ADVERTISEMENT

ಚುರುಮುರಿ | ನಾನೇ ಮುಖ್ಯಮಂತ್ರಿ!

ಬಿ.ಎನ್.ಮಲ್ಲೇಶ್
Published 25 ಜೂನ್ 2021, 19:45 IST
Last Updated 25 ಜೂನ್ 2021, 19:45 IST
ಚುರುಮುರಿ
ಚುರುಮುರಿ   

ಲಾಕ್‍ಡೌನ್ ಸಡಿಲ ಆಗಿದ್ದೇ ತಡ, ಖುಷಿ ತಡೀಲಾರದೆ ಹರಟೆಕಟ್ಟೆ ಗೆಳೆಯರೆಲ್ಲ ಒಂದೆಡೆ ಸೇರಿ ಫುಲ್ ಟೈಟಾದರು. ಸುಖ ದುಃಖ ಎಲ್ಲ ಹಂಚಿಕೊಂಡರು. ದೇಶ ವಿದೇಶ ಎಲ್ಲ ಮುಗಿಸಿ ರಾಜ್ಯ ರಾಜಕೀಯಕ್ಕೆ ಬಂದರು. ಮಾತು ಜೋಲಿ ಹೊಡೆಯತೊಡಗಿತು.

ಗುಡ್ಡೆ ತೊದಲುತ್ತ ‘ಲೇಯ್ ಕೇಳ್ರಲೆ ಇಲ್ಲಿ, ಮುಂದಿನ ಮುಖ್ಯಮಂತ್ರಿ ನಾನೇ’ ಎಂದ.

ಪರ್ಮೇಶಿಗೆ ನಗು ಬಂತು. ‘ಯಾಕಲೆ ಹೆಂಗೈತಿ ಮೈಯಾಗೆ, ನಿಂಗಿಂತ ಸೀನಿಯರ್ ನಾನು, ನಾನೇ ಮುಖ್ಯಮಂತ್ರಿ’ ಎಂದ.

ADVERTISEMENT

‘ಆಗ್ರಿ ಆಗ್ರಿ ಯಾವನಾದ್ರು ಮುಖ್ಯಮಂತ್ರಿ ಆಗ್ರಿ... ಆದಮೇಲೆ ನಮಗೂ ಒಂದು ಒಳ್ಳೆ ಇನ್‍ಕಂ ಇರೋ ಬೋರ್ಡೋ ಬಳಪಾನೋ ಕೊಡ್ರಿ...’ ದುಬ್ಬೀರ ಬೇಡಿಕೆ ಸಲ್ಲಿಸಿದ.

‘ನಂಗೆ ಈ ಬೋರ್ಡು ಗೀರ್ಡು ಏನೂ ಬ್ಯಾಡಪ, ಎಣ್ಣೆ ರೇಟು ಒಂದು ಇಳಿಸಿಬಿಡ್ರಿ ಸಾಕು...’ ಸಣ್ಣೀರ ಕಿಸಕ್ಕೆಂದ.

ಅಪರೂಪಕ್ಕೆ ಹರಟೆಕಟ್ಟೆಗೆ ಬಂದಿದ್ದ ಕೊಟ್ರೇಶಿ ಸುಮ್ಮನೆ ಕೂತಿದ್ದನ್ನ ಕಂಡ ದುಬ್ಬೀರ ‘ಯಾಕೋ ಕೊಟ್ರ ನೀನು ಮುಖ್ಯಮಂತ್ರಿ ಆಗಲ್ವ?’ ಎಂದ.

‘ಅಯ್ಯೋ ಒಲ್ಲೆಪಾ, ನಂಗೇನ್ ಈಗ ಅಂಥ ಅರ್ಜೆಂಟಿಲ್ಲ. ಮುಂದೆ ನೋಡಾಣ’ ಕೊಟ್ರೇಶಿ ಒಂದೇ ಗುಟುಕಿಗೆ ಎತ್ತಿ ಕಪ್ ಕೆಳಗೆ ಇಟ್ಟ.

‘ಆತು, ತಗಂಡಿದ್ದು ಸಾಕು, ಈಗ ಮುಖ್ಯಮಂತ್ರಿ ಆಗೋರಲ್ಲಿ ಯಾರಾದ್ರೂ ಒಬ್ರು ಬಿಲ್ ಕೊಡ್ರಿ... ಮನಿಗೆ ಹೋಗಣ’ ಎಂದ ದುಬ್ಬೀರ. ಒಬ್ಬರೂ ಪಿಟಿಕ್ಕೆನ್ನಲಿಲ್ಲ.

ಇಷ್ಟೆಲ್ಲ ಚರ್ಚೆ ನಡೆಯುತ್ತಿದ್ದರೂ ತೆಪರೇಸಿ ಒಂದೂ ಮಾತಾಡದೆ ಸುಮ್ಮನೆ ಕೂತಿದ್ದ. ‘ಯಾಕೋ ತೆಪರ ಏನೂ ಮಾತಾಡ್ತಿಲ್ಲ? ಮುಖ್ಯಮಂತ್ರಿ ರೇಸಲ್ಲಿ ನೀನಿಲ್ವ?’ ಗುಡ್ಡೆ ಕೇಳಿದ.

‘ನಾನ್ಯಾಕೆ ಮಾತಾಡ್ಲಿ? ನನ್ನ ಮುಖ್ಯಮಂತ್ರಿ ಅಧಿಕಾರಾವಧಿ ಮುಗಿಯೋಕೆ ಇನ್ನೂ ಎರಡು ವರ್ಷ ಟೈಮಿದೆ’.

ತೆಪರೇಸಿ ಮಾತು ಕೇಳಿ ಎಲ್ಲರೂ ಗೊಳ್ಳಂತ ನಕ್ಕರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.