ADVERTISEMENT

ಚುರುಮುರಿ: ಉಳಿತಾಯ ಮಂತ್ರ

ಸುಮಂಗಲಾ
Published 27 ಜೂನ್ 2021, 19:31 IST
Last Updated 27 ಜೂನ್ 2021, 19:31 IST
   

ವೋಟರ್ ಐಡಿ, ಆಧಾರ್ ಕಾರ್ಡು ಇತ್ಯಾದಿ ನನ್ನದೆಂಬ ಗುರುತುಗಳನ್ನು ಒಂದು ಕವರಿನಲ್ಲಿ ಜೋಪಾನವಾಗಿ ಹಾಕಿಡುತ್ತಿದ್ದೆ.

‘ಆಧಾರ್ ಕಾರ್ಡ್ ಒಂದೇ ಸರಿಯಾಗಿ ಎತ್ತಿಟ್ಟುಕೋ ಸಾಕು, ಆ ವೋಟರ್ ಐಡಿ ಮುಂದೆ ಉಪಯೋಗಕ್ಕೆ ಬರಂಗಿಲ್ಲ, ಬಿಸಾಕು’ ಎಂದು ಬೆಕ್ಕಣ್ಣ ಘನಗಂಭೀರವಾಗಿ ಕಣಿ ನುಡಿಯಿತು.

‘ಮಂಗ್ಯಾನಂಥವ್ನೆ... ನಾ ಅಗದಿ ಜವಾಬ್ದಾರಿ ನಾಗರಿಕಳು, ಪ್ರತಿಸಲನೂ ವೋಟ್ ಮಾಡತೀನಿ’ ಎಂದೆ.

ADVERTISEMENT

‘ಮಾಡಿ ಏನು ಬಂತು ಮಣ್ಣಾಂಗಟ್ಟಿ...
ಇನ್ನು ಮುಂದೆ ಲೋಕಸಭೆ ಚುನಾವಣೆ ಅಗತ್ಯನೇ ಇಲ್ಲ. ಎಲ್ಲಾ ವಿರೋಧ ಪಕ್ಷಕ್ಕೂ ಉಬ್ಬಸ
ರೋಗ ಬಡದೈತಿ. ಜರಾ ಚೇತರಿಸ್ಕೋತಿ
ದ್ದಂಗೆ ಅವರೊಳಗೇ ಕಚ್ಚಾಟ ಶುರು. ಹೆಂಗೂ ಮೋದಿಮಾಮಾನೆ ಪ್ರಧಾನಿಯಾಗೂದು ಖರೇ ಇದ್ದಾಗ ಚುನಾವಣೆ ಎದಕ್ಕ. ಅದು ಹೋಗ್ಲಿ, ಹೋದಸರ್ತಿ ನಮ್ಮ ವಿಧಾನಸಭೆ ಚುನಾವಣೆಗೆ ಎಷ್ಟ್ ರೊಕ್ಕ ಖರ್ಚ್ ಮಾಡ್ಯಾರೆ ಹೇಳು’.

‘ಹೋದ ಸಲದ್ದು ರೆಕಾರ್ಡ್ ಬ್ರೇಕ್ ಖರ್ಚು. ಅಭ್ಯರ್ಥಿಗಳು ಸುಮಾರು ಹತ್ತು ಸಾವಿರ ಕೋಟಿ ಖರ್ಚು ಮಾಡ್ಯಾರೆ, ಇನ್ನಾ ಚುನಾವಣೆ ನಡೆಸಾಕ ಆಯೋಗ ಎಷ್ಟ್ ಖರ್ಚು ಮಾಡೈತಿ ಗೊತ್ತಿಲ್ಲ’.

‘ಎಲ್ಲ ಸೇರಿ ಅಂದಾಜು ಹದಿನೈದು ಸಾವಿರ ಕೋಟಿ ರೂಪಾಯಿಯಾದರೂ ಖರ್ಚು ಹೌದಿಲ್ಲೋ... ಉಪಯೋಗನೇ ಇಲ್ಲ. ಯಾವ ಸರ್ಕಾರ ಗೆಲ್ಲಬಕು, ಯಾರು ಮುಖ್ಯಮಂತ್ರಿಯಾಗಬೇಕು, ಯಾರಿಗೆ ಯಾವ ಖಾತೆ, ಯಾರು ಯಾವ ನಿಗಮ, ಮಂಡಲಿಗೆ ಅಧ್ಯಕ್ಷರಾಗಬೇಕು ಅಂತ ನಿರ್ಧಾರ ಮಾಡೋದು ಮಠಗಳು ಹೌದಿಲ್ಲೋ. ಇಷ್ಟೆಲ್ಲ ಖರ್ಚು ಮಾಡಿ ಚುನಾವಣೆ ನಡೆಸೂ ಬದಲಿಗೆ ಮಠದ ಸ್ವಾಮಿಗಳು ಮಾತ್ರ ವೋಟ್ ಮಾಡಿ, ಅವರೊಳಗೆ ತೀರ್ಮಾನಿಸಿ ಮುಖ್ಯಮಂತ್ರಿ ಆಯ್ಕೆ ಮಾಡಿದ್ರಾತು. ಚುನಾವಣೆ ಖರ್ಚು ಉಳಿತೈತಿ, ಆಪರೇಶನ್ ಕಮಲದ ರೊಕ್ಕನೂ ಉಳಿತೈತಿ, ಹೀಂಗ ಉಳಿದಿದ್ದ ರೊಕ್ಕನ ಮತ್ತ ಮಠಕ್ಕೆ ಹಂಚಿಬಿಟ್ರಾತು. ನಾ ಚುನಾವಣೆ ಬಗ್ಗೆ ಅಧ್ಯಯನ ಮಾಡಿ ರಾಷ್ಟ್ರಪತಿಗೆ ಸಲ್ಲಿಸೂ ವರದಿ ವಳಗ ಇದೇ ಪ್ರಪೋಸಲ್ ಇಟ್ಟೀನಿ’ ಬೆಕ್ಕಣ್ಣ ವಿವರಿಸುತ್ತಲೇ ಇತ್ತು!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.