ADVERTISEMENT

ಚುರುಮುರಿ: ಕೊರೊನಾ ವರ್ಣಮಾಲೆ!

ಲಿಂಗರಾಜು ಡಿ.ಎಸ್
Published 10 ಮೇ 2021, 19:31 IST
Last Updated 10 ಮೇ 2021, 19:31 IST
   

‘ಕೊರೊನಾ ಪ್ರಕರಣ ಏರಿಕೆ ಹ್ಯಂಗೆ, ಯಾಕೆ ಅನ್ನೋ ರಹಸ್ಯ ಗೊತ್ತೇನ್ಲಾ?’ ಅಂದ್ರು ತುರೇಮಣೆ. ಈವಯ್ಯನ ಹಕ್ಲಾಸ ಸುರುವಾಯ್ತು ಅಂತ ‘ಅದೇನ್ಸಾ?’ ಅಂತ ಕೇಳಿದೆ.

‘ನೋಡ್ಲಾ, ಬಿ, ಸಿ, ಐ ಅನ್ನೋ ಅಕ್ಸರದಿಂದ ಸುರುವಾಗೋ ಪದ ಎಲ್ಲವೋ ಅಲ್ಲೇ ಕೊರೊನಾ ಸುತ್ತು ವಡಿತಾದೆ!’ ಅಂದ್ರು.

‘ಬಿಸಿಸಿಐ, ಐಪಿಎಲ್ ಬಾಲುಕಾಂಡದ ಬಯೊಬಬಲ್ ಕತೆಯೋ ಇದು?’ ಕೇಳಿದೆ. ‘ಕೊರೊನಾ ಹಿಸ್ಟರಿ ನೋಡ್ಲಾ, ಬಿಸಿಐ ಅಕ್ಸರದ ಅಕ್ಕಪಕ್ಕದಗೇ ಅದೆ. ಈ ಅಕ್ಸರಗಳ ತೆಗೆದಾಕಿಬುಟ್ರೆ ಸರೋತದೆ. ಕೊರೊನಾ ಸಿ ಅಕ್ಸರವಾ, ಸಿ ಅಕ್ಸರದ ಚೀನಾದಲ್ಲಿ ಹುಟ್ಟಿ,
ಬಿ ಅಂದ್ರೆ ಬೀಜಿಂಗಿಂದ ಬ್ರೆಜಿಲ್ಲಿಗೆ ಅಮರಿಕ್ಯಂಡು, ಐ ಅಕ್ಸರದ ಇರಾನ್, ಇಟಲಿಗೆ ಬಂತು. ಅಲ್ಲಿಂದ ಬಿ-ಭಾರತಕ್ಕೆ, ಬಾಂಬೆಯಿಂದ ಸುರುವಾಯ್ತು. ಆಮೇಲೆ ಬಿ-ಬೆಂಗಳೂರಿಗಾ, ಇಲ್ಲಿಂದ ಸಿ-ಚಾಮರಾಜನಗರಕ್ಕೆ ಹೋಗ್ಯದೆ. ಈಗ ಸೀದಾ ಬಿಬಿಎಂಪಿಗೆ ಅಮರಿಕ್ಯಂಡು ಬಿ-ಬೆಡ್ ಬ್ಲಾಕಿಂಗ್‍ವರೆಗು ಬಂದು ನಿಂತದೆ!’ ಅಂದ್ರು.

ADVERTISEMENT

‘ಇದೇನು ಪಕ್ಸಗಳಿಗೆ ಅನ್ವಯಿಸೂದಿಲ್ಲವೇ?’ ಅಂದ ಚಂದ್ರು.

‘ಏನೋ ನಾಕಾಣಪ್ಪ!’ ಅಂದು ಸುಮ್ಮಗಾದರು. ‘ಆಯ್ತು ಸಾ, ಕೊರೊನಾ ಕಡಮೆ ಮಾಡದು ಹ್ಯಂಗೆ?’ ಅಂದೆ.

‘ಕೊರೊನಾ ಟೆಸ್ಟ್ ಮಾಡದು ನಿಲ್ಲಿಸಿಬುಡ್ತರಂತೆ. ಆಗ ಸಕ್ರಿಯ ಪ್ರಕರಣ ನಿಲ್ ಆಗೋಯ್ತದೆ’ ಅಂದ್ರು.

‘ಅಯ್ಯೋ ಬೊಡ್ಡಿಹೈದ್ನೆ, ಜನ ಹಿಂಗೆ ಸಾಯ್ತಾ ಅವ್ರಲ್ಲಾ ಲೆಕ್ಕ ಹ್ಯಂಗೆ ಕೊಡ್ತೀರಲಾ ಗೆಂಡೆಕಾಳ?’ ಅಂತು ಯಂಟಪ್ಪಣ್ಣ.

‘ಯಂಟಪ್ಪಣ್ಣ, ಬಿ-ಬ್ಯಾಳೆಕಾಳು ರೇಟು ಜಾಸ್ತಿಯಾಗಿದ್ದುಕ್ಕೆ ಜನ ಸತ್ತವ್ರೆ ಅಂತೇಳಿ ಡೆತ್ ಸರ್ಟಿಪಿಕೇಟಲ್ಲಿ ‘ಡೆತ್ ಡ್ಯುಟು ಹೈಯರ್ ಪಲ್ಸ್ ರೇಟ್’ ಅಂತ ಬರುದ್ರಾಯ್ತಪ್ಪ. ಇದು ಡೆತ್ ಆಡಿಟ್ಟಲ್ಲಿ ಕರೆಟ್ಟಾಗು ಇರ್ತದೆ!’ ಅಂದ್ರು. ಸರ್ಕಾರಕೂ ಮಂತ್ರಿಗಳ ಮಾತಿಗೂ ವಿರೋಧಪಕ್ಸಕೂ ಬ್ಯಾಳೆಕಾಳಿಗೂ ಕೊರೊನಾಗೂ ಎಲ್ಲೆಲ್ಲಿ ಸಂಬಂಜ ಅಂತ ತಲೆ ಕೆಟ್ಟೋಯ್ತು!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.