ADVERTISEMENT

ಚುರುಮುರಿ: ಇಂತಿ ದುಃಖತಪ್ತರು

ಮಣ್ಣೆ ರಾಜು
Published 6 ಆಗಸ್ಟ್ 2021, 17:58 IST
Last Updated 6 ಆಗಸ್ಟ್ 2021, 17:58 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ಲಕ್ಕಿಗಳು ಗೂಟದ ಕಾರು ಹತ್ತಿದ್ದರು. ಸಚಿವರಾಗದ ದುಃಖಿಗಳು ಶೋಕಸಭೆಯಲ್ಲಿ ನೋವು ತೋಡಿಕೊಂಡರು.

‘ಮನೆ ದೇವರಿಗೆ ಕಾಯಿ ಒಡೆದೆ, ಫ್ಯಾಮಿಲಿ ಸ್ವಾಮೀಜಿಯ ಪಾದ ಹಿಡಿದೆ. ಫಲ ಸಿಗಲಿಲ್ಲ...’ ಒಬ್ಬರು ಕಣ್ಣು ಒರೆಸಿಕೊಂಡರು.

‘ಮಂತ್ರಿಯಾಗೇ ಕ್ಷೇತ್ರಕ್ಕೆ ಬರ್ತೀನಿ ಅಂತ ಮಾತು ಕೊಟ್ಟಿದ್ದೆ. ಈಗ ಹೇಗೆ ಹೋಗಲಿ?...’ ಇನ್ನೊಬ್ಬರ ಸಂಕಟ.

ADVERTISEMENT

‘ಸೂಟ್‌ಕೇಸು, ಸಿ.ಡಿ ಕೇಸು ಯಾವುದೂ ಇಲ್ಲದೆ ಪರಿಶುದ್ಧನಾಗಿದ್ದ ನನಗೆ ಮಂತ್ರಿ ಸ್ಥಾನ ಕೊಡದೆ ಮಾನ ಕಳೆದುಬಿಟ್ರು’ ಎಂದರು ಮತ್ತೊಬ್ಬರು.

‘ಹಿಂದಿನ ಸಂಪುಟದಲ್ಲಿ ಉನ್ನತ ಖಾತೆ ಹಿಡಿದು ಕ್ಷೇತ್ರದ ತುಂಬಾ ಫುಡ್‍ಕಿಟ್ ಹಂಚಿ ಜನಪ್ರಿಯ ಕೆಲಸ ಮಾಡಿದ್ದೆ, ನನ್ನ ಸೇವೆ ಪರಿಗಣಿಸಲಿಲ್ಲ...’ ನಿಟ್ಟುಸಿರುಬಿಟ್ಟರು ಹಿರಿಯರು.

‘ಮಕ್ಕಳನ್ನೆಲ್ಲಾ ಪಾಸ್ ಮಾಡಿದ ಮಂತ್ರಿಯೇ ಫೇಲ್ ಆಗಿಬಿಟ್ಟರು, ನಿಮ್ಮದೇನು ಮಹಾ ಬಿಡಿ...’ ಸಮಾಧಾನ ಹೇಳಿದ್ರು ಪಕ್ಕದವರು.

‘ನಿಮ್ಮೂರಿನ ಸಿದ್ಧಿವಿನಾಯಕ ಸೇವಾ ಮಂಡಳಿ ಅಧ್ಯಕ್ಷರಾಗಿದ್ದ ನೀವು ಎಮ್ಮೆಲ್ಸಿಯಾಗಿ ಸರ್ಕಾರದ ಮಂಡಳಿ ಅಧ್ಯಕ್ಷರಾದರೂ ಆಗಿದ್ರಿ, ನಮಗೆ ಆ ಭಾಗ್ಯವೂ ಇಲ್ವಲ್ಲಾರೀ...’ ಮಗದೊಬ್ಬರು
ಅಲವತ್ತುಕೊಂಡರು.

‘ನೀವು ಪರಾಕ್ರಮಿ ಥರಾ ಮೈಕ್ ಸಿಕ್ಕಿದಾಗಲೆಲ್ಲಾ ನಾಯಕರನ್ನು ಹೀನಾಮಾನವಾಗಿ ಬೈದು ವೈರಲ್ ಆಗಿ ರೈವಲ್ ಆದ್ರಿ, ನಾನು ನಾಯಕರಿಗೆ ನಿಷ್ಠನಾಗಿ, ವಿಧೇಯನಾಗಿದ್ರೂ ಸಚಿವ ಸ್ಥಾನ ದಕ್ಕಲಿಲ್ಲ...’ ಮತ್ತೊಬ್ಬರ ದುಃಖ.

‘ಅತೃಪ್ತ ಶಾಸಕರು ಬಂಡೆದ್ದು ಪ್ರತ್ಯೇಕ ಸಭೆ ಮಾಡ್ತಿದ್ದಾರೆ ಅಂತ ಟೀವಿಯಲ್ಲಿ ಬ್ರೇಕಿಂಗ್ ನ್ಯೂಸ್ ಬರ್ತಿದೆ...’ ಎಂದು ಶಾಸಕರು ಟಿ.ವಿ. ನೋಡಿ ಗಾಬರಿಯಾದರು.

‘ಚಾನೆಲ್‍ನವರು ಹೊರಗೆ ಕಾಯ್ತಾ ಇರಬಹುದು. ಕೇಳಿದ್ರೆ ಊಟಕ್ಕೆ ಸೇರಿದ್ವಿ, ಯಾವುದೇ ಭಿನ್ನಾಭಿಪ್ರಾಯ ಇಲ್ಲ ಅಂತ ಹೇಳೋಣ. ಇಲ್ಲಾಂದ್ರೆ ಇದನ್ನೇ ಗುಲ್ಲೆಬ್ಬಿಸಿ, ಗಬ್ಬೆಬ್ಬಿಸಿ ಮುಂದಿನ ಚುನಾವಣೆಗೆ ನಮಗೆ ಟಿಕೆಟ್ ಇಲ್ಲದಂತೆ ಮಾಡಿಬಿಡ್ತಾರೆ...’ ಎಂದು ಎಲ್ಲರೂ ಲಗುಬಗೆಯಲ್ಲಿ ಹೊರಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.