ADVERTISEMENT

ಚುರುಮುರಿ: ಬಸಣ್ಣನ ವಚನ

ಮಣ್ಣೆ ರಾಜು
Published 24 ಆಗಸ್ಟ್ 2021, 22:15 IST
Last Updated 24 ಆಗಸ್ಟ್ 2021, 22:15 IST
ಚುರುಮುರಿ
ಚುರುಮುರಿ   

‘ಝೀರೊ ಟ್ರಾಫಿಕ್‍ನಲ್ಲಿ ಹೀರೊ ಥರಾ ಜಬರ್ದಸ್ತ್ ಮಾಡುವುದು ಬಿಟ್ಟು, ಹೆವಿ ಟ್ರಾಫಿಕ್‍ನಲ್ಲೇ ಓಡಾಡ್ತೀನಿ ಅಂತಾರೆಲ್ರೀ ನಮ್ಮ ಸಿಎಂ ಬಸಣ್ಣ...’ ಸುಮಿ ಹೇಳಿದಳು.

‘ಅಧಿಕಾರ ಉಳ್ಳವರು ಝೀರೊ ಟ್ರಾಫಿಕ್‍ನಲ್ಲಿ ಓಡಾಡುವರು, ನಾವೇನು ಮಾಡೋಣ ಪ್ರಜೆಗಳಯ್ಯಾ ಅಂತ ಜನಸಾಮಾನ್ಯರು ನೊಂದುಕೊಳ್ಳಬಾರದು ಅಂತ ಎಲ್ಲರೊಳಗೊಂದಾಗಲು ಹೊರಟಿದ್ದಾರೆ’ ಅಂದ ಶಂಕ್ರಿ.

‘ಹೀಗಾದ್ರೆ, ಸಿಎಂ ಸ್ಥಾನದ ಗತ್ತು, ಗಮ್ಮತ್ತು ಕಮ್ಮಿ ಆಗೋದಿಲ್ವೇನ್ರೀ?’

ADVERTISEMENT

‘ಇಲ್ವಂತೆ, ಸಿಎಂ ಅಂದ್ರೆ ಕಾಮನ್ ಮ್ಯಾನ್ ಅಂತೆ. ಅಬ್ಬರ, ಆರ್ಭಟ ಮಾಡಿದ್ರೆ ಜನ ಒಪ್ಪುವುದಿಲ್ಲವಂತೆ... ಝೀರೊ ಟ್ರಾಫಿಕ್ ಬೇಡ, ಗಾರ್ಡ್ ಆಫ್ ಆನರ್ ಬೇಡ, ಸನ್ಮಾನಕ್ಕೆ ಕನ್ನಡ ಪುಸ್ತಕ ನೀಡಾ, ಹಾರ-ತುರಾಯಿ ಕೂಡದು ಸಂಗಮದೇವಾ ಅನ್ನೋದು ಬಸಣ್ಣನ ವಚನ’.

‘ಅವರ ತಾಯಿ ಮಾಡುತ್ತಿದ್ದ ಜೋಳದ ರೊಟ್ಟಿ ಭಾಳಾ ಇಷ್ಟವಂತೆ. ಈಗ ಯಾರೇ ರೊಟ್ಟಿ ಮಾಡಿಕೊಟ್ಟರೂ ತಾಯಿ ಮಾಡಿದ ರೊಟ್ಟಿ ಎಂದೇ ಭಾವಿಸಿ ತಿನ್ನುತ್ತಾರಂತೆ. ಅಮ್ಮ ಹಾಗೂ ಅನ್ನವನ್ನು ಗೌರವಿಸಬೇಕು ಅನ್ನೋದು ಬಸಣ್ಣನ ಇನ್ನೊಂದು ವಚನ ಕಣ್ರೀ...’

‘ಹೌದು, ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು, ಕಟ್ಟಿದರೆ ಕನ್ನಡನಾಡು ಕಟ್ಟಬೇಕು. ಎಲ್ಲರೂ ಮಾತೃ, ಮಾತೃಭೂಮಿ, ಮಾತೃಭಾಷೆಯನ್ನು ಗೌರವಿಸಬೇಕು. ಅನ್ಯ ಭಾಷಿಕರಿಗೆ ಕನ್ನಡ ಕಲಿಸಿರಿ, ಕನ್ನಡ ಪುಸ್ತಕ ಓದಿ ತಿಳಿಯಿರಿ ಅನ್ನುವ ವಚನ ಸಾರುತ್ತಿದ್ದಾರೆ’.

‘ಪುಸ್ತಕ ಓದಿದರೆ ಸಿಟ್ಟು ಶಮನವಾಗುತ್ತದೆ ಎಂಬುದು ತಂದೆಯಿಂದ ಕಲಿತ ವಚನವಂತೆ. ಪ್ರಜೆಗಳು ಪುಸ್ತಕ ಓದಿ ಶಾಂತಿ, ಸಹನೆ ಕಾಪಾಡಿಕೊಳ್ಳಲಿ ಎಂಬುದು ಬಸಣ್ಣರ ಕಾಳಜಿ’.

‘ಆದರೇನು, ಮಂತ್ರಿ ಸ್ಥಾನ ಸಿಗದೆ ಸಿಟ್ಟಾಗಿರುವ, ಮಂತ್ರಿಯಾಗಿಯೂ ಆನಂದ ಕಾಣದೆ ಕಂಗೆಟ್ಟಿರುವ ಬಸಣ್ಣರ ಒಡ್ಡೋಲಗದ ಪ್ರಜಾಪತಿಗಳ ಸಿಟ್ಟು ಶಮನ ಮಾಡುವ, ಅವರ ರೋಗಕ್ಷೇಮ ಕಾಪಾಡುವ ಪರಿಹಾರ ಯಾವ ವಚನ, ಪುಸ್ತಕದಲ್ಲೂ ಸಿಗುತ್ತಿಲ್ಲವಂತೆ, ಪಾಪ!...’ ಶಂಕ್ರಿ ನೊಂದುಕೊಂಡ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.