ADVERTISEMENT

ಚುರುಮುರಿ: ಹಬ್ಬದ ತಯಾರಿ

ಸುಮಂಗಲಾ
Published 6 ಸೆಪ್ಟೆಂಬರ್ 2021, 19:31 IST
Last Updated 6 ಸೆಪ್ಟೆಂಬರ್ 2021, 19:31 IST
   

ಬೆಕ್ಕಣ್ಣ ಏನೋ ಚಿತ್ರ ಬಿಡಿಸುತ್ತ ಕೂತಿತ್ತು. ಡ್ರಾಯಿಂಗ್ ಶೀಟಿನಲ್ಲಿ ಇಣುಕಿದೆ.

ಮನೆಯ ಪಡಸಾಲೆಯಲ್ಲಿ ನಾಲ್ಕಾರು ಆಕಳುಗಳಿದ್ದ ಚಿತ್ರ ಬರೆದಿತ್ತು. ನನಗೆ ತಲೆಬುಡ ಅರ್ಥವಾಗಲಿಲ್ಲ.

‘ನಾಳೆನೆ ಒಂದ್ ನಾಕು ಆಕಳು ತಗಂಡು ಬರೂಣು’ ಎಂದಿತು.

ADVERTISEMENT

‘ನಾಕು? ನಿನ್ನ ತೆಲಿ ಮ್ಯಾಗ ಕಟ್ಟಲೇನು? ಈ ಸಣ್ಣ ಮನಿವಳಗೆ ಕೊಟ್ಟಿಗೆ ಎಲ್ಲಿ ಮಾಡತೀಯ? ಹುಚ್ಖೋಡಿ’ ಎಂದು ಬೈದೆ.

‘ಆಮ್ಲಜನಕ ತಗಂಡು, ಆಮ್ಲಜನಕ ಬಿಡುವ ಏಕೈಕ ಪ್ರಾಣಿ ಆಕಳು ಅಂತ ವಿಜ್ಞಾನಿಗಳು ನಂಬ್ಯಾರೆ. ಆಕಳು ಸಾಕಿದ್ರ ಆಮ್ಲಜನಕ ಮಟ್ಟ ಹೆಚ್ಚಾಗತೈತಂತ’ ಸುದ್ದಿ ತೋರಿಸಿತು.

‘ವಿಜ್ಞಾನಿಗಳು ಏನೇ ನಂಬಿದ್ರೂ ಪ್ರಯೋಗದಿಂದ ಸಾಬೀತು ಮಾಡ್ತಾರ. ಆಮ್ಲಜನಕ ತಗಂಡು, ಆಮ್ಲಜನಕನೇ ಹೊರಗೆ ಬಿಡ್ತದಂತ ಪ್ರಯೋಗ ಎಲ್ಲಿ ಹೇಳೈತಿ. ಮುಂದೆ ಓದು. ನೀ ಹುಲಿ ವಂಶಸ್ಥ ಹೌದಿಲ್ಲೋ... ನಿಮ್ಮ ವಂಶದವರಿಗೆ ಕೊಟ್ಟಿದ್ದ ರಾಷ್ಟ್ರೀಯ ಪ್ರಾಣಿ ಬಿರುದಾವಳಿ ಬ್ಯಾರೆಯವರಿಗಿ ಕೊಡತಾರೆ ನೋಡು’ ಎಂದೆ.

ಬುಡಕ್ಕೆ ಬೆಂಕಿ ಬಿದ್ದಾಗ ಎಚ್ಚೆತ್ತುಕೊಳ್ಳುವ ಶ್ರೀಸಾಮಾನ್ಯರಂತೆ ಬೆಕ್ಕಣ್ಣ ಥಟ್ಟನೆ ವರಸೆ ಬದಲಿಸಿ ‘ಹೇ... ಹಂಗೆಲ್ಲ ಮಾಡಂಗಿಲ್ಲ... ಹುಲಿಯೇ ನಮ್ಮ ರಾಷ್ಟ್ರೀಯ ಪ್ರಾಣಿ’ ಎನ್ನುತ್ತಾ ಗುರುಗುಟ್ಟಿತು.

ಸ್ವಲ್ಪ ಹೊತ್ತು ಬಿಟ್ಟು ‘ನನಗ ಹೊಸ ಮಾಸ್ಕ್, ಸ್ಯಾನಿಟೈಸರ್ ಎಲ್ಲಾ ತರಿಸಿಕೊಡು’ ಎಂದು ವರಾತ ಶುರುವಿಟ್ಟಿತು.

‘ಗಣೇಶೋತ್ಸವ ನೋಡಾಕ ಹೋಗತೀನಿ. ದಾರೀಲಿ ಇಲಿಗೋಳು ಸಿಕ್ತಾವಲ್ಲ, ಅವನ್ನು ಹಿಡೀತೀನಿ...’ ಎಂದಿತು.

‘ಅಲ್ಲಿ ಬರೀ ಇಲಿಗೋಳು ಸಿಗದಷ್ಟೇ ಅಲ್ಲ, ನಿಮ್ಮ ಕೊರೊನಣ್ಣನೂ ವೇಷ ಮರೆಸಿಕೊಂಡು ಬಂದರೆ...’ ಎಂದು ಎಚ್ಚರಿಸಿದೆ.

‘ನೀ ಎಲ್ಲಾದಕ್ಕೆ ಅಡ್ಡಗಾಲು ಹಾಕಬ್ಯಾಡ... ಬೊಮ್ಮಾಯಿಮಾಮಾ ಹೇಳಿದ ಷರತ್ತನ್ನೆಲ್ಲ ನಮ್ಮ ಜನ ಪಾಲಿಸ್ತಾರೇಳು’ ಎನ್ನುತ್ತ ಗಣೇಶೋತ್ಸವದ ಪೆಂಡಾಲಿಗೆ ಹೋಗಲು ಈಗಿಂದಲೇ ಸಿದ್ಧತೆ ನಡೆಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.