ADVERTISEMENT

ಊಟ ಭಾಗ್ಯ

ಮಣ್ಣೆ ರಾಜು
Published 10 ಆಗಸ್ಟ್ 2021, 18:20 IST
Last Updated 10 ಆಗಸ್ಟ್ 2021, 18:20 IST
   

‘ರೀ, ಇಂದಿರಾ ಕ್ಯಾಂಟೀನ್ ಹೆಸರು ಚೇಂಜ್ ಮಾಡ್ಬೇಕಂತಾ? ಯಾಕೆ, ವ್ಯವಹಾರ ನಷ್ಟದಲ್ಲಿದೆಯಂತಾ?’ ಸುಮಿ ಕೇಳಿದಳು.

‘ಹೌದಂತೆ, ಬಿಜೆಪಿಗೆ ಅಪಾರ ನಷ್ಟವಾಗುತ್ತಿದೆಯಂತೆ. ಕ್ಯಾಂಟೀನ್‍ಗೆ ಮನೆದೇವರ ಹೆಸರಿಟ್ಟರೆ ಲಾಭದಾಯಕ ಅಂತ ಆಸ್ಥಾನ ಜ್ಯೋತಿಷಿ ಹೇಳಿರಬಹುದು’ ಅಂದ ಶಂಕ್ರಿ.

‘ಇಂದಿರಾ ಕ್ಯಾಂಟೀನ್ ಕಾಂಗ್ರೆಸ್‍ನವರ ಮನೆದೇವರ ಹೆಸರಿನಲ್ಲೇ ಇದೆಯಲ್ರೀ...’

ADVERTISEMENT

‘ಹೌದು, ಆ ದೇವರನ್ನು ಬಿಜೆಪಿಯವರು ಆರಾಧಿಸೊಲ್ಲ. ಇವರು ಬೇರೆ ದೇವರ ಒಕ್ಕಲು’.

‘ಅವರವರ ದೇವರ ಹೆಸರಲ್ಲಿ ಕ್ಯಾಂಟೀನ್ ತೆರೆದು ಹೂ ಇಟ್ಟು, ಊದುಬತ್ತಿ ಹಚ್ಚಿದ್ರೆ ವ್ಯವಹಾರ ಸುಧಾರಿಸಬಹುದು’.

‘ಇಂದಿರಾ ಕ್ಯಾಂಟೀನ್‍ನ ಆಯ, ಪಾಯ ಸರಿಯಿಲ್ಲವಂತೆ, ಅದರ ದಿಕ್ಕು ಬದಲಾಯಿಸಿದರೆ ಬಿಜೆಪಿಯವರ ದಿಕ್ಕು-ದೆಸೆ ಬದಲಾಗುತ್ತದೆ ಅಂತ ಜ್ಯೋತಿಷಿ ಹೇಳಿರಬಹುದು’.

‘ಕ್ಯಾಂಟೀನ್ ಹೆಸರು ಬದಲಾದಮೇಲೆ ಮೆನುನೂ ಬದಲಾಗಬಹುದಾ?’

‘ಆಗಬಹುದು. ಕಾಂಗ್ರೆಸ್, ಬಿಜೆಪಿಯವರ ರುಚಿ- ಅಭಿರುಚಿ ಬೇರೆಬೇರೆ, ಒಬ್ಬರದ್ದು ಇನ್ನೊಬ್ಬರಿಗೆ ರುಚಿಸುವುದಿಲ್ಲ’.

‘ಇಂದಿರಾ ಗ್ರೂಪ್ ಆಫ್ ಕ್ಯಾಂಟೀನ್ಸ್‌ನ ಹೆಸರು ಬದಲಾಯಿಸಿ ಊರೂರಲ್ಲೂ ಕ್ಯಾಂಟೀನ್ ಶಾಖೆ ಆರಂಭಿಸಬಹುದು ಅಲ್ವೇನ್ರೀ?’

‘ಹೌದು, ಕ್ಯಾಂಟೀನ್ ಇಲಾಖೆ ರಚಿಸಿ ಮಂತ್ರಿ ನೇಮಿಸಿ, ಕ್ಯಾಂಟೀನ್ ಉದ್ಯಮ ವಿಸ್ತರಿಸಿ ಉದ್ಯೋಗ ಸೃಷ್ಟಿಸಬಹುದು’.

‘ಹೀಗಾದ್ರೆ, ಹೋಟೆಲ್ ಉದ್ಯಮವನ್ನು ಸರ್ಕಾರೀಕರಣ ಮಾಡಿದಂತಾಗುವುದಿಲ್ಲವೇ?

‘ಅಷ್ಟೇ ಅಲ್ಲ, ಬರೀ ರೇಷನ್ ಕೊಡುವ ಅನ್ನಭಾಗ್ಯದ ಬದಲು, ಪಡಿತರದಾರರಿಗೆ ಅನ್ನ- ಸಾಂಬಾರ್ ವಿತರಿಸಿ ಅನ್ನಭಾಗ್ಯ ಯೋಜನೆಯನ್ನು ಅರ್ಥಪೂರ್ಣಗೊಳಿಸಬಹುದು. ಎಲ್ಲ ಊರಲ್ಲೂ ಸರ್ಕಾರಿ ಕ್ಯಾಂಟೀನ್ ಆರಂಭಿಸಿ, ಉದಾರೀಕರಣದಿಂದ ಊಟ, ತಿಂಡಿ ವ್ಯವಸ್ಥೆ ಮಾಡಿ ಹಸಿವುಮುಕ್ತ ರಾಜ್ಯ ಮಾಡಬಹುದು’.

‘ಮಾಡಬೇಕೂರೀ, ದುಬಾರಿಯಾಗುತ್ತಿರುವ ಬೇಳೆ, ಎಣ್ಣೆ, ತರಕಾರಿ, ಅಡುಗೆಗ್ಯಾಸ್ ಹೊಂಚುವ ರಗಳೆ ತಪ್ಪುತ್ತದೆ. ಸರ್ಕಾರಿ ಕ್ಯಾಂಟೀನ್‍ನಲ್ಲಿ ನಿತ್ಯ ಊಟ, ತಿಂಡಿ ತಿಂದ್ಕೊಂಡು ಹಾಯಾಗಿರಬಹುದು...’
ಸುಮಿ ಆಸೆಪಟ್ಟಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.