ADVERTISEMENT

ಚುರುಮುರಿ: ಸುಮ್ಮನೆ ಹೆಂಗಿರ‍್ಲಿ...?

ಸುಧೀಂದ್ರ
Published 5 ಮೇ 2021, 19:40 IST
Last Updated 5 ಮೇ 2021, 19:40 IST
   

‘ಮಾತಾಡಿ ತುಂಬಾ ದಿನಗಳಾದವು. ಹುಷಾರಾಗಿದೀಯಾ ತಾನೆ?’ ಎನ್ನುತ್ತಲೇ ಒಳಗೆ ಬಂದ ಮಹದೇವ.

‘ಹೋದ ವಾರ ನೀನು ಕೊಟ್ಟ ಸಜೆಷನ್ ಚೆನ್ನಾಗಿ ವರ್ಕಾಯ್ತು. ರಾತ್ರಿ ದಿಂಬಿಗೆ ತಲೆಯಿಟ್ಟೊಡನೆ ನಿದ್ದೆ ಬರ್ತಿದೆ. ಬೆಳಗ್ಗೆಯ ತನಕ ಎಚ್ಚರವಾಗ್ತಿಲ್ಲ’ ಎಂದೆ.

ನಮ್ಮಿಬ್ಬರ ಮಾತುಕತೆ ಕೇಳಿಸಿಕೊಂಡ ಮಡದಿ, ‘ನಮ್ಮ ಮನೆಯಲ್ಲೀಗ ನ್ಯೂಸ್ ಕರ್ಫ್ಯೂ ಜಾರಿಯಲ್ಲಿದೆ. ಅದನ್ನೇ ಲಾಕ್‍ಡೌನ್ ರೀತಿ ಮುಂದಿನ ವಾರ ವಿಸ್ತರಿಸಲೂಬಹುದು’ ಎನ್ನುತ್ತಲೇ ಕಾಫಿ ಬಟ್ಟಲುಗಳೊಂದಿಗೆ ಬಂದಳು.‌

ADVERTISEMENT

ಯಾರ ಹಿತವಚನಗಳನ್ನು ಪಾಲಿಸದಿದ್ದರೂ ಗೆಳೆಯ ಮಹದೇವನ ಮಾತುಗಳನ್ನು ಮಾತ್ರ ನಾನು ಆಗಾಗ್ಗೆ ಕೇಳ್ತಿರ್ತೀನಿ. ಕಳೆದ ಬಾರಿ ಅವನು ಮನೆಗೆ ಬಂದಿದ್ದಾಗ, ರಾತ್ರಿಯ ಹೊತ್ತು ಕಣ್ಣಿಗೆ ನಿದ್ದೆಯೇ ಹತ್ತುತ್ತಿಲ್ಲವೆಂದಿದ್ದೆ. ‘ಕೊರೊನಾ ನ್ಯೂಸ್ ಎಫೆಕ್ಟ್. ಒಂದು ವಾರ ಟೀವಿ ನ್ಯೂಸ್ ನೋಡ್ಬೇಡ’ ಎಂಬ ಸಲಹೆಯನ್ನು ಅವನೇ ಕೊಟ್ಟಿದ್ದ.

‘ನೀವು ಹೇಳಿದಾಗಿನಿಂದ ನಮ್ಮನೆ ಟೀವಿಯಲ್ಲಿ ಕೊರೊನಾ ರಣಕೇಕೆ ಹಾಕೋದು ನಿಲ್ಸಿದೆ’ ಎಂದಳು ಮಡದಿ.

‘ಅದರ ಬದಲು, ಒಂದು ವಾರವಾದರೂ ಅರಿಶಿಣಶಾಸ್ತ್ರವನ್ನೇ ಮುಗಿಸಿಲ್ಲದ ‘ಮಂಗಳಗೌರಿ ಮದುವೆ’ಯ ನೆಂಟರ ಗಲಾಟೆಯನ್ನು ನಾನು ಕೇಳಬೇಕಿದೆ’ ಎಂದೆ. ‘ಸಂಜೆ ಆಗ್ತಿದ್ದಂತೆ, ಈ ಸಲ ಕಪ್ ನಮ್ದೇ ಅನ್ನೋ ನಿಮ್ಮ ಕಿರುಚಾಟದ್ಮುಂದೆ ಅದೇನೂ ಅಲ್ಲ’ ಅನ್ನುತ್ತಾ ಮಡದಿ ನನ್ನ ಬಾಯಿ ಮುಚ್ಚಿಸಿದಳು.

ನಮ್ಮ ಪ್ರೇಮ ಕಲಹವನ್ನಾಲಿಸುತ್ತಿದ್ದ ಮಹದೇವ, ‘ಎಲ್ಲಾ ಸರಿ. ಆದರೆ ಫೇಸ್‍ಬುಕ್, ವಾಟ್ಸ್‌ಆ್ಯಪ್‍ಗಳಲ್ಲಾದರೂ ನೀನು ಸ್ವಲ್ಪ ಆ್ಯಕ್ಟಿವ್‌ ಆಗಿರು, ಇಲ್ಲಾಂದ್ರೆ ನಮಗೆಲ್ಲಾ ಗಾಬರಿಯಾಗತ್ತೆ’ ಎಂದ. ‘ಇದ್ದಕ್ಕಿದ್ದಂತೆ ಆ್ಯಕ್ಟಿವಿಟಿ ನಿಂತೋದ್ರೆ, ನಿನಗೆ ಕೊರೊನಾ ಜತೆ ಹೊಸತಾಗಿ ಲಿವ್-ಇನ್-ರಿಲೇಶನ್‍ಶಿಪ್‍ ಶುರುವಾಗಿರಬಹುದೂಂತ ಜನ ಭಾವಿಸಿಬಿಡ್ತಾರೆ’ ಅಂದ.‌

‘ಸರಿ’ ಎಂದವನೇ ಸ್ಟೇಟಸ್ ಅಪ್‍ಡೇಟ್ ಹಾಕಲು ಫೋನ್ ಕೈಗೆತ್ತಿಕೊಂಡೆ. ಅಷ್ಟರಲ್ಲಿ ಮಡದಿಯ ಫೋನ್‌ನಿಂದ ‘ನಿನ್ನಾ ನೋಡಿ
ಸುಮ್ಮನೆ ಹೆಂಗಿರ‍್ಲಿ’ ಎಂಬ ಹೊಸ ರಿಂಗ್‍ಟೋನ್‌ ಗುನುಗುನಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.