ADVERTISEMENT

ಚುರುಮುರಿ: ಪರೀಕ್ಷೆ ಡಿಸ್ಕಷನ್ನು

ಸಿದ್ದಯ್ಯ ಹಿರೇಮಠ
Published 30 ಜೂನ್ 2021, 21:30 IST
Last Updated 30 ಜೂನ್ 2021, 21:30 IST
   

ದ್ಯಾಮವ್ವನ ಗುಡಿಕಟ್ಟಿ ಮ್ಯಾಲೆ ಹರಟೀ ಹೊಡಿಯೂ ಗುಂಪು, ಇವತ್ತ ‘ಪರೀಕ್ಷೆ’ ವಿಷಯದ ಮ್ಯಾಲೆ ಡಿಸ್ಕಷನ್‌ ಇಟಗ್ಯಂಡಿತ್ತು. ‘ಯಾಡ್ ವರ್ಸಾತು ನಮ್ ಹುಡುಗೂರಿಗೆ ಸಾಲಿಲ್ಲಾ, ಮೂಲಿಲ್ಲಾ. ಆದ್ರೂ ನೀ ಪಾಸ್,ನೀ ಪಾಸ್ ಅಂತ ಹೇಳಿ ಎಲ್ಲಾರ‍್ನೂ ಪಾಸ್ ಮಾಡಿಬಿಟ್ಟಾರ’ ಅಂತ ಗುಡಸಲಮನೀ ಈರೇಶಿ ಹೇಳಿದ.

‘ಹೌದೌದು ನಮ್ಮ ಹುಡಗ್ನೂ ಪಾಸ್ ಅನಕೋಂತ ಅಡ್ಯಾಡಾಕ್ಹತ್ತಿದ್ದಾ. ನಾವು ಹಗಲೂರಾತ್ರಿ ಓದಿದ್ರೂ ಪಾಸ್ ಆಗ್ತಿರ್ಲಿಲ್ಲ. ನಿಮ್ಮನ್ನ ಅದ್ಹೆಂಗ್ ಪಾಸ್ ಮಾಡಿದ್ರಲೇ ಅಂತ ಕೇಳಿದ್ರ, ನಿಮಗ್ಯೆಲ್ಲಾ ಗೊತ್ತಾಗಂಗಿಲ್ಲ ಬಿಡಪಾ ಅಂತ್ಹೇಳಿ ಓಡಿ ಹೋತು’ ಅಂತ ಬಡಿಗ್ಯಾರ ಮಾನಪ್ಪ ದನಿಗೂಡಿಸಿದ.

‘ಬಿಡ್ರ್ಯಲೇ, ಈ ಸಲಾ ಪಿಯುಸಿ ಹುಡುಗೂ ರಿಗೇ ಪರೀಕ್ಸೆ ಇಲ್ಲ. ಇನ್ನ ಐದ್ನೆತ್ತ, ಆರ್‌ನೆತ್ತದ ಸಣ್‌ಸಣ್ ಹುಡುಗೂರಿಗೆ ಎಲ್ಲಿಂದ ಪರೀಕ್ಸೆ ತರತೀ’ ಅನಕೋತ ಗಂಗಪ್ಪ ಬಂದ್ ಕುಂತ.

ADVERTISEMENT

‘ಹೌದಲ್ಲೋ, ಸರ್ಕಾರದೌರು ಪಿಯುಸಿ ಹುಡುಗೂರದು ಪರೀಕ್ಸೆ ಕ್ಯಾನ್ಸಲ್ ಮಾಡಿ, ಈ ಸಲಾ ಅಡ್ಮಿಷನ್ ಮಾಡ್ಸಿದೌರ್ ಎಲ್ಲಾರೂ ಪಾಸ್, ಹ್ವಾದ್ ವರ್ಸ ಪರೀಕ್ಸೆ ಬರದು ಫೇಲ್ ಆದವ್ರು ಈ ಸಲಾ ಮತ್ ಫೇಲ್ ಅಂತ ಹೇಳಿದ್ರು. ಪಾಪ, ಹ್ವಾದ್ ವರ್ಸ ಫೇಲ್ ಆಗಿದ್ವು, ನಮ್ಮಂಗ ಏನ್ ಪಾಪಾ ಮಾಡ್ಯಾವೋ ಏನೋ? ಅವುಕ್ಕ ಪಾಸ್ ಆಗೂ ನಸೀಬನ ಇಲ್ಲ ಅಂತ ಕಾಣತೈತಿ’ ಅಂದ ಬಸರೀಕಟ್ಟಿ ಬಸಣ್ಣ.

‘ಆದ್ರ ಎಸ್ಸೆಸ್ಸೆಲ್ಸಿಯವ್ರಿಗೆ ಯಾಡ್ ದಿನಾ ಅಷ್ಟಾ ಪರೀಕ್ಸೆ ನಡಸ್ತಾರಂತ. ಈ ಹುಡ್ರೆಲ್ಲಾ ಯಾಡ್ ದಿನಾ ಒಂದ್ ಕಡೆ ಸೇರಿದ್ರ ಕೊರೊನಾ ಬರಂಗಿಲ್ಲಾ?’ ಅಂತ ಅಂವಾ ಕ್ವಶ್ಚನ್ ಹಾಕಿದ.

‘ನೋಡ್ರಿಪಾ, ಈ ಪಿಯುಸಿಯವ್ರಿಗೆ ಇರಲಾರ್ದ್ ಎಕ್ಜಾಮು ಔರಿಗಿಂತ ಸಣ್ ವಯಸ್ಸಿನ ಎಸ್ಸೆಸ್ಸೆಲ್ಸಿ ಹುಡುಗೂರಿಗೆ ಯಾಕ? ಇದನ್ಯಾರೂ ಕೇಳಾವ್ರ ಇಲ್‌ ನೋಡು’ ಅಂತ ಸಂತ್ಯಾ ಅಬ್ಜೆಕ್ಷನ್ ಎತ್ತಿದ.

‘ಅಲ್ಲಲೇ, ನಮ್ ಮಂತ್ರಿ ಯೋಗೀಸ್ವರನೂ ಪರೀಕ್ಸೆ ಬರದಾನಂತ. ಯಾರಿಗೂ ಇಲ್ಲದ ಪರೀಕ್ಸೆ ಅವ್ನಿಗೆ ಯಾರ್ ಇಟ್ಟಿದ್ರೂ ಅಂತೇನಿ! ಪರೀಕ್ಸೆ ಮುಗದೈತಿ ರಿಜಲ್ಟಿಗೆ ಕಾಯಕತ್ತೇನಿ, ಇನ್ನೇನ್ ಬಂದ ಬಿಡತೈತಿ ಅಂತ ಹೇಳ್ಯಾನ. ಬೌಶ ಅವನ ರಿಜಲ್ಟ್ ಬಂದು ಪಾಸ್ ಆದ್ನಪಂದ್ರ, ನಮ್ ಯಡಿಯೂರಜ್ಜ ಫೇಲ್ ಆಗೂದು ಗ್ಯಾರಂಟಿ’ ಅಂದ ಮಡಿವಾಳಿಯ ಮಾತಿಗೆ ಎಲ್ಲರೂ ಹೌದ್ಹೌದು ಅನ್ನುತ್ತಾ ತಲೆಯಾಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.