ADVERTISEMENT

ಆಶೀರ್ವಾದ ಯಾಕೆ?

ಬಿ.ಎನ್.ಮಲ್ಲೇಶ್
Published 12 ಆಗಸ್ಟ್ 2021, 19:45 IST
Last Updated 12 ಆಗಸ್ಟ್ 2021, 19:45 IST
ಚುರುಮುರಿ
ಚುರುಮುರಿ   

‘ಹಲೋ... ಸಿದ್ರಾಮಣ್ಣ ಸಾಹೇಬ್ರಿಗೆ ಹುಟ್ಟುಹಬ್ಬದ ಶುಭಾಶಯಗಳು’.

‘ಓ ಏನಪ್ಪಾ ಬೊಮ್ಮಾಯಿ... ಸ್ಸಾರಿ, ಮುಖ್ಯಮಂತ್ರಿಗಳೆ... ನಂಗೆ ಶುಭಾಶಯ ಕೋರೋಕೆ ನಿಮ್ ಹೈಕಮಾಂಡ್ ಪರ್ಮಿಶನ್ ಕೊಡ್ತೋ?’

‘ಇದೆಲ್ಲ ಮನುಷ್ಯ ಸಂಬಂಧಗಳು ಸಿದ್ರಾಮಣ್ಣ, ಎಲ್ಲದ್ರಲ್ಲೂ ರಾಜಕೀಯ ಮಾಡೋಕಾಗುತ್ತಾ? ಪೇಪರ್‌ನಲ್ಲಿ ನಿಮ್ನನ್ನ ಭಾಗ್ಯವಿದಾತ, ಲೋಕನಾಯಕ ಅಂತೆಲ್ಲ ಹೊಗಳಿ ಬರೆದಿದಾರೆ. ನೋಡಿ ಖುಷಿಯಾತು’.

ADVERTISEMENT

‘ಅದೆಲ್ಲ ಯಾರೋ ನಮ್ಮುಡುಗ್ರು, ಮುಂದೆ ಎಮ್ಮೆಲ್ಲೆ ಟಿಕೆಟ್ ಕೇಳೋರು ಹಾಕ್ಸಿರ‍್ತಾರೆ ಬಿಡಪ್ಪ. ಸತ್ಯ ಏನ್ ಗೊತ್ತಾ? ನನ್ ಹುಟ್ಟಿದಬ್ಬ ಯಾವತ್ತು ಅಂತ ನಂಗೇ ಗೊತ್ತಿಲ್ಲ’.

‘ಹೌದಾ? ನೀವು ನೂರು ವರ್ಷ ಚೆನ್ನಾಗಿರ‍್ಬೇಕು ಸಿದ್ರಾಮಣ್ಣ’.

‘ನಾನು ಚೆನ್ನಾಗೇ ಇರ‍್ತೀನಿ, ಅದಿರ‍್ಲಿ ನೀನು ಮುಖ್ಯಮಂತ್ರಿ ಆದ ತಕ್ಷಣ ದೊಡ್ಡಗೌಡ್ರ ಕಾಲಿಗೆ ಬಿದ್ದು ಆಶೀರ್ವಾದ ತಗಂಬಂದೆ. ನಂಗೆ ಒಂದು ಹೂಗುಚ್ಛನೂ ಕೊಡಲಿಲ್ಲ?’

‘ಅದಕ್ಕೆ ಕಾರಣ ಆಮೇಲೇಳ್ತೀನಿ, ನಿಮ್ ಪಕ್ಷದಲ್ಲಿ ಮುಂದಿನ ಮುಖ್ಯಮಂತ್ರಿ ಕಿತ್ತಾಟ ಜೋರಾಗೈತೆ?’

‘ಅದು ಎಲೆಕ್ಷನ್ ಬಂದಾಗ ನೋಡ್ಕಳಾಣ ಬಿಡಪ್ಪ, ನಿನ್ ಕತೆ ಏನು? ಆಗ್ಲೇ ಭಿನ್ನಮತ, ಖಾತೆ ಕಿತ್ತಾಟ ಅಂತಿದ್ರು?’

‘ಅದು ಎಲ್ಲ ಪಕ್ಷದಲ್ಲೂ ಇರೋದೆ. ಆದ್ರೆ ಜನತಾ ಪರಿವಾರದಲ್ಲಿದ್ದಷ್ಟು ಭಿನ್ನಮತ ಬೇರೆಲ್ಲೂ ಇದ್ದಿರಲಿಲ್ಲ ಅಲ್ವ?’

‘ಅದ್ಕೇ ಅಲ್ವ ನಾನು ಆ ಪಕ್ಷ ಬಿಟ್ಟು ಕಾಂಗ್ರೆಸ್ ಸೇರ‍್ಕಂಡಿದ್ದು? ಅದಿರ‍್ಲಿ, ಏನದು ಖಾತೆ ಕ್ಯಾತೆ?’

‘ಅದೂ... ಕೆಲವರಿಗೆ ಇನ್ನೂ ದೊಡ್ಡ ಖಾತೆ, ಪ್ರಬಲ ಖಾತೆ ಬೇಕಂತೆ’.

‘ಹುಷಾರು ಕಣಪ್ಪ, ಆಮೇಲೆ ನಿನ್ ಬುಡಕ್ಕೇ ಬಂದುಬಿಟ್ಟಾರು’.

‘ನಾನು ದೊಡ್ಡಗೌಡ್ರ ಆಶೀರ್ವಾದ ತಗಂಡಿದ್ದು ಅದ್ಕೇ ಸಿದ್ರಾಮಣ್ಣ. ನನ್ ಕುರ್ಚಿಗೇನಾದ್ರೂ ಆದ್ರೆ ಗೌಡ್ರು ಸಪೋರ್ಟ್ ಮಾಡ್ಲಿ ಅಂತ. ನೀವು ಸಪೋರ್ಟ್ ಮಾಡಲ್ಲ ಅಂತ ಗೊತ್ತು. ಗೊತ್ತಿದ್ದೂ ಗೊತ್ತಿದ್ದೂ ನಿಮಗ್ಯಾಕೆ ಹೂಗುಚ್ಛ ಕೊಟ್ಟು ನಮ್ಮೋರತ್ರ ಬೈಸ್ಕಳ್ಲಿ?’

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.