ADVERTISEMENT

ಚುರುಮುರಿ: ಮೈಸೂರ್ ಚಲೊ

ಸುಧೀಂದ್ರ
Published 8 ಜೂನ್ 2021, 19:30 IST
Last Updated 8 ಜೂನ್ 2021, 19:30 IST
ಚುರುಮುರಿ
ಚುರುಮುರಿ   

‘ನಿಮಗೆ ಹರಿಣಿ ಆ್ಯಕ್ಟಿಂಗ್ ನ್ಯಾಚುರಲ್ ಅನ್ಸತ್ತೋ ಅಥವಾ ಕಲ್ಪನಾ ಆ್ಯಕ್ಟಿಂಗ್ ನ್ಯಾಚುರಲ್ ಅನ್ಸತ್ತೋ?’ ಎಂದು ಮಡದಿ ಪ್ರಶ್ನಿಸಿದಳು. ‘ಅವರೆಲ್ಲಾ ನನ್ನ ತಾತನ ಕಾಲದ ಹೀರೊಯಿನ್‍ಗಳು. ಬೇಕಿದ್ರೆ ರಚಿತಾರಾಮ್ ಬಗ್ಗೆನೋ ರಶ್ಮಿಕಾ ಮಂದಣ್ಣ ಬಗ್ಗೆನೋ ಇಲ್ಲಾ ರಾಧಿಕಾ ಪಂಡಿತ್‍ ಬಗ್ಗೆನೋ ಕೇಳು’ ಎಂದೆ.

‘ರಾತ್ರಿಯೆಲ್ಲಾ ಯುಟ್ಯೂಬಲ್ಲಿರೋ ಬರೋ ಸಿನಿಮಾ ನೋಡ್ತಿದ್ರೆ ಹೀಗೇ ಆಗೋದು. ಟೀವಿ ನೋಡಿ ಗೊತ್ತಾಗತ್ತೆ’ ಎಂದು ಮೂದಲಿಸಿದಳು. ‘ಓಹ್, ನೀನು ಕನ್ನಡ ಟೀವಿ ಸೀರಿಯಲ್‍ಗಳ ಬಗ್ಗೇನಾ ಹೇಳಿದ್ದು. ‘ಶ್ರೀಗೌರಿ’ ಸೀಮಂತದ ವಾರಗಿತ್ತಿ ಜಗಳದಲ್ಲಿ ಇವರಿಬ್ಬರೂ ಇರ‍್ಲಿಲ್ಲ. ಇನ್ನು ‘ಸೀತಾ’ದಲ್ಲಿ ಸೊಸೆಗೆ ಕಾಟ ಕೊಡೋ ಮಲತಾಯಿ ಪಾತ್ರಗಳಲ್ಲಿರೋದು ಬೇರೆಯವರು. ಹಾಗಿದ್ರೆ ‘ಅರಮನೆ’ ಮಹಾರಾಣಿನಲ್ಲಿರೋ ಹೆಣ್ಮಕ್ಕಳ ಬಗ್ಗೆ ಹೇಳ್ತಿದ್ದೀಯೇನೋ, ನಾನೀಗ ಅದನ್ನು ನೋಡ್ತಿಲ್ಲ’ ಎಂದೆ.

‘ನನ್ನ ಕಣ್ತಪ್ಪಿಸಿ ನೀವು ಇಷ್ಟೆಲ್ಲಾ ಧಾರಾವಾಹಿಗಳನ್ನು ನೋಡ್ತಿದೀರೀಂತ ಈಗ ಗೊತ್ತಾಯ್ತು. ನ್ಯೂಸ್‍ ಚಾನೆಲ್ ಹಾಕಿ, ಮ್ಯಾನ್‍ಮಾರಲ್ಲಿ ಏನಾಗ್ತಿದೆ ಅನ್ನೋದು ಬೇಡ, ಮೈಸೂರಲ್ಲಿ ನಡೀತಿರೋ ಜಟಾಪಟಿನಾದ್ರೂ ತಿಳ್ಕೊಳ್ಳಿ’ ಅಂದಳು. ‘ನೀನು ಸೀರಿಯಲ್‍ಗಳನ್ನೆಲ್ಲಾ ಬಿಟ್ಟು, ನ್ಯೂಸ್‍ ನೋಡೋಕೆ ಶುರು ಹಚ್ಕೊಂಡಿದೀಯಾ ಅನ್ಸತ್ತೆ’ ಎಂದು ರೇಗಿಸಿದೆ.

ADVERTISEMENT

ರಿಮೋಟ್‍ ಒತ್ತಿದೆ. ‘ಲೆಕ್ಕ ಮುಚ್ಚಿಡೋದ್ರಲ್ಲಿ ಕಲ್ಪನಾ ಆದ್ರಾ ವೈಸರ್?’; ‘ಸೀಕ್ರೆಟ್ ಸ್ವಿಮ್ಮಿಂಗ್ ಪೂಲ್– ಆರ್ ವೀ ಫೂಲ್ಸ್?’ ಎಂಬ ಅಬ್ಬರದ ಡಿಸ್ಕಶನ್‍ಗಳು ನಡೀತಿದ್ವು. ಪಂಚಾಯಿತಿ ಸದಸ್ಯರಿಂದ ಪಾರ್ಲಿಮೆಂಟ್ ಮೆಂಬರ್‌ಗಳ ತನಕ ಎಲ್ರೂ ನ್ಯೂಸ್‍ ಚಾನೆಲ್‍ಗಳಲ್ಲಿ ಭರ್ಜರಿ ಬ್ಯಾಟಿಂಗ್ ನಡೆಸ್ತಿದ್ರು.

ಇವೇ ಮಸಾಲೆಗಳನ್ನಿಟ್ಕೊಂಡು ‘ಗಾಂಧಾರಿ ವರ್ಸಸ್ ನಾಗಿಣಿ’ ಅನ್ನೋ ಧಾರಾವಾಹಿ ತೆಗೆದರೆ ಕನಿಷ್ಠ ಒಂದು ವರ್ಷನಾದ್ರೂ ಓಡಿಸಬಹುದಲ್ವಾ ಅನ್ನಿಸ್ತು. ಸೀರಿಯಲ್‍ಗಳಿಗೆ ಕಥೆ ಬರೆಯೋ ಸೀನಣ್ಣನಿಗೆ ಫೋನ್ ಹಚ್ಚಿದೆ. ಅವನ ಫೋನಿನಿಂದ ‘ಇದು ಯಾರು ಬರೆದ ಕಥೆಯೋ... ಕೊನೆ ಹೇಗೊ ಅರಿಯಲಾರೆ’ ರಿಂಗ್‍ಬ್ಯಾಕ್‍ ಟೋನ್‍ ಬರ್ತಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.