ADVERTISEMENT

ಚುರುಮುರಿ: ಶ್ವಾನೋಪಾಖ್ಯಾನ!

ಎಸ್.ಬಿ.ರಂಗನಾಥ್
Published 28 ಮೇ 2021, 19:30 IST
Last Updated 28 ಮೇ 2021, 19:30 IST
   

‘ಪತ್ರಿಕೆ ನೋಡಿದೆಯೇನಯ್ಯಾ?’, ಬೆಳಿಗ್ಗೆ ಹಾಲಿನ ಬೂತ್ ಬಳಿ ದೋಸ್ತನನ್ನ ಕೇಳಿದೆ.

‘ನೋಡಿದೆನಪ್ಪ, ನಮ್ಗೆಲ್ಲಾ ಹೊಗೆ ಹಾಕಿಸೋ ಕೊರೊನಾವನ್ನು ನಮ್ಮ ನಾಯಕರು ರಸ್ತೇಲಿ ಹೊಗೆ ಹಾಕಿ ಓಡಿಸ್ತಿರೋ ಸುದ್ದಿ’ ಎಂದ.

‘ಅದಲ್ಲಯ್ಯಾ’.

ADVERTISEMENT

‘ವಿಮಾನದಲ್ಲಿ ಹಾರಾಡ್ತಾ ದೇವಸ್ಥಾನದ ಮೇಲೆ ತಾಳಿ ಕಟ್ಟಿದ ವರ ಮಹಾಶಯನ ವಿಷಯವೇ?’

‘ಊ ಹ್ಞೂಂ’.

‘ಹಾಗಾದ್ರೆ ಬ್ಲ್ಯಾಕ್ ಫಂಗಸ್‌ಗೆ ವ್ಯಾಕ್ಸಿನ್ ಕಂಡುಹಿಡಿದಿರೋ ಕನ್ನಡಿಗ ಶ್ರೀಕಾಂತ್ ಪೈಯವರ ಸುದ್ದಿಯೇ?’

‘ಅಲ್ಲ ಕಣೋ, ವಾಸನೆಯಿಂದ್ಲೇ ಕೊರೊನಾ ಪತ್ತೆ ಮಾಡೋ ಶ್ವಾನಗಳ ವಿಚಾರ. ಲಂಡನ್ನಿನಲ್ಲಿ ಸಂಶೋಧನೆ ಮಾಡಿದಾರೆ. ಜನರ ಮಾಸ್ಕ್, ಕಾಲುಚೀಲ, ಟಿ-ಶರ್ಟ್‌ಗಳಿಂದ್ಲೇ ಕೊರೊನಾ ಪತ್ತೆ ಮಾಡುತ್ತವೆಯಂತೆ. ಎರಡು ನಾಯಿಗಳು ಅರ್ಧಗಂಟೇಲಿ ಮುನ್ನೂರು ಮಂದೀನ ಪರೀಕ್ಷಿಸುತ್ತವಂತೆ’.

‘ಭಾಳಾ ಒಳ್ಳೇದಾಯ್ತಲ್ಲೋ. ಇದುವರೆಗೆ ಕಳ್ಳರನ್ನು, ಕೊಲೆಗಡುಕರನ್ನು ಹಿಡಿಯೋ, ಚಂದ್ರಲೋಕಕ್ಕೆ ಹೋಗೋ ನಾಯಿಗಳನ್ನು ನೋಡಿದ್ದೊ. ಈಗ ಅವು ಈ ಭಯಂಕರ ಪಿಡುಗನ್ನೂ ಪತ್ತೆ ಮಾಡುತ್ತವೇಂದ್ರೆ ರಿಯಲೀ ಗ್ರೇಟ್... ನಮ್ಮ ನಮೋಗೆ ಗೊತ್ತಾದ್ರೆ ಬೋರಿಸ್ ಜಾನ್ಸನ್‌ಗೆ ಹಾಟ್‌ಲೈನಲ್ಲಿ ಮಾತಾಡಿ ನಮ್ಮ ದೇಶಕ್ಕೆ ಅಂಥ ನಾಯಿಗಳನ್ನ ಕೂಡ್ಲೇ ತರಿಸ್ತಾರೆ ಬಿಡು... ಆಗ ನನ್ನ ಸ್ಪೆಷಲ್ ಡಾಗೀಗೂ ಆ ಟ್ರೈನಿಂಗ್ ಕೊಡಿಸ್ತೀನಪ್ಪಾ’.

‘ಏನಯ್ಯ ನಿನ್ನ ನಾಯಿಯ ಸ್ಪೆಷಾಲಿಟಿ?’

‘ಅದು ನನ್ನ ಶತ್ರುಗಳಾರು, ಮಿತ್ರರಾರೂಂತ ದೂರದಿಂದ್ಲೇ ಗೊತ್ತು ಹಿಡಿಯುತ್ತೆ. ಲಗ್ನಪತ್ರಿಕೆ ಕೊಡೋಕೆ, ಊಟಕ್ಕೆ ಹೇಳೋಕೆ ಬರೋರಿಗೆ ಏನೂ ಮಾಡಲ್ಲ. ಸಾಲ ವಸೂಲಿಗೆ ಬರೋರನ್ನ ಗುರ್ತಿಸಿ ಅಟ್ಟಿಸಿಕೊಂಡು ಹೋಗಿ ಕಚ್ಚುತ್ತೆ’.

‘ಅದನ್ನು ದಯವಿಟ್ಟು ನಂಗೆ ಒಂದು ವಾರದಮಟ್ಟಿಗೆ ಕೊಟ್ಟಿರಯ್ಯಾ, ಪ್ಲೀಸ್’.

‘ಆರು ತಿಂಗಳ ನಂತರ ನೋಡೋಣ. ಅಲ್ಲೀವರೆಗೆ ಅದಕ್ಕೆ ಅಡ್ವಾನ್ಸ್ಡ್‌ ಬುಕಿಂಗ್ ಆಗಿದೆ’.

ನಾನು ಕುಸಿದು ಕುಳಿತೆ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.