ADVERTISEMENT

ಚುರುಮುರಿ: ಗುರಿಯ ಬೆಂಬತ್ತಿ...

ಕೆ.ವಿ.ರಾಜಲಕ್ಷ್ಮಿ
Published 26 ಜುಲೈ 2021, 19:30 IST
Last Updated 26 ಜುಲೈ 2021, 19:30 IST
ಚುರುಮುರಿ
ಚುರುಮುರಿ   

‘ಒಲಿಂಪಿಕ್ಸ್ ಆರಂಭದ ದಿನವೇ ಬೆಳ್ಳಿ ಪದಕದ ಓಂಕಾರ’, ಪುಟ್ಟಿ ಕುಣಿದಾಡುತ್ತಿದ್ದಳು.

‘ಅಲ್ವೇ ಮತ್ತೆ? ಅಡುಗೆಮನೆ ರುಬ್ಬುಗುಂಡು ಆಡಿಸೋಕ್ಕೂ ಸರಿ, ಆಟದಮನೇಲಿ ಆಡೋಕ್ಕೂ ಸೈ, ಹೆಣ್ಮಕ್ಳೇ ಸ್ಟ್ರಾಂಗು’ ಶ್ ಶ್ ಅಂತ ಸೊಳ್ಳೆ ಬ್ಯಾಟಿನಲ್ಲಿ ಸೊಳ್ಳೆಯನ್ನು ಗುರಿಯಾಗಿಸಿ ಬೀಸುತ್ತಿದ್ದ ಅತ್ತೆಯ ಸಪೋರ್ಟು.

ಫಕ್ಕನೆ ಹೊಳೆಯಿತು ‘ರಿಯೊದಲ್ಲಿ ಗಳಿಸಿದ ಬೆಳ್ಳಿ ಈ ಬಾರಿ ಚಿನ್ನವಾದರೆ ಚಂದ’ ನಾನೆಂದೆ ನಮ್ಮ ಹೆಮ್ಮೆಯ ಸಿಂಧುವನ್ನು ನೆನೆದು.

ADVERTISEMENT

ಸಾಧಾರಣವಾಗಿ ವಾಕ್ ಟೈಮ್‌ಗೆ ಬರುವ ಕಂಠಿ ಸ್ವಲ್ಪ ಬೇಗನೇ ಬಂದ- ಅಂದರೆ ಏನೋ ವಿಷಯ ಇದೆ.

‘ಇವತ್ತು ಇದ್ದದ್ದು ನಾಳೆಗಿಲ್ಲ, ಎಲ್ಲಾ ಅವನ ಮಾಯೆ’ ಎಂದು ಸೂರು ನೋಡಿದ.

‘ನಿಜ, ಇವತ್ತಿನ ಕೊರೊನಾ ಭಯ ನಾಳೆ ಇಲ್ಲ, ಜಾಗರೂಕತೆ ಇದ್ದರೆ ಸಾಕು. ಲಸಿಕೇನೂ ಒಂದಕ್ಕೆ ಮೂರು ಬಂದಾಯ್ತು, ಯಾವುದಾದರೂ ಹಾಕ್ಕೊಬೋದು, ಮುಖ್ಯವಾಗಿ ಭರವಸೆ ಇರಬೇಕು’ ಅತ್ತೆಯ ಅನುಭವದ ಮಾತು.

ಕಂಠಿ ರಿಯಾಕ್ಟ್ ಮಾಡಲಿಲ್ಲ.

‘ಪೊಸಿಷನ್ನೂ ಅಷ್ಟೇ, ಇವತ್ತಿರುತ್ತೆ ನಾಳೆ ಇರೋಲ್ಲ, ಯಾರಾದರೂ ಇರಲಿ ಆಡಳಿತ ಚೆನ್ನಾಗಿರಬೇಕು ಅಷ್ಟೇ’ ರಾಜಕೀಯ
ಕುರ್ಚಿಯಾಟದತ್ತ ಗಮನ ಸೆಳೆದೆ.

‘ಅದಲ್ಲ, ಈ ಬಾರಿ ಹೆಚ್ಚುವರಿ ತುಟ್ಟಿಭತ್ಯ ಸೇರಿ ಸಂಬಳ ಬರುತ್ತೆ ಅಂತ ಖುಷಿಯಾಗಿದ್ದೆ, ಆದರೆ ಅದಕ್ಕೂ ಬಂತು ಕೊಕ್ಕೆ’.

ಕೆಟ್ಟ ಹಿಗ್ಗು- ಒಂದೇ ಕ್ಷಣ ತೋರಿಸಿಕೊಳ್ಳದೆ ‘ಯಾಕೆ? ಹೀಗೆ ಕೊಟ್ಟು ಹಾಗೆ ಫಂಡ್ ಗಿಂಡ್ ಅಂತ ವಾಪಸ್ ತೊಗೋತಿದ್ದಾರಾ?’ ಎಂದೆ.

‘ಅಯ್ಯೋ ಅಂತದ್ದೇನಿಲ್ಲ, ನಮ್ಮ ಒಲಿಂಪಿಕ್ಸ್ ವಿಜೇತೆ ಮೀರಾ ಕಿವಿಯೋಲೆ ಟ್ರೆಂಡ್ ಆಗ್ತಿದೆ, ತನಗೂ ಬೇಕು ಅಂತ ಶ್ರೀಮತಿಯ ಹಟ. ‘ಹೊಸ ಮಾದರಿ, ಎರಡು ಮಾಡಿಸಿಕೊಂಡರೆ ಡಿಸ್ಕೌಂಟ್ ಕೊಡ್ತೀನಿ ಅಂದ್ರು ನಮ್ಮ ಜ್ಯೂವೆಲ್ಲರ್’ ಕಂಠಿಯ ಹೇಳಿಕೆ ಮುಗಿಯುವಷ್ಟರಲ್ಲೇ ‘ಅದಕ್ಕೇನಂತೆ, ನಮ್ಮ ಕಡೆಯಿಂದ ಇನ್ನೊಂದು ಆರ್ಡರ್ ಮಾಡಿದರೆ ಆಯ್ತು. ಇನ್ನೇನು ಶ್ರಾವಣ ಮಾಸ ಬಂತು, ಹಬ್ಬಕ್ಕೆ ಹಾಕ್ಕೊಳ್ಳೋಕೆ ಆಗುತ್ತೆ, ಅಲ್ವೇ?’ ನನ್ನವಳ ನಯವಾದ ಆದೇಶ.

ಕಂಠಿಯ ಗುರಿ ಮುಟ್ಟಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.