾಗಿದ್ದರು. ಇದೇ ಸಂದರ್ಭದಲ್ಲಿ ಸೂಳೆ ಸಂಕವ್ವೆ, ಕಾಳವ್ವೆ ಮುಂತಾದ ವಚನಗಾರ್ತಿಯರನ್ನು ಕಾಯಕ ಸಮರ್ಥನೆ ಮತ್ತು ಪ್ರತಿಭಟನೆಗಾಗಿ ಉಲ್ಲೇಖಿಸಬಹುದು.

ಒಟ್ಟಿನಲ್ಲಿ ದೇಹರಾಜಕಾರಣವನ್ನು ಧಿಕ್ಕರಿಸಿದ ಪ್ರತೀಕವಾಗಿ ಅಕ್ಕಮಹಾದೇವಿ ಮತ್ತು ಕುಮಾರವ್ಯಾಸ ಕವಿಯ ಪ್ರಶ್ನಾರೂಪಕ, ದ್ರೌಪದಿ-ಇಂದಿಗೂ ಸ್ತ್ರೀಪರ ಸಂವೇದನೆಯ ಸಾಕ್ಷಿ ಪ್ರಜ್ಞೆಯಾಗಿದ್ದಾರೆ; ಪ್ರೇರಕ ಶಕ್ತಿಯಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.