ADVERTISEMENT

ಚುರುಮುರಿ: ಸೆಂಚುರಿ ಸಂಭ್ರಮ

ಮಣ್ಣೆ ರಾಜು
Published 10 ಜೂನ್ 2021, 19:30 IST
Last Updated 10 ಜೂನ್ 2021, 19:30 IST
ಚುರುಮುರಿ
ಚುರುಮುರಿ   

ಬೈಕಿನಲ್ಲಿ ಹೊರಟಿದ್ದ ಶಂಕ್ರಿ, ಸುಮಿಯನ್ನು ಪೆಟ್ರೋಲ್ ಬಂಕ್‍ನವರು ‘ಬನ್ನಿ ಬನ್ನಿ...’ ಅಂತ ಕರೆದರು.

‘ಪೆಟ್ರೋಲ್ ರೇಟು ಲೀಟರ್‌ಗೆ ನೂರು ರೂಪಾಯಿ ದಾಟಿರುವುದರಿಂದ ‘ಬೈ ಒನ್ ಲೀಟರ್ ಗೆಟ್ ಒನ್ ಲೀಟರ್’ ಆಫರ್ ಇರಬಹುದು’ ಎಂದು ಶಂಕ್ರಿಯನ್ನು ಸುಮಿ ಕರೆದೊಯ್ದಳು.

ಅಲ್ಲೊಬ್ಬ ಸ್ವೀಟ್ ಕೊಟ್ಟ.

ADVERTISEMENT

‘ಸ್ವೀಟ್ ಯಾಕೆ?’ ಶಂಕ್ರಿ ಕೇಳಿದ.

‘ನಾವು ಸೆಂಚುರಿ ಸಂಘದವರು, ಪೆಟ್ರೋಲ್ ರೇಟು ಸೆಂಚುರಿ ಬಾರಿಸಿದ್ದಕ್ಕೆ ಸಂಭ್ರಮ ಆಚರಿಸುತ್ತಿದ್ದೇವೆ’.

‘ಹೌದು, ಕ್ರಿಕೆಟ್ ಪ್ಲೇಯರ್ಸ್ ಸೆಂಚುರಿ ಬಾರಿಸಿದಾಗ, ಸಿನಿಮಾ ಶತದಿನ ಪೂರೈಸಿದಾಗ ಹೀಗೇ ಸೆಲೆಬ್ರೇಟ್ ಮಾಡ್ತೀವಿ’ ಅಂದ ಇನ್ನೊಬ್ಬ.

‘ಯಾರಾದ್ರೂ ಶತಾಯುಷಿಗಳಿದ್ದರೆ ಹೇಳಿ, ಅವರಿಗೆ ಶಾಲು ಹೊದಿಸಿ ಸನ್ಮಾನ ಮಾಡ್ತೀವಿ’ ಅಂದ ಮತ್ತೊಬ್ಬ.

‘ಪೆಟ್ರೋಲ್ ರೇಟು ನೂರು ರೂಪಾಯಿ ದಾಟಿರೋದು ದುಃಖದ ವಿಚಾರ ಅಲ್ವಾ?’ ಅಂದ ಶಂಕ್ರಿ.

‘ನೀವು ನಾಯಿ ಸಾಕಿದ್ದೀರಾ?’

‘ಸಾಕಿದ್ದೀವಿ, ಬೊಗಳೋಲ್ಲ, ಕಚ್ಚೋಲ್ಲ, ಒಳ್ಳೆ ನಾಯಿ...’ ಅಂದಳು ಸುಮಿ.

‘ನಾಯಿ ಮನೆಯನ್ನೂ ಕಾಯೋದಿಲ್ಲ, ಮನೆಯಿಂದ ಆಚೆ ಹೋಗದಂತೆ ನಾವೇ ನಾಯಿಯನ್ನು ಕಾಯುತ್ತೇವೆ’ ಅಂದ ಶಂಕ್ರಿ.

‘ಕೆಲಸಕ್ಕೆ ಬಾರದ ನಾಯಿಯ ಮೇನ್‍ಟೇನೆನ್ಸ್‌ಗೆ ಎಷ್ಟು ಖರ್ಚಾಗುತ್ತದೆ?’

‘ಬೈಕ್ ಸಾಕುವುದಕ್ಕಿಂತ ನಾಯಿ ಸಾಕುವುದು ದುಬಾರಿ... ಕೊರೊನಾ ಕಾಟದಲ್ಲಿ ನಮ್ಮನ್ನು ನಾವು ಸಾಕಿಕೊಳ್ಳುವುದೇ ಕಷ್ಟ ಆಗಿದೆ’ ಅಂದ ಶಂಕ್ರಿ.

‘ಕೊರೊನಾದಿಂದ ನಿಮ್ಮನ್ನ ರಕ್ಷಿಸಲೆಂದೇ ಸರ್ಕಾರ ಪೆಟ್ರೋಲ್ ಬೆಲೆ ಏರಿಸಿದೆ’ ಎಂದ ಒಬ್ಬ.

‘ಬೆಲೆ ಹೆಚ್ಚಳಕ್ಕೆ ಬೇಸರ ಬೇಡ. ನಿಮ್ಮ ಹೆಚ್ಚುವರಿ ಪೆಟ್ರೋಲ್ ಹಣವನ್ನು ಸರ್ಕಾರ ಲಸಿಕೆಯಾಗಿ ಪರಿವರ್ತಿಸಿ ನಿಮಗೇ ನೀಡಿ, ನಿಮ್ಮ ಆರೋಗ್ಯ ಕಾಪಾಡುತ್ತದೆ...’ ಎಂದ ಇನ್ನೊಬ್ಬ.

ಸರ್ಕಾರಿ ಸೇವೆ ಶ್ಲಾಘಿಸಿ ಶಂಕ್ರಿ, ಸುಮಿ ಬೈಕಿಗೆ ಪೆಟ್ರೋಲ್ ತುಂಬಿಸಿಕೊಂಡು ಹೊರಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.