ADVERTISEMENT

ಚುರುಮುರಿ: ಹೀಗೂ ಉಂಟೆ!

ಬಿ.ಎನ್.ಮಲ್ಲೇಶ್
Published 20 ಮೇ 2021, 19:30 IST
Last Updated 20 ಮೇ 2021, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಪರಿಚಯದ ಕಾನ್‌ಸ್ಟೆಬಲ್‌ ಒಬ್ಬ ಹೋಟೆಲ್‍ನಲ್ಲಿ ಬಿರಿಯಾನಿ ಪಾರ್ಸೆಲ್ ಕಟ್ಟಿಸಿಕೊಳ್ಳುತ್ತಿದ್ದುದನ್ನು ನೋಡಿದ ಪತ್ರಕರ್ತ ತೆಪರೇಸಿ, ‘ಏನ್ರಿ ಇದೂ... ಬಿರಿಯಾನಿ, ಯಾರಿಗೆ?’ ಎಂದು ವಿಚಾರಿಸಿದ.

‘ಅಯ್ಯೋ ನಮಗಲ್ಲ ಸಾ, ಅದ್ಯಾರೋ ಡೂಪ್ಲಿಕೇಟ್ ಔಷಧಿ ಮಾಡಿ ಸಿಕ್ಕು ಬಿದ್ದಾರಲ್ಲ, ಅವರಿಗೆ...’ ಎಂದ ಕಾನ್‌ಸ್ಟೆಬಲ್ಲು.

ತೆಪರೇಸಿಗೆ ಆಶ್ಚರ್ಯ ‘ಏನು? ವಂಚಕರಿಗೆಲ್ಲ ಬಿರಿಯಾನಿ ತಿನ್ನಿಸ್ತೀರಾ ನಿಮ್ ಸ್ಟೇಶನ್ನಲ್ಲಿ?’

ADVERTISEMENT

‘ಅಯ್ಯೋ ಬಿರಿಯಾನಿ ಒಂದೇ ಅಲ್ಲ ಸಾ, ನಮ್ಮ ಸಾಹೇಬ್ರು ಅವರಿಗೆ ಒಳ್ಳೆ ಊಟ, ಡ್ರಿಂಕ್ಸು, ಲಾಕಪ್‍ನಲ್ಲೇ ಮಲಗೋಕೆ ಹಾಸಿಗೆ, ಫ್ಯಾನು ಎಲ್ಲ ಮಾಡಿಕೊಟ್ಟಿದಾರೆ. ಲಾಠಿ ಎತ್ತಿ ಒಂದೂ ಏಟು ಹೊಡೆದಿಲ್ಲ’.

‘ಹೌದಾ? ಏನ್ರೀ ಇದು ವಿಚಿತ್ರ?’

‘ಏನೋ ಗೊತ್ತಿಲ್ಲ ಸಾ, ನಮ್ ಸಾಹೇಬ್ರು ಆ ವಂಚಕರಿಗೆ ‘ನಿಮ್ ಕೈ ಮುಗಿತೀನಿ, ದಯವಿಟ್ಟು ಸತ್ಯ ಹೇಳಿ’ ಅಂತ ರಿಕ್ವೆಸ್ಟ್ ಮಾಡ್ಕೋತಿದ್ರು ಸಾ...’

ಇದ್ರಲ್ಲಿ ಏನೋ ಇದೆ ಎಂದುಕೊಂಡ ತೆಪರೇಸಿ ನೇರ ಪೊಲೀಸ್ ಠಾಣೆಗೇ ನಡೆದ. ಅಲ್ಲಿ ಇನ್‌ಸ್ಪೆಕ್ಟರು ನಕಲಿ ಔಷಧಿ ವಂಚಕರಿಗೆ ‘ನಿಮಗೆ ಏನೂ ಮಾಡಲ್ಲ ಕಣ್ರಯ್ಯ, ಅದ್ರಲ್ಲಿ ಏನು ಹಾಕಿದ್ರಿ ಹೇಳಿಬಿಡಿ ಸಾಕು, ನಿಮ್ಮ ಮೇಲೆ ಕೇಸೇ ಹಾಕಲ್ಲ, ಬಿಟ್ಟು ಕಳಿಸ್ತೀನಿ’ ಎಂದು ಮನವಿ
ಮಾಡಿಕೊಳ್ಳುತ್ತಿದ್ದರು.

‘ಏನ್ಸಾ ಇದೂ, ಈ ವಂಚಕರಿಗೆ ಬೆಂಡ್ ಎತ್ತಿ ಬಾಯಿ ಬಿಡಿಸೋದು ಬಿಟ್ಟು ಬಿರಿಯಾನಿ ತಿನ್ನಿಸ್ತಿದೀರಂತೆ?’ ವಿಚಾರಿಸಿದ ತೆಪರೇಸಿ.

‘ಹೌದು ಕಣ್ರಿ, ಇವರು ಕೊರೊನಾಕ್ಕೆ ಕೊಡೋ ಔಷಧಾನ ನಕಲಿ ಮಾಡಿ ಮಾರಾಟ ಮಾಡ್ತಿದ್ರು. ನಕಲಿ ಮಾಡಿದೀರಲ್ಲ, ಅದ್ರಲ್ಲಿ ಏನು ಹಾಕಿದ್ರಿ ಹೇಳ್ರಿ ಅಂದ್ರೆ ಬಾಯಿ ಬಿಡ್ತಿಲ್ಲ, ಮರೆತೋಗಿದೆ ಅಂತಾರೆ’ ಇನ್‌ಸ್ಪೆಕ್ಟರು ಪೇಚಾಡಿದರು.

‘ನಕಲಿ ಔಷಧಿಗೆ ಏನು ಹಾಕಿದ್ರು ಅನ್ನೋದು ನಿಮಗ್ಯಾಕೆ ಬೇಕು?’

‘ಅಯ್ಯೋ ನನಗಲ್ಲಪ್ಪಾ, ಸರ್ಕಾರಕ್ಕೆ. ಇವರು ತಯಾರು ಮಾಡಿದ ಆ ನಕಲಿ ಔಷಧಿ ತಗಂಡೋರೆಲ್ಲ ಎರಡೇ ದಿನದಲ್ಲಿ ಗುಣ ಆಗಿದಾರಂತೆ!’

ಇನ್‌ಸ್ಪೆಕ್ಟರ್ ಹೇಳಿದ್ದು ಕೇಳಿ ತೆಪರೇಸಿಗೆ ಮಾತೇ ಹೊರಡಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.