ADVERTISEMENT

ಚುರುಮುರಿ| ಪುಡುಂಗು ಪುರಾಣ!

​ಪ್ರಜಾವಾಣಿ ವಾರ್ತೆ
Published 22 ಜುಲೈ 2021, 19:31 IST
Last Updated 22 ಜುಲೈ 2021, 19:31 IST
.
.   

‘ಗುರೂ, ಈ ಪುಡುಂಗು ಅಂದ್ರೆ ಏನು? ಮೊನ್ನೆ ಸಿನಿಮಾ ಸ್ಟಾರ್ ದರ್ಶನ್ನು ಅದ್ಯಾರಿಗೋ ‘ಅವ್ನೇನು ದೊಡ್ಡ ಪುಡುಂಗಾ?’ ಅಂತ ಕ್ಲಾಸ್ ತಗಂಡಿದ್ರಪ್ಪ... ಏನು ಹಂಗಂದ್ರೆ?’ ತೆಪರೇಸಿಯನ್ನು ದುಬ್ಬೀರ ಕೇಳಿದ.

ದುಬ್ಬೀರನ ಪ್ರಶ್ನೆಗೆ ನಕ್ಕ ಗುಡ್ಡೆ ‘ನಂಗೆ ಗುಂಡು ಗೊತ್ತಪ, ಇದ್ಯಾವುದಿದು ಡುಂಗು, ಪುಡುಂಗು?’ ಎಂದ.

‘ಲೇಯ್ ಅದು ಪುಡಾಂಗ್ ಅಂತ ಕಣಲೆ... ಡುಂಗು, ಗುಂಡು ಅಲ್ಲ’ ತೆಪರೇಸಿ ತಿದ್ದಿದ.

ADVERTISEMENT

‘ಸರಿ ಹಂಗಂದ್ರೆ ಏನು?’ ಗುಡ್ಡೆ ಕೊಕ್ಕೆ.

‘ಅಂದ್ರೆ ನೀನ್ಯಾವ ದೊಡ್ಡ ಪೋತಪ್ಪನಾಯಕ ಅಂತ ಅರ್ಥ...’

‘ಸರಿ ಪೋತಪ್ಪನಾಯಕ ಅಂದ್ರೆ ಏನು?’

‘ಒಳ್ಳೆ ತೆಲಿನೋವಲೆ ನೀನು, ಅಂದ್ರೆ ನೀನ್ಯಾವ ದೊಡ್ಡ ಪೋತ್ಲಾಂಡಿ ಅಂತ...’

‘ಅದೇ ಕಣಲೆ, ಪೋತ್ಲಾಂಡಿ ಅಂದ್ರೆ ಏನು?’

‘ಥು... ಏನ್ ಕಾಡ್ತಿಯಲೆ, ಕೆಲವಕ್ಕೆ ಇಂಥದೇ ಅರ್ಥ ಅಂತ ಇರಲ್ಲ, ಅದರ ಧ್ವನಿ ತಿಳ್ಕಾಬೇಕು. ಅಂದ್ರೇ ನೀನೇನ್ ದೊಡ್ಡ ಇವನಾ? ಮಹಾನಾ? ಎಲ್ರುನ್ನು ಮೀರಿಸಿದೋನಾ ಅಂತ...’ ತೆಪರೇಸಿಗೂ ಹೇಳಲು ಬರದೆ ತಡವರಿಸಿದ.

‘ಹೋಗ್ಲಿ ಬಿಡ್ರಲೆ, ನಿಮಗೆ ಹೇಳಾಕೆ ಬರಲ್ಲ, ನಮಗೆ ಅರ್ಥ ಆಗಲ್ಲ. ಈಗ ದೇಶದ್ದು, ರಾಜ್ಯದ್ದು ಸುದ್ದಿ ಏನು ಅದ್ನಾರ ಹೇಳ್ರಿ...’ ಪರಮೇಶಿ ಮಾತು ಬದಲಿಸಿದ.

‘ಸುದ್ದಿ ಏನಪ ಅಂದ್ರೆ, ಸೆಂಟ್ರಲ್ಲಲ್ಲಿ ಪೆಗಾಸಿಸ್ಸು, ರಾಜ್ಯದಲ್ಲಿ ಯಗಾಸಿಸ್ಸು...’ ಗುಡ್ಡೆ ವಿಚಿತ್ರವಾಗಿ ಹೇಳಿ ನಗಾಡಿದ.

‘ಲೇಯ್, ಏನಲೆ ಹಂಗಂದ್ರೆ? ಅರ್ಥ ಆಗಂಗೆ ಬೊಗಳು’ ದುಬ್ಬೀರ ರೇಗಿದ.

‘ನೋಡ್ರಪ, ಪೆಗಾಸಿಸ್ ಅಂದ್ರೆ ಫೋನ್ ಕದ್ದಾಲಿಕೆ ಗದ್ದಲ, ಗೂಢಚಾರಿಕೆ...’

‘ಸರಿ, ಯಗಾಸಿಸ್ ಅಂದ್ರೆ?’

‘ಯಡ್ಯೂರಪ್ಪನೋರ ಕುರ್ಚಿ ಗದ್ದಲ!’

ಗುಡ್ಡೆ ಮಾತಿಗೆ ಎಲ್ಲರೂ ಗೊಳ್ಳಂತ ನಕ್ಕರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.