ADVERTISEMENT

ಶಾಸಕರ ವೈಫೊಲೇಷನ್

ಮಣ್ಣೆ ರಾಜು
Published 19 ಮೇ 2021, 19:30 IST
Last Updated 19 ಮೇ 2021, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಲಾಕ್‍ಡೌನ್ ಜಾರಿಯಾದಾಗಿನಿಂದ ಶಾಸಕರು ಕ್ಷೇತ್ರದ ಕಡೆ ಹೋಗಲಾಗಿರಲಿಲ್ಲ. ಹಾಗಂತ ಶಾಸಕರಿಗೆ ಹೊರಗೆ ಪೊಲೀಸರ ಕಾಟ ಇರಲಿಲ್ಲ, ಹೊರ ಹೋಗಲು ಪತ್ನಿ ಬಿಡಲಿಲ್ಲ.

ಕೊರೊನಾ ಕಷ್ಟದಲ್ಲಿ ಕ್ಷೇತ್ರದ ಜನರಿಗೆ ಸ್ಪಂದಿಸಬೇಕು ಅಂದರೂ ಪತ್ನಿ ಕೇಳಲಿಲ್ಲ. ಶಾಸಕರು ಹೊರ ಹೋಗಿ ಸೋಂಕು ಅಂಟಿಸಿಕೊಂಡು ಬಂದರೆ ಮನೆ, ಮಾಂಗಲ್ಯದ ಗತಿ ಏನು ಅನ್ನುವುದು ಪತ್ನಿಯ ಆತಂಕ.

‘ವರ್ಕ್ ಫ್ರಂ ಹೋಂ ಮಾಡಿ, ಆನ್‍ಲೈನ್‍ನಲ್ಲೇ ಕ್ಷೇತ್ರದ ಜನರ ಸೇವೆ ಮಾಡಿ’ ಅಂದರು. ಹೀಗಾಗಿ, ಹೊರಗೆ ಲಾಕ್‍ಡೌನ್, ಒಳಗೆ ಲಾಕಪ್‍ನ ಅನುಭವ ಆಗಿತ್ತು ಶಾಸಕರಿಗೆ.

ADVERTISEMENT

‘ಸಾರ್, ಕೊರೊನಾ ಕಾಲದಲ್ಲಿ ಅಂತರ ಕಾಪಾಡಿಕೊಂಡರೆ, ಚುನಾವಣೆಯಲ್ಲಿ ಜನ ದೂರ ತಳ್ಳಿಬಿಡ್ತಾರೆ’ ಅಂತ ಶಾಸಕರಿಗೆ ಆಪ್ತ ಶಿಷ್ಯ ಎಚ್ಚರಿಸಿದ.

‘ಖರ್ಚುವೆಚ್ಚ ನಾವು ಕೊಡ್ತೀವಿ, ಶಾಸಕರ ಪರವಾಗಿ ನೀನೇ ಜನರ ಸೇವೆ ಮಾಡು’ ಎಂದು ಶಿಷ್ಯನಿಗೆ ಜವಾಬ್ದಾರಿ ವಹಿಸಿದರು ಶಾಸಕರ ಪತ್ನಿ.

ಮನೆಮನೆಗೂ ದಿನಸಿ ಪ್ಯಾಕೆಟ್, ಹಸಿದವರಿಗೆ ಊಟ, ಖರ್ಚಿಗೆ ಕಾಸು ಹಂಚಿದ ಶಿಷ್ಯ. ಸೋಂಕಿತರು, ಮೃತರಿಗೆ ಆಂಬುಲೆನ್ಸ್‌ ವ್ಯವಸ್ಥೆ ಮಾಡಿದ. ಇಷ್ಟಾಗಿದ್ದರೆ ಸಮಸ್ಯೆಯಾಗುತ್ತಿರಲಿಲ್ಲ, ‘ಶಾಸಕರು ಕೋವಿಡ್‍ಗೆ ಹೆದರಿ ಹೋಂ ಐಸೊಲೇಷನ್ ಆಗಿಲ್ಲ, ಹೆಂಡ್ತಿಗೆ ಹೆದರಿ ವೈಫೊಲೇಷನ್ ಆಗಿದ್ದಾರೆ...’ ಅಂತ ಅಪಪ್ರಚಾರ ಮಾಡಿದ.

ಕಿಲಾಡಿ ಶಿಷ್ಯನ ಎದುರು ತುಟಿ ಬಿಚ್ಚುವಂತಿರಲಿಲ್ಲ. ಶಾಸಕರ ಪ್ರಾಬಲ್ಯ, ದೌರ್ಬಲ್ಯ ಅವನಿಗೆ ಗೊತ್ತಿತ್ತು, ಹೆಂಡ್ತಿಗೂ ಗೊತ್ತಿಲ್ಲದ ಶಾಸಕರ ಸೀಕ್ರೆಟ್‍ಗಳು ಶಿಷ್ಯನ ಬಳಿ ಇದ್ದವು. ಹಂಗಾಗಿ ಸಹಿಸಿಕೊಂಡರು.

ಅಷ್ಟಲ್ಲದೆ, ‘ಶಾಸಕರು ರಾಜಕೀಯ ನಿವೃತ್ತಿಯಾಗುತ್ತಾರೆ. ಮುಂದಿನ ಚುನಾವಣೆಗೆ ನಾನೇ ಕ್ಯಾಂಡಿಡೇಟ್...’ ಅಂತ ಶಿಷ್ಯ ಪ್ರಚಾರ ಮಾಡತೊಡಗಿದ.

ವಿಚಾರ ಗೊತ್ತಾಗಿ ಶಾಸಕರು ತಡಮಾಡದೆ ಮಾಸ್ಕ್ ಧರಿಸಿ, ಕ್ಷೇತ್ರ ಪ್ರವಾಸಕ್ಕೆ ಕಾರು ಹತ್ತಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.