ADVERTISEMENT

ಚುರುಮುರಿ: ‘ಹೈ’ಕ್ಲಾಸ್ ತರಾಟೆ!

ನಾರಾಯಣ ರಾಯಚೂರ್
Published 7 ಫೆಬ್ರುವರಿ 2023, 19:35 IST
Last Updated 7 ಫೆಬ್ರುವರಿ 2023, 19:35 IST
ಚುರುಮುರಿ
ಚುರುಮುರಿ   

‘ಚೆನ್ನಾಗಿ ಛಡಿ ಏಟು ಕೊಟ್ಟಿದಾರೆ’ ವಾಕಿಂಗ್ ಸ್ಟಿಕ್ ಎತ್ತಿ ಎತ್ತಿ ಸಾರಿದರು ವಾಕಿಂಗ್ ವಾಮರಾವ್. ‘ಯಾರು, ಯಾರಿಗೆ, ಯಾವಾಗ, ಎಲ್ಲಿ?’ ಸಂದರ್ಭದೊಡನೆ ಸ್ಪಷ್ಟೀಕರಿಸಿ ಅನ್ನೋ ಹಾಗೆ ಕೇಳಿದೆ ನಾನು.

‘ಈ ಮೇಷ್ಟ್ರಿಗೆ ವ್ಯಾಕರಣದ ಪಾಠದ ಥರಾನೇ ಎಲ್ಲಾ ಬಿಡಿಸಿ ಹೇಳಬೇಕು’.

‘ಎಷ್ಟೇ ಅಂದ್ರೂ ಮಕ್ಕಳ ಜೊತೆ ಏಗಿ ಏಗಿ ಸುಸ್ತಾಗಿಲ್ಲವೇ?! ಸ್ವಲ್ಪ ವಿವರಿಸಿ ಪರ್ವಾಗಿಲ್ಲ’ ಮೇಷ್ಟ್ರ ವಾದ.

ADVERTISEMENT

‘ಇನ್ನೂರು ಪದಗಳಿಗೆ ಮೀರದಂತೆ ವಿವರಿಸಿ ಅನ್ಬೇಡಿ ಮತ್ತೆ! ಮೊನ್ನೆ ಪೇಪರ್ ನೋಡಲಿಲ್ಲವೇ? ಮಕ್ಕಳಿಗೆ ಸಮವಸ್ತ್ರ ವಿತರಣೆಗೆ ದುಡ್ಡು ಬಿಡುಗಡೆ ವಿಳಂಬ ಆಗಿದ್ದಕ್ಕೆ ಶಿಕ್ಷಣ ಇಲಾಖೆ ಅಧಿಕಾರಿಗಳನ್ನ ಹೈಕೋರ್ಟ್ ತರಾಟೆಗೆ ತಗೊಂಡು ಚಾಟಿ ಬೀಸಿದೆ’.

‘ಸರಿಯಾಗಿ ಮಾಡಿದೆ. ನಮ್ಮ ಕಾರ್ಯಾಂಗ ನಿದ್ದೆ ಮಾಡೋದ್ರಲ್ಲಿ ನಿಸ್ಸೀಮ. ಕಾಲಕಾಲಕ್ಕೆ ಬಿಸಿ ತಗಲಸ್ತಾಯಿದ್ದರೇನೇ ಒಂದಷ್ಟು ಕೆಲಸ ಆಗೋದು’ ನಿವೃತ್ತ ಅಧಿಕಾರಿ ನೀಲಕಂಠೇಶ ಅನುಭವದ ದನಿಗೂಡಿಸಿದರು.

‘ಶಾಸಕಾಂಗವನ್ನೂ ಬಿಟ್ಟಿಲ್ಲ, ಉತ್ಸವಗಳಿಗೆ ಹಣ ಇದೆ, ಸಮವಸ್ತ್ರಕ್ಕೆ ಹಣವಿಲ್ಲವೋ ಅಂತ ಕೇಳಿದಾರೆ ನ್ಯಾಯಮೂರ್ತಿಗಳು’.

‘ಐನೂರು ಮಕ್ಕಳಿರೋ ಶಾಲೆಗೆ ಒಂದು ಸರಿಯಾದ ಶೌಚಾಲಯಾನೂ ಇಲ್ಲ, ಮರದ ಪೊದೆ ತರಹ ಇರೋ ತಡಿಕೆಯನ್ನು ಹಾವು- ಹುಳುಗಳ ಭಯದಿಂದ ಮಕ್ಕಳು ಬಳಕೆಮಾಡದಿದ್ದುದನ್ನು ಕಣ್ಣಾರೆ ಕಂಡು ಖುದ್ದು ಸರಿಪಡಿಸಿದ್ದನ್ನ ನ್ಯಾಯಮೂರ್ತಿಗಳು ವ್ಯಥೆಪಟ್ಕೊಂಡು, ಬೇಸರದಿಂದ ಹೇಳಿದಾರೆ!’

‘ರಸ್ತೆಗುಂಡಿ, ಪಾದಚಾರಿ ಮಾರ್ಗದಲ್ಲಿ ತಲೆಎತ್ತಿರೊ ಟ್ರಾನ್ಸ್‌ಫಾರ್ಮರ್‌ಗಳಸ್ಥಳಾಂತರದಂತಹ ವಿಷಯಗಳ ಬಗ್ಗೆನೂ ಕೋರ್ಟ್‌ ಮೇಲಿಂದ ಮೇಲೆ ಎಚ್ಚರಿಕೆ ಕೊಡ್ತಾನೇ ಇದೆ, ಎಫೆಕ್ಟ್ ಮಾತ್ರ ನಿಧಾನಾನೇ!’ ಹಿರಿಯ ಹಿರಿಯಣ್ಣ ಸೇರಿಸಿದರು. ಅಷ್ಟರಲ್ಲಿ ನಾಯಿಯೊಂದು ಬಂದು ನುಸುಳಿಕೊಂಡು ಓಡಿತು.

‘ನಾಯಿಬಾಲ ಡೊಂಕೇ! 75 ವರ್ಷದಿಂದ ಪ್ರಯತ್ನ ಸಾಗಿದೆ... ಹ್ಞೂಂ... ಸರಿಹೋದೀತು ಇಂದಲ್ಲ ನಾಳೆ...’ ಮೇಷ್ಟ್ರ ಆಶಾವಾದ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.