ADVERTISEMENT

ಚುರುಮುರಿ: ಪದವಿ ಪ್ರಹಸನ

ಮಣ್ಣೆ ರಾಜು
Published 15 ಜೂನ್ 2021, 19:31 IST
Last Updated 15 ಜೂನ್ 2021, 19:31 IST
Churumuri-16-06-2021
Churumuri-16-06-2021   

ಮಹಾರಾಜರು ಚಿಂತಾಕ್ರಾಂತರಾಗಿ ಕುಳಿತಿದ್ದರು. ಸಚಿವರು ಬಂದು, ‘ಪ್ರಭು, ತಾವು ಪದವಿ ತ್ಯಾಗದ ಪ್ರಕಟಣೆ ನೀಡಿದ್ದು ಜನರ ಸಿಂಪಥಿಗೋ, ವಿರೋಧಿಗಳ ಕಿತಾಪತಿಗೋ...?’ ಕೇಳಿದರು.

ಹುಸಿನಗೆ ನಕ್ಕ ಪ್ರಭುಗಳು, ‘ಅಧಿಕಾರಕ್ಕೆ ಜೋತು ಬೀಳುವ ಜಾಯಮಾನ ನಮ್ಮದಲ್ಲ ಎನ್ನುವ ಸಂದೇಶ ಸಾರಲು’.

‘ರೆಬೆಲ್‍ಗಳು ಡಬಲ್ ಆಗುತ್ತಿದ್ದಾರೆ, ತಮ್ಮ ವಿರುದ್ಧ ತುತ್ತೂರಿ ಊದುವವರ ಸಂಖ್ಯೆ ಜಾಸ್ತಿ ಆಗುತ್ತಿದೆ ಪ್ರಭು...’

ADVERTISEMENT

‘ತುತ್ತೂರಿಗಳ ಹಿಂದೆ ದಿಲ್ಲಿ ದೊರೆಗಳ ಪಿತೂರಿಯೂ ಇದೆ ಎಂಬ ಅರಿವು ನಮಗೂ ಇದೆ’.

‘ತುತ್ತೂರಿ, ಕಿವಿ ಊದುವವರ ಪಟ್ಟಿ ಸಿದ್ಧ ಮಾಡಿದ್ದೇನೆ ಪ್ರಭು. ಸಮಯ ಬಂದಾಗ ಅವರಿಗೆ ತಮಟೆ, ಜಾಗಟೆ ಬಾರಿಸಿಬಿಡೋಣ...’ ಎಂದರು ಮಂತ್ರಿ. ಪ್ರಭುಗಳು ಮತ್ತೊಮ್ಮೆ ನಕ್ಕರು.

‘ತಮ್ಮ ಆಡಳಿತ ಉತ್ತಮವಾಗಿದೆ, ರಾಜ್ಯದಲ್ಲಿ ಕೊರೊನಾ ಕಂಟ್ರೋಲಿಗೆ ಬರುತ್ತಿದೆ’ ಓಲೈಸಿದರು.

‘ನಾಯಕತ್ವ ಬದಲಾವಣೆ ಅಂತ ಪದೇಪದೇ ದಿಲ್ಲಿಗೆ ಹೋಗಿ ದೂರುವವರನ್ನು ಮೊದಲು ಕಂಟ್ರೋಲ್ ಮಾಡಬೇಕು...’

‘ಪ್ರಭು ಕೊರೊನಾ ನೆಪ ಮಾಡಿ, ದೆಹಲಿ ವಿಮಾನಗಳನ್ನು ರದ್ದು ಮಾಡಿ, ಆಗ ದೂರುದಾರರು ಕಂಟ್ರೋಲಿಗೆ ಬರುತ್ತಾರೆ’.

ಇನ್ನೊಮ್ಮೆ ನಕ್ಕ ಪ್ರಭುಗಳು, ‘ನಮಗೆ ಏಜು ಜಾಸ್ತಿಯಾಗಿದೆ, ಆಡಳಿತದ ಕ್ರೇಜು ಕಮ್ಮಿಯಾಗಿದೆ ಎಂದು ನೀವೇ ಅಪಪ್ರಚಾರ ಮಾಡುತ್ತಿರುವಿರಿ...’

‘ಹೆಹ್ಹೆಹ್ಹೆ... ಅದು ಹಾಗಲ್ಲ ಪ್ರಭು, ಈ ಇಳಿವಯಸ್ಸಿನಲ್ಲಿ ತಮಗೆ ರಾಜ್ಯಭಾರದ ಭಾರ ಹೆಚ್ಚಾಗಿದೆ. ಈ ಸಮಯದಲ್ಲಿ ತಾವು ಆರೋಗ್ಯ, ವೈರಾಗ್ಯದ ಕಡೆ ಗಮನಹರಿಸಲಿ ಅನ್ನೋ ಕಾಳಜಿಯಿಂದ ಹಾಗೆ ಹೇಳಿದೆ...’

ಅಂತಿಮ ನಗೆ ಬೀರಿದ ಪ್ರಭುಗಳು ತಕ್ಷಣ ಸಿಟ್ಟಿಗೆದ್ದು, ‘ವಿರೋಧಿ ಗುಂಪು ಕಟ್ಟಿಕೊಂಡು ನಮ್ಮನ್ನು ಕೆಳಗಿಳಿಸಿ ರಾಜಪದವಿಗೇರಬೇಕೆಂಬ ನಿಮ್ಮ ಒಳಸಂಚು ನಮಗೂ ಗೊತ್ತು, ಈ ನಡವಳಿಕೆ ಬದಲಿಸಿಕೊಳ್ಳದಿದ್ದರೆ ಇರುವ
ಮಂತ್ರಿ ಪದವಿಯನ್ನೂ ಕಳೆದುಕೊಳ್ಳುವಿರಿ...’ ಎಂದು ಗುಡುಗಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.