ADVERTISEMENT

ಚುರುಮುರಿ| ಆಡಿಯೊ ತನಿಖೆ

ಮಣ್ಣೆ ರಾಜು
Published 20 ಜುಲೈ 2021, 19:31 IST
Last Updated 20 ಜುಲೈ 2021, 19:31 IST
ಚುರುಮುರಿ
ಚುರುಮುರಿ   

‘ಪಕ್ಷದ ಅಧ್ಯಕ್ಷರ ಆಡಿಯೊದ ಮೂಲ ಗಾಯಕರು ಯಾರು ಸಾರ್?...’ ಮಾಧ್ಯಮದವರು ಜನನಾಯಕರಿಗೆ ಮುಗಿಬಿದ್ದರು.

‘ತನಿಖೆ ಮಾಡ್ತೀವಿ, ಸತ್ಯಾಂಶ ಹೊರಬೀಳು ತ್ತದೆ, ತಪ್ಪಿತಸ್ಥರು ಸಿಕ್ಕಿಬೀಳ್ತಾರೆ’ ಅಂದ್ರು.

‘ಆಡಿಯೊ ಹಿಂದೆ ಮೀರ್ ಸಾದಿಕ್ ಇದ್ದಾರೋ, ವೀರ ಸಾಧಕರು ಇದ್ದಾರೋ ಸಾರ್?’

ADVERTISEMENT

‘ಗೊತ್ತಿಲ್ಲ, ಯಾರೇ ಮಹಾನ್ ಸಾಧಕರು ಇದ್ದರೂ ಸುಮ್ಮನೇ ಬಿಡಲ್ಲ...’ ನಾಯಕರು ಕೆರಳಿದರು.

‘ಮಹಾ ನಾಯಕರನ್ನು ಮಣಿಸಲು, ಮಹಾ ನಾಯಕಿಯನ್ನು ತಣಿಸಲು ಈ ಆಡಿಯೊ ಮಾಡಲಾಗಿದೆಯಂತೆ, ಹೌದಾ ಸಾರ್?’ ಸುದ್ದಿಗಾರ ಕೆಣಕಿದ. ‘ಗೊತ್ತಿಲ್ಲಾರೀ...’

‘ಆಡಿಯೊ ತನಿಖೆಯನ್ನು ಯಾವ ಧ್ವನಿತಜ್ಞರಿಗೆ ವಹಿಸ್ತೀರಿ ಸಾರ್?’

‘ನಮ್ಮ ಪಾರ್ಟಿಯವರಿಗೂ ಅಲ್ಲ, ಆ ಪಾರ್ಟಿಯವರಿಗೂ ಅಲ್ಲ, ಥರ್ಡ್ ಪಾರ್ಟಿ ಇನ್ಸ್‌ಪೆಕ್ಷನ್‍ಗೆ ವಹಿಸ್ತೀವಿ’.

‘ಥರ್ಡ್ ಪಾರ್ಟಿ ಅಂದ್ರೆ... ಜೆಡಿಎಸ್ಸಾ?’

‘ಏನು ಪ್ರಶ್ನೆ ಅಂತ ಕೇಳ್ತೀರ‍್ರೀ?... ಅವರಿಗೆ ಯಾಕ್ರೀ ಒಪ್ಪಿಸಬೇಕು? ಅವರು ನಮ್ಮ ಪಾರ್ಟಿಯಿಂದ ಸಾಮಾಜಿಕ, ವೈಚಾರಿಕ ಅಂತರ ಕಾಪಾಡಿಕೊಂಡಿದ್ದಾರೆ’ ನಾಯಕರು ರೇಗಿದರು.

‘ಆಡಿಯೊ ಸಂಬಂಧದ ವಿಡಿಯೊ ಸಿಕ್ಕಿದೆಯಾ ಸಾರ್? ವಿಡಿಯೊದಲ್ಲಿ ವ್ಯಕ್ತಿಯನ್ನು ಗುರುತಿಸಬಹುದು, ರೇಡಿಯೊದಲ್ಲಿ ಧ್ವನಿ ಗುರುತಿಸೋದು ಕಷ್ಟ ಅಲ್ವಾ ಸಾರ್?’

‘ರೇಡಿಯೋನೂ ಅಲ್ಲ, ಆಕಾಶವಾಣಿನೂ ಅಲ್ಲ, ಅದು ಅಶರೀರವಾಣಿ ಕಣ್ರೀ... ಸದ್ಯಕ್ಕೆ ವಾಣಿ ಸಿಕ್ಕಿದೆ, ತನಿಖೆ ನಂತರ ಶರೀರ ಪತ್ತೆಯಾಗುತ್ತದೆ. ತನಿಖೆ ಮುಗಿಸಿ ಆಡಿಯೊದ ಸತ್ಯಾಂಶಕ್ಕೆ ಕನ್ನಡಿಗರ ಎದುರು ಕನ್ನಡಿ ಹಿಡಿಯುತ್ತೇವೆ’ ಎಂದರು ನಾಯಕರು.

‘ಅದಕ್ಕೆ ಇನ್ನೆಷ್ಟು ದಿನ ಕಾಯಬೇಕು ಸಾರ್?’

‘ನೀವು ಕಾಯಲೂಬೇಡಿ, ನನ್ನ ಹತ್ರ ಬರಲೂಬೇಡಿ, ತನಿಖೆಯ ಸಂಪೂರ್ಣ ಮಾಹಿತಿಯನ್ನು ನಾನೇ ಆಡಿಯೊ ಮಾಡಿ ನಿಮಗೆ ಕಳಿಸ್ತೀನಿ, ನೀವಿನ್ನು ಹೊರಡಿ...’ ಎಂದು ನಾಯಕರು ಸುದ್ದಿಗಾರರನ್ನು ಸಾಗಹಾಕಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.