ADVERTISEMENT

ಚುರುಮುರಿ: ನಡುವೆ ಅಂತರ ಬೇಕೆ?

ಮಣ್ಣೆ ರಾಜು
Published 4 ಮೇ 2021, 20:19 IST
Last Updated 4 ಮೇ 2021, 20:19 IST
   

‘ಇಬ್ಬರು ಮಕ್ಕಳ ನಡುವೆ ಅಂತರವಿದ್ದರೆ ಸಂಸಾರ ಸುಖವಾಗಿರುತ್ತದೆ ಅಂತ ಹೇಳ್ತಾರೆ, ಅದೇನು ಸುಖ ಇರುತ್ತೋ ಗೊತ್ತಿಲ್ಲ...’ ಸುಮಿಗೇನೋ ಸಂಕಟ.

‘ಯಾಕೆ, ಏನಾಯ್ತು?’ ಅಂದ ಶಂಕ್ರಿ.

‘ಶಾಂತಮ್ಮನ ಮಕ್ಕಳ ನಡುವೆ ಅಂತರವಿದೆ, ಆದರೂ ಅವಳ ಸಂಸಾರದಲ್ಲಿ ಸುಖ, ನೆಮ್ಮದಿ ಇಲ್ಲಾರೀ’,

ADVERTISEMENT

‘ಹೌದಾ?...ಪಾಪ...’

‘ಒಬ್ಬ ಮಗ ಅಮೆರಿಕ, ಇನ್ನೊಬ್ಬ ಆಸ್ಟ್ರೇಲಿಯಾದಲ್ಲಿದ್ದಾನೆ, ಇಬ್ಬರ ನಡುವೆ ಭಾರಿ ಅಂತರವಿದೆ. ಆದರೂ ಶಾಂತಮ್ಮ ಇಲ್ಲಿ
ವೃದ್ಧಾಶ್ರಮದಲ್ಲಿ ನರಳುತ್ತಿದ್ದಾಳೆ’.

‘ಅಂತರ ಅಂದರೆ, ಆ ಅಂತರ ಅಲ್ಲ...’

‘ಗೊತ್ತೂರೀ, ಹೆತ್ತವರು-ಮಕ್ಕಳ ನಡುವೆ ಅಂತರವಿದ್ದರೆ ಹೀಗೇ ಆಗೋದು’.

‘ಶಾಂತಮ್ಮನೇ ಮಕ್ಕಳ ನಡುವೆ ಅಂತರ ಕಾಪಾಡಿಕೊಂಡಿದ್ದಾಳೆಯೇ?’

‘ಹೌದೂರೀ, ಶಾಂತಮ್ಮನ ಗಂಡ ದೊಡ್ಡ ಆಫೀಸರ್ ಆಗಿದ್ದ. ಒಳ್ಳೆ ಎಜುಕೇಷನ್ ಕೊಡಿಸಬೇಕು ಅಂತ ಮಕ್ಕಳನ್ನು ಪ್ರೈಮರಿ ಹಂತದಿಂದಲೇ ದೂರದ ರೆಸಿಡೆನ್ಷಿಯಲ್ ಸ್ಕೂಲ್‍ಗೆ ಸೇರಿಸಿದ್ದರು. ನಾಲ್ಕು ಬೆಡ್ ರೂಂ ಮನೆ ಇದ್ದರೂ ಮಕ್ಕಳು ಆ ಮನೆಯಲ್ಲಿ ಬಾಳಿ, ಬೆಳೆಯಲಿಲ್ಲ. ರಜೆ ಇದ್ದಾಗ ನೆಂಟರು ಬರುವಂತೆ ಮನೆಗೆ ಬಂದು ಒಂದೆರಡು ದಿನ ಇದ್ದು ಹೋಗುತ್ತಿದ್ದರು. ಹೆತ್ತವರ ಜೊತೆ ಅವರ ಬಾಂಧವ್ಯ ಬೆಳೆಯಲೇ ಇಲ್ಲ...’

‘ಛೇ ಛೇ...!’

‘ಶಾಂತಮ್ಮನ ಗಂಡ ಕೋವಿಡ್‌ನಿಂದ ಸತ್ತುಹೋದ. ಇದ್ದ ಮನೆ ಬಾಡಿಗೆಗೆ ಕೊಟ್ಟು, ಬಾಡಿಗೆ ದುಡ್ಡಲ್ಲಿ ವೃದ್ಧಾಶ್ರಮ ಸೇರಿಕೊಂಡಿದ್ದಾಳೆ’.

‘ಮಕ್ಕಳು ಅಮ್ಮನ ಯೋಗಕ್ಷೇಮ ವಿಚಾರಿಸುವುದಿಲ್ಲವಾ?’

‘ವಿಚಾರಿಸ್ತಾರೆ, ಅಮ್ಮನ ಬರ್ತ್‌ಡೇ ದಿನ ವಾಟ್ಸ್‌ಆ್ಯಪ್‌ನಲ್ಲಿ ಕೇಕ್ ಚಿತ್ರ ಹಾಕಿ, ವಿಶ್ ಮಾಡ್ತಾರೆ ಅಷ್ಟೇ. ಇದರ ಹೊರತಾಗಿ ತಾಯಿ-ಮಕ್ಕಳ ನಡುವೆ ಇನ್ನಾವ ಪ್ರೀತಿ, ಮಮಕಾರವಿಲ್ಲ. ಪ್ರೀತಿ ಕೊಡಲು ಅಲ್ಲದಿದ್ದರೂ ನೋವು ಕೊಡಲಾದರೂ ಮಕ್ಕಳು ಅಪ್ಪ ಅಮ್ಮನ ಜೊತೆ ಇರಬೇಕು ಅಲ್ವೇನ್ರೀ...?’ ಅಂದಳುಸುಮಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.