ADVERTISEMENT

ಚುರುಮುರಿ: ನಿದ್ದೆ ಬರ್ತಿಲ್ಲ...

ಮಣ್ಣೆ ರಾಜು
Published 18 ಅಕ್ಟೋಬರ್ 2021, 3:05 IST
Last Updated 18 ಅಕ್ಟೋಬರ್ 2021, 3:05 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

‘ಬೈ ಎಲೆಕ್ಷನ್ ಪರೀಕ್ಷೆಯಲ್ಲಿ ಔಟಾಫ್ ಔಟ್ ಫಲಿತಾಂಶ ಪಡೆಯಬೇಕು ಅಂತ ಸಿಎಂ ಬಸಣ್ಣ ರಾತ್ರಿ ನಿದ್ದೆಗೆಟ್ಟು, ಹಗಲು ನೆಮ್ಮದಿ ಬಿಟ್ಟು ಹಾರ್ಡ್‌ವರ್ಕ್ ಮಾಡ್ತಿದ್ದಾರೆ ಕಣ್ರೀ...’ ಎಂದಳು ಸುಮಿ.

‘ಬೈ ಎಲೆಕ್ಷನ್ ಬಾಧೆ ಎಲ್ಲರ ನಿದ್ದೆಗೆಡಿಸಿದೆ. ಜೆಡಿಎಸ್ ಜಪ ಮಾಡದೆ ಸಿದ್ದರಾಮಣ್ಣರ ಕಣ್ಣಿಗೆ ನಿದ್ದೆ ಹತ್ತುವುದಿಲ್ಲ ಅಂತ ಕುಮಾರಣ್ಣನೇ ಹೇಳಿದ್ದಾರೆ’ ಎಂದ ಶಂಕ್ರಿ.

‘ಕಂಡಲ್ಲಿ ಗುಂಡು ಎನ್ನುವಂತೆ ಮೈಕ್ ಕಂಡಲ್ಲೆಲ್ಲಾ ಸಿದ್ದರಾಮಣ್ಣ ಕಿಡಿಗುಂಡು ಹಾರಿಸಿ ಕುಮಾರಣ್ಣನ ನಿದ್ದೆ ಕಸಿಯುತ್ತಿದ್ದಾರಂತೆ ಕಣ್ರೀ. ಅಷ್ಟೇ ಅಲ್ಲ, ಸಿದ್ದರಾಮಣ್ಣ ತಮಗೆ ನಿದ್ದೆ ಬರ್ತಿಲ್ಲ ಅಂತ ಬಿಎಸ್‍ವೈಗೂ ನಿದ್ದೆಗೆಡಿಸಿ ನಡುರಾತ್ರಿ ರಾಜಕಾರಣ ಮಾಡಿದ್ದರ ಫಲವೇ ಬಿಎಸ್‍ವೈ ಬಳಗಕ್ಕೆ ಐಟಿ ಏಟು ಅಂತ ಕುಮಾರಣ್ಣ ಅಂದಾಜು ಮಾಡಿದ್ದಾರೆ’.‌

ADVERTISEMENT

‘ಮಹಾದೊರೆ ಮೋದಿಯನ್ನೇ ಮನಸಾರೆ ಟೀಕಿಸುವ ಸಿದ್ದರಾಮಣ್ಣ ಮಹಾ ಪರಾಕ್ರಮಿ ಬಿಡು...’ ಎಂದು ಮಗ್ಗುಲು ತಿರುಗಿ ಮಲಗಿದ ಶಂಕ್ರಿ.

‘ಪರಾಕ್ರಮಿ ಅಲ್ಲವಂತೆ, ದಿಲ್ಲಿಗೆ ಹೋಗಿದ್ದಾಗ ಸಿದ್ದರಾಮಯ್ಯ ಪ್ರಧಾನಿ ಪೋಸ್ಟ್ ಕೇಳುವ ಧೈರ್ಯ ಮಾಡಲಿಲ್ಲ, ಅವರಿಗೆ ರಾಜಕೀಯ ಪುಕ್ಕಲುತನವಿದೆ ಅಂತ ವಿಶ್ವಣ್ಣ ಕಿಡಿ ಹಚ್ಚಿದರಲ್ಲಾ... ಪ್ರಧಾನಿ ಕುರ್ಚಿಗಾಗಿ ಹಲವು ವರ್ಷಗಳಿಂದ ಕಾಯುತ್ತಲೇ ವೃದ್ಧರಾಗಿರುವ ಹತ್ತಾರು ಮಹಾನುಭಾವರಿರುವಾಗ ಹೊಸ ಎಂಟ್ರಿ ಸಿದ್ದರಾಮಯ್ಯರಿಗೆ ಪಿಎಂ ಸೀಟು ಸಿಗುತ್ತಾ ಅಂತ ಹಳ್ಳಿಹಕ್ಕಿ ಪುಕ್ಕ ಬಿಚ್ಚಿ ಪುಕಾರು ಮಾಡಿದೆ ಕಣ್ರೀ’.

‘ಹೌದು, ಸಂದರ್ಭ ಸಿಕ್ಕಾಗ ಸಿಕ್ಕಸಿಕ್ಕವರನ್ನು ಕುಟುಕುವ ಕೆಲವು ಮುಖಂಡರು ತಾವೂ ನಿದ್ದೆಗೆಡುವುದಲ್ಲದೆ ಬೇರೆಯವರ ನಿದ್ದೆಯನ್ನೂ ಕೆಡಿಸುತ್ತಿದ್ದಾರಂತೆ’.

‘ಏನೇ ಆದರೂ ನಿದ್ರಾಹೀನತೆ ಆರೋಗ್ಯಕ್ಕೆ ಹಾನಿಕರ. ನಾಯಕರು ನಿದ್ದೆಗೆಡುತ್ತಾರೆ ಅಂತ ನಾವು ತಲೆಕೆಡಿಸಿಕೊಂಡು ನಿದ್ದೆಗೆಡುವುದು ಬೇಡ, ಈ ವಿಚಾರ ಇಲ್ಲಿಗೇ ಬಿಟ್ಟು ನೆಮ್ಮದಿಯಾಗಿ ನಿದ್ದೆ ಮಾಡ್ರಿ...’ ಎಂದು ಶಂಕ್ರಿಗೆ ಸುಮಿ ರಗ್ಗು ಹೊದಿಸಿದಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.