ADVERTISEMENT

ಚುರುಮುರಿ: ಮಂಕುರೋಗ

ಮಣ್ಣೆ ರಾಜು
Published 26 ಮೇ 2021, 19:50 IST
Last Updated 26 ಮೇ 2021, 19:50 IST
   

‘ಏನಾದ್ರೂ ಸಮಸ್ಯೆ ಇದೆಯೇ?...’ ಎನ್ನುತ್ತಾ ಬಂದರು ಅಂಗನವಾಡಿ ಮೇಡಂ.

‘ಬನ್ನಿ, ನಮ್ಮ ಸಮಸ್ಯೆ ಒಂದಾ ಎರಡಾ... ಮನೆ ಸಾಲದ ಕಂತು ಕಟ್ಟಿಲ್ಲ, ಕೊರೊನಾ ಕಾಟ ಶುರುವಾಗಿ ಗಂಡನಿಗೆ ಅರ್ಧ ಸಂಬಳ, ಜೀವನ ಕಷ್ಟ ಆಗಿಬಿಟ್ಟಿದೆ’ ಸುಮಿ ಸಂಕಟ ಹೇಳಿಕೊಂಡಳು.

‘ಆರ್ಥಿಕ ಸಮಸ್ಯೆ ಅಲ್ಲ, ಆರೋಗ್ಯ ಸಮಸ್ಯೆ ಹೇಳಿ’.

ADVERTISEMENT

‘ಪಕ್ಕದ ಮನೆಯವರ ನಾಯಿ ಅಟ್ಟಿಸಿಕೊಂಡು ಬಂದು ನನ್ನ ಮಗ ಬಿದ್ದು ಗಾಯ ಮಾಡಿಕೊಂಡ. ನೋಡಿ, ಇನ್ನೂ ಬ್ಯಾಂಡೇಜ್ ಬಿಚ್ಚಿಲ್ಲ. ನಾಯಿ ಹಿಡಿಯುವವರು ಇದ್ದರೆ ಹೇಳಿ, ನಾಯಿ ಜೊತೆಗೆ ಪಕ್ಕದ ಮನೆಯವಳನ್ನೂ ಹಿಡುಕೊಂಡು ಹೋಗ್ಲಿ...’ ಸುಮಿಗೆ ಸಿಟ್ಟು.

‘ಅದಲ್ಲಾ ಮೇಡಂ, ನಿಮ್ಮಲ್ಲಿ ಯಾರಿಗಾದರೂ ಕೊರೊನಾ ಲಕ್ಷಣಗಳಿವೆಯಾ?’

‘ಯಾರ ಮುಖದಲ್ಲೂ ಲಕ್ಷಣ ಇಲ್ಲ, ಬರೀ ಅವಲಕ್ಷಣ...’ ರೂಂನಿಂದ ಬಂದು ಶಂಕ್ರಿ ಹೇಳಿದ.

‘ಇಲ್ಲಬಿಡಿ, ಎಲ್ಲರಿಗೂ ಕಷಾಯ ಕುಡಿಸಿ ಕುಟುಂಬದ ಆರೋಗ್ಯ ಕಾಪಾಡಿದ್ದೇವೆ. ಗಂಡ, ಮಕ್ಕಳು ಹೊರ ಹೋಗಲು ಬಿಟ್ಟಿಲ್ಲ’ ಅಂದಳು ಸುಮಿ.

‘ದಿನವಿಡೀ ಮನೇಲಿ ಕುಳಿತು ಇತ್ತ ತಿರುಗಿದರೆ ಹೆಂಡ್ತಿಯ ಮುಖದಲ್ಲಿ ಆತಂಕ, ಆಕ್ರೋಶ; ಅತ್ತ ತಿರುಗಿದರೆ ಮಕ್ಕಳ ಮುಖದಲ್ಲಿ ಆಕಳಿಕೆ, ತೂಕಡಿಕೆ. ಯಾವುದೂ ಬೇಡ ಅಂತ ಟಿ.ವಿ ಕಡೆ ತಿರುಗಿದರೆ ನ್ಯೂಸ್ ಚಾನೆಲ್‍ಗಳಲ್ಲಿ ಕೊರೊನಾ ಕ್ರೈಂ... ನನಗಂತೂ ತಲೆ ತಿರುಗುವಂತಾಗಿದೆ, ಇದ್ಯಾವ ಸೋಂಕು?’ ಶಂಕ್ರಿ ಕೇಳಿದ.

‘ಅದು ಸೋಂಕು ಅಲ್ಲ, ಮಂಕು ಅನ್ನುವ ಮನೆರೋಗ. ವಾರಗಟ್ಟಲೆ ಮನೇಲಿರುವವರಲ್ಲಿ ಮಂಕುರೋಗ ಕಾಣಿಸಿಕೊಳ್ಳುತ್ತದೆ’.

‘ಹೊರ ಹೋದರೆ ಸೋಂಕು, ಮನೆಯಲ್ಲಿದ್ದರೆ ಮಂಕು, ನಾವು ಹೇಗೆ ಬಾಳೋದು?’ ಸುಮಿಗೆ ಸಂಕಟ.

‘ಧೈರ್ಯವಾಗಿರಿ, ಲಾಕ್‍ಡೌನ್ ಮುಗಿದ ಮೇಲೆ ಮಂಕುರೋಗ ನಿವಾರಣೆಯಾಗುತ್ತದೆ...’ ಎಂದು ಹೊರಟರು ಅಂಗನವಾಡಿ ಮೇಡಂ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.