ADVERTISEMENT

ಚುರುಮುರಿ: ಮಾರ್ಜಾಲ ಯೋಗಾಸನ

ಸುಮಂಗಲಾ
Published 20 ಜೂನ್ 2021, 20:55 IST
Last Updated 20 ಜೂನ್ 2021, 20:55 IST
Churumuri-21-06-2021
Churumuri-21-06-2021   

ಬೆಕ್ಕಣ್ಣ ನಸುಕಿನ ನಾಲ್ಕು ಗಂಟೆಗೇ ಎದ್ದು ದೊಡ್ಡಪುಸ್ತಕ ತೆರೆದು ಭಾರೀ ಅಧ್ಯಯನದಲ್ಲಿ ತೊಡಗಿತ್ತು. ನಡುನಡುವೆ ಎದ್ದು ಅದೇನೋ ವಿಚಿತ್ರ ಆಸನಗಳನ್ನು ಪ್ರಯತ್ನಿಸುತ್ತಿತ್ತು. ಮತ್ತೆ ಕೂತು ಏನೋ ಟಿಪ್ಪಣಿ ಮಾಡುತ್ತಿತ್ತು. ನನಗೆ ವಿಪರೀತ ಸೋಜಿಗವಾಯಿತು.

‘ನೆನಪೈತಿಲ್ಲೋ... ಇವತ್ತು ಜೂನ್ 21, ವಿಶ್ವ ಯೋಗ ದಿನಾಚರಣೆ. ರಾಜಭವನದಾಗೆ ಕಾರ್ಯಕ್ರಮ ಮಾಡ್ತಾರ. ನಾ ಒಂದಿಷ್ಟು ಹೊಸ ಆಸನ ಕಂಡುಹಿಡಿದೀನಿ, ಅಲ್ಲಿ ಡೆಮಾನಸ್ಟ್ರೇಶನ್ ಮಾಡಕ್ಕೆ ಹೊಂಟೀನಿ’ ಎಂದು ವಿವರಿಸಿತು.

‘ನಮ್ಮ ಯೋಗ ಸಾವಿರಾರು ವರ್ಷಗಳಿಂದ ಐತಿ, ಅಷ್ಟಕೊಂದು ಆಸನಗಳದಾವು. ನೀ ಕಂಡು ಹಿಡಿಯೂದೇನು ಉಳಿದೈತಿ’ ಎಂದೆ.

ADVERTISEMENT

‘ಈಗಿನ ಕಾಲಕ್ಕೆ ಯಾರಿಗೇನು ಅಗತ್ಯ ಐತಿ ಹಂಗ ಕಸ್ಟಮೈಸ್ ಮಾಡಿರೋ ಆಸನಗಳನ್ನು ಕಂಡುಹಿಡಿದೀನಿ. ಯೋಗಗುರು ಆದ್ರ ರಗಡ್ ರೊಕ್ಕನೂ ಸಿಗತೈತಿ’ ಎಂದು ಆಸನಗಳನ್ನು ವಿವರಿಸತೊಡಗಿತು.

‘ಕುರ್ಚಿ ಭದ್ರಾಸನ- ಇದು ನಮ್ಮ ಯೆಡ್ಯೂರಜ್ಜಾರಿಗೆ ಅಂತ ವಿಶೇಷವಾಗಿ ರೂಪಿಸೀನಿ. ಇದ್ರಾಗೆ ಭಿನ್ನಮತ ಶಮನಾಸನ, ಶಾಸಕ ಸಾಂತ್ವಾಸನ, ಮಠಮಂಡಿಯೂರಾಸನ ಇತ್ಯಾದಿ ಸೇರಿ, ಇದೊಂಥರಾ ಸಂಕೀರ್ಣಾಸನ.

ಕೇಂದ್ರ ನಮಸ್ಕಾರಾಸನ- ಸೂರ್ಯನಮಸ್ಕಾರಕ್ಕಿಂತ ಬ್ಯಾರೆ ಥರದ ನಮಸ್ಕಾರಗಳು ಇದ್ರಾಗೈತಿ. ಅಧಿಕಾರದಾಗೆ ಇರೋರು, ಅಧಿಕಾರಾಕಾಂಕ್ಷಿಗಳು, ವಿವಿಧ ಪ್ರಶಸ್ತಿ ಆಕಾಂಕ್ಷಿ ಸಾಹಿತಿಗಳು ಇವರಿಗೆ ಅಂತ ರೂಪಿಸೀನಿ.

ಬಗ್ಗುಬಡಿಯಾಸನ- ಇದ್ರಾಗೆ ಬಾಯಿ ಮುಚ್ಚಾಸನ, ಮಿದುಳು ನಿಷ್ಕ್ರಿಯಾಸನ, ಬಡಾಯಿ ಆಸನ ಇತ್ಯಾದಿನೂ ಸೇರೈತಿ. ಇದು ನಮ್ಮ ಮೋದಿಮಾಮ, ಶಾಣೆ ಅಂಕಲ್ಲಿಗಷ್ಟೇ ಹೇಳಿಕೊಡತೀನಿ. ಅವ್ರು ಇದನ್ನು ಮಾಡ್ತದರ ಖರೇ, ಆದರ ನಾ ಹೇಳಿಕೊಡೂ ಈ ಸಂಕೀರ್ಣ ಆಸನಾದಾಗೆ ಎದುರಿನವರ ಬಾಯಿ ತಂತಾನೆ ಮುಚ್ಚಿ, ತಂತಾನೆ ಮಿದುಳು ನಿಷ್ಕ್ರಿಯವಾಗೂ ಹಂಗ ಮಾಡಾಕೆ ವಿಶಿಷ್ಟ ವಶೀಕರಣನೂ ಸೇರಿಸೀನಿ’ ಬೆಕ್ಕಣ್ಣನ ಪಟ್ಟಿ ಇನ್ನೂ ಉದ್ದವಿತ್ತು.

‘ಮತ್ತ ನಮಗ... ಶ್ರೀಸಾಮಾನ್ಯರಿಗೆ ಏನು ಆಸನ?’ ನನಗೆ ಹೊಸ ಆಸನ ಕಲಿಯುವ ಆಸೆ.

‘ಶ್ರೀಸಾಮಾನ್ಯರಿಗೆ ಶವಾಸನವೇ ಸಾಕು, ಇನ್ನೂ ಬೇಕಾದ್ರ ಸೋಶಿಯಲ್ ಮೀಡಿಯಾದಾಗೆ ಲಬೋಲಬಾಸನ ಮಾಡ್ರಿ’ ಎಂದು ಖೊಳ್ಳನೆ ನಕ್ಕಿತು!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.