ADVERTISEMENT

ಚುರುಮುರಿ: ವ್ಯಾಕ್ಸಿನ್ ಮಿಕ್ಸ್

ಸುಧೀಂದ್ರ
Published 15 ಮೇ 2021, 1:49 IST
Last Updated 15 ಮೇ 2021, 1:49 IST
   

ಕೆಲಸವಿತ್ತೂಂತ ಯೂನಿವರ್ಸಿಟಿ ಲ್ಯಾಬಲ್ಲೇ ರಾತ್ರಿ ಉಳ್ಕೊಂಡಿದ್ದೆ. ಇಂಗ್ಲೆಂಡಿನ ಮೂರು ಡಿಗ್ರಿ ಸೆಲ್ಷಿಯಸ್‍ ಚಳಿಗೆ ರೂಮಲ್ಲೇ ಮಂಪರು ಹತ್ತಿತ್ತು. ಒಂದೇ ಸಮನೆ ಫೋನ್ ರಿಂಗಾಗಿ ಎಚ್ಚರವಾಗೋಯ್ತು. ಬೆಳಗಿನ ಜಾವ ಮೂರು ಗಂಟೇಲಿ ಯಾರದಪ್ಪಾ ಫೋನೂಂತ ತೊಗೊಂಡೆ. ‘ಆಕ್ಸ್‌ಫರ್ಡಾ?’ ಅಂತ ಪ್ರಶ್ನಿಸಿತು ಆಕಡೆಯ ದನಿ.

‘ಯಾರ‍್ರೀ?’ ಅಂದ ನನ್ನ ಮೈನಡುಕ ಫೋನ್ ಮಾಡಿದವರಿಗೆ ಗೊತ್ತಾಯ್ತೇನೊ? ‘ಕೋವಿಡ್ಡಾ? ಕ್ವಾರಂಟೈನಾ?’ ಅಂತ ಗಾಬರಿಯಿಂದ ಆ ಕಡೆ ದನಿ ಕೇಳ್ತು.

‘ಇಲ್ಲಪ್ಪಾ, ಯಾರು? ಏನಾಗ್ಬೇಕಿತ್ತು?’ ಅಂದೆ. ‘ನಾನು ಕಣೋ ಶಿವಾ, ನಿನ್ನ ಹೈಸ್ಕೂಲ್ ಕ್ಲಾಸ್‍ಮೇಟ್‍ ಮಾತಾಡ್ತಿರೋದು’ ಎಂದವನಿಗೆ ‘ಏನೋ, ಇಷ್ಟು ಬೆಳಗ್ಗೆ ಫೋನ್ ಮಾಡಿ ಗಾಬರಿ ಪಡಿಸಿಬಿಟ್ಯಲ್ಲಾ?’ ಎಂದು ಗದರಿದೆ.

ADVERTISEMENT

‘ಸಾರಿ, ವಾಚ್ ನೋಡ್ಕೊಳ್ಲಿಲ್ಲ. ಆಮೇಲೆ ಫೋನ್ ಮಾಡ್ಲಾ’ ಅಂದ. ‘ಹೇಳು ಏನು ವಿಷ್ಯ?’ ಎಂದು ಮಾತಿಗೆಳೆದೆ.

‘ನೀವು ಕಂಡುಹಿಡಿದಿರೋ ಕೋವಿಶೀಲ್ಡ್ ವ್ಯಾಕ್ಸಿನ್ ಫಸ್ಟ್ ರೌಂಡಲ್ಲಿ ತೊಗೊಂಡೆ, ಸೆಕೆಂಡ್ ರೌಂಡಲ್ಲಿ ಬೇರೆ ವ್ಯಾಕ್ಸಿನ್ ಚುಚ್ಚಿಸ್ಕೋಬೋದಾ? ಅಂದ.

‘ಎರಡೂ ಬೇರೆ ಟೈಪಲ್ಲಿ ವರ್ಕ್ ಆಗತ್ವೆ, ಹಂಗೆಲ್ಲಾ ಮಿಕ್ಸ್ ಮಾಡ್ಬಾರ್ದು’ ಎಂದೆ.
‘ನೀವು ವ್ಯಾಕ್ಸಿನ್ ಮಾಡೋವಾಗ ಈ ಮಿಕ್ಸಿಂಗ್ ಟೆಸ್ಟ್ ಮಾಡಿ ನೋಡಿದ್ರಾ? ಮಿಕ್ಸ್ ಆದ್ರೆ ವೈರಸ್‍ಗೇನಾಗತ್ತೆ? ರೂಪಾಂತರವಾಗತ್ವಾ ಅಥವಾ ನೆಗೆದುಬೀಳತ್ವಾ’ ಅಂದ.

ನಮ್ಮ ಸೈಂಟಿಸ್ಟುಗಳಿಗೇ ಹೊಳೆಯದಿದ್ದ ವಿಷಯ ಇವನಿಂದ ಕೇಳಿ ಅಚ್ಚರಿಯಾಯಿತು. ‘ಈ ಡೌಟುಗಳೆಲ್ಲಾ ನಿನಗ್ಹೇಗೆ ಬಂತು?’ ಅಂದೆ. ‘ಮರೆತುಬಿಟ್ಯಾ, ಯಾವ ಡ್ರಿಂಕ್ ಜೊತೆ ಯಾವುದನ್ನು ಮಿಕ್ಸ್ ಮಾಡ್ಕೊಂಡ್ರೆ ಸರಿಯಾದ ಕಿಕ್ ಬರತ್ತೇಂತ ನಾನಲ್ವಾ ಹೇಳ್ಕೊಟ್ಟಿದ್ದು’ ಎಂದು ನೆನಪಿಸಿದ.

ಕಾಲೇಜಲ್ಲಿ ಇಬ್ರೂ ಕೆಮಿಸ್ಟ್ರಿ ಓದಿದ್ದು ಸಾರ್ಥಕವಾಯ್ತು ಅಂದ್ಕೊಂಡು ನಿದ್ದೆ ಹೋದೆ. ಕನಸಿನಲ್ಲಿ ಬ್ರೇಕಿಂಗ್ ನ್ಯೂಸ್ ಬರ್ತಿತ್ತು– ‘ವ್ಯಾಕ್ಸಿನ್ ಕೇಂದ್ರದ ಮುಂದೆ ಎಂ.ಆರ್.ಪಿ. ಅಂಗಡಿಗಿಂತಲೂ ಹೆಚ್ಚಿನ ಜನಸಂದಣಿ!’

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.