ADVERTISEMENT

ಚುರುಮುರಿ: ಬ್ರೇಕ್ಲೆಸ್ ಗ್ರೀನ್ ಸಿಗ್ನಲ್!

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2021, 20:19 IST
Last Updated 23 ಸೆಪ್ಟೆಂಬರ್ 2021, 20:19 IST
ಚುರುಮುರಿ
ಚುರುಮುರಿ   

‘ಎರಡು ದಿನ ಕಾಣಲಿಲ್ಲ. ಎಲ್ಲಿಗೆ ದಯ ಮಾಡಿಸಿತ್ತೋ ಸವಾರಿ?’ ಮಿತ್ರ ಚಿಕ್ಕೇಶಿಯನ್ನು ಕೇಳಿದೆ. ‘ದಾವಣಗೆರೆಗೆ ಹೋಗಿದ್ದೆನಯ್ಯ’ ಎಂದ. ‘ಬೆಣ್ಣೆದೋಸೆ ಮೆಲ್ಲೋಕಾ?’ ಎಂದೆ.

‘ಅಲ್ಲವೋ ತಿಂಡಿಪೋತ. ಅಲ್ಲಿ ಕಮಲ ಪಕ್ಷದ ಕಾರ್ಯಕಾರಿಣಿ ಸಭೆಯಿತ್ತಲ್ಲ. ನಮ್ಮ ರಾಜಾಹುಲಿಯನ್ನು ನೋಡಿ ಭಾಳ ದಿನ ಆಗಿತ್ತು. ಅದಕ್ಕೇ ಹೋಗಿದ್ದೆ’.

‘ಹೇಗಿದ್ದಾರೋ ನಿನ್ನ ಬಾಸು?’

ADVERTISEMENT

‘ಫಸ್ಟ್ ಕ್ಲಾಸ್. ಅವ್ರೆ ಸ್ಟಾರ್ ಅಟ್ರ್ಯಾಕ್ಷನ್! ಎಲ್ಲರಿಗಿಂತ ಹೆಚ್ಚು ಜೈಕಾರ ಅವರಿಗೇ! ಎಲ್ಲರೂ ಅವ್ರ ಗುಣಗಾನ ಮಾಡಿದರಲ್ಲ. ‘ಚಾಮುಂಡಿ ಕ್ಷೇತ್ರದಿಂದ ಪ್ರವಾಸ ಆರಂಭಿಸಿ ರಾಜ್ಯ ಪ್ರವಾಸ ಮಾಡ್ತಿದೀನಿ. ಮುಂದೆ ಪಕ್ಷವನ್ನ ಅಧಿಕಾರಕ್ಕೆ ತರೋದೇ ನನ್ನ ಗುರಿ’ ಅಂದರು’.

‘ಅವ್ರ ಪ್ರವಾಸಕ್ಕೆ ಹೈಕಮಾಂಡ್ ಬ್ರೇಕ್ ಹಾಕಿತ್ತಂತೆ’.

‘ಅವ್ರ ಪ್ರವಾಸಕ್ಕೆ ಯಾರ ಗ್ರೀನ್ ಸಿಗ್ನಲ್ ಬೇಕಿಲ್ಲಾಂತ ರಾಜ್ಯ ಉಸ್ತುವಾರೀನೇ ಹೇಳಿದಾರೆ’.

‘ಮತ್ತೆ ಇದೇ ಮಿರ್ಚಿ ಮಂಡಕ್ಕಿ ನಗರದಲ್ಲೇ ಈಚೆಗೆ ದಿಲ್ಲಿಯ ಬಾದ‘ಶಾ’ ಮುಂದಿನ ಚುನಾ ವಣೆ ಬೊಮ್ಮಾಯಿ ನೇತೃತ್ವದಲ್ಲೇ ಅಂದಿದ್ರು!’

‘ಅದಕ್ಕೆ, ಒಂದು ಕೈಲಿ ತೊಟ್ಟಿಲು ತೂಗೋದು, ಇನ್ನೊಂದ್ರಲ್ಲಿ ಮಗು ಚಿವುಟೋದೂಂತಾರೆ. ಮರಿ ರಾಜಾಹುಲಿ ಈ ಬಗ್ಗೆ ಕ್ಲಾರಿಫಿಕೇಷನ್ ಕೊಟ್ಟಿತಲ್ಲಾ’. ‘ಏನಂತಾ?’

‘ಪಕ್ಷ ಸಂಘಟನೆ ಅಪ್ಪಾಜಿಯವ್ರ‌ಲ್ಲಿ ರಕ್ತಗತವಾಗಿದೆ. ಅದಕ್ಕೆ ಯಾರೂ ಬ್ರೇಕ್ ಹಾಕಿಲ್ಲ. ಎಲ್ಲ ಬ್ರೇಕ್‌ಗಳನ್ನೂ ಅವ್ರ ಕೈಗೇ ಕೊಟ್ಟಿದಾರೆ. ಬೇಕಾದಾಗ ಅವ್ರೇ ಸ್ವಯಂ ಬ್ರೇಕ್ ಹಾಕ್ಕೊಳ್ತಾರೇಂತ...’.

‘ಆಗ್ಲಯ್ಯ... ಯಾಕೆ ಕುಂಟ್ತಿದೀಯ?’

‘ನಮ್ಮ ಲೀಡರ್‌ಗಳ ಜೊತೆ ಸೆಲ್ಫಿ ತಗಳ್ಳೋ ನೂಕುನುಗ್ಗಲಲ್ಲಿ ಬಿದ್ಬಿಟ್ಟೆ’.

‘ನಂಗೊಂದು ಪ್ಲೇಟ್ ಬೆಣ್ಣೆ ದೋಸೆ ತರೋದಲ್ವೇನೋ’.

‘ಅದಕ್ಕೆ ಆರ್ಡರ್ ಕೊಟ್ಟು ಗಂಟೆಗಟ್ಲೆ ಕಾಯ್ಬೇಕಪ್ಪಾ... ದಾವಣಗೆರೆ ಫೇಮಸ್ ನರ್ಗಿಸ್ ಮಿರ್ಚಿ ಮಂಡಕ್ಕಿ ತಂದಿದೀನಿ ತಗೋ’ ಎಂದ ಚಿಕ್ಕೇಶಿ ನನ್ನ ಕೈಲಿ ಪೊಟ್ಟಣ ಇಟ್ಟಾಗ, ತೆರೆದ ನನ್ನ ಬಾಯಿ ಮುಚ್ಚಲಿಲ್ಲ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.