ADVERTISEMENT

ಚುರುಮುರಿ| ಡಬ್‍ಸ್ಮ್ಯಾಶ್ ಸರ್ಕಾರ

ಲಿಂಗರಾಜು ಡಿ.ಎಸ್
Published 19 ಜುಲೈ 2021, 19:31 IST
Last Updated 19 ಜುಲೈ 2021, 19:31 IST
Churumuri 20-07-2021.jpg
Churumuri 20-07-2021.jpg   

‘ನೋಡಿ ಸಾ, ಮಲ್ಯನ ಶೇರೆಲ್ಲ ಮಾರಿದ ಮ್ಯಾಲೆ 792 ಕೋಟಿ ರೂಪಾಯಿ ಬಂದದಂತೆ!’ ಅಂತ ಹೇಳಿದೆ.

‘ನಮ್ಮದೂ ರಾಜಾವುಲಿ ಸರ್ಕಾರ ಇದ್ದಂಗೆ ಡಬ್‍ಸ್ಮ್ಯಾಶ್ ಬ್ಯಾಂಕು ಕನೋ! ಏನೂ ದಬ್ಬಾಕಕೆ ಆಗಕಿಲ್ಲ. ಆದ್ರೂ ಬ್ಯಾಂಕಿನ ಸಕಲೆಂಟು ಯವಾರಗಳು ಬೆಳಗ್ಗಿಂದ ಸಂದೇಗಂಟಾ ನಡಿತವೆ’ ಅಂದ್ರು.

‘ಗೊತ್ತು ಬುಡಿ, ಅಕ್ಕನೇ ಅಲ್ಲುವೇ ರಿಜರ್ವ್ ಬ್ಯಾಂಕಿನ ಜನರಲ್ ಮೇನೇಜ್ರು!’ ಅಂದೆ.

ADVERTISEMENT

‘ಹ್ಞೂಂ ಕನೋ. ಫಂಡು ಕಡಮೆಯಾದಾಗ ಹೆಡ್ತಿ ಬ್ಯಾಂಕು ಶಾರ್ಟ್ ಟರ್ಮ್ ಲೋನ್ ಕೊಡ್ತದೆ. ಈ ಲೋನ್ ಅಕೌಂಟು ಬೇಗ ಕ್ಲೋಸ್ ಮಾಡ್ದೇವೋದ್ರೆ ಬ್ಯಾಡ್ ಡೆಟ್ ಆಗಿ ರೆಪೋ ರೇಟು ಏರುಪೇರಾಗಿ ಬ್ಯಾಂಕಿಗೆ ಕೆಟ್ಟೆಸರು! ನನ್ನ ಸಂಬಳ ವರ್ಕಿಂಗ್ ಕ್ಯಾಪಿಟಲ್ಲು ಇದ್ದಂಗೆ. ಮನೇರಿಗೆಲ್ಲಾ ಅಲ್ಲಿಂದಲೇ ಕಾಸು ವಿತರಣೆ ಆಯ್ತದೆ. ನಮ್ಮಪ್ಪಂದು ಕರಂಟ್ ಅಕೌಂಟು. ಅದ ಮುಟ್ಟಿದ್ರೆ ಶಾಕು ಹೊಡಿತದೆ! ಮಕ್ಕಳು ಎಫ್‌ಡಿ ಇದ್ದಂಗೆ. ನಡಂತರದೇಲಿ ಕ್ಯಾಶ್ ಮಾಡಕೋದ್ರೆ ಪೆನಾಲ್ಟಿಯಾಯ್ತದೆ!’ ಅಂದು ಫ್ರಿಜ್‌ ತಗ್ದು ಒಳಗಿದ್ದ ಕಿಂಗ್‍ಫಿಶರ್ ಬೀರು ಬಾಟಲು ಎಣಿಸಿ ಫ್ರಿಜ್‌ ಮುಚ್ಚಿ ಬಂದರು.

‘ಅದೇನ್ಲಾ?’ ಅಂತು ಯಂಟಪ್ಪಣ್ಣ. ‘ಅಣೈ, ಮಲ್ಯನ ಸಾಲ ಈಗ ನಾನ್ ಪರ್ಫಾರ್ಮಿಂಗ್‌ ಅಸೆಟ್ ಆಗಿದ್ರಿಂದ ಅದುನ್ನ ಸೀಜ್ ಮಾಡಿ ತಕ್ಕಬಂದು ಫ್ರಿಜ್ಜಲ್ಲಿಟ್ಟು ಫ್ರೀಜ್‌ ಮಾಡಿದ್ದೀನಿ. ಇದು ಬ್ಯಾಂಕಿನ ಪ್ರೊಫೈಲಿದ್ದಂಗೆ. ಕುಟೀಲಣ್ಣನ ಆಡಿಯೋ ಥರಾ ತೋರ್ಸಕಷ್ಟೇ! ನಿಜ ಅಂದ್ರೆ ನಿಜ, ಸುಳ್ಳು ಅಂದ್ರೆ ಸುಳ್ಳು!’ ಅಂದ್ರು.

‘ಕಿಂಗ್‍ಫಿಶರ್ ಎಲ್ಲೀಗಂಟ ಫ್ರಿಜ್ಜಲ್ಲೇ ಇದ್ದದು ಸಾ?’ ಅಂತ ಜೊಲ್ಲು ಸೋರಿಸಿಗ್ಯಂಡು ಕೇಳಿದೆ.

‘ನೋಡ್ಲಾ, ಕೇಂದ್ರ ಸರ್ಕಾರ ಮಲ್ಯನ ಸಾಲವ ವಜಾ ಮಾಡಗಂಟಾ ಅದು ಅಲ್ಲೇ ಇರ್ತದೆ. ಆಮೇಲೆ ಫ್ರೀಜಾಗಿರೋ ಅಸೆಟ್ಟನ್ನ ಲಿಕ್ವೀಡೇಟ್ ಮಾಡಿ ಹೊಟ್ಟೆಗೆ ಬುಟ್ಕತಿನಿ’ ಅಂದಾಗ ಮಲ್ಯನ ಬಾಕಿ ವಸೂಲಿಗೆ ಇವರೇ ಸರಿ ಅನ್ನಿಸ್ತು!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.