ADVERTISEMENT

ಚುರುಮುರಿ: ಸೋತವರಾರು?

ಸುಮಂಗಲಾ
Published 1 ಆಗಸ್ಟ್ 2021, 18:15 IST
Last Updated 1 ಆಗಸ್ಟ್ 2021, 18:15 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

‘ಒಲಿಂಪಿಕ್ಸಿನಲ್ಲಿ ಸಿಂಧು ಇನ್ನೂ ಚೆನ್ನಾಗಿ ಬ್ಯಾಟು ಬೀಸಿದ್ದರೆ ಚಿನ್ನದ ಪದಕವೇ ಸಿಗ್ತಿತ್ತು, ನಮ್ಮ ಬಾಕ್ಸರುಗಳು ಎದುರಿನವರನ್ನು ಸರಿಯಾಗಿ ಚಚ್ಚಲಿಲ್ಲ, ಕರ್ಣಾರ್ಜುನರಂಥ ಬಿಲ್ವಿದ್ಯೆಗಾರರ ಮಹಾನ್ ಚರಿತ್ರೆಯ ನಾಡಿನ ನಮ್ಮವರ ಬಾಣ ಪದಕದ ಗುರಿ ತಲುಪಲಿಲ್ಲ’ ಎಂದೆಲ್ಲ ಬೆಕ್ಕಣ್ಣ ಗೊಣಗೊಣ ಎನ್ನುತ್ತಿತ್ತು.

‘ಅಲ್ಲಲೇ... ಸಿಎಂಪಿಕ್ಸ್ ದೊಡ್ಡದು ಅಂತಿದ್ದವನು ಅದ್ಯಾವಾಗ ಒಲಿಂಪಿಕ್ಸ್ ನೋಡಾಕೆ ಶುರು ಮಾಡಿದೆ’ ಎಂದೆ.

‘ಸಿಎಂಪಿಕ್ಸ್‌ದು ಒಂದು ಗ್ರ್ಯಾನ್‌ ಸ್ಲಾಮ್‌ ಮುಗೀತು... ಇನ್ನು ಟೆಸ್ಟ್ ಮ್ಯಾಚುಗಳು ಶುರುವಾಗ್ತವೆ. ಅದರ ಮಜಾ ತಗಳ್ಳಕ್ಕೆ ತುಸು ಕಾಯಬಕು’ ಎಂದಿತು.

ADVERTISEMENT

ಮತ್ತ ಕೊನೇದಿನ ನಿಮ್ಮ ಯೆಡ್ಯೂರಜ್ಜಾರು ಕಣ್ಣೀರಧಾರೆ ಹರಿಸಿದ್ದು ಗ್ರ್ಯಾನ್‌ ಸ್ಲಾಮ್‌ನಾಗೆ ಸೋತಿದ್ದಕ್ಕೇನು’ ಎಂದು ಕಿಚಾಯಿಸಿದೆ.

‘ಅವರೆಲ್ಲಿ ಸೋತಾರ...? ಪಂದ್ಯ ಬಿಟ್ಟುಕೊಟ್ಟಾರ! ಇಡೀ ಪ್ರಪಂಚದಾಗೆ ಎಲ್ಲ ಶೋಕಕ್ಕಿಂತ ಮಿಗಿಲಾದದ್ದು ಕುರ್ಚಿತ್ಯಾಗ ಶೋಕ ತಿಳಕೋ’ ಎಂದು ನೊಂದು ನುಡಿಯಿತು.

‘ಹ್ಞೂಂ ಮತ್ತ. ನೋಡೀಯಿಲ್ಲೋ ನಿಮ್ಮ ಕುಮಾರಣ್ಣನೂ ದೋಸ್ತಿ ಸರ್ಕಾರದಾಗೆ ನಾ ಬರೀ ಗುಮಾಸ್ತನಾಗಿದ್ದೆ ಅಂತ ನಿನ್ನೆ ಕಣ್ಣಿಗೆ ಕರ್ಚೀಪು ಒತ್ತಿಕೆಂಡು ವದ್ದಾಡಿ ಹೇಳಾಕಹತ್ತಿದ್ದರು’ ಎಂದೆ.

‘ಸಿಎಂ ಗುಮಾಸ್ತರಾದರು ಅಂತ್ಹೇಳಿ ಗುಮಾಸ್ತರು ಸಿಎಂ ಆಗಾಕೆ ಆಗಂಗಿಲ್ಲ...’ ಬೆಕ್ಕಣ್ಣ ಹೊಸ ಗಾದೆ ಹೊಸೆಯಿತು.

‘ಮತ್ತ ಗ್ರ್ಯಾನ್‌ ಸ್ಲಾಮ್‌ನಾಗೆ ಗೆದ್ದವರು ಯಾರು? ಮಠಾಧಿಪತಿಗಳಾ ಅಥವಾ ನಮ್ಮ ಹೊಸ ಸಿಎಮ್ಮಾ?

‘ಎಲ್ಲದೀ ನೀ... ಗೆದ್ದಿದ್ದು ಕಮಲಕ್ಕನ ಹೈಕಮಾಂಡು. ಉಳಿದವರಿಗೆ ಬೆಳ್ಳಿ, ಕಂಚು ಸಿಕ್ಕರೆ ಅಷ್ಟೇ ಪುಣ್ಯ’.

‘ಮತ್ತ ಅಜ್ಜಾರೂ ಸೋತಿಲ್ಲ ಅಂತಿ, ಹಂಗಾರೆ ಸೋತವರು ಯಾರು?’

‘ಸೋತವರು ನೀವು! ಪಂದ್ಯದಾಗೆಕ್ವಾಲಿಫೈ ಹಂತದೊಳಗೇ ನೀವು ಶ್ರೀಸಾಮಾನ್ಯರು ಮತ್ತು ನಿಮ್ಮ ಪ್ರಜಾಪ್ರಭುತ್ವ ಮುಗ್ಗರಿಸಿ
ಬಿದ್ದದ. ನಿಮಗೆ ಗೊತ್ತೇ ಆಗದ ಹಂಗೆ ನಾಮ ಬಿದ್ದಿರತೈತಿ, ತಿಳಕೋರಿ’ ಎನ್ನುತ್ತ ಬೆಕ್ಕಣ್ಣ ಪಕಪಕನೆ ನಕ್ಕಿತು!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.