ADVERTISEMENT

ಚುರುಮುರಿ: ಹಾಲಿನ ಕಳ್ಳರು

ಸುಮಂಗಲಾ
Published 26 ಮಾರ್ಚ್ 2023, 20:26 IST
Last Updated 26 ಮಾರ್ಚ್ 2023, 20:26 IST
.
.   

ಹಿಂದಿನ ಬೀದಿಯಲ್ಲಿ ಗೇಟಿಗೆ ನೇತುಹಾಕಿದ್ದ ಚೀಲದಲ್ಲಿದ್ದ ಹಾಲಿನ ಪ್ಯಾಕೆಟ್ಟುಗಳನ್ನು ಯಾರೋ ತೂತು ಮಾಡಿ, ಹಾಲು ಕದಿಯುತ್ತಿದ್ದಾರೆ ಎಂದು ವಾಟ್ಸ್‌ಆ್ಯಪ್ ಮೆಸೇಜಿನಲ್ಲಿ ಬಂದಿತ್ತು.

ಮೆಸೇಜು ಓದಿದ ನಾನು ಸಹಜವಾಗಿ ‘ಹಾಲಿನ ಪ್ಯಾಕೆಟ್ಟು ತೂತು ಮಾಡೋ ಕಳ್ಳರು ಅಂದ್ರೆ ಆ ಬೀದಿಬೆಕ್ಕುಗಳೇ’ ಎಂದೆ.

ಬಹಳೇ ಘನಗಂಭೀರವಾಗಿ ನನ್ನ ಮಾತು ಕೇಳಿಸಿಕೊಂಡ ಬೆಕ್ಕಣ್ಣ ಥಟ್ಟನೆ, ಆ ಬೀದಿಯಲ್ಲಿರುವ ತನ್ನ ಗೆಳೆಯ ಬೀದಿಬೆಕ್ಕುಗಳ ಮುಖಂಡ
ನಿಗೆ ಫೋನಾಯಿಸಿತು. ಏನಾಗುತ್ತಿದೆ ಎಂದು ಅರಿವಾಗುವಷ್ಟರಲ್ಲಿ ಬೆಕ್ಕುಗಳ ಮುಖಂಡ ನನ್ನ ಮೇಲೆ ಮಾನನಷ್ಟ ಮೊಕದ್ದಮೆ ಹೂಡಲು ಸಿದ್ಧವಾಗಿತ್ತು!

ADVERTISEMENT

‘ಅಲ್ಲಲೇ... ನಾ ಹೇಳಿದ್ದು ಹಾಲಿನ ಪ್ಯಾಕೆಟ್ಟು ತೂತು ಮಾಡೋ ಕಳ್ಳರು ಅಂದ್ರೆ ಬೆಕ್ಕುಗಳು ಅಂತ. ಎಲ್ಲ ಬೆಕ್ಕುಗಳೂ ಹಾಲಿನ ಪ್ಯಾಕೆಟ್ಟು ತೂತು ಮಾಡೋ ಕಳ್ಳರು ಅಂತ ನಾ ಹೇಳಿಲ್ಲ...’ ನಾನು ತ್ತೆತ್ತೆಬ್ಬೆಬ್ಬೆ ಗುಡುತ್ತ ಸಮಜಾಯಿಷಿ ನೀಡಲು ಪ್ರಯತ್ನಿಸಿದೆ.

‘ಅದೆಲ್ಲ ಏನೂ ಹೇಳಬ್ಯಾಡ... ಹಾಲಿನ ಪ್ಯಾಕೆಟ್ಟು ಅಲ್ಲದಾವು ಅಂದರ ನಮಗ ತಗಳೂ ಹಕ್ಕು ಇರತೈತಿ. ಅಷ್ಟಕ್ಕೇ ನೀನು ಹಾಲಿನ ಪ್ಯಾಕೆಟ್ಟು ತೂತು ಮಾಡೋ ಕಳ್ಳರೆಲ್ಲ ಬೆಕ್ಕುಗಳು ಅನ್ನೂ ಹಂಗಿಲ್ಲ. ನೀ ಬೆಕ್ಕುಗಳಿಗೆ ಅಪಮಾನ ಮಾಡೀ, ನಾವು ಮೊಕದ್ದಮೆ ಹೂಡೋರೇ. ರಾಹುಲಣ್ಣಂಗೆ ಮಾಡಿದಂಗೆ ನಿನಗೂ ಮಾಡತೀವಿ. ಎರಡು ವರ್ಷ ಜೈಲಿಗೆ ಹಾಕತೀವಿ’ ಎಂದು ಬೆಕ್ಕಣ್ಣ ಗುರ್‍ರೆನ್ನುತ್ತ ವಾದ ಮಂಡಿಸಿತು.

‘ತಪ್ಪಾತೇಳು. ಆದರೆ ನಾ ಮಾತು ವಾಪಸು ತಗಂಡರೂ ಹಾಲಿನ ಪ್ಯಾಕೆಟ್ಟು ತೂತು ಮಾಡಿದ ಕಳ್ಳರು ಬೆಕ್ಕುಗಳೇ ಅನ್ನೋ ಸತ್ಯ ಬದಲಾಗಂಗಿಲ್ಲ ಹೌದಿಲ್ಲೋ?’ ನಾನು ಪ್ರತಿವಾದಿಸಿದೆ.

‘ಮತ್ತೆ ಅದೇ ಹೇಳತೀಯಲ್ಲ... ಅದು ಕಳ್ಳತನ ಅಲ್ಲ, ಹಾಲು ತಗಳೋ ಹಕ್ಕು ನಮಗೈತಿ’ ಬೆಕ್ಕಣ್ಣ ಮೀಸೆ ತಿರುವಿತು.

‘ಹಿಂಗೇ ಮೀಸೆ ತಿರುವಿಕೋತ ಹೋಗಿ ವಿದೇಶದಲ್ಲಿ ಇರೋ ನೀರವ್ ಮೋದಿ, ಲಲಿತ್ ಮೋದಿನ ಎತ್ತಾಕೊಂಡು ಬಾರಲೇ’ ಎಂದು ನಾನು ಕಿಚಾಯಿಸಿದರೆ, ಬೆಕ್ಕಣ್ಣ ಜಾಣಕಿವುಡು ನಟಿಸಿತು!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.