ADVERTISEMENT

ಚುರುಮುರಿ | ಬಂದೂಕು- ಬದುಕು

ಸಿ.ಎನ್.ರಾಜು
Published 20 ಆಗಸ್ಟ್ 2021, 20:00 IST
Last Updated 20 ಆಗಸ್ಟ್ 2021, 20:00 IST
ಚುರುಮುರಿ
ಚುರುಮುರಿ   

‘ಆಡಳಿತದ ಚುಕ್ಕಾಣಿ ಬದಲಾಗುವುದು ಚುನಾವಣೆ ಮೂಲಕ ಅಲ್ವೇನ್ರೀ? ಬಂದೂಕು ಹಿಡಿದೂ ಅಧಿಕಾರ ಹಿಡಿಯಬಹುದಾ?!...’ ಸುಮಿಗೆ ಆಶ್ಚರ್ಯ, ಆತಂಕ.

‘ನೀನು ಸ್ವಾತಂತ್ರ್ಯಾನಂತರ ಹುಟ್ಟಿರುವುದರಿಂದ ಇತಿಹಾಸದ ಅರಿವಿಲ್ಲ. ಹಿಂದೆ ನಮ್ಮಲ್ಲೂ ರಾಜಮಹಾರಾಜರು ದಂಡೆತ್ತಿ ಬಂದು, ಯುದ್ಧ ಮಾಡಿ ಹಳೆ ರಾಜನನ್ನು ಒದ್ದೋಡಿಸಿ, ತಮ್ಮ ರಾಜ್ಯ ವಿಸ್ತರಿಸಿ ಸಾಮ್ರಾಜ್ಯ ಸ್ಥಾಪನೆ ಮಾಡ್ತಿದ್ದರು. ಆಗ ಯುದ್ಧಕ್ಕೆ ಗದೆ, ಬಿಲ್ಲು-ಬಾಣ, ಕತ್ತಿ-ಗುರಾಣಿ ಬಳಸುತ್ತಿದ್ದರು, ಈಗ ಬಂದೂಕು ಬಳಕೆ ಅಷ್ಟೇ...’ ಅಂದ ಶಂಕ್ರಿ.

‘ಮತದಾರರಿಗೆ ಮಾನ್ಯತೆ ನೀಡದೆ ಅಸ್ತಿತ್ವಕ್ಕೆ ಬರುವ ಆಡಳಿತ ವ್ಯವಸ್ಥೆಯಲ್ಲಿ ಜನರ ಹಕ್ಕು, ಕರ್ತವ್ಯಗಳಿಗೆ ಧಕ್ಕೆ ಆಗುವುದಿಲ್ಲವೇ?’

ADVERTISEMENT

‘ಇಂತಹ ಆಡಳಿತದಲ್ಲಿ ಜನರಿಗೆ ಹಕ್ಕು ಕೇಳುವ ಲಕ್ಕು ಇರುವುದಿಲ್ಲ. ಚುನಾವಣೆ ನಡೆದು ಗೆದ್ದರೆ ಆಡಳಿತ ಪಕ್ಷ, ವಿರೋಧ ಪಕ್ಷ ಇರುತ್ತವೆ. ಬಂದೂಕು ಹಿಡಿದು ಗೆದ್ದರೆ ಏಕ ಪಕ್ಷ. ಆಡಳಿತ ವಿಧಾನ, ಸಂವಿಧಾನ ಅವರಿಷ್ಟದಂತೆ. ಜನರ ಹೋರಾಟ, ಪರದಾಟಕ್ಕೆ ಕಿಮ್ಮತ್ತಿರುವುದಿಲ್ಲ, ಕಾನೂನಿನ ಭಯವಿರೋಲ್ಲ, ಬಂದೂಕಿನ ಭಯವಷ್ಟೇ...’

‘ಬಂದೂಕಿನ ನಳಿಕೆಯಲ್ಲಿ ಗುಬ್ಬಿ ಗೂಡು ಕಟ್ಟಲು ಸಾಧ್ಯವಿಲ್ಲ, ಗುಬ್ಬಿಗಳನ್ನು ಭಗವಂತನೇ ಕಾಪಾಡಬೇಕು’.

‘ಕೇಂದ್ರ ಮಂತ್ರಿ ಭಗವಂತ ಖೂಬಾರ ಜನಾಶೀರ್ವಾದ ಸಭೆಯಲ್ಲಿ ಬಂದೂಕು ಹಿಡಿದು ಗಾಳಿಯಲ್ಲಿ ಗುಂಡು ಹಾರಿಸಿ ಮಂತ್ರಿಯನ್ನು ಕೊಂಡಾಡಿದ್ದಾರೆ. ನಮ್ಮಲ್ಲೂ ಬಂದೂಕು ಚಲಾವಣೆಯಲ್ಲಿ ಇದೆ...’

‘ಅಲ್ಲಿ ಅಧಿಕಾರಕ್ಕಾಗಿ ಬಂದೂಕು, ಇಲ್ಲಿ ಅಧಿಕಾರ ಸಿಕ್ಕ ಸಂಭ್ರಮಕ್ಕಾಗಿ ಬಂದೂಕು ಸದ್ದು ಮಾಡಿವೆ’.

‘ಈ ಸಾರಿ ದೀಪಾವಳಿಗೆ ಬಂದೂಕು ಮಾದರಿ ಪಟಾಕಿಗಳು ಮಾರುಕಟ್ಟೆಗೆ ಬರಬಹುದು, ಮಕ್ಕಳು ಬಂದೂಕು ಹಿಡಿದು ‘ಢಂ...’ ಅನಿಸಿ ಖುಷಿಪಡಬಹುದು’.

‘ಆಡಳಿತಗಾರರ ಕೈಯಲ್ಲಿನ ಬಂದೂಕಿನಿಂದ ನಮ್ಮ ಮಕ್ಕಳು ಪ್ರೇರಣೆಗೊಂಡು, ಈಗ ಮೊಬೈಲು, ಬೈಕ್ ಬೇಕು ಅನ್ನೋರೀತಿ ಲೈಸೆನ್ಸ್‌ ಇರೋ ಬಂದೂಕು ಬೇಕು ಅಂತ ಹಟ ಮಾಡಿದ್ರೆ ಗತಿ ಏನ್ರೀ...’ ಸುಮಿ ಗಾಬರಿಯಾದಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.