ADVERTISEMENT

ಚುರುಮುರು: ಮುಂದಾನೊಂದು ಕಾಲದಲ್ಲಿ...

ಲಿಂಗರಾಜು ಡಿ.ಎಸ್
Published 31 ಮೇ 2021, 18:09 IST
Last Updated 31 ಮೇ 2021, 18:09 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

2071ನೇ ವರ್ಷದ ಜೂನ್ ತಿಂಗಳ 1ನೇ ತಾರೀಖು ಬೆಳಗ್ಗೆ ಎದ್ದೋನೇ ರೆಸ್ಪಿರೇಟರಿ ಮಾಸ್ಕ್ ತಗಲಾಕ್ಯಂಡು ಆಕ್ಸಿಜನ್ ಪ್ಲಾಂಟ್ ಆನ್ ಮಾಡಿದೆ. ಬಟ್ಟೆ ಸ್ಕ್ಯಾನು, ಸ್ಯಾನಿಟೈಸ್ ಮಾಡಿಕ್ಯಂಡ ನ್ಯಾನೋ, ಆರೋಗ್ಯ ಚೆನ್ನಾಗದೆ ಅಂತ ರಿಪೋರ್ಟ್ ಕೊಡ್ತು. ನನ್ನ ಮನೆ ಇದ್ದ 100ನೇ ಫ್ಲೋರಿಂದ ಆಚೆಗೆ ನೋಡಿದರೆ ಬರೀ ಡ್ರೋನುಗಳು, ಏರ್ ಟ್ಯಾಕ್ಸಿಗಳು ಓಡಾಡ್ತಿದ್ದೋ.

‘ಪ್ರಜಾವಾಣಿ’ ವರ್ಚುವಲ್ ಪೇಪರ್ ನೋಡಿದೆ. ಈವತ್ತು ಸರ್ಕಾರ ರಚನೆಗೆ ಪೀಪಲ್ ಪೋಲ್ ಕೌಂಟಾಯ್ತಾ ಇತ್ತು. ಸಾರ್ವಜನಿಕ ಹಣ ದುರುಪಯೋಗ ಮಾಡಿದೋನಿಗೆ, ಅಕ್ರಮವಾಗಿ ದುಡ್ಡು ಮಾಡಿದ್ದೋನಿಗೆ ಪೀಪಲ್ ಕೋರ್ಟ್ ಗುಂಡಿಟ್ಟು ಕೊಲ್ಲಕೆ ಆರ್ಡ್ರು ಮಾಡಿತ್ತು.

ಪೇಪರಲ್ಲಿ ‘ಐವತ್ತೊರ್ಸದ ಹಿಂದೆ’ ಕಾಲಂ ಕಾಣಿಸ್ತು! ಕೊರೊನಾ ವ್ಯಾಕ್ಸಿನ್, ಆಕ್ಸಿಜನ್ ಇಲ್ಲದೇ ಜನ ಸಾಯ್ತಿದ್ರೂ ರಾಜಕಾರಣಿಗಳು ಕ್ಯಾಮೆ ಬುಟ್ಟು ಲಡ್ಡು-ಲಸೆ ಅಂತ ಕಚ್ಚಾಡಿಕ್ಯಂಡು ಕಾಲ ಕಳೀದ್ರಂತೆ. ಈಗ ಪಾರ್ಟಿಗಳೇ ಇಲ್ದಿದ್ರಿಂದ ಒಳಜಗಳ, ಕಾಲೆಳೆತ, ಜಾತಿ ರಾಜಕೀಯವೇ ಇಲ್ಲ. ಸರ್ಕಾರದ ಮಾರೀಪತ್ತಲ್ಲಿ ನಿಸೂರಾಗಿ ಕೆಲಸ ಆಯ್ತವೆ. 2021ರಲ್ಲಿ 8 ಜನ ಬ್ಯಾಂಕುಗಳಿಗೆ ಬಗನಿ ಗೂಟ ಮಡಗಿ ಓಡೋಗಿದ್ರಂತೆ. ಈಗ ದುಡ್ಡು ಎಪ್ಪೆಸ್ ಅಂತ ಕಂಪ್ಲೆಂಟ್ ಬಂದ್ರೆ ಅಲ್ಲೇ ಶೂಟ್!

ADVERTISEMENT

‘ನೀನು ಚಂದ್ರಲೋಕಕ್ಕೆ ಹೋಗಬಕು. ಸಂದೇಗೆ ಸ್ಪೇಸ್ ಎಲಿವೇಟರ್ ಬುಕ್ಕಾಗ್ಯದೆ, ರೆಡಿಯಾಗು’ ಅಂತ ಆಪೀಸಿಂದ ಹೋಲೋಗ್ರಾಫ್‌ನಲ್ಲಿ ಬಾಸ್ ಮಾತಾಡಿದ್ರು. ಅಲ್ಲಿ ಆಚೆ ಓಡಾಡಿಕ್ಯಂಡಿರಬೋದಲ್ಲಾ ಅಂತ ಖುಷಿಯಾಯ್ತು. ಮಧ್ಯಾಹ್ನದ ಊಟಕ್ಕೆ 3ಡಿ ಪ್ರಿಂಟಲ್ಲಿ ಚಿತ್ರಾನ್ನ ಮಾಡಿ, ಎರಡು ಕ್ಯಾಪ್ಸೂಲ್ ನೀರು ಕುಡದು ರೆಡಿಯಾದೆ.

ಸ್ಪೇಸ್ ಎಲೆವೇಟರ್ ಪೋರ್ಟಿಗೆ ಬಂದಾಗ ಯಂಟಪ್ಪಣ್ಣ ಕಾಯ್ತಿತ್ತು. ‘ನನ್ನ ಬುಟ್ಟು ನೀನೆಂಗೋದಿಲಾ! ಹೋಗಬ್ಯಾಡ ಇಲ್ಲೇ ಇರೋ’ ಅಂತ ಕೈ ಹಿಡಿದು ಎಳದೇಟಿಗೇ ನಾನು ಆಯತಪ್ಪಿ ಮುಗ್ಗರಿಸಿದೆ. ಎಚ್ಚರಾದಾಗ ಭವಿಷ್ಯದಿಂದ ವರ್ತಮಾನದ ಬಂಡಾಟಕ್ಕೆ ವಾಪಸ್ ಬಿದ್ದಿದ್ದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.