ADVERTISEMENT

ಚುರುಮುರಿ: ಕೊರೊನಾ ಸಮತೆ

ಸುಮಂಗಲಾ
Published 9 ಮೇ 2021, 19:31 IST
Last Updated 9 ಮೇ 2021, 19:31 IST
   

ಕೊರೊನಾ ಹಿರಿಯಣ್ಣ ಎಲ್ಲಾ ದೇಶಗಳಲ್ಲಿ ತನ್ನ ಪ್ರಗತಿಯ ಲೆಕ್ಕ ತೆಗೆದುಕೊಳ್ಳಲು ಕಿರಿಯ ಚೇಲಾಗಳ ಸಭೆ ಕರೆದಿದ್ದ. ಚೀನಾದ ಕೊರೊನಾಚೇಲಾನನ್ನು ಮೊದಲು ಕರೆದ.

‘ಅಲ್ಲಿ ಒಟ್ಟು ಕೇಸುಗಳ ಸಂಖ್ಯೆ ಲಕ್ಷವನ್ನೂ ದಾಟಿಲ್ಲ, ಸತ್ತವರಂತೂ ಐದು ಸಾವಿರವೂ ಇಲ್ಲ, ಯಾರಿಗೂ ಈಗ ನನ್ನ ಭಯವೇ ಇಲ್ಲ’ ಎಂದವನು ಅಲವತ್ತುಕೊಂಡ.

‘ಅದ್ಹೆಂಗೆ ಸಾಧ್ಯ? ನಾವು ಹರಡಿದ್ದೇ ಅಲ್ಲಿಂದ ತಾನೆ’ ಹಿರಿಯಣ್ಣ ಅಚ್ಚರಿಗೊಂಡ.

ADVERTISEMENT

‘ಕೊರೊನಾಪೀಡಿತರನ್ನೆಲ್ಲ ಹಿಡಿದು ಬೇರೆ ಆಸ್ಪತ್ರೆಗೆ ಹಾಕಿದರು. ನಾವು ಹರಡುವ ಸರಪಳಿ ಕಡಿದರು’ ಎಂದು ಚೀನಾಚೇಲ ವಿವರಿಸಿದ. ‘ಎಲ್ಲ ಸುಳ್ಳು, ಅವ್ರು ಮುಚ್ಚಿಡ್ತಿದಾರೆ, ಬಾಯಿಬಿಡಬೇಡ ಅಂತ ಇವನಿಗೂ ಹೆದರಿಸಿದ್ದಾರೆ’ ಎಂದು ಇನ್ನುಳಿದ ಚೇಲಾಗಳು ದೂರಿದರು.

‘ಹೋದವರ್ಷ ನಮ್ಮನ್ನು ಓಡಿಸೇಬಿಟ್ವಿ ಅಂತ ಜನ ಕುಣಿದ್ರು, ಈಗ ಆಸ್ಪತ್ರೇಲಿ ಬೆಡ್, ಆಮ್ಲಜನಕ, ಔಷಧ ಏನೂ ಸರಿಯಾಗಿ ಸಿಕ್ತಿಲ್ಲ ಅಂತ ಗೋಳಾಡ್ತಿದಾರೆ. ಭಾರತವೀಗ
ಕೊರೊನಾಪಟ್ಟಿಯಲ್ಲಿ 2ನೇ ಸ್ಥಾನಕ್ಕೇರಿದೆ... ’ ಎಂದ ಹಿರಿಯಣ್ಣ, ಭಾರತದ ಚೇಲಾನಿಗೆ ಸದ್ಯದ ಲೆಕ್ಕ ಕೇಳಿದ.

‘ಐಸಿಯುನಲ್ಲಿ ಆಮ್ಲಜನಕ ಸಿಗದೇ ಸತ್ತವರನ್ನು, ಐಸಿಯು ಅವಘಡ ಆಗಿ ಸತ್ತವರನ್ನು ಯಾವ ಪಟ್ಟಿಗೆ ಸೇರಿಸೋದು?’ ಭಾರತದ ಚೇಲಾ ತಲೆ ಕೆರೆದುಕೊಂಡ.

‘ಅದನ್ನು ಅಲ್ಲಿಯ ಅಧಿಕಾರಿಗಳ, ರಾಜಕಾರಣಿಗಳ ತಲೆಗೆ ಕಟ್ಟು, ಅವು ನಮ್ಮ ಪಟ್ಟಿಗೆ ಬೇಡ’.

‘ನಮಗಿಂತ ಭಾಳಾ ದೊಡ್ಡ ವೈರಸ್ ಭಾರತದಲ್ಲಿ ಹರಡಿದೆ’.

‘ನಮ್ಮನ್ನೂ ಮೀರಿಸುವ ವೈರಸ್ಸೇ...?’ ಹಿರಿಯಣ್ಣ ಗಾಬರಿಯಾದ.

‘ಜಾತಿ, ಧರ್ಮದ ವೈರಸ್, ಎಲ್ಲಾ ಕಡೆ ಭ್ರಷ್ಟಾಚಾರದ ವೈರಸ್’.

‘ಆ ವೈರಸ್ ಭಾರತೀಯರಿಗೇ ಇರಲಿ, ನೀವು ಆ ವೈರಸ್ ಅಂಟಿಸಿಕೊಳ್ಳಬೇಡಿ! ಜಾತಿ, ಧರ್ಮದ ಭೇದವಿಲ್ಲದೆ ಎಲ್ಲರನ್ನೂ ಸಮಾನವಾಗಿ ಕಂಡು, ತಬ್ಬಿಕೊಳ್ಳಿ. ಸಮತೆಯೇ ನಮ್ಮ ಮಂತ್ರ’ ಎಂದು ಕೊರೊನಾ ಹಿರಿಯಣ್ಣ ಭಾರತದ ಚೇಲಾಗೆ ಉಪದೇಶಿಸಿದ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.