ADVERTISEMENT

ಚುರುಮುರಿ| ವಿಜಯ ಯಾತ್ರೆ

ಆನಂದ ಉಳಯ
Published 18 ಸೆಪ್ಟೆಂಬರ್ 2021, 3:01 IST
Last Updated 18 ಸೆಪ್ಟೆಂಬರ್ 2021, 3:01 IST
ಚುರುಮುರಿ
ಚುರುಮುರಿ   

ವಾಟ್ಸ್‌ಆ್ಯಪ್ ನೋಡಿ ‘ಅಯ್ಯೋ ಏನು ಗತಿ ಬಂತು...’ ಎಂದು ಉದ್ಗರಿಸಿದೆ. ‘ಏನು ಸಮಾ ಚಾರ?’ ಎಂದುಹೆಂಡತಿ ಕಣ್ಣಲ್ಲೇ ಕೇಳಿದಳು.

‘ಅದೇ ವಿಜಯ ಮಲ್ಯರದ್ದು?’

‘ಏನು ಮುಂಬೈ ಜೇಲಿಗೆ ಬರ್ತಿದ್ದಾರೇನು? ಪ್ಲೇನ್‍ನಲ್ಲಿ ತಾನೆ? ಅವರದ್ದೇ ಕಿಂಗ್‍ಫಿಶರ್ ಇದ್ದಿದ್ದರೆ ಅದರಲ್ಲೇ ಪೊಲೀಸರು ಕರೆದುಕೊಂಡು ಬರ್ತಿದ್ದರೇನೋ’ ಎಂದಳು.

ADVERTISEMENT

‘ಅದಲ್ಲಮ್ಮ, ಮಲ್ಯ ಸಾಹೇಬರು ಲಂಡನ್ನಿನ ಮೆಟ್ರೊ ರೈಲಿನಲ್ಲಿ ಓಡಾಡ್ತಿದಾರೆ’ ಎಂದು ಅವರ ಆ ರೈಲು ಯಾತ್ರೆಯ ವಾಟ್ಸ್‌ಆ್ಯಪ್ ಪಿಕ್ಚರ್ ತೋರಿಸಿದೆ. ‘ಹೌದಲ್ಲಾರೀ! ಅವರ ಕೈಲೇ ಬ್ರೀಫ್‍ಕೇಸ್! ಟ್ಯಾಕ್ಸಿನಾದರೂ ಹಿಡೀ ಬಾರದಿತ್ತೇ?’ ಎಂದು ಉದ್ಗರಿಸಿದಳು.

‘ಮೆಟ್ರೋನೇ ಚೀಪ್ ಅಂತ ಇದನ್ನೇ ಹತ್ತಿರಬಹುದು’ ಎಂಬ ಸಮಜಾಯಿಷಿ ಕೊಟ್ಟೆ.

‘ಆದರೂ ಪಾಪ ನೋಡಿ, ಒಂದು ವಿಮಾನ ಸಂಸ್ಥೇನೇ ನಡೆಸ್ತಿದ್ದವರು ಈಗ ಈ ತರಹ ಓಡಾಡಬೇಕಾಗಿ ಬಂದಿದೆಯಲ್ಲಾ?’

‘ಮೇಲೆ ಹೋದವರು ಕೆಳಗೆ ಇಳೀಲೇಬೇಕು ಅಂತ ಗಾದೇನೇ ಇದೆಯಲ್ಲ’ ಎಂದೆ.

‘ಬಹುಶಃ ಮಲ್ಯಾಜಿ ರೈಲು ಹತ್ತಿದ್ದು ಇದೇ ಮೊದಲ ಬಾರಿ ಇರಬಹುದು’.

‘ಇರಬಹುದು ಇರಬಹುದು... ಬೆಂಗಳೂರಿನಲ್ಲಿದ್ದಾಗ ಬಾಗಿಲಲ್ಲೇ ಐಷಾರಾಮಿ ಕಾರ್ ನಿಂತಿರೋದು. ಆಳು ಬ್ರೀಫ್‍ಕೇಸ್ ತಂದು ಕಾರಿನಲ್ಲಿ ಇಡ್ತಿದ್ದ. ಡ್ರೈವರ್ ಬಾಗಿಲು ತೆಗೆದು ಧಣಿಗಳನ್ನು ಕಾರಿನಲ್ಲಿ ಕೂಡಿಸುತ್ತಿದ್ದ. ಕಾರ್ ಸೀದಾ ಏರ್‍ಪೋರ್ಟಿಗೆ ಹೋಗ್ತಿತ್ತು. ಝುಂ ಅಂತ ಬಿಸಿನೆಸ್ ಕ್ಲಾಸ್‍ನಲ್ಲಿ ಕೂತು ಹಾರ್ತಿದ್ದರು. ಈಗ?’

‘ಜೀವನ ಪಾಠ ಕಲಿಸುತ್ತೇಂತ ಹಾಗೆ ಪಾಠ ಕಲಿತವರು ಬೇರೆಯವರಿಗೆ ಹೇಳ್ತಾರೆ’.

‘ನಾಳೆ ನಮ್ಮ ಮಲ್ಯಾಜಿ ಸಹ ಇತರರಿಗೆ ಹೇಳಬಹುದು ಯಾವುದಾದರೂ ಕ್ಲಬ್‍ನಲ್ಲಿ. ಏಕೆಂದರೆ ಅವರೂ ಪಾಠ ಕಲೀತಿದಾರಲ್ಲಾ...’

‘ಮುಂದೆ ಇನ್ನೂ ಏನೇನು ಪಾಠ ಕಲಿಬೇಕಾಗಿದೆಯೋ ಏನೋ. ಈ ರೈಲು ಪ್ರಯಾಣ ಡ್ರೆಸ್‍ರಿಹರ್ಸಲ್ ಇರಬಹುದು’.

‘ಆಮೇಲೆ ಇತರರ ಮುಂದೆ ರೈಲು ಬಿಡದೇ ಹೋದರೆ ಸರಿ’.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.