ADVERTISEMENT

ಚುರುಮುರಿ: ಕೊರೊನಾ ತುರಿಕೆ

ಲಿಂಗರಾಜು ಡಿ.ಎಸ್
Published 3 ಮೇ 2021, 20:00 IST
Last Updated 3 ಮೇ 2021, 20:00 IST
   

ಊರಿಗೋಯ್ತಿನಿ ಅಂದಿದ್ದ ತುರೇಮಣೆ ಮನೇಲೆ ಇದ್ರು. ‘ಇದ್ಯಾಕ್ಸಾ ಊರಿಗೋಗ್ನಿಲ್ವಾ?’ ಅಂತ ಕೇಳಿದೆ.

‘ಹೋಗಿದ್ದೆ ಕನೋ! ಊರ ಗೇಟು ಬಾಗಿಲ ತಾವು ಹೈಕ್ಳೆಲ್ಲಾ ಸುತ್ತರದು ‘ಬೆಂಗಳೂರಿಂದ ಕರೋನ ಹಂಚಕ್ಕೆ ನಮ್ಮೂರಿಗೆ ಬಂದಿದ್ದರಿಯಾ? ಅಮಿಕ್ಕಂಡು ವಾಪಾಸೋಗಿ’ ಅಂದ್ರು, ಅದುಕ್ಕೆ ವಾಪಾಸ್ ಬಂದೆ’ ಅಂದರು.

‘ಸರಿಯಾಗಿ ಮಾಡ್ಯವುರೆ! ಅಲ್ಲಾ ಸಾ, ನಿಮ್ಮಂತೋರು ತರಕಾರಿ, ಮಟನ್-ಮಾಂಸ, ಚಿಕನ್-ಕೋಳಿ ಅಂತ ಬೀದಿ ಬೀದೀಲಿ ಮದಗುಡುತಿದ್ರೆ ಇನ್ನೇನಾದದು?’ ಅಂದೆ.

ADVERTISEMENT

‘ರಾಜಕೀಯದೋರು ಕೊರೋನಾ ಕಂಟಕಕ್ಕೆ ಏನು ಪ್ಲಾನು ಹಾಕ್ಕ್ಯಂಡವ್ರೆ ನೋಡಮು ಫೋನು ಮಾಡ್ರೋ’ ಅಂತು ಯಂಟಪ್ಪಣ್ಣ.

‘ಪಿಣರಾಯಿ ಪುಟ್ಟು, ಡಿಎಂಕೆ ಇಡ್ಲಿ-ಸಾಂಬಾರ್, ದೀದಿ ರಸಗುಲ್ಲಾ ತಿಂದು ಸುಸ್ತಾಗಿರ ಚಕ್ರವರ್ತಿಗಳು ಮನದ ಮಾತಿಗೆ ನೋಟ್ಸ್ ಮಾಡಿಕ್ಯತಾವ್ರೆ ತಡೀರಿ!’ ಅಂದ್ರು ಕಮಲದೋರು. ರಾಜ್ಯ ನಾಯಕರು ‘ತಡ್ರಿ ಮಸ್ಕಿ ಮಿಸ್ಸಾಗ್ಯದೆ, ಕೊರೊನಾ ತಲೆದಸಿ ಕೂತದೆ. ಬಾಲಗ್ರಹವಂತೆ! ದೃಷ್ಟಿ ನಿವಾರಣೆಗೆ ಅನ್ನ, ಮೆಣಸಿನಕಾಯಿ, ಉಪ್ಪು ನಿವಾಳಿಸಿ ಮೂರುದಾರೀಲಿ ಚೆಲ್ಲಿ ಅಂತ ಮಾರ್ಗಸೂಚಿ ಬಂದದೆ’ ಅಂದ್ಕಂಡು ಬಿಜಿಯಾಗಿದ್ದರು.

‘ಬೀದಿಗೊಂದು ನಿಂಬೆ ಹಣ್ಣು ಮಂತ್ರಿಸಿ ಮಡಗಿ ಎಲ್ಲಾರಿಗೂ ಸಾಂದರ್ಭಿಕವಾಗಿ ತಾಯಿತ ಕಟ್ಟಬೇಕು. ಇದು ಬೂತುಚೇಷ್ಟೆ ಬ್ರದರ್’ ಅಂದ್ರು ಪಿತೃಪಕ್ಸದೋರು.

‘ವಡೀರಿ ಕಪಾಳಕ, ನಿಂಬೆ ಹಣ್ಣು ಏನು ಸರಬತ್ ಮಾಡಕಾ? ಸರ್ಕಾರ ಎಲ್ಲಾರಿಗೂ ಅತ್ತು ಸಾವಿರ ರುಪಾಯಿ ಪುಗಸಟ್ಟೆ ಕೊಡಬೇಕು. ನನ್ನ ಸಿಎಂ ಮಾಡಿದ್ರೆ ಕೊರೊನಾದ ತೆಂಡೆ ಕಿತ್ತಾಕ್ಬುಡ್ತೀನಿ’ ಅಂತು ಹುಲಿಯಾ ಗಡ್ಡ ಕೆರಕಂಡು. ಪಕ್ಕದಗಿದ್ದೋರು ‘ಸರ್ಕಾರ ಯಾತ್ಕೂ ಸಲುವಲ್ಲದಾಗ್ಯದೆ. ಮುಂದಿನ ಸಿಎಂ ಯಾರು ಅಂತ ಹೈಕಮಾಂಡ್ ತೀರ್ಮಾನ ಮಾಡ್ತದೆ’ ಅಂದ್ರು.

‘ರಾಜಕಾರಣಿಗಳು ದಬ್ಬಾಕದು ಅಷ್ಟ್ರಗೇ ಅದೆ. ಮಹೋಷಧಕುಮಾರನ ಅಡ್ರಸ್ ತಿಳಕಂಡು ಅವುನ್ನೆ ಕರಕಬಂದ್ರೆ ಏನಾದ್ರೂ ಮಾಡಾನೇನೋ!’ ಅಂದ ಚಂದ್ರು. ನನಗೂಹಂಗೇ ಅನ್ನಿಸ್ತು! ನಿಮಗೆ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.