ADVERTISEMENT

ಚುರುಮುರಿ: ಏಟಿನ ಮಹಿಮೆ

ಮಣ್ಣೆ ರಾಜು
Published 13 ಜುಲೈ 2021, 19:30 IST
Last Updated 13 ಜುಲೈ 2021, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಜಿಲ್ಲಾ ಪಂಚಾಯಿತಿ ಎಲೆಕ್ಷನ್‍ಗೆ ಟಿಕೆಟ್ ಕೊಡಿ ಅಂತ ಶಂಕ್ರಿ ಪಕ್ಷದ ನಾಯಕರ ಬೆನ್ನಿಗೆ ಬಿದ್ದಿದ್ದ. ಇವನ ಕಾಟ ತಡೆಯಲಾರದೆ ತಾಳ್ಮೆಗೆಟ್ಟ ನಾಯಕರು ಕಪಾಳಮೋಕ್ಷ ಮಾಡಿದ್ದರು. ಈ ಹಲ್ಲೆ ದೊಡ್ಡ ಸುದ್ದಿಯಾಯಿತು. ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಯಾಯಿತು.

ಘಟನೆಯಿಂದ ಶಂಕ್ರಿ ಅಭಿಮಾನಿಗಳು ಕೆರಳಿದರು. ‘ಹಲ್ಲೆ ಮಾಡಿದ ನಾಯಕರ ವಿರುದ್ಧ ಪೊಲೀಸರಿಗೆ ಕಂಪ್ಲೇಂಟ್ ಕೊಟ್ಟು, ಹೈಕಮಾಂಡ್‌ಗೆ ದೂರು ಕೊಟ್ಟು, ಶಿಸ್ತು ಕ್ರಮಕ್ಕೆ ಹೋರಾಟ ಮಾಡೋಣ’ ಎಂದರು.

ಘಟನೆಯಿಂದ ನೊಂದ ಪತ್ನಿ ಸುಮಿ, ‘ರಾಜಕಾರಣದ ಸಹವಾಸ ಬೇಡ, ವ್ಯವಸಾಯ ಮಾಡಿಕೊಂಡು ತೆಪ್ಪಗಿರಿ’ ಎಂದಳು.

ADVERTISEMENT

ಶಂಕ್ರಿ ನಕ್ಕ. ಉಳಿ ಪೆಟ್ಟಿನಿಂದ ಶಿಲೆ ಮೂರ್ತಿಯಾದಂತೆ ನಾಯಕರ ಏಟಿನಿಂದ ನಾಯಕತ್ವ ವೃದ್ಧಿಯಾಗುತ್ತದೆ ಎಂದು ಸಮಾಧಾನ ಮಾಡಿದ. ಹಾಗೇ ಆಯಿತು. ಆ ಒಂದೇ ಏಟಿನಿಂದ ಬೆಳಗಾಗುವಷ್ಟರಲ್ಲಿ ಶಂಕ್ರಿ ಲೀಡರ್ ಆಗಿ ರೂಪುಗೊಂಡಿದ್ದ.

ನ್ಯೂಸ್ ಚಾನೆಲ್, ಪೇಪರ್‌ನವರು ಬಂದು ಶಂಕ್ರಿಯ ಸಂದರ್ಶನ ಮಾಡಿ ವರ್ಣರಂಜಿತ ಸುದ್ದಿ ಬಿತ್ತರಿಸಿದರು. ಚಾನೆಲ್‍ಗಳು ಶಂಕ್ರಿಯನ್ನು ಸ್ಟುಡಿಯೊಗೆ ಕರೆಸಿಕೊಂಡು, ಪ್ರಸ್ತುತ ರಾಜಕಾರಣದ ಸ್ಥಿತಿಗತಿ ಬಗ್ಗೆ ಚರ್ಚಿಸಿ ತಮ್ಮ ಹಾಗೂ ಶಂಕ್ರಿಯ ಟಿಆರ್‌ಪಿ ಹೆಚ್ಚಿಸಿದವು.

‘ನಿಮ್ಮ ಪಕ್ಷದಲ್ಲಿ ನಿಮ್ಮ ನಿಷ್ಠೆಗೆ ಬೆಲೆ ಇಲ್ಲ, ನಮ್ಮ ಪಕ್ಷಕ್ಕೆ ಬನ್ನಿ. ನಿಮಗೆ ಜಿಲ್ಲಾ ಪಂಚಾಯಿತಿಯೇನು, ಅಸೆಂಬ್ಲಿಗೇ ಟಿಕೆಟ್ ಕೊಡ್ತೀವಿ’ ಎಂದು ಇತರ ಪಕ್ಷಗಳ ಮುಖಂಡರು ಶಂಕ್ರಿ ಮನೆ ಬಾಗಿಲಿಗೆ ಬಂದರು.

ಹಲ್ಲೆ ಮಾಡಿದ ನಾಯಕರು ಶಂಕ್ರಿಯನ್ನು ಕರೆಸಿಕೊಂಡು, ‘ಸಾರಿ, ಬೇಜಾರು ಮಾಡ್ಕೊಬೇಡ, ನೀನು ನಮ್ಮ ಹುಡುಗ’ ಎಂದು ತಲೆ ಸವರಿ, ಬೆನ್ನು ತಟ್ಟಿ, ಜಿಲ್ಲಾ ಪಂಚಾಯಿತಿ ಟಿಕೆಟ್, ಪಕ್ಷದಲ್ಲಿ ಸೂಕ್ತ ಸ್ಥಾನಮಾನ ನೀಡುವ ಭರವಸೆ ಕೊಟ್ಟು, ಶಂಕ್ರಿ ಹೆಗಲ ಮೇಲೆ ಕೈ ಹಾಕಿ ಫೋಟೊಗೆ ಪೋಸ್ ಕೊಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.