ADVERTISEMENT

ಚುರುಮುರಿ: ವ್ಯಾಕ್ಸೀನ್ ಆಗ್ಯದ?

ಲಿಂಗರಾಜು ಡಿ.ಎಸ್
Published 18 ಮೇ 2021, 19:31 IST
Last Updated 18 ಮೇ 2021, 19:31 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ತರಕಾರಿ ತರುಮಾ ಅಂತ ತುರೇಮಣೆ ಮನೆ ತಾವು ಬತ್ತಿದ್ದಂಗೇ ಪಕ್ಕದ ಮನೇರ ದೊಡ್ಡ ನಾಯಿ ಬೌ ಅಂತ ನುಗ್ಗಿಬಂತು. ನಾವು ಗಾಬರಾಗಿಬುಟ್ಟೋ.

‘ಶಾಕಾದ್ರಾ ಸಾ! ಹೆದುರ್ಕಬ್ಯಾಡಿ. ಇದು ನಮ್ಮ ಶಾಕುನಾಯಿ. ಬಲ್ರಿ ಕಾಪಿ ಕುಡದೋಗೂರಿ’ ಅಂತ ಕರುದ್ರು ಅವರು. ‘ಇಲ್ಲ ಇನ್ನೊಂದ್ಸಾರಿ ಬತ್ತೀವಿ’ ಅಂದೋ ನಾವು ಭಯ ಬಿದ್ದು.

‘ನೋಡ್ಲಾ, ಮೊದಲು ನಾಯಿ ಬೊಗುಳಿಕ್ಯಂಡು ಬಂದಾಗ ‘ಅದುಕ್ಕೆ ವ್ಯಾಕ್ಸೀನ್ ಆಗ್ಯದ?’ ಅಂತ ಕೇಳಿಕ್ಯಂಡು ಹೋಯ್ತಿದ್ದೋ. ಈಗ ಹಂಗಲ್ಲ ‘ನಿಮಗೆ ವ್ಯಾಕ್ಸೀನ್ ಆಗ್ಯದ’ ಅಂತ ಇಚಾರಿಸ್ಕಂಡು ಹೋಗೋ ಪರಿಸ್ಥಿತಿ ಬಂದದೆ’ ಅಂತು ಯಂಟಪ್ಪಣ್ಣ ಬೇಜಾರಲ್ಲಿ.

ADVERTISEMENT

ತುರೇಮಣೆಯೋರ ಅವ್ವ ಊರಿಂದ ಬಂದುತ್ತು. ‘ಏನವ್ವೋ ಊರಗೆ ಎಲ್ಲಾ ಚನ್ನಗವ್ರೋ?’ ಅಂತ ಮಾತಾಡಿಸಿದೆ. ‘ಏನು ಚಂದವೋ ಏನೋ ಬುಡಪ್ಪಾ. ಎಣ್ಣೆ-ಹಾಲು ಒಟ್ಟಿಗೆ ತರೂ ಟೈಂ ಬಂದದೆ!’ ಅಂತು ಅಜ್ಜಿ.

‘ವೋಗ್ಲಿ ಬುಡವ್ವಾ, ಕಸಾಯ-ಗಿಸಾಯ ಏನಾದ್ರೂ ಕುಡೀತಿದ್ದಯಾ?’ ಅಂತು ಯಂಟಪ್ಪಣ್ಣ. ‘ಅಯ್ಯೋ ಬುಡಪ್ಪ, ಕಸಾಯ ಕುಡುದ್ರೆ ಕೊರೋನಾ ಬರೂದಿಲ್ಲ ಅಂದೋರೇನು ಸರ್ವಜ್ಞರೇ!’ ಅಜ್ಜಿ ತಲೆ ಒಗೀತು.

‘ವ್ಯಾಕ್ಸೀನ್ ತಗಂಡೇನವ್ವಾ?’ ಕೇಳಿದೆ. ‘ವ್ಯಾಕ್ಸೀನು ಎಲ್ಲ್ಯದೆ ಮಗಾ. ವ್ಯಾಕ್ಸೀನು, ಆಮ್ಲಜನಕ ಸಿಗನಿಲ್ಲ ಅಂದ್ರೆ ಸರ್ಕಾರ ನೇಣಾಕ್ಕ್ಯತದಾ?’ ಅಂತ ಟೀಕಾ ಪ್ರಹಾರ ಮಾಡಿತು.

‘ಅಲ್ಲಾ ಕವ್ವಾ, ಸರ್ಕಾರಕ್ಕಿನ್ನೇನು ಕೆಲಸ? ಸತ್ತರೆ ಸಾಯಲಿ ಅಂತ ಗಳಿಗ್ಗೊಂದು ಮಾತಾಡ್ತಿದ್ರೆ ಹ್ಯಂಗೆ?’ ಅಂದೆ.

‘ಎರಡಕ್ಕೋದೋನೆ ತೊಳಕಬೇಕಲ್ಲವ್ಲಾ? ನಮ್ಮ ರೋಗಕ್ಷೇಮ ನಾವೇ ನೋಡ್ಕಬೇಕು ಕಪ್ಪಾ. ನಿಮ್ಮಂಗೇ ಚಂಗಲು ಬಿದ್ದೋರು ಭಾಳಾ ಜನಾಗ್ಯವರೆ’ ಅಂತು ಅಜ್ಜಿ.

‘ಹಂಗಂದ್ರೇನವ್ವಾ?’ ಅಂತ ಕೇಳಿದೆ.

‘ಮಾನಗೆಟ್ಟ ನನ ಮಕ್ಕಳಾ, ಬಿದಿರು ಮೋಟ್ರು ಬೇಕಾದರೆ ಬೀದಿ ಸುತ್ತಿ. ಬದುಕು ಬೇಕಾದರೆ ಅಮಿಕ್ಕಂಡು ಮನೇಲಿರಿ’ ಅಜ್ಜಿ ಕಣ್ಣು
ಮೆಡರಿಸ್ತಿದ್ದಂಗೇ ನಾವು ಪರಾರಿಯಾದೋ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.